Bagheera Trailer: ‘ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಳಾದಾಗ ಆತ ಅವತಾರ ಎತ್ತುತ್ತಾನೆ’; ಆಕ್ಷನ್‌ಗೆ ಒಗ್ಗರಣೆ ಹಾಕಿದ ಶ್ರೀಮುರಳಿಯ ‘ಬಘೀರ’
Bagheera Trailer: ರೋರಿಂಗ್ ಸ್ಟಾರ್ ಶ್ರೀಮುರಳಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರುವ ಬಘೀರ ಸಿನಿಮಾ ಇದೇ ತಿಂಗಳ 31ಕ್ಕೆ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮಾಸ್ ಅವತಾರದಲ್ಲಿ ಶ್ರೀಮುರಳಿ ಪ್ರತ್ಯಕ್ಷರಾಗಿದ್ದಾರೆ. ಭ
Bagheera Movie Trailer: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿದೆ ಶ್ರೀಮುರಳಿ ನಟನೆಯ ಬಘೀರ. ಈ ಹಿಂದೆ ಟೀಸರ್ ಮೂಲಕ, ಆ ಟೀಸರ್‌ನಲ್ಲಿ ಆಕ್ಷನ್ ಧಮಾಕಾ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದ ಈ ಸಿನಿಮಾ ಇದೀಗ, ಟ್ರೇಲರ್ ಹೊತ್ತು ಬಂದಿದೆ. ಮಾಸ್ ಆಕ್ಷನ್ ಶೈಲಿಯ ಬಘೀರ ಚಿತ್ರ ಗಟ್ಟಿ ಕಥೆಯಿಂದ ಮಾತ್ರವಲ್ಲದೆ, ಮೇಕಿಂಗ್‌ನಿಂದಲೂ ಗಮನ ಸೆಳೆಯುತ್ತಿದೆ. ಬಹುತಾರಾಗಣದ ಈ ಸಿನಿಮಾವನ್ನು ಅಷ್ಟೇ ರಿಚ್ ಆಗಿಯೇ ತೆರೆಮೇಲೆ ತಂದಿದೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್.
ಏನಿದೆ ಟ್ರೇಲರ್‌ನಲ್ಲಿ?
"ಅಮ್ಮ.. ದೇವರು ಯಾಕೆ ರಾಮಾಯಣ, ಮಹಾಭಾರತ ಅಂತ ಬರ್ತಾನೆ. ಯಾವಾಗಲೂ ಯಾಕಮ್ಮ ಬರಲ್ಲ ಎಂದು ಪುಟ್ಟ ಹುಡುಗ ಅಮ್ಮನ್ನನ್ನು ಕೇಳುತ್ತಾನೆ. ಆಗ, ದೇವರು ಯಾವಾಗಲೂ ಬರಲ್ಲ. ಸಮಾಜದಲ್ಲಿ ಪಾಪಗಳು ಮೀತಿ ಮೀರಿದಾಗ, ಒಳ್ಳೆಯದರ ಮೇಲೆ ಕೆಟ್ಟದ್ದು ಆವಿಯಾದಾಗ, ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಳಾದಾಗ, ಅವನು ಅವತಾರ ಎತ್ತುತ್ತಾನೆ. ಅವನು ಯಾವಾಗಲೂ ದೇವರಾಗಿಯೇ ಬರಲ್ಲ, ರಾಕ್ಷಸನಾಗಿಯೂ ಬರಬಹುದು" ಎಂದು ನಾಯಕನ ಬಗ್ಗೆ ಪೀಠಿಕೆ ಕಾಣಿಸುತ್ತೆ.
ಎರಡು ಶೇಡ್‌ನಲ್ಲಿ ಬಘೀರ
ಅಂದಹಾಗೆ ಬಘೀರ ಸಿನಿಮಾದಲ್ಲಿ ಶ್ರೀಮುರುಳಿ ಎರಡು ಶೇಡ್‌ನಲ್ಲಿ ಕಾಣಿಸಿದ್ದಾರೆ. ಒಂದರಲ್ಲಿ ಪೊಲೀಸ್ ಅಧಿಕಾರಿಯಾದರೆ, ಮತ್ತೊಂದರಲ್ಲಿ ಮುಖಕ್ಕೆ ಮುಖವಾಡ ಧರಿಸಿದ ಬಘೀರನಾಗಿದ್ದಾರೆ. ಪೊಲೀಸ್ ವೇಷದಲ್ಲಿದ್ದುಕೊಂಡು, ಸಮಾಜದ ಕೆಟ್ಟ ಮುಖಗಳನ್ನು ಸರ್ವನಾಶ ಮಾಡಲು ಬಘೀರ ವೇಷದಲ್ಲಿ ಎಂಟ್ರಿಕೊಡುವವನಾಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ.
ಮಾಸ್ ಅವತಾರದಲ್ಲಿ ಎದುರಾಗಿರುವ ಶ್ರೀಮುರಳಿ, ಅಬ್ಬರದ ಡೈಲಾಗ್‌ಗಳ ಮೂಲಕವೇ ಕಿಚ್ಚು ಹಚ್ಚುತ್ತಾರೆ. "ಸಾವೇ ಎದುರುಗಡೆ ನಿಂತಿದೆ ಭಯ ಆಗ್ತಿಲ್ವಾ? ಎಂದು ಖಳನ ಬಾಯಿಂದ ಮಾತು ಬಂದರೆ, ಅದಕ್ಕೆ ಪ್ರತಿಯಾಗಿ, "ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡರೇ ಭಯ ಪಡಲ್ಲ. ಇನ್ನು ನೀನ್ಯಾರೋ" ಡೈಲಾಗ್‌ಗಳು ಖಡಕ್ ಆಗಿವೆ.
ಪ್ರಶಾಂತ್ ನೀಲ್ ಬರೆದ ಕಥೆ
ಪ್ರಶಾಂತ್ ನೀಲ್ ಬರೆದ ಬಘೀರ ಚಿತ್ರದ ಕಥೆಗೆ ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದಲ್ಲಿ ಬಘೀರ ಚಿತ್ರ ಮತ್ತಷ್ಟು ಮೊನಚಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಮೋಡಿ ಈಗಾಗಲೇ ರುಧಿರ ಧಾರಾ ಹಾಡಿನ ಮೂಲಕ ಕೇಳುಗನ ಕಿವಿಗೆ ಬಿದ್ದಿದೆ. ಈಗ ಇದೇ ಸಿನಿಮಾ ಟ್ರೇಲರ್ ಮೂಲಕ ಆಗಮಿಸಿ, ಕುತೂಹಲದ ಕಿಡಿ ಹೊತ್ತಿಸಿದೆ.