ಉನ್ನೀಸ್ ಕಟ್, ಛಬ್ಬೀಸ್ ಕಟ್; ನವೆಂಬರ್ 28ರಿಂದ ಪ್ರಾರಂಭವಾಗಲಿದೆ ‘ಎಕ್ಕ’ ಸಿನಿಮಾ ಶೂಟಿಂಗ್
Ekka: ‘ಯುವ’ ನಂತರ ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ‘ಎಕ್ಕ’. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ. ಚಿತ್ರದ ಚಿತ್ರೀಕರಣ ನವೆಂಬರ್ 28ರಿಂದ ಪ್ರಾರಂಭವಾಗಲಿದೆ. (ವರದಿ: ಚೇತನ್ ನಾಡಿಗೇರ್)
ವಿಜಯದಶಮಿಗೆ 'ಎಕ್ಕ' ಚಿತ್ರದ ಘೋಷಣೆ ಆಯ್ತು. ರಾಜ್ಯೋತ್ಸವದ ಪ್ರಯುಕ್ತ ಶೀರ್ಷಿಕೆ ಅನಾವರಣವೂ ಮುಗಿಯಿತು. ಚಿತ್ರದ ಮುಹೂರ್ತ ಯಾವಾಗ? ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಈಗ ಕೊನೆಗೂ ಉತ್ತರ ಸಿಕ್ಕಿದೆ. ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಚಿತ್ರದ ಮುಹೂರ್ತ ಗುರುವಾರ (ನ.28) ನಡೆಯಲಿದೆ. ಇತ್ತೀಚೆಗೆ ಚಿತ್ರದ ಮುಹೂರ್ತಗಳಿಗೆ ಬಹಳ ಜನಪ್ರಿಯವಾಗಿರುವ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ. ಚಿತ್ರದ ಮುಹೂರ್ತ ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಆಗಮಿಸಿ, ಚಿತ್ರತಂಡಕ್ಕೆ ಶುಭಕೋರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದ ಹಾಗೆ, ಚಿತ್ರದ ಚಿತ್ರೀಕರಣ ನಾಳೆಯಿಂದಲೇ ಪ್ರಾರಂಭವಾಗಲಿದೆ.
ಈ ಮಧ್ಯೆ, ‘ಎಕ್ಕ’ ಚಿತ್ರದ ಟೀಸರ್ ಮೇಕಿಂಗ್ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಸ್ಸೆಲ್ ಮಾರ್ಕೆಟ್‍ನಲ್ಲಿ ಈ ಟೀಸರ್ ಚಿತ್ರೀಕರಣವಾಗಿದ್ದು, ತೆರೆಮರೆಯ ದೃಶ್ಯಗಳನ್ನು ಈ ಟೀಸರ್‌ನಲ್ಲಿ ಕಟ್ಟಿಕೊಡಲಾಗಿದೆ. ಹಿನ್ನೆಲೆಯಲ್ಲಿ ‘ಎಕ್ಕಾ ಮಾರ್, ಗುನ್ನೀಸ್ ಕಟ್, ಛಬ್ಬೀಸ್ ಕಟ್ …’ ಎಂಬ ಹಾಡು ಸಹ ಕೇಳಿಬರುತ್ತದೆ.
‘ಯುವ’ ನಂತರ ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ ಇದಾಗಿದ್ದು, ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ. ‘ರತ್ನನ್ ಪ್ರಪಂಚ’ ಮತ್ತು ‘ಉತ್ತರಕಾಂಡ’ ಚಿತ್ರಗಳನ್ನು ನಿರ್ದೇಶಿಸಿರುವ ರೋಹಿತ್ ಪದಕಿ, ವಿಕ್ರಂ ಹತ್ವಾರ್ ಜೊತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು, ನಿರ್ದೇಶನವೂ ಅವರದ್ದೇ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನವಿದೆ.
‘ಎಕ್ಕ’ ಚಿತ್ರವನ್ನು ಕನ್ನಡದ ಮೂರು ಜನಪ್ರಿಯ ಚಿತ್ರನಿರ್ಮಾಣ ಸಂಸ್ಥೆಗಳು ಜೊತೆಗೂಡಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ಚಿತ್ರವನ್ನು PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಅಡಿ ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಕ್ರಮವಾಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ‘ಎಕ್ಕ’ ಚಿತ್ರದ ನಾಯಕಿ ಮತ್ತು ಉಳಿದ ಪಾತ್ರವರ್ಗವನ್ನು ಗುರುವಾರ ಘೋಷಿಸುವ ನಿರೀಕ್ಷೆ ಇದೆ.