ವಿಷ್ಣುವರ್ಧನ್‌ ಎಂಥ ಕಷ್ಟಗಳ ನಡುವೆ ಬದುಕ್ತಿದ್ರು, ಅವರ ಒತ್ತಡಗಳು ಹೇಗಿರುತ್ತಿದ್ದವು? ವಿಶ್ರಾಂತ ಪೊಲೀಸ್ ಅಧಿಕಾರಿ ಕಂಡಂತೆ
ಕನ್ನಡ ಸುದ್ದಿ  /  ಮನರಂಜನೆ  /  ವಿಷ್ಣುವರ್ಧನ್‌ ಎಂಥ ಕಷ್ಟಗಳ ನಡುವೆ ಬದುಕ್ತಿದ್ರು, ಅವರ ಒತ್ತಡಗಳು ಹೇಗಿರುತ್ತಿದ್ದವು? ವಿಶ್ರಾಂತ ಪೊಲೀಸ್ ಅಧಿಕಾರಿ ಕಂಡಂತೆ

ವಿಷ್ಣುವರ್ಧನ್‌ ಎಂಥ ಕಷ್ಟಗಳ ನಡುವೆ ಬದುಕ್ತಿದ್ರು, ಅವರ ಒತ್ತಡಗಳು ಹೇಗಿರುತ್ತಿದ್ದವು? ವಿಶ್ರಾಂತ ಪೊಲೀಸ್ ಅಧಿಕಾರಿ ಕಂಡಂತೆ

Dr Vishnuvardhan: ಡಾ ವಿಷ್ಣುವರ್ಧನ್‌ ಎಂತಹ ಕಷ್ಟಗಳ ನಡುವೆ ಬದುಕ್ತಿದ್ರು? ಅವರ ಒತ್ತಡಗಳು ಹೇಗಿರುತ್ತಿದ್ದವು? ಅಭಿಮಾನಿಗಳ ಬಗ್ಗೆ ಅವರಿಗಿದ್ದ ಕಾಳಜಿ ಎಂತಹುದ್ದು? ಪೊಲೀಸ್ ಅಧಿಕಾರಿಯನ್ನು ಅವರು ಹೇಗೆ ನಡೆಸಿಕೊಂಡರು? ಯಜಮಾನ್ರ ವ್ಯಕ್ತಿತ್ವ ಎಂತಹುದ್ದು? ನಿವೃತ್ತ ಪೊಲೀಸ್ ಅಧಿಕಾರಿ ಜೆಬಿ ರಂಗಸ್ವಾಮಿ 1996ರಲ್ಲಿನ ಘಟನೆ ನೆನಪಿಸಿಕೊಂಡಿದ್ದಾರೆ.

ವಿಷ್ಣುವರ್ಧನ್‌ ಬಗ್ಗೆ ವಿಶ್ರಾಂತ ಪೊಲೀಸ್ ಅಧಿಕಾರಿ ವಿಶೇಷ ಬರಹ
ವಿಷ್ಣುವರ್ಧನ್‌ ಬಗ್ಗೆ ವಿಶ್ರಾಂತ ಪೊಲೀಸ್ ಅಧಿಕಾರಿ ವಿಶೇಷ ಬರಹ

Dr Vishnuvardhan: ಸ್ಯಾಂಡಲ್‌ವುಡ್‌ ಸಾಹಸ ಸಿಂಹ ಡಾ ವಿಷ್ಣುವರ್ಧನ್‌ ಎಂದರೆ ಇಂದಿಗೂ ಕೋಟ್ಯಂತರ ಮಂದಿಗೆ ಅದೇನೋ ಗೌರವ. ಕರುನಾಡಿನಲ್ಲಿ ಜೀವಿಸಿದಷ್ಟು ಕಾಲ ಎಷ್ಟೋ ಒಳ್ಳೆಯ ಕೆಲಸಗಳು, ನಡೆ ನುಡಿಯ ಮೂಲಕವೇ ಅಸಂಖ್ಯೆ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಇಂಥ ಮೇರುನಟನ ಬಗ್ಗೆ ನಿವೃತ್ತ ಪೊಲೀಸ್‌ ಅಧಿಕಾರಿ ಜೆಬಿ ರಂಗಸ್ವಾಮಿ ನೆನಪು ಮಾಡಿಕೊಂಡಿದ್ದಾರೆ. 1996ರಲ್ಲಿ ವಿಷ್ಣು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿನ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಈ ವಿಶೇಷ ಬರಹವನ್ನು ವಿಷ್ಣುವರ್ಧನ್‌ ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್‌ ತಮ್ಮ ಸೋಷಿಯಲ್‌ ಮೀಡಿಯಾ ಪುಟದಲ್ಲಿ ಶೇರ್‌ ಮಾಡಿದ್ದಾರೆ. ಹೀಗಿದೆ..

ಯಜಮಾನ್ರು ಡಾ ವಿಷ್ಣುವರ್ಧನ್‌ ಎಂತಹ ಕಷ್ಟಗಳ ನಡುವೆ ಬದುಕ್ತಿದ್ರು? ಅವರ ಒತ್ತಡಗಳು ಹೇಗಿರುತ್ತಿದ್ದವು? ಅಭಿಮಾನಿಗಳ ಬಗ್ಗೆ ಅವರಿಗಿದ್ದ ಕಾಳಜಿ ಎಂತಹುದ್ದು? ಪೊಲೀಸ್ ಅಧಿಕಾರಿಯನ್ನು ಅವರು ಹೇಗೆ ನಡೆಸಿಕೊಂಡರು? ಯಜಮಾನ್ರ ವ್ಯಕ್ತಿತ್ವ ಎಂತಹುದ್ದು ಎಂಬ ಬಗ್ಗೆ ಒಂದೆರಡು ಪುಸ್ತಕ ಕೊಡಬಹುದಾದಷ್ಟು ಮಾಹಿತಿಯನ್ನು ಇದೊಂದು ಲೇಖನ ಕೊಟ್ಟಿದೆ. ಇದನ್ನು ಬರೆದವರು ನಿವೃತ್ತ ಪೊಲೀಸ್ ಅಧಿಕಾರಿ ಜೆಬಿ ರಂಗಸ್ವಾಮಿ ಅವರು.

"ಆವತ್ತು ವಿಷ್ಣುವರ್ಧನರ ನಲವತ್ತೈದನೇ ಜನ್ಮ ದಿನಾಚರಣೆ . ಬೆಳಿಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮ ಮೈಸೂರಿನ ಟೌನ್ ಹಾಲ್ ನಲ್ಲಿ ನಿಗದಿಯಾಗಿತ್ತು. ಬೆಳಿಗ್ಗೆ ಎಂಟೂವರೆಗೇ ಅಭಿಮಾನಿಗಳ ದಂಡು ತುಂಬಿತ್ತು.‌

ಹನ್ನೊಂದಾದರೂ ವಿಷ್ಣು ಅವರು ಪತ್ತೆಯಿಲ್ಲ..

ಅಭಿಮಾನಿಗಳ ಜೈಕಾರ, ಸಿಳ್ಳೆ ಕುಣಿದಾಟ ಈಗ ಅಸಹನೆಯ ಬೈಗಳಾಗಿ ಬದಲಾಗಿತ್ತು. ಲಷ್ಕರ್ ಇನ್ಸ್‌ಪೆಕ್ಟರ್ ಆಗಿದ್ದ ನನಗೇ ಟೌನ್ ಹಾಲ್ ವೇದಿಕೆಯ ಉಸ್ತುವಾರಿ. "ವಿಷ್ಣು ಎಲ್ಲಿ ಹೋದರಪ್ಪಾ? ಟೈಮ್ ಸೆನ್ಸ್ ಬೇಡ್ವೇ? ಅವರದೇ ಹುಟ್ಟು ಹಬ್ಬಕ್ಕೆ ಅಷ್ಟೊಂದು ಜನ ಕಾದಿದ್ದಾರೆ. ಮೈಸೂರಿನಲ್ಲೇ ಇದ್ದುಕೊಂಡು ಟೈಮಿಗೆ ಸರಿಯಾಗಿ ಬರಲೇನು ಕಷ್ಟ?" ನನ್ನಲ್ಲೇ ಗೊಣಗುತ್ತಾ , ಸಿಬ್ಬಂದಿಗೂ ಹೇಳುತ್ತಾ ನಿಂತಿದ್ದೆ.

"ಲಷ್ಕರ್ ಚಾರ್ಲಿ (ಸರ್ಕಲ್ ಇನ್ಸ್‌ಪೆಕ್ಟರ್ ) ಕಂಟ್ರೋಲ್‌ ಗೆ ಅರ್ಜೆಂಟ್ ಫೋನ್ ಮಾಡಿ " ವೈರ್ ಲೆಸ್ ಬಿತ್ತರಿಸಿತು.

ಅದು 1996ನೇ ಇಸವಿ. ಮೊಬೈಲ್ ಎಂದರೆ ಗೊತ್ತೇ ಇರಲಿಲ್ಲ. ಹತ್ತಿರದ ಹೋಟೆಲ್ಲಿಗೆ ಹೋಗಿ ಕಾಲ್ ಮಾಡಿದೆ.

"ವಿಷ್ಣುವರ್ಧನ್ ಅವರು ಕಿಂಗ್ಸ್ ಕೋರ್ಟ್ ನಲ್ಲಿದ್ದಾರೆ. ಯಾರೋ ಹಲ್ಲೆ ಮಾಡಬಹುದು ಅಂತ ಗಾಬರಿಯಾಗಿದ್ದಾರೆ. ನೀವೇ ಹೋಗಿ place of functionಗೆ ಪರ್ಸನಲ್ಲಾಗಿ ಕರೆದೊಯ್ಯ ಬೇಕಂತೆ. Compol (ಪೊಲೀಸ್ ಕಮೀಷನರ್) ಸಾಹೇಬರ ಆರ್ಡರ್ !" ಕಂಟ್ರೋಲ್‌ ಹೇಳಿತು.

ಒಳೊಳಗೇ ಬೈದು ಕೊಳ್ಳುತ್ತಾ ಕಿಂಗ್ಸ್ ಕೋರ್ಟ್ ಹೋಟೆಲ್ಲಿಗೆ ಹೋದೆ.

ಸರ್ವಾಲಂಕಾರ ಭೂಷಿತರಾಗಿದ್ದ ವಿಷ್ಣು ಕುಳಿತಿದ್ದರು. ಮುಖದಲ್ಲಿ ಮಡುಗಟ್ಟಿದ್ದ ಆತಂಕ, ಚಿಂತೆ. ಬೆಳಿಗ್ಗೆಯೇ ಬೆಟ್ಟಕ್ಕೆ ಹೋಗಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬಂದರಂತೆ. ಹುಟ್ಟಿದ ಹಬ್ಬಕ್ಕೆ ಕೈಕಾಲು ಮುರಿಯುವ ಗಿಫ್ಟ್ ಕೊಡ್ತೀವಿ ಅಂತ ಹೋಟೆಲ್ಲಿಗೆ ಯಾರೋ ಎರಡು ಮೂರು ಬಾರಿ ಕರೆ ಮಾಡಿ ಎಚ್ಚರಿಸಿದ್ದರಂತೆ.

"ಹೋಗೋದೋ ಬಿಡೋದೋ ಗೊತ್ತಾಗ್ತಾ ಇಲ್ಲ. ಅಭಿಮಾನಿಗಳು ಅಷ್ಟೆಲ್ಲಾ ಖರ್ಚು ಮಾಡಿ ಅರೇಂಜ್ ಮಾಡಿದ್ದಾರೆ. ಗಲಾಟೆ ಆಗೋದಾದ್ರೆ ಅಲ್ಲಿಗೆ ಹೋಗೋದಾದ್ರೂ ಹೇಗೆ? ನನ್ನದಿರಲಿ ನೀವುಗಳೇನೋ ಪ್ರೊಟೆಕ್ಷನ್ ಕೊಡ್ತೀರಾ. ನಮ್ಮ ಅಭಿಮಾನಿ ಹುಡುಗರ ಗತಿಯೇನು ? ಏನಾದರೂ ಅನಾಹುತ ಆದ್ರೆ ?" ವಿಷ್ಣು ಪ್ರಶ್ನೆ.

ಇಂತಹ ಸಂದರ್ಭಗಳಲ್ಲಿ ಪೊಲೀಸರು ಏನು ಹೇಳಿದರೂ ಕಷ್ಟ. ಅನಾಹುತವಾಗುತ್ತೆ ಅಂತ ನಾನು ಮೊದಲೇ ಹೇಳಿದ್ರೂ ಸಹ ಇನ್ಸ್‌ಪೆಕ್ಟರೇ ಹೊರಡಿಸಿದರು ಇತ್ಯಾದಿ ಆಪಾದನೆ ಮಾಡುತ್ತಾರೆ. ಇನ್ಯಾವುದೋ ಅಭಿಮಾನಿ ಗುಂಪು ಕಿಡಿಗೇಡಿ ಕೆಲಸ ಮಾಡಿಬಿಟ್ಟರೆ? ಅದು ಇನ್ನೇನೇನಾಗಿ ಬೆಳೆಯುತ್ತೋ ?

ಇಂಥವೆಲ್ಲಾ ಗೊತ್ತಿದ್ದರಿಂದ, ಅಲ್ಲಿಂದಲೇ ಕಾಂಪೋಲ್ ಗೆ ಕರೆ ಮಾಡಿ ವಿಷಯ ತಿಳಿಸಿದೆ. ಕೆಲವು instructions ಕೊಟ್ಟರು.‌

"ಅ ರೀತಿಯ ಇನ್ಫಾರ್ಮೇಶನ್ ಈ ತನಕ ಇಲ್ಲ ಸಾರ