ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರು ಮಾಡಿದ್ದ ಹನುಮನ ಪಾತ್ರವನ್ನು ಕತ್ತರಿಸಿದ್ದು ಏಕೆ? ಇದು ರಾಜ್‌ಕುಮಾರ್‌ ಪ್ರಬುದ್ಧ ನಡೆಗೆ ಸಾಕ್ಷಿ
ಕನ್ನಡ ಸುದ್ದಿ  /  ಮನರಂಜನೆ  /  ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರು ಮಾಡಿದ್ದ ಹನುಮನ ಪಾತ್ರವನ್ನು ಕತ್ತರಿಸಿದ್ದು ಏಕೆ? ಇದು ರಾಜ್‌ಕುಮಾರ್‌ ಪ್ರಬುದ್ಧ ನಡೆಗೆ ಸಾಕ್ಷಿ

ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರು ಮಾಡಿದ್ದ ಹನುಮನ ಪಾತ್ರವನ್ನು ಕತ್ತರಿಸಿದ್ದು ಏಕೆ? ಇದು ರಾಜ್‌ಕುಮಾರ್‌ ಪ್ರಬುದ್ಧ ನಡೆಗೆ ಸಾಕ್ಷಿ

Sandalwood Flash back Stories: ದೂರದ ಬೆಟ್ಟ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಆಂಜನೇಯನ ಪಾತ್ರದಲ್ಲಿ ನಟಿಸಿದ್ದರು. ಆದರೆ, ಆ ದೃಶ್ಯ ಮಾತ್ರ ವೀಕ್ಷಕರಿಗೆ ನೋಡಲು ಸಿಕ್ಕಿರಲಿಲ್ಲ. ಬೇಡ ಎಂದು ಸ್ವತಃ ರಾಜ್‌ಕುಮಾರ್‌ ಅವರೇ ಕತ್ತರಿಸಿದ್ದರು! ಅಷ್ಟಕ್ಕೂ ಆವತ್ತು ಅಣ್ಣಾವ್ರ ಈ ನಿರ್ಧಾರದ ಹಿಂದಿನ ಉದ್ದೇಶ ಏನಾಗಿತ್ತು? ಹೀಗಿದೆ ವಿವರ.

ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರು ಮಾಡಿದ್ದ ಹನುಮನ ಪಾತ್ರವನ್ನು ಕತ್ತರಿಸಿದ್ದು ಏಕೆ?
ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರು ಮಾಡಿದ್ದ ಹನುಮನ ಪಾತ್ರವನ್ನು ಕತ್ತರಿಸಿದ್ದು ಏಕೆ? (Image\ Total Kannada Youtube)

Dr Rajkumar: 1973ರ ಆಗಸ್ಟ್‌ 10ರಂದು ತೆರೆಗೆ ಬಂದ ಸಿನಿಮಾ ದೂರದ ಬೆಟ್ಟ. ಭಾಗಶಃ ಕಪ್ಪು ಬಿಳುಪಿನಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾದಲ್ಲಿ ಲೀಲಾವತಿ, ಬಾಲಕೃಷ್ಣ, ಅಶ್ವತ್ಥ ಸೇರಿ ಅನೇಕ ಕಲಾವಿರು ನಟಿಸಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ್ದಾರೆ. ಬಂಗಾರದ ಮನುಷ್ಯ ಸಿನಿಮಾ ಬಳಿಕ ಅದೇ ರಾಜ್‌ಕುಮಾರ್‌ ಮತ್ತು ಭಾರತಿ ಕಾಂಬಿನೇಷನ್‌ನ ಕೊನೇ ಚಿತ್ರವೂ ಇದೆ ದೂರದ ಬೆಟ್ಟ. ಇಂತಿಪ್ಪ ದೂರದ ಬೆಟ್ಟ ಚಿತ್ರದಲ್ಲಿ ಡಾ. ರಾಜ್‌ಕುಮಾರ್‌ ಆಂಜನೇಯನ ಪಾತ್ರದಲ್ಲಿಯೂ ನಟಿಸಿದ್ದರು. ಆದರೆ, ಆ ದೃಶ್ಯ ಮಾತ್ರ ವೀಕ್ಷಕರಿಗೆ ನೋಡಲು ಸಿಕ್ಕಿರಲಿಲ್ಲ. ಬೇಡ ಎಂದು ಸ್ವತಃ ರಾಜ್‌ಕುಮಾರ್‌ ಅವರೇ ಕತ್ತರಿಸಿದ್ದರು!

