ಕಾಲ ಕಾಯ್ದು ಬಾಲ ಕುಯ್ಯಬೇಕು; ‘ಲೇ ತಗಡೇ’ ಎಂದು ಹೀಯಾಳಿಸಿದ ದರ್ಶನ್‌ಗೆ ರಾಬರ್ಟ್ ನಿರ್ಮಾಪಕ ಉಮಾಪತಿ ಮಾತಿನ ಚಾಟಿ
ಸಾರ್ವಜನಿಕವಾಗಿ ವೇದಿಕೆ ಮೇಲೆಯೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಲೇ ತಗಡು ಎಂದಿದ್ದರು ನಟ ದರ್ಶನ್. ಇದೀಗ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಅದೇ ದರ್ಶನ್ ಬಗ್ಗೆಉಮಾಪತಿ ಪ್ರತಿಕ್ರಿಯಿಸಿದ್ದಾರೆ.
Darshan thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕೊನೇ ಹಂತ ತಲುಪಿದೆ. ಬಹುತೇಕ ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಇನ್ನೇನು ಶೀಘ್ರದಲ್ಲಿಯೇ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ನಡುವೆ ಹಾಸ್ಯ ನಟ ಚಿಕ್ಕಣ್ಣನಿಗೂ ಪೊಲೀಸರಿಂದ ತನಿಖೆಗೆ ಹಾಜರಾಗುವಂತೆ ನೋಟೀಸ್ ರವಾನೆಯಾಗಿತ್ತು. ಕೊಲೆ ನಡೆಯುವ ಹಿಂದಿನ ದಿನ ಸ್ಟೋನಿ ಬ್ರೂಕ್ ರೆಸ್ಟೋರಂಟ್‌ನಲ್ಲಿ ಪಾರ್ಟಿ ನಡೆದಿತ್ತು. ಅದರಲ್ಲಿ ಚಿಕ್ಕಣ್ಣ ಸಹ ಭಾಗಿಯಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆಸಲಾಗಿತ್ತು.
ಈ ಕೇಸ್‌ನ ತನಿಖೆ ಒಂದೆಡೆ ಸಾಗುತ್ತಿದ್ದರೆ, ಮತ್ತೊಂದೆಡೆ ನಟ ದರ್ಶನ್ ಬಗ್ಗೆ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಾತನಾಡಿದ್ದಾರೆ. ಖಾಸಗಿ ಸುದ್ದಿವಾಹಿನಿ ಜತೆಗೆ ಮಾತನಾಡಿದ ಅವರು, "ಮಾರುತಿ ಕಾರಲ್ಲಿ ಹೋಗುವವನಿಗೆ ಒಂದು ನ್ಯಾಯ. ಲ್ಯಾಂಬೊರ್ಗಿನಿಯಲ್ಲಿ ಹೋಗುವವನಿಗೆ ಒಂದು ನ್ಯಾಯ ಅಂತ ಯಾವತ್ತೂ ಇರಬಾರದು. ಸಂವಿಧಾನ ಬರೀಬೇಕಾದರೆ, ಡಾ, ಬಿ.ಆರ್ ಅಂಬೇಡ್ಕರ್ ಅವರು ಯಾರನ್ನೂ ತಲೆಯಲ್ಲಿ ಇಟ್ಟುಕೊಂಡು ಬರೆದಿಲ್ಲ. ಇವತ್ತು ಆ ಸಂವಿಧಾನಕ್ಕೆ ಆ ಗೌರವ ಸಿಕ್ಕಿದೆ" ಎಂದಿದ್ದಾರೆ.
ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಹ್ಯಾಟ್ಸ್ ಆಫ್...
"ಪಬ್ಲಿಕ್ ಲೈಫ್‌ಗೆ ಬಂದ್ಮೇಲೆ ಕಾಲು ಎಳೆಯೋರು ಇರಬೇಕು. ಬೆನ್ನು ತಟ್ಟೋರು ಇರಬೇಕು. ಏನೂ ಮಾಡೋಕಾಗಲ್ಲ. ನಮ್ಮ ಬೆರಳು ಇನ್ನೊಬ್ಬರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತೆ. ನಮ್ಮ ಬೆರಳು ನಮ್ಮ ಕಣ್ಣಿಗೆ ಚುಚ್ಚಿದರೂ ನಮಗೆ ನೋವಾಗುತ್ತದೆ. ಈಗ ಕಾನೂನಿನ ಚೌಕಟ್ಟಿನಲ್ಲಿ ಏನಾಗಬೇಕೋ ಅದು ಆಗುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹ್ಯಾಟ್ಸ್ ಹಾಫ್ ಹೇಳಬೇಕು. ಮುಂಚೆಯಿಂದಾನೂ ಅಷ್ಟೇ ಪೊಲೀಸ್ ಇಲಾಖೆ ಬಗ್ಗೆ ನಾನು ತುಂಬಾನೇ ಗೌರವ ಇಟ್ಕೊಂಡವನು. ನಮ್ಮ ತಂದೆಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಅಂತ ಬಹಳ ಆಸೆಯಿತ್ತು. ಕಾರಣಾಂತರಗಳಿಂದ ಆಗಲಿಲ್ಲ. ಈಗ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಿಗೆ, ಜನರಿಗೆ ಗೌರವ ಬಂದಿದೆ. ಭಯ ಭಕ್ತಿ ಬಂದಿದೆ" ಎಂದಿದ್ದಾರೆ.
ತಿನ್ನೋ ಅನ್ನಕ್ಕೆ ಮಣ್ಣು ಹಾಕಬಾರದು..
