ಆರಂಭದಲ್ಲಿ ಭಯವಿತ್ತು, ಸರ್ಜರಿ ಬಳಿಕ 3 ದಿನ ಲಿಕ್ವಿಡ್ ಫುಡ್; ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಕುರಿತು ಶಿವರಾಜ್ ಕುಮಾರ್ ಹೀಗಂದ್ರು
ಕ್ಯಾನ್ಸರ್ ಚಿಕಿತ್ಸೆಗೆ ಅಮೆರಿಕದ ಮಿಯಾಮಿ ಆಸ್ಪತ್ರೆಗೆ ತೆರಳಿದ ಕನ್ನಡ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕರ್ನಾಟಕಕ್ಕೆ ಮರಳಿದ್ದಾರೆ. ಚಿಕಿತ್ಸೆಗೆ ಅಮೆರಿಕಕ್ಕೆ ಹೋಗುವ ಸಂದರ್ಭದಲ್ಲಿ ಒಂದಿಷ್ಟು ಭಾವುಕನಾಗಿದ್ದೆ. ಭಯವೂ ಇತ್ತು. ಸರ್ಜರಿ ಬಳಿಕ ಎರಡು ಮೂರು ದಿನ ದ್ರವರೂಪದ ಆಹಾರ ಮಾತ್ರ ಸೇವಿಸುತ್ತಿದ್ದೆ ಎಂದು ಶಿವಣ್ಣ ಹೇಳಿದ್ದಾರೆ.

ಬೆಂಗಳೂರು: ಗಣರಾಜ್ಯೋತ್ಸವದಂದು ಶಿವರಾಜ್ ಕುಮಾರ್ ಕರ್ನಾಟಕಕ್ಕೆ ಮರಳುವ ಸುದ್ದಿ ತಿಳಿದು ಅಪಾರ ಅಭಿಮಾನಿಗಳು, ಆಪ್ತರು ವಿಮಾನ ನಿಲ್ದಾಣದ ಟೋಲ್ ಗೇಟ್ ಮುಂದೆ ನೆರೆದಿದ್ದರು. ಇಂದು ಬೆಳಗ್ಗೆ 9 ಗಂಟೆಯ ನಂತರ ಬೆಂಗಳೂರು ತಲುಪಿದ ಶಿವಣ್ಣನನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿದರು. ಆಪಲ್ ಹಣ್ಣುಗಳ ಹಾರ ಹಾಕಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಸಿನಿಮಾ ರಂಗದ ಸೆಲೆಬ್ರಿಟಿಗಳೂ ಅಲ್ಲಿ ನೆರೆದಿದ್ದರು. ಬೆಂಗಳೂರಿನ ತನ್ನ ನಿವಾಸದ ಬಳಿ ಮಾಧ್ಯಮಗಳ ಜತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. "ಚಿಕಿತ್ಸೆಗೆ ಅಮೆರಿಕಕ್ಕೆ ಹೋಗುವ ಸಂದರ್ಭದಲ್ಲಿ ಒಂದಿಷ್ಟು ಭಾವುಕನಾಗಿದ್ದೆ. ಭಯವೂ ಇತ್ತು. ವಿಮಾನದಲ್ಲಿ ಪ್ರಯಾಣ ಮಾಡುವ ಸಮಯದಲ್ಲಿಯೂ ತುಸು ಭಯವಿತ್ತು. ಜೀವನದಲ್ಲಿ ಏನೇ ಬರಲಿ, ಫೇಸ್ ಮಾಡೋಣ ಎಂದು ಧೈರ್ಯ ತೆಗೆದುಕೊಂಡು ಪ್ರಯಾಣಿಸಿದೆ. ಅಮೆರಿಕಕ್ಕೆ ಹೋದ ಮೇಲೆ ಭರವಸೆ ಹೆಚ್ಚಾಯಿತು. ಸರ್ಜರಿ ಮಾಡುವ ದಿನದಂದು ಕೂಡ ಭಯ ಇತ್ತು. ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಆರು ಗಂಟೆಗಳ ಕಾಲ ಎಲ್ಲರಲ್ಲಿಯೂ ಭಯ ಇತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು" ಎಂದು ಶಿವಣ್ಣ ತಿಳಿಸಿದ್ದಾರೆ.
"ನನಗೆ ಶಸ್ತ್ರಚಿಕಿತ್ಸೆ ಆದ ಬಳಿಕ ನಿಧಾನವಾಗಿ ನಡೆಯಲು ಶುರು ಮಾಡಿದೆ. ಎರಡು ಮೂರು ದಿನ ದ್ರವರೂಪದ ಆಹಾರ ಮಾತ್ರ ಸೇವಿಸುತ್ತಿದ್ದೆ. ವಾಕಿಂಗ್ ಮಾಡುತ್ತಿದ್ದೆ. ಕೆಲವು ದಿನಗಳಲ್ಲಿ ನನ್ನ ಆರೋಗ್ಯ ಸುಧಾರಿಸುತ್ತ ಹೋಯಿತು. ಈಗ ತುಂಬಾ ಸ್ಟ್ರಾಂಗ್ ಆಗಿದ್ದೀನಿ. ಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಕಷ್ಟ. ನನಗೆ ತುಂಬಾ ಬೆಂಬಲ ಸಿಗ್ತು. ಈ ಒಂದು ತಿಂಗಳು ಎಲ್ಲರೂ ನನ್ನ ಜತೆಯಲ್ಲಿ ಇದ್ದು ನೋಡಿಕೊಂಡರು. ನಾನು ಅದೃಷ್ಟವಂತ, ಕಿಂಗ್ ಈಸ್ ಬ್ಯಾಕ್. ಇನ್ಮುಂದೆ 131ನೇ ಸಿನಿಮಾ ಪ್ರಾಜೆಕ್ಟ್‌ನ ಯೋಜನೆ ನಡೆಯುತ್ತಿದೆ. ರಾಮ್ ಚರಣ್ ಸಿನಿಮಾದಲ್ಲಿಯೂ ನಟಿಸುವೆ" ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಶಿವರಾಜ್ ಕುಮಾರ್ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಮಯದಲ್ಲಿ ಅಭಿಮಾನಿಗಳು, ಸೆಲೆಬ್ರಿಟಿಗಳು, ಆತ್ಮೀಯರು ನೆರೆದಿದ್ದರು. ತಮ್ಮನ್ನು ಸ್ವಾಗತಿಸಲು ಬಂದವರನ್ನು ಪ್ರೀತಿಯಿಂದ ತಬ್ಬಿ ಶಿವಣ್ಣ ಖುಷಿಪಟ್ಟಿದ್ದಾರೆ. ಅಭಿಮಾನಿಗಳು ತಂದ ಹಾರಗಳನ್ನು ಕಾರಿನಲ್ಲಿ ಹಾಕಿಕೊಂಡು ಮನೆಗೆ ತೆರಳಿದರು.
ಬೆಂಗಳೂರಿಗೆ ಶಿವಣ್ಣ ವಾಪಸ್ ಬಂದ ಸುದ್ದಿ ಕೇಳಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ರಸ್ತೆಗಳು, ಶಿವಣ್ಣನ ಮನೆ ಆಸುಪಾಸಿನಲ್ಲಿ "ಕಿಂಗ್ ಈಸ್ ಬ್ಯಾಕ್ ಕೌಟೌಟ್‌ಗಳು ರಾರಾಜಿಸುತ್ತಿವೆ. ಕಟೌಟ್‌ಗಳಲ್ಲಿ ಶಿವರಾಜ್ ಕುಮಾರ್ ಜತೆ ಗೀತಾ ಶಿವರಾಜ್ ಕುಮಾರ್ ಫೋಟೋ ಕೂಡ ರಾರಾಜಿಸುತ್ತಿದೆ. ಶಿವ ರಾಜ್ ಕುಮಾರ್ ಬೆಂಗಳೂರಿಗೆ ವಾಪಸ್ ಬರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಅನ್ನ ಸಂತರ್ಪಣೆ ಆಯೋಜನೆ ಮಾಡಿದ್ದಾರೆ.