ಅಷ್ಟಕ್ಕೂ ಆವತ್ತು ಅಣ್ಣಾವ್ರ ಈ ನಿರ್ಧಾರದ ಹಿಂದಿನ ಉದ್ದೇಶ ಏನಾಗಿತ್ತು? ಏಕೆ ಹನುಮನ ಪಾತ್ರವನ್ನು ಬೇಡ ಅಂದ್ರು. ಅದೇ ಕೊನೇ, ಅದಾದ ಮೇಲೆ ಅವರು ಯಾವತ್ತೂ ತೆರೆಮೇಲೆ ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಅಚ್ಚರಿಯ ವಿಚಾರ ಏನೆಂದರೆ, ಅಣ್ಣಾವ್ರು ತಮ್ಮ ನಟನಾ ವೃತ್ತಿ ಜೀವನದಲ್ಲಿ ರಾಮಾಯಣದ ಬಹುತೇಕ ಎಲ್ಲ ಪಾತ್ರಗಳನ್ನು ನಿರ್ವಹಿಸಿ ತೆರೆಮೇಲೆ ತಂದಿದ್ದಾರೆ. ರಾಮಾಯಣ ರಚಿಸಿದ ವಾಲ್ಮಿಕಿ ಪಾತ್ರದಿಂದ ಹಿಡಿದು, ರಾಮಾಯಣದ ಖಳನಾಯಕ ರಾವಣ, ರಾಮಾಯಣದ ನಾಯಕ ರಾಮನ ಪಾತ್ರವನ್ನು ನಿರ್ವಹಣೆ ಮಾಡಿದ್ದಾರೆ.

ಆಂಜನೇಯನ ಪಾತ್ರ ತೆರೆಮೇಲೆ ಬರಲೇ ಇಲ್ಲ

ಆದರೆ, ರಾಮಾಯಣದ ಆಂಜನೇಯನ ಪಾತ್ರವನ್ನು ಅವರು ಮಾಡಿಲ್ಲ. ಆಂಜನೇಯನ ವರಪ್ರಸಾದದಿಂದಲೇ ಜನಿಸಿದವರು ಮುತ್ತುರಾಜು. ಆದರೆ ಆ ಒಂದು ಪಾತ್ರವನ್ನು ತೆರೆಮೇಲೆ ಮಾಡುವ ಸೌಭಾಗ್ಯ ಅವರಿಗೆ ಕೂಡಿಬರಲೇ ಇಲ್ಲ. ಹೀಗಿರುವಾಗ ದೂರದ ಬೆಟ್ಟ ಚಿತ್ರದಲ್ಲಿ ಒಂದು ನಾಟಕದ ದೃಶ್ಯದ ಸನ್ನಿವೇಶದಲ್ಲಿ ರಾಜ್‌ಕುಮಾರ್‌, ಆಂಜನೇಯನ ಪಾತ್ರದಲ್ಲಿ ಕಂಡಿದ್ದರು. ಆ ಒಂದು ದೃಶ್ಯದ ಚಿತ್ರೀಕರಣವೂ ನಡೆದಿತ್ತು. ಆದರೆ, ಚಿತ್ರ ಮುಗಿದು ಸಂಕಲನದ ಸಮಯದ ಟೇಬಲ್‌ಗೆ ಬಂದಾಗ, ಅಣ್ಣಾವ್ರು ಒಂದು ಆಲೋಚನೆ ಮಾಡ್ತಾರೆ.

