ಕನ್ನಡ ಚಿತ್ರೋದ್ಯಮ ಕಾಪಾಡ್ತಿರೋದೇ ಅವ್ರು! ಪ್ಯಾನ್ ಇಂಡಿಯಾ ಸ್ಟಾರ್ಸ್‌ಗೂ ದರ್ಶನ್‌ಗೂ ಇರೋ ವ್ಯತ್ಯಾಸ ಇಷ್ಟೇ ಎಂದ ಖ್ಯಾತ ನಿರ್ದೇಶಕ
ಈಗಂತೂ ಕನ್ನಡಕ್ಕೆ ಒಬ್ಬರೇ ದರ್ಶನ್. ದರ್ಶನ್ ಅವರು ವರ್ಷಕ್ಕೆ ಎರಡು ಸಿನಿಮಾ ಕೊಡಲೇಬೇಕು ಅಂತ ನಿಂತಿದ್ದಾರಲ್ಲ, ಅವ್ರು ನಿಜವಾಗಿ ಎಲ್ಲರನ್ನೂ ಕಾಪಾಡುತ್ತಿರುವುದು. ಚಿತ್ರೋದ್ಯಮವನ್ನು ಕಾಪಾಡುತ್ತಿದ್ದಾರೆ. ಬಂಡವಾಳ ಹಾಕಿದವರನ್ನು, ಕಾರ್ಮಿಕರನ್ನು ಕಾಪಾಡುತ್ತಿದ್ದಾರೆ ಎಂದು ನಿರ್ದೇಶಕ ಜಯತೀರ್ಥ ಹೇಳಿಕೊಂಡಿದ್ದಾರೆ.

Director Jayatheertha on Darshan: ಸ್ಯಾಂಡಲ್‌ವುಡ್ ನಟ ದರ್ಶನ್, ಶತಾಯ ಗತಾಯ ವರ್ಷಕ್ಕೆ ಎರಡು ಸಿನಿಮಾ ನೀಡಲೇಬೇಕು ಎಂದು ನಿರ್ಧರಿಸಿ, ಅದನ್ನೇ ಮುಂದುವರಿಸುತ್ತಿದ್ದಾರೆ. ಕಳೆದ ವರ್ಷ ಕ್ರಾಂತಿ ಮತ್ತು ಕಾಟೇರ ಮೂಲಕ ತೆರೆಗೆ ಬಂದಿದ್ದ ದರ್ಶನ್, ಭರ್ಜರಿ ಗೆಲುವನ್ನೇ ದಾಖಲಿಸಿದ್ದರು. ಅದರಲ್ಲೂ ಕಾಟೇರ ಸಿನಿಮಾ ದರ್ಶನ್ ಅವರ ಕೆರಿಯರ್‌ನಲ್ಲಿಯೇ ಮೈಲಿಗಲ್ಲಾಯ್ತು. ನೂರಾರು ಕೋಟಿ ಕಲೆಕ್ಷನ್ ಮಾಡಿ, ಬಾಡಿದ್ದ ಸ್ಯಾಂಡಲ್‌ವುಡ್‌ಗೆ ಮರುಜೀವ ತಂದುಕೊಟ್ಟಿದ್ದರು. ಇದೀಗ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈಗ ಇದೇ ನಟನ ಬಗ್ಗೆ ನಿರ್ದೇಶಕ ಜಯತೀರ್ಥ ಮಾತನಾಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಪ್ರಸ್ತುತ ನಿರ್ದೇಶಕರ ಸಾಲಿನಲ್ಲಿ ಸೂಕ್ಷ್ಮ ಸಂವೇದಿ ಸಿನಿಮಾಗಳನ್ನು ಪ್ರೇಕ್ಷಕರ ಎದೆಗಿಳಿಸುವ ಕೆಲಸವನ್ನು ನಿರ್ದೇಶಕ ಜಯತೀರ್ಥ ಅಚ್ಚುಕಟ್ಟಾಗಿಯೇ ಮಾಡುತ್ತಿದ್ದಾರೆ. ಬೆಲ್‌ಬಾಟಂ, ಕೈವ, ಬನಾಸರ್ ಸೇರಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಇದೇ ನಿರ್ದೇಶಕರೀಗ ನಟ ದರ್ಶನ್ ಬಗ್ಗೆ ಮನದಾಳ ಹೇಳಿಕೊಂಡಿದ್ದಾರೆ. ದರ್ಶನ್ ಅವರು ವರ್ಷಕ್ಕೆ ಎರಡು ಸಿನಿಮಾ ಕೊಡಲೇಬೇಕು ಅಂತ ನಿಂತಿದ್ದಾರಲ್ಲ, ಅವ್ರು ನಿಜವಾಗಿ ಎಲ್ಲರನ್ನೂ ಕಾಪಾಡುತ್ತಿರುವುದು. ಕನ್ನಡದ ಚಿತ್ರೋದ್ಯಮವನ್ನು ಕಾಪಾಡುತ್ತಿದ್ದಾರೆ ಎಂದು ಟಿವಿ19 ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಹೀಗಿವೆ ಅವರ ಪೂರ್ತಿ ಮಾತುಗಳು.
