Thurrraaa Song: ಮನದ ಕಡಲು ಸಿನಿಮಾ ತುರ್ರಾ ಹಾಡು ಬಿಡುಗಡೆ; ಯೋಗರಾಜ್‌ ಭಟ್‌ರ ಶೈಲಿಯಲ್ಲೇ ಇದೆ ಮಜವಾದ ಹಾಡು
ಕನ್ನಡ ಸುದ್ದಿ  /  ಮನರಂಜನೆ  /  Thurrraaa Song: ಮನದ ಕಡಲು ಸಿನಿಮಾ ತುರ್ರಾ ಹಾಡು ಬಿಡುಗಡೆ; ಯೋಗರಾಜ್‌ ಭಟ್‌ರ ಶೈಲಿಯಲ್ಲೇ ಇದೆ ಮಜವಾದ ಹಾಡು

Thurrraaa Song: ಮನದ ಕಡಲು ಸಿನಿಮಾ ತುರ್ರಾ ಹಾಡು ಬಿಡುಗಡೆ; ಯೋಗರಾಜ್‌ ಭಟ್‌ರ ಶೈಲಿಯಲ್ಲೇ ಇದೆ ಮಜವಾದ ಹಾಡು

ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಚಿತ್ರ ‘ಮನದ ಕಡಲು’ ತುರ್ರಾ ಹಾಡು ಬಿಡುಗಡೆ ಮಾಡಿದೆ. ಈ ಹಾಡಿನ ಸಾಹಿತ್ಯ ಕೇಳಿದವರು ಯೋಗರಾಜ್‌ ಭಟ್‌ರ ಶೈಲಿ ಇದರಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ. ಹಾಡನ್ನು ಅರ್ಥ ಮಾಡಿಕೊಳ್ಳುವುದು ಒಂದು ಸಾಹಸವೇ ಎಂಬಂತೆ ಸಾಹಿತ್ಯವಿದೆ.

ಮನದ ಕಡಲು ಸಿನಿಮಾ ತುರ್ರಾ ಹಾಡು ಬಿಡುಗಡೆ
ಮನದ ಕಡಲು ಸಿನಿಮಾ ತುರ್ರಾ ಹಾಡು ಬಿಡುಗಡೆ

ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು’ ಸಿನಿಮಾದ ಪೋಸ್ಟರ್ ಹಾಗೂ ಒಂದು ಹಾಡು ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಹೊಸ ಪ್ರತಿಭೆಗಳನ್ನು ಹಾಗೂ ಹಳೆ ಕಲಾವಿದರನ್ನು ಸೇರಿಸಿ ಮಾಡುತ್ತಿರುವ ಈ ಚಿತ್ರ ಹೇಗೆ ಮೂಡಿ ಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಸಿನಿಮಾದ ತುರ್ರಾ ಹಾಡು ಇಂದು ಜನವರಿ 8ರಂದು ಬಿಡುಗಡೆಯಾಗಿದೆ. ರಂಗಾಯಣ ರಘು ಅವರ ಅಭಿನಯ ಹಾಗೂ ಈ ಹಾಡಿನ ಸಾಲುಗಳು ಅದ್ಭುತವಾಗಿ ಸಂಯೋಜನೆಗೊಂಡಿದೆ.

ಯೋಗರಾಜ್‌ ಭಟ್‌ ಸಾಹಿತ್ಯ

ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಇನ್ನು ಸಂಜಿತ್‌ ಹೆಗಡೆ ಕೂಡ ಧ್ವನಿಗೂಡಿಸಿದ್ದಾರೆ. ಪ್ರಾರ್ಥನಾ ಎಂ ಎ ಕೂಡ ಈ ಹಾಡನ್ನು ಹಾಡಿದ್ದಾರೆ. ಈ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದಾರೆ. ಇದು ಕನ್ನಡ ಭಾಷೆಯ ಹಾಡೋ ಅಥವಾ ಇನ್ಯಾವುದೋ ಭಾಷೆಯೋ ಎಂಬಂತೆ ಇದರ ಸಾಹಿತ್ಯವಿದೆ. ಹಾಡಿನ ಸಾಲುಗಳಿವೆ. ಉದಾಹರಣೆಗೆ: ಗುಲಗಂಜಿಮ ಗುಂಬಕ ಗುಂಚಕಡಿ ತುರ್ರಾ ಎಂಬ ಸಾಲು ಹಾಡಿನ ಮೊದಲ ಸಾಲಾಗಿದೆ. ಒಂದು ರೀತಿಯ ಒಗಟು ಕೇಳಿದಂತೆ ಭಾಸವಾಗುತ್ತದೆ.