ಅಣ್ಣಾವ್ರ ಪ್ರಬುದ್ಧ ನಡೆ

"ನಾವು ನಾಟಕ ರಂಗದಿಂದ ಬಂದವರು. ಸಿನಿಮಾದಲ್ಲಿಯೂ ಕೂಡ ಅಂಥ ಪಾತ್ರಗಳನ್ನು ಗಂಭೀರವಾಗಿ ನಿರ್ವಹಣೆ ಮಾಡುತ್ತೇವೆ. ಇಲ್ಲಿ ಒಂದು ಹಳ್ಳಿಯ ಕಥೆ ಅನ್ನೋ ಕಾರಣಕ್ಕೆ, ರಾಮಾಯಣದ ಸನ್ನಿವೇಶವನ್ನು ಇಟ್ಕೊಂಡು ಜನರನ್ನು ರಂಜಿಸುವ ಸಲುವಾಗಿ, ಆ ಪಾತ್ರಗಳನ್ನು ಒಂದು ರೀತಿ ಹಗುರವಾಗಿ ತೆರೆಮೇಲೆ ತೋರಿಸುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಯೋಚನೆ ಮಾಡಿ, ಆ ಹಾಸ್ಯ ಪ್ರಸಂಗವನ್ನು ವರದಪ್ಪ ಮತ್ತು ಅಣ್ಣಾವ್ರು ಜತೆಗೂಡಿ ಚರ್ಚೆ ನಡೆಸಿ, ಬೇಡ ಎಂದು ಕತ್ತರಿಸುತ್ತಾರೆ. ಅಷ್ಟಕ್ಕೂ ಆ ದೃಶ್ಯ ಕತ್ತರಿಸಿದ್ದೇಕೆ ಎಂಬ ಬಗ್ಗೆ ಹರಿಹರಪುರ ಮಂಜುನಾಥ್‌ ಅವರು ಟೋಟಲ್‌ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಏಕೆ ರಾಜ್‌ಕುಮಾರ್‌ ಇತರರಿಗಿಂತ ಭಿನ್ನ?

ರಾಜ್‌ಕುಮಾರ್‌ ಅವರಲ್ಲಿ ಕೇವಲ ಒಬ್ಬ ಕಲಾವಿದ ಆಗಿರಲಿಲ್ಲ. ಒಬ್ಬ ಗಾಯಕ ಅಷ್ಟೇ ಇರಲಿಲ್ಲ. ಮನಸ್ಸು ಮಾಡಿದ್ದರೆ ರಾಜ್‌ಕುಮಾರ್‌ ನಿರ್ದೇಶಕರು ಆಗಬಹುದಿತ್ತು. ಕಥಾಲೇಖನವನ್ನೂ ಅವರು ಖಂಡಿತ ಮಾಡಬಹುದಿತ್ತು. ಆದರೆ, ತಮ್ಮ ಕೆಲಸವನ್ನು ಬಿಟ್ಟು, ಬೇರೆ ಯಾವುದರ ಕಡೆಗೂ ಅವರು ಗಮನ ಕೊಡಲಿಲ್ಲ. ಆದರೆ ರಂಗಭೂಮಿಯಿಂದ ಬಂದು, ಆ ರಂಗಭೂಮಿಯನ್ನು ಮತ್ತು ಚಿತ್ರರಂಗವನ್ನು, ದೇವಸ್ಥಾನ, ದೇವರ ಸನ್ನಿಧಿ, ದೇವರ ಪೂಜೆ, ತಪ್ಪಸ್ಸು ಅಂತ ಭಾವಿಸಿ, ತಮ್ಮ ವೃತ್ತಿ ಜೀವನವನ್ನು ಸವೆಸಿದಂಥವರು ರಾಜ್‌ಕುಮಾರ್‌. ಒಂದು ಚಿತ್ರದ ಸಲುವಾಗಿ, ಪುರಾಣದ ಕಥೆಯನ್ನು ಹಾಸ್ಯದ ರೀತಿಯಲ್ಲಿ ತೋರಿಸುವುದು ಬೇಡ ಅನ್ನೋ ಯೋಚನೆ ಅಣ್ಣಾವ್ರದ್ದು. ಇದನ್ನು ಗಮನಿಸಿದರೆ, ಅಣ್ಣಾವ್ರು ಹೇಗೆ ಇತರರಿಗಿಂತ ಭಿನ್ನ ಅನ್ನೋದಕ್ಕೆ ಸಾಕ್ಷಿ.

Whats_app_banner