"ಈಗಂತೂ ಕನ್ನಡಕ್ಕೆ ಒಬ್ಬರೇ ದರ್ಶನ್. ಯಶ್ ಅವ್ರು ಕನ್ನಡದ ಹೀರೋನಾ? ಅವ್ರು ಯಾರಿಗೆ ಸಿನಿಮಾ ಮಾಡ್ತಿದ್ದಾರೆ? ನ್ಯಾಶನಲ್ ಲೆವೆಲ್‌ಗೆ ಸಿನಿಮಾ ಮಾಡ್ತಿದ್ದಾರೆ. ಅವರನ್ನು ಕನ್ನಡದ ಹೀರೋ ಅನ್ನೋಕಾಗಲ್ಲ. ಸುದೀಪ್ ಅವರು ಕ್ರಿಕೆಟ್, ಬಿಗ್‌ಬಾಸ್ ಎಂದೆಲ್ಲ ಬಿಜಿಯಾಗಿದ್ದಾರೆ. ಇದರ ಜತೆಗೆ ಸಿನಿಮಾ ಮಾಡ್ತಿದ್ದಾರೆ. ಅವುಗಳ ಪ್ರಮಾಣ ಹೆಚ್ಚಾಗಬೇಕು. ಅವರ ವಿಕ್ರಾಂತ್ ರೋಣ ಸಿನಿಮಾ ಬಂದು ಎರಡು ವರ್ಷವಾಯ್ತೆನೋ? ಅದಾದ ಮೇಲೆ ತುಂಬಾ ದಿನ ಆಗೋಯ್ತು. ಹೀಗೆ ಮಾಡುವುದರಿಂದ ಪ್ರೇಕ್ಷಕ ಮಿಸ್ ಆಗ್ತಾನೆ.
ಎಲ್ಲರನ್ನು ಕಾಪಾಡ್ತಿರೋದು ದರ್ಶನ್
"ಇತ್ತ ಧ್ರುವ ಸರ್ಜಾ ಅವ್ರು ಒಂದು ಕಡೆ ಟ್ರೈ ಮಾಡ್ತಿದ್ದಾರೆ. ಶ್ರೀಮುರಳಿ ಅವ್ರು ಒಂದು ಕಡೆ ಪ್ರಯತ್ನಿಸುತ್ತಿದ್ದಾರೆ. ಇವೆರೆಲ್ಲರನ್ನು ಬಿಟ್ಟರೆ, ದರ್ಶನ್ ಅವರು ವರ್ಷಕ್ಕೆ ಎರಡು ಸಿನಿಮಾ ಕೊಡಲೇಬೇಕು ಅಂತ ನಿಂತಿದ್ದಾರಲ್ಲ, ಅವ್ರು ನಿಜವಾಗಿ ಎಲ್ಲರನ್ನೂ ಕಾಪಾಡುತ್ತಿರುವುದು. ಚಿತ್ರೋದ್ಯಮವನ್ನು ಕಾಪಾಡುತ್ತಿದ್ದಾರೆ. ಬಂಡವಾಳ ಹಾಕಿದವರನ್ನು, ಕಾರ್ಮಿಕರನ್ನು ಕಾಪಾಡುತ್ತಿದ್ದಾರೆ. ಹಾಗಾಗಿ ದೊಡ್ಡ ದೊಡ್ಡ ಹೀರೋ ಅನಿಸಿಕೊಂಡವರೆಲ್ಲ ಹೆಚ್ಚೆಚ್ಚು ಸಿನಿಮಾ ಮಾಡಬೇಕು. ಚಿತ್ರಮಂದಿರಕ್ಕಾಗಿ ಸಿನಿಮಾ ಮಾಡಬೇಕು" ಎಂದಿದ್ದಾರೆ.
ರಿಷಬ್ ಶೆಟ್ಟಿ 40 ದಿನ ಕೊಡಲಿ ಸಾಕು.. ಈಗ ಕೊಡ್ತಾರಾ?
"ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ತಪ್ಪು ಅಂತ ಹೇಳ್ತಿಲ್ಲ. ಆ ಸಿನಿಮಾಗಳಿಗೆ ಅಷ್ಟು ಸಮಯ ಬೇಕೇ ಬೇಕು. ಈಗ ಉದಾಹರಣೆಗೆ ಕಾಂತಾರ 2 ಚಿತ್ರ ಘೋಷಣೆ ಆಗಿಯೇ ವರ್ಷವಾಯ್ತು. ಇನ್ನೂ ಅದರ ಶೂಟಿಂಗ್ ಶುರುವಾಗಿಲ್ಲ. ನಮ್ಮದೇ ಬೆಲ್‌ಬಾಟಂ 2 ಚಿತ್ರಕ್ಕೆ ನಟ ರಿಷಬ್ ಶೆಟ್ಟಿ ಕೇವಲ 40ರಿಂದ 50ದಿನ ಡೇಟ್ ಕೊಟ್ಟರೆ ಸಾಕು. ಸಿನಿಮಾ ಮುಗಿಸಿಬಿಡ್ತೀನಿ. ಆದರೆ, ಅದು ಆಗಲ್ಲ. ಅದೇ ರೀತಿ ದರ್ಶನ್ ಮತ್ತು ಅಕ್ಷಯ್ ಕುಮಾರ್ ಅವರ ಸಿನಿಮಾ ಶಿಸ್ತು ಮೆಚ್ಚುವಂಥದ್ದು. ನಾನು 60 ದಿನದ ಮೇಲೆ ಡೇಟ್ ಕೊಡಲ್ಲ ಅಂದು ನೇರವಾಗಿ ಹೇಳ್ತಾರೆ. ಅದು ನಿಜಕ್ಕೂ ಒಳ್ಳೆಯದು. ಅಷ್ಟರಲ್ಲಿಯೇ ಅವರನ್ನು ನಿರ್ದೇಶಕರು ಬಳಸಿಕೊಳ್ಳಬೇಕು"
ಪ್ರೇಕ್ಷಕ ಮಿಸ್ ಆಗ್ತಿದ್ದಾನೆ..
ದರ್ಶನ್ ಅವರ ಈ ಶಿಸ್ತು ಎಷ್ಟು ಕರೆಕ್ಟಾಗಿದೆ ನೋಡಿ. ಹೀಗೆ ಮಾಡುವುದರಿಂದ ನಿರ್ಮಾಪಕನಿಗೆ ಬಜೆಟ್ ಕ್ಲಾರಿಟಿ ಸಿಗುತ್ತೆ. 60 ದಿನ ಹೀರೋ ಡೇಟ್ಸ್ ಕೊಟ್ಟರೆ, ಇನ್ನುಳಿದ 20 ದಿನಗಳಲ್ಲಿ ಉಳಿದವರ ಪೋರ್ಷನ್ ಮುಗಿಯುತ್ತದೆ. 80 ದಿನಗಳಲ್ಲಿ ಸಿನಿಮಾ ಮುಗಿದೇ ಹೋಗುತ್ತೆ. ಯಾಕೆ ಇನ್ನೂರು, ಮುನ್ನೂರು ದಿನ ಶೂಟಿಂಗ್? ಪ್ರೇಕ್ಷಕನಿಗೆ ಸಿನಿಮಾ ತೋರಿಸುವುದು ಬರೀ ಎರಡೂವರೆ ಗಂಟೆನೇ ಅಲ್ವಾ. ಕ್ವಾಲಿಟಿ, ಕಾಂಪಿಟೇಷನ್ ಇದೆ. ಅದೆಲ್ಲ ಓಕೆ. ಆದರೆ, ಅದರಾಚೆಗೆ ಇಂಡಸ್ಟ್ರಿ ಇದೆ. ಟೆಕ್ನಿಶಿಯನ್‌ಗಳಿದ್ದಾರೆ. ಚಿತ್ರಮಂದಿರಗಳು ಕಾಯ್ತಿವೆ. ಪ್ರೇಕ್ಷಕ ಕಾಯ್ತಿದ್ದಾನೆ. ಸಿನಿಮಾ ಕೊಡಲೇಬೇಕಲ್ಲವಾ?" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿಭಾಗ