Upcoming Movies: ಚಂದನವನದಲ್ಲಿ ಮುಂದಿನ ಎರಡೇ ತಿಂಗಳಲ್ಲಿ 30 ಪ್ಲಸ್‌ ಸಿನಿಮಾಗಳು, ಚಿತ್ರಮಂದಿರಗಳಲ್ಲಿ ಹೊಸಬರ ನಡುವೆ ಪೈಪೋಟಿ
ಕನ್ನಡ ಸುದ್ದಿ  /  ಮನರಂಜನೆ  /  Upcoming Movies: ಚಂದನವನದಲ್ಲಿ ಮುಂದಿನ ಎರಡೇ ತಿಂಗಳಲ್ಲಿ 30 ಪ್ಲಸ್‌ ಸಿನಿಮಾಗಳು, ಚಿತ್ರಮಂದಿರಗಳಲ್ಲಿ ಹೊಸಬರ ನಡುವೆ ಪೈಪೋಟಿ

Upcoming Movies: ಚಂದನವನದಲ್ಲಿ ಮುಂದಿನ ಎರಡೇ ತಿಂಗಳಲ್ಲಿ 30 ಪ್ಲಸ್‌ ಸಿನಿಮಾಗಳು, ಚಿತ್ರಮಂದಿರಗಳಲ್ಲಿ ಹೊಸಬರ ನಡುವೆ ಪೈಪೋಟಿ

Kannada Upcoming Movies 2025: ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಒಟ್ಟು 30 ಪ್ಲಸ್‌ ಸಿನಿಮಾಗಳು ಬಿಡುಗಡೆ ಆಗಲಿವೆ. ಈಗಾಗಲೇ ಒಂದಷ್ಟು ಸಿನಿಮಾಗಳು ಅಧಿಕೃತವಾಗಿ ರಿಲೀಸ್‌ ದಿನಾಂಕ ಘೋಷಣೆ ಮಾಡಿವೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

January 2025 Kannada Movies: ಚಿತ್ರಮಂದಿರಗಳಲ್ಲಿ ಹೊಸಬರ ನಡುವೆ ಪೈಪೋಟಿ
January 2025 Kannada Movies: ಚಿತ್ರಮಂದಿರಗಳಲ್ಲಿ ಹೊಸಬರ ನಡುವೆ ಪೈಪೋಟಿ

Upcoming Kannada Movies 2025: ಕನ್ನಡದಲ್ಲಿ ಬಿಡುಗಡೆಯಾಗುವುದಕ್ಕೆ ಹೊಸ ಚಿತ್ರಗಳ ಪೈಪೋಟಿಯೇ ನಡೆದಿದೆ. ಜನವರಿಯಲ್ಲೇ 10 ಹೆಚ್ಚು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಮುಂದಿನ ಎರಡು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಹೊಸ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ ಎನ್ನುವುದು ವಿಶೇಷ. ಈ ಪೈಕಿ ದೊಡ್ಡ ಸ್ಟಾರ್‌ಗಳ ಚಿತ್ರಗಳು ಯಾವುದೂ ಇಲ್ಲದಿದ್ದರೂ, ಒಂದಿಷ್ಟು ಮೀಡಿಯಂ ಬಜೆಟ್‍ನ ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.

ಮೊದಲ ವಾರ ನೀರಸ ಪ್ರತಿಕ್ರಿಯೆ

ಈ ವರ್ಷದ ಮೊದಲ ಶುಕ್ರವಾರ (ಜನವರಿ 03) ಚಿತ್ರರಂಗಕ್ಕೆ ಅಷ್ಟೇನೂ ಚೆನ್ನಾಗಿರಲಿಲ್ಲ. ಈ ವಾರ ಎರಡು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದು, ಎರಡೂ ಚಿತ್ರಗಳಿಗೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವೆಂದರೆ, ಎರಡೂ ಚಿತ್ರಗಳ ನಾಯಕರು ಹೊಸಬರು. ಕಥೆಗಾರ ಅಜಯ್‍ ಕುಮಾರ್ ಮಗ ಅರ್ಜುನ್‍, ‘ಗನ್ಸ್ ಆ್ಯಂಡ್‍ ರೋಸಸ್‍’ ಚಿತ್ರದ ಮೂಲಕ ಹೀರೋ ಆದರೆ, ‘ಸ್ವೇಚ್ಛಾ’ ಚಿತ್ರದಲ್ಲಿ ಅನ್ವಿಶ್‍ ಎನ್ನುವವರು ನಾಯಕನಾಗಿ ಅಭಿನಯಿಸಿದ್ದಾರೆ. ಎರಡೂ ಚಿತ್ರಗಳಿಗೆ ಪ್ರೇಕ್ಷಕರಿಂದ ಅಷ್ಟೇನೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಜನವರಿ ಎರಡನೇ ವಾರಕ್ಕೆ ಮೂರು ಚಿತ್ರಗಳು

ಮೊದಲ ವಾರ ಹೀಗಾದರೆ, ಜನವರಿ ಎರಡನೇ ವಾರದಲ್ಲಿ ಶರಣ್‍ ಅಭಿನಯದ ‘ಛೂ ಮಂತರ್’, ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‍ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಮತ್ತು ‘ಟೆಡ್ಡಿ ಬೇರ್’ ಎಂಬ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ‘ಛೂ ಮಂತರ್’ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಚಿತ್ರವನ್ನು ಮುಂದೂಡಲಾಗಿದ್ದು, ಇದೀಗ ಕೊನೆಗೂ ಜನವರಿ 10ರಂದು ಬಿಡುಗಡೆಗೆ ಮುಹೂರ್ತ ಸಿಕ್ಕಿದೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡಿದ್ದು, ಈ ಚಿತ್ರಕ್ಕೆ ಸುದೀಪ್‍ ಕಥೆ ಕೊಟ್ಟಿದ್ದಾರಂತೆ. ಇದಲ್ಲದೆ ರಾಮ್‍ಚರಣ್‍ ತೇಜ ಅಭಿನಯದ ಮತ್ತು ಶಂಕರ್ ‍ನಿರ್ದೇಶನದ ಬಹುನಿರೀಕ್ಷಿತ ‘ಗೇಮ್‍ ಚೇಂಜರ್’ ಬಿಡುಗಡೆಯಾಗುತ್ತಿದೆ. ಇದಲ್ಲದೆ ನಂದಮೂರಿ ಬಾಲಕೃಷ್ಣ ನಿರ್ದೇಶನದ ‘ಡಾಕು ಮಹಾರಾಜ್‍’ ಮತ್ತು ವೆಂಕಟೇಶ್ ಅಭಿನಯದ ‘ಸಂಕ್ರಾಂತಿ ವಸ್ತುನ್ನಾಂ’ ಸೇರಿದಂತೆ ಒಂದಿಷ್ಟು ದೊಡ್ಡ ತೆಲುಗು ಮತ್ತು ತಮಿಳು ಚಿತ್ರಗಳು ಬಿಡುಗಡೆಯಾಗುತ್ತಿವೆ.

ನಾಲ್ಕನೇ ಶುಕ್ರವಾರ ಮತ್ತೆ ಮೂರು ಚಿತ್ರಗಳು

ಜನವರಿ 17ರಂದು ರಾಘವೇಂದ್ರ ರಾಜಕುಮಾರ್ ಅಭಿನಯದ ‘ಕಣ್ಣಾಮುಚ್ಚೆ ಕಾಡೇಗೂಡೇ’ ಚಿತ್ರ ಮಾತ್ರ ಬಿಡುಗಡೆಗೆ ಘೋಷಣೆಯಾಗಿದೆ. ಅದಾಗಿ ಮರುವಾರ ಅಂದರೆ ಜನವರಿ 24ಕ್ಕೆ ಮತ್ತೆ ಮೂರು ಚಿತ್ರಗಳು ತೆರೆಗೆ ಬರಲಿವೆ. ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ವಿರಾಟ್‍ ಅಭಿನಯದ ‘ರಾಯಲ್‍’ ಮತ್ತು ಅನೀಶ್‍ ತೇಜೇಶ್ವರ್ ಮುಂತಾದವರು ನಟಿಸಿರುವ ‘ಫಾರೆಸ್ಟ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಮೂರೂ ಚಿತ್ರಗಳು ಮೂರು ವಿಭಿನ್ನ ಜಾನರ್‌ಗೆ ಸೇರಿದ ಚಿತ್ರಗಳಾಗಿದ್ದು, ಜನವರಿ ಕೊನೆಯ ಶುಕ್ರವಾರ (ಜ 31) ಪ್ರಜ್ವಲ್‍ ಅಭಿನಯದ ‘ಗಣ’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಫೆಬ್ರವರಿಯಲ್ಲೂ ಒಂದಿಷ್ಟು ಚಿತ್ರಗಳು

ಜನವರಿಯಂತೆ ಫೆಬ್ರವರಿಯಲ್ಲೂ ಒಂದಿಷ್ಟು ಚಿತ್ರಗಳು ಈಗಾಗಲೇ ಘೋಷಣೆಯಾಗಿವೆ. ಫೆಬ್ರವರಿ 7ರಂದು ಅನ್‌ಲಾಕ್‌ ರಾಘವ ಬಿಡುಗಡೆ ಆಗಲಿದೆ. ಫೆಬ್ರವರಿ 14ರಂದು ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಅಭಿನಯದ ‘ಭುವನಂ ಗಗನಂ’, ಗುರುನಂದನ್‍ ಅಭಿನಯದ ‘ರಾಜು ಜೇಮ್ಸ್ ಬಾಂಡ್‍’ ಮತ್ತು ಯೋಗಿ ಅಭಿನಯದ ‘ಸಿದ್ಲಿಂಗು 2’ ಚಿತ್ರಗಳು ತೆರೆಗೆ ಬರಲಿವೆ. ಕೆ. ಮಂಜು ಮಗ ಶ್ರೇಯಸ್‍ ಅಭಿನಯದ ಹಳೆಯ ಚಿತ್ರ ‘ವಿಷ್ಣುಪ್ರಿಯ’, ಫೆಬ್ರವರಿ 21ಕ್ಕೆ ಬಂದರೆ, ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಜ್ವಲ್ ಅಭಿನಯದ ‘ರಾಕ್ಷಸ’ ಬಿಡುಗಡೆಯಾಗಲಿದೆ.

ಇದರ ಜೊತೆಗೆ ಇನ್ನೊಂದಿಷ್ಟು …

ಇದಲ್ಲದೆ ‘ಶ್ಯಾನುಭೋಗರ ಮಗಳು’, ‘ತಲ್ವಾರ್’, ‘ಮಾಂಕ್‍ ದಿ ಯಂಗ್‍’, ’31 ಡೇಸ್‍’ ಸೇರಿದಂತೆ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಆದರೆ, ಆ ಚಿತ್ರಗಳ ಬಿಡುಗಡೆ ದಿನಾಂಕಗಳು ಇನ್ನೂ ಘೋಷಣೆಯಾಗಿಲ್ಲ. ಏನೇ ಆದರೂ ಫೆಬ್ರವರಿ ತಿಂಗಳೊಳಗೆ ಒಂದಿಷ್ಟು ಚಿತ್ರಗಳು ಬಿಡುಗಡೆ ಆಗಲಿವೆ. ಕಾರಣ ಮಾರ್ಚ್‍ ತಿಂಗಳಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ. ಜೊತೆಗೆ ಮಾರ್ಚ್ 14ರಿಂದ ಮೇ 25ರವರೆಗೂ ಐಪಿಎಲ್‌ ನಡೆಯಲಿದೆ. ಆ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ಕಡಿಮೆ ಇರುವುದರಿಂದ ಅದಕ್ಕೆ ಮೊದಲೇ ಚಿತ್ರಗಳು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆದಿದೆ.

ವರದಿ: ಚೇತನ್‌ ನಾಡಿಗೇರ್

Whats_app_banner