"ದೊಡ್ಡವರಿಗೂ ಒಂದೇ ಚಿಕ್ಕವರಿಗೂ ಒಂದೇ. ಒಂದು ತಲೆಯಲ್ಲಿ ಇಟ್ಕೊಳ್ಳಿ, ಮಾರುತಿ ಕಾರಲ್ಲಿ ಹೋಗುವವನಿಗೆ ಒಂದು ನ್ಯಾಯ. ಲ್ಯಾಂಬೊರ್ಗಿನಿಯಲ್ಲಿ ಹೋಗುವವನಿಗೆ ಒಂದು ನ್ಯಾಯ ಅಂತ ಯಾವತ್ತೂ ಇರಬಾರದು. ಸಂವಿಧಾನ ಬರೀಬೇಕಾದರೆ, ಡಾ, ಬಿ.ಆರ್ ಅಂಬೇಡ್ಕರ್ ಅವರು ಯಾರನ್ನೂ ತಲೆಯಲ್ಲಿ ಇಟ್ಟುಕೊಂಡು ಬರೆದಿಲ್ಲ. ಇವತ್ತು ಆ ಸಂವಿಧಾನಕ್ಕೆ ಆ ಗೌರವ ಸಿಕ್ಕಿದೆ. ನಾವು ನಂಬಿಕೊಂಡು ಬಂದವರಿಗೆ, ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಏನೂ ಮಾಡಬೇಕಾದರೂ ಒಂದೇ ಒಂದು ಕ್ಷಣ ಯೋಚನೆ ಮಾಡಬೇಕಿತ್ತು" ಎಂದಿದ್ದಾರೆ.
ಕಾಲ ಕಾಯ್ದು ಬಾಲ ಕುಯ್ಯಬೇಕು..
"ತಾಳ್ಮೆ ಅನ್ನೋದು ತುಂಬ ಮುಖ್ಯ. ಕಾಲ ಕಾಯ್ದು ಬಾಲ ಕುಯ್ಯಬೇಕು ಅನ್ನೋ ಮಾತನ್ನು ನಾನು ನಂಬೋನು, ಮನುಷ್ಯನಿಗೆ ತಾಳ್ಮೆ ಬಹು ಮುಖ್ಯ. ತಾಳ್ಮೆ ಕಳೆದುಕೊಂಡರೆ ಏನಾಗುತ್ತದೆ, ತಾಳ್ಮೆಯಿಂದ ಕಾದರೆ ಏನಾಗುತ್ತದೆ ಎಂಬುದೇ ಅಂದು ನಾನು ಹಾಕಿದ ಪೋಸ್ಟ್‌ನ ಹಿನ್ನೆಲೆ. ನಾವು ಒಂದು ಕಾಲದಲ್ಲಿ ನಾವು ಚೆನ್ನಾಗಿದ್ವಿ. ಆದರೆ ಕಾಲಾನಂತರ ದೇವ್ರೇ ನಮ್ಮನ್ನ ದೂರ ಮಾಡಿದೆ. ಬಾರಪ್ಪ ನೀನು ಸೇರಬೇಕಾಗಿರುವುದು ಆ ಗುಂಪಿಗಲ್ಲ. ನೀನು ಬಾಳಿ ಬದುಕುವಂಥವನು ಎಂದು ಹೊರಗಡೆ ಕರೆದುಕೊಂಡು ಬಂದ" ಎಂದಿದ್ದಾರೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಏಕೆ?
"ಮಾಡಿರುವ ಕೃತ್ಯವನ್ನು ಯಾರೂ ಒಪ್ಪಿಕೊಳ್ಳುವಂಥದ್ದಲ್ಲ. ಈ ಹಿಂದೆ ಏನೆಲ್ಲ ಸಮಸ್ಯೆ ಬಂದಿತ್ತೋ, ಆವತ್ತು ಇದೇ ರೀತಿ ಧ್ವನಿ ಎತ್ತಿದ್ರೆ, ಇಲ್ಲಿಯವರೆಗೂ ಬರ್ತಾಯಿರಲಿಲ್ಲ. ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ ಅನ್ನೋ ಮಾತಂತೆ, ಮನುಷ್ಯ ಆದವನು ತಿದ್ದಿಕೊಳ್ಳುವುದನ್ನು ಕಲೀಯಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಏಕೆ? ಅದೇ ರೀತಿ ಮನುಷ್ಯ ಆದವನು ಮರೆಯುವಂಥ ಗುಣ ಇಟ್ಟುಕೊಳ್ಳಬೇಕು. ವಯಸ್ಸು ಆಗ್ತಾ ಹೋದಂತೆ ತಾಳ್ಮೆಯಿಂದ ನಡೆದುಕೊಳ್ಳಬೇಕು. ನಮ್ಮ ನಂಬಿಕೊಂಡು ಯಾರೆಲ್ಲ ಇದ್ದಾರೆ? ಅದನ್ನೂ ನೋಡಿಕೊಳ್ಳಬೇಕು. ಮಾಡಿದ್ದುಣ್ಣೋ ಮಾರಾಯ ಅನ್ನೋ ಮಾತಂತೆ ಅವರು ಮಾಡಿದ್ದು ಅವರು ಅನುಭವಿಸ್ತಾರೆ. ಸಾಧ್ಯವಾದಷ್ಟು ಪುಣ್ಯ ಜಾಸ್ತಿ ಮಾಡಿಕೊಳ್ಳುತ್ತ ಹೋಗಬೇಕು" ಎಂದಿದ್ದಾರೆ.
ವಿಭಾಗ