Royal Review: ಅಬ್ಬರದ ಹೀರೋಯಿಸಂನಲ್ಲಿ ಮಿಂದೆದ್ದ ಪಕ್ಕಾ ಕಮರ್ಷಿಯಲ್‍ ಚಿತ್ರಕ್ಕೆ ‘ರಾಯಲ್‍’ ಸ್ಪರ್ಶ
ಕನ್ನಡ ಸುದ್ದಿ  /  ಮನರಂಜನೆ  /  Royal Review: ಅಬ್ಬರದ ಹೀರೋಯಿಸಂನಲ್ಲಿ ಮಿಂದೆದ್ದ ಪಕ್ಕಾ ಕಮರ್ಷಿಯಲ್‍ ಚಿತ್ರಕ್ಕೆ ‘ರಾಯಲ್‍’ ಸ್ಪರ್ಶ

Royal Review: ಅಬ್ಬರದ ಹೀರೋಯಿಸಂನಲ್ಲಿ ಮಿಂದೆದ್ದ ಪಕ್ಕಾ ಕಮರ್ಷಿಯಲ್‍ ಚಿತ್ರಕ್ಕೆ ‘ರಾಯಲ್‍’ ಸ್ಪರ್ಶ

Royal Movie Review: ‘ರಾಯಲ್‍’ ಎಂಬ ಹೆಸರೇ ಹೇಳುವಂತೆ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರದ ಪ್ರತಿ ದೃಶ್ಯವೂ ಶ್ರೀಮಂತವಾಗಿದೆ. ಚಿತ್ರವನ್ನು ಅಂದಗಾಣಿಸುವುದಕ್ಕೆ ಶ್ರಮ ಹಾಕಿರುವ ಚಿತ್ರತಂಡ, ಚಿತ್ರಕಥೆಗೆ ಹೆಚ್ಚು ಗಮನಹರಿಸಿಲ್ಲ. ಚಿತ್ರದ ಕಥೆಯಲ್ಲಿ ವಿಶೇಷತೆಯೇನಿಲ್ಲ. ಚಿತ್ರದ ಮೊದಲಾರ್ಧ ನಾಯಕ ಮತ್ತು ಅವನ ಚೇಷ್ಟೆಗಳ ಸುತ್ತ ಸುತ್ತುತ್ತದೆ.

ರಾಯಲ್‌ ಸಿನಿಮಾ ವಿಮರ್ಶೆ
ರಾಯಲ್‌ ಸಿನಿಮಾ ವಿಮರ್ಶೆ

Royal Movie Review: ದಿನಕರ್ ತೂಗುದೀಪ ನಿರ್ದೇಶನದ ಚಿತ್ರವೊಂದು ಬಿಡಗುಡೆಯಾಗದೆ ಆರು ವರ್ಷಗಳೇ ಆಗಿತ್ತು. 2018ರಲ್ಲಿ ಬಿಡುಗಡೆಯಾದ ‘ಲೈಫ್‍ ಜೊತೆಗೊಂದ್‍ ಸೆಲ್ಫಿ’ ಚಿತ್ರವೇ ಕೊನೆ. ಆ ನಂತರ ದಿನಕರ್ ನಿರ್ದೇಶನದ ಯಾವೊಂದು ಚಿತ್ರವೂ ಬಂದಿರಲಿಲ್ಲ. ಚಿತ್ರರಂಗದಲ್ಲಿ ಸುಮಾರು 20 ವರ್ಷಗಳ ಅನುಭವವಿರುವ ಅವರು, ಇದೀಗ ಹೊಸ ಹುಡುಗನನ್ನು ಇಟ್ಟುಕೊಂಡು ‘ರಾಯಲ್‍’ ಮಾಡಿದ್ದಾರೆ. ಈ ಚಿತ್ರವು ಇವತ್ತಿನ ಕಾಲಘಟ್ಟಕ್ಕೆ ಮತ್ತು ಇವತ್ತಿನ ಪ್ರೇಕ್ಷಕರಿಗೆ ಇಷ್ಟವಾಗುತ್ತದಾ? ಮುಂದೆ ಓದಿ.

‘ರಾಯಲ್‍’ ಚಿತ್ರದ ಕಥೆ ಏನು?

ಜೀವನದಲ್ಲಿ ರಾಯಲ್‍ ಆಗಿರಬೇಕು ಎಂದು ಬಯಸುವ ಕೃಷ್ಣ (ವಿರಾಟ್‍) ಬೇರೆಯವರಿಗೆ ಟೋಪಿ ಹಾಕಿಕೊಂಡೇ ಜೀವನ ಸಾಗಿಸುತ್ತಿರುತ್ತಾನೆ. ಅದೊಮ್ಮೆ ಗೋವಾಗೆ ಹೋಗುವ ಸಂಜನಾ (ಸಂಜನಾ ಆನಂದ್‍) ಮತ್ತು ಆಕೆಯ ಗೆಳೆತಿಯರಿಗೆ ಟೋಪಿ ಹಾಕಿ ಅವರ ಕಂಗೆಣ್ಣಿಗೆ ಗುರಿಯಾಗಿರುತ್ತಾನೆ. ಆದರೂ ಅವನು ಸರಿ ಹೋಗಬಹುದು ಎಂಬ ನಂಬಿಕೆಯಲ್ಲಿ ಅವನನ್ನು ಇಷ್ಟಪಡುವ ಸಂಜನಾ ಅವನಿಂದ ಮೋಸ ಹೋಗುತ್ತಾಳೆ. ಹೀಗಿರುವಾಗಲೇ, ಕೃಷ್ಣನಿಗೆ ತಾನು ಸಾಮಾನ್ಯ ಮನುಷ್ಯನಲ್ಲ, ದೊಡ್ಡ ಬ್ಯುಸಿನೆಸ್‍ ಕುಟುಂಬದ ಕುಡಿ ಎಂಬ ವಿಷಯ ಗೊತ್ತಾಗುತ್ತದೆ. ಆ ನಂತರ ಅವನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದಕ್ಕೆ ಚಿತ್ರ ನೋಡಬೇಕು.

ಹೇಗಿದೆ ‘ರಾಯಲ್’?

‘ರಾಯಲ್‍’ ಎಂಬ ಹೆಸರೇ ಹೇಳುವಂತೆ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರದ ಪ್ರತಿ ದೃಶ್ಯವೂ ಶ್ರೀಮಂತವಾಗಿದೆ. ಚಿತ್ರವನ್ನು ಅಂದಗಾಣಿಸುವುದಕ್ಕೆ ಶ್ರಮ ಹಾಕಿರುವ ಚಿತ್ರತಂಡ, ಚಿತ್ರಕಥೆಗೆ ಹೆಚ್ಚು ಗಮನಹರಿಸಿಲ್ಲ. ಚಿತ್ರದ ಕಥೆಯಲ್ಲಿ ವಿಶೇಷತೆಯೇನಿಲ್ಲ. ಚಿತ್ರದ ಮೊದಲಾರ್ಧ ನಾಯಕ ಮತ್ತು ಅವನ ಚೇಷ್ಟೆಗಳ ಸುತ್ತ ಸುತ್ತುತ್ತದೆ. ಚಿತ್ರದ ಕಥೆ ನಿಜಕ್ಕೂ ಶುರುವಾಗುವುದು ದ್ವಿತೀಯಾರ್ಧದಲ್ಲಿ. ಯಾವಾಗ ನಾಯಕನಿಗೆ ತನ್ನ ಅಪ್ಪ ಕಟ್ಟಿದ ಸಂಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೆಗಲೇರುತ್ತದೋ, ಅಲ್ಲಿಂದ ಚಿತ್ರಕ್ಕೊಂದು ತಿರುವು ಸಿಗುತ್ತದೆ. ಆದರೆ, ಚಿತ್ರಕ್ಕೊಂದು ವೇಗ ಮಿಸ್ ಆಗಿದೆ. ನಾಯಕ- ಪ್ರತಿನಾಯಕನ ನಡುವೆ ಜಿದ್ದಾಜಿದ್ದಿ ಇದ್ದರೂ, ಚಿತ್ರ ನೀರಸವಾಗಿ ಸಾಗುತ್ತದೆ ಮತ್ತು ನೀರಸವಾಗಿ ಮುಗಿಯುತ್ತದೆ.

ವಿರಾಟ್‍ಗಾಗಿ ಮಾಡಿದ ಚಿತ್ರ

ಈ ಹಿಂದೆ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ, ಯಶ್‍ಗಾಗಿ ಒಂದಿಷ್ಟು ಚಿತ್ರಗಳನ್ನು ಮಾಡಿದ್ದರು. ‘ರಾಯಲ್‍’ ಸಹ ವಿರಾಟ್‍ನನ್ನು ಯಶ್ ಮಟ್ಟಕ್ಕೆ ಏರಿಸುವ ಪ್ರಯತ್ನದೊಂದಿಗೆ ಕಾಣುತ್ತದೆ. ಇಡೀ ಚಿತ್ರದಲ್ಲಿ ಹೀರೋಯಿಸಂ ಎದ್ದು ಕಾಣುತ್ತದೆ. ಅದಕ್ಕೆ ಪೂರಕವಾಗಿ ಹಾಡುಗಳು ಮತ್ತು ಫೈಟುಗಳನ್ನು ಬಹಳ ವೈಭವಯುತವಾಗಿ ಚಿತ್ರೀಕರಿಸಲಾಗಿದೆ. ಹಾಡು ಮತ್ತು ಫೈಟುಗಳಲ್ಲಿ ಗಮನಸೆಳೆಯುವ ವಿರಾಟ್, ನಟನೆಯಲ್ಲಿ ಪಳಗಬೇಕು. ಸಂಜನಾ ಆನಂದ್‍ ಮುದ್ದಾಗಿ ಕಾಣುತ್ತಾರೆ. ಅಚ್ಯುತ್‍ ಕುಮಾರ್, ಛಾಯಾ ಸಿಂಗ್‍, ರವಿ ಭಟ್‍ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ. ಖಳನಾಯಕನಾಗಿ ಕಾಣಿಸಿಕೊಂಡಿರುವ ರಘು ಮುಖರ್ಜಿ ಪಾತ್ರಕ್ಕೆ ಇನ್ನಷ್ಟು ಖದರ್ ಬೇಕಿತ್ತು. ಛಾಯಾಗ್ರಾಹಕ ಸಂಕೇತ್‍ ಇಡೀ ಪರಿಸರವನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ.

‘ರಾಯಲ್‍’ ಒಂದು ಪಕ್ಕಾ ಕಮರ್ಷಿಯಲ್‍ ಚಿತ್ರ. ಇದು ಯಾವುದೇ ಚಿತ್ರದ ರೀಮೇಕ್‍ ಅಲ್ಲದಿದ್ದರೂ, ನಾಯಕ-ನಾಯಕಿಯ ಪಾತ್ರಗಳು, ಕೆಲವು ಸನ್ನಿವೇಶಗಳು ಈ ಹಿಂದಿನ ಪ್ರಯತ್ನಗಳನ್ನು ನೆನಪಿಸುತ್ತವೆ. ಚಿತ್ರ ನೋಡೋದಕ್ಕೆ ‘ರಾಯಲ್‍’ ಆಗಿದೆ. ಅಷ್ಟು ಸಾಕು ಎನ್ನುವವರು ಧಾರಾಳವಾಗಿ ಚಿತ್ರ ನೋಡಬಹುದು.

ಸಿನಿಮಾ: ರಾಯಲ್‍

ಜಾನರ್: ಫ್ಯಾಮಿಲಿ ಡ್ರಾಮ

ನಿರ್ದೇಶನ: ದಿನಕರ್ ತೂಗುದೀಪ

ನಿರ್ಮಾಣ: ಜಯಣ್ಣ - ಭೋಗೇಂದ್ರ

ಸಂಗೀತ: ಚರಣ್‍ ರಾಜ್‍

ಛಾಯಾಗ್ರಹಣ: ಸಂಕೇತ್‍ ಮೈಸೂರು

ಸಿನಿಮಾದ ಅವಧಿ: 148 ನಿಮಿಷ

ಎಚ್‍ಟಿ ಕನ್ನಡ ರೇಟಿಂಗ್‍: 2.5/5

ವಿಮರ್ಶೆ: ಚೇತನ್‌ ನಾಡಿಗೇರ್

Whats_app_banner