ಗುಂಯ್ ಗುಂಯ್ ಗಚ್ ಯಬಡಾ, ತಬಡಾ ಹಾಡು ಈ ಸಂದರ್ಭದಲ್ಲಿ ನೆನಪಾಗುವಂತಿದೆ. ಈ ಹಾಡನ್ನು ಯೋಗರಾಜ್ ಭಟ್‌ ಅವರು ದರ್ಶನ್ ಅಭಿನಯದ ಚಿಂಗಾರಿ ಸಿನಿಮಾಕ್ಕಾಗಿ ಬರೆದಿದ್ದರು. ಅದೇ ರೀತಿಯ ಇನ್ನೊಂದು ಹಾಡು ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಸಿಕ್ಕಿದೆ ಎನ್ನಬಹುದು.

ಕರಟಕ ದಮನಕ ಸಿನಿಮಾದ ನಂತರ ಯೋಗರಾಜ್ ಭಟ್‌ ಈ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಯೋಗರಾಜ್‍ ಭಟ್‍ ನಿರ್ದೇಶನದ ಈ ಚಿತ್ರಕ್ಕೆ ‘ಮನದ ಕಡಲು’ ಎಂಬ ಹೆಸರನ್ನು ಇಡಲಾಡಗಿದೆ. ಚಿತ್ರವನ್ನು ಇ.ಕೆ. ಎಂಟರ್‍ಟೈನರ್ಸ್ ಸಂಸ್ಥೆಯಡಿ ಇ. ಕೃಷ್ಣಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿರುವ, ಆದರೂ ಹೊಸಬರೇ ಆಗಿರುವ ಸುಮುಖ, ಅಂಜಲಿ ಅನೀಶ್‍ ಮತ್ತು ರಾಶಿಕಾ ಚಿತ್ರದಲ್ಲಿ ನಾಯಕ-ನಾಯಕಿಯರಾಗಿ ನಟಿಸಿದರೆ, ದತ್ತಣ್ಣ, ರಂಗಾಯಣ ರಘು ಮುಂತಾದ ಹಿರಿಯರಿದ್ದಾರೆ. ವಿ. ಹರಿಕೃಷ್ಣ ಸಂಗೀತ, ಸಂತೋಷ್‍ ರೈ ಪಾತಾಜೆ ಛಾಯಾಗ್ರಹಣ, ಜಯಂತ್‍ ಕಾಯ್ಕಿಣಿ ಸಾಹಿತ್ಯವಿದೆ.

ಹಾಡಿನಲ್ಲಿ ಆದಿವಾಸಿಗಳ ವೇಷ

ಒಂದು ಕಡೆ ಹೊಸಬರು, ಇನ್ನೊಂದು ಕಡೆ ಹಿರಿಯರು. ಒಂದು ಕಡೆ ಆಧುನಿಕತೆ, ಇನ್ನೊಂದು ಕಡೆ ಆದಿವಾಸಿ ಜನಾಂಗದ ಕಥೆ. ಈ ಬಾರಿ ಯೋಗರಾಜ್‍ ಭಟ್‍ ಏನು ಹೇಳೋಕೆ ಹೊರಟಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಚಿತ್ರದಲ್ಲಿ ಆ ವ್ಯತಿರಿಕ್ತ ವಿಷಯವನ್ನೇ ಹೇಳುತ್ತಾರೆ. ‘ಆಧುನಿಕ ಮನೋಭಾವದ ಯುವಜನಾಂಗ ತಾವೆಲ್ಲಾ ರೀತಿಯಲ್ಲೂ ಶ್ರೇಷ್ಠ ಎಂದು ಭಾವಿಸಿರುತ್ತಾರೆ. ಆದರೆ, ಹಿಂದುಳಿದವರು ಎನ್ನುವ ಆದಿವಾಸಿಗಳ ಎದುರು ಇವರು ಎಷ್ಟು ಕೆಳಗೆ ಬಿದ್ದಿದ್ದಾರೆ ಎಂದು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಇಲ್ಲಿ ರಂಗಾಯಣ ರಘು ಆದಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಹೊಸ ಭಾಷೆ ಸೃಷ್ಟಿ ಮಾಡಿದ್ದೇವೆ. ರಂಗಾಯಣ ರಘು ಸಹ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಈ ಹಿಂದೆಯೇ ಯೋಗರಾಜ್ ಭಟ್‌ ತಿಳಿಸಿದ್ದರು. ಈಗ ಆ ಆದಿವಾಸಿಗಳ ಪೋಷಾಕಿನಲ್ಲಿ ಈ ಹಾಡಿನಲ್ಲಿ ಎಲ್ಲರೂ ಕಾಣಿಸಿಕೊಂಡಿದ್ದಾರೆ.

Whats_app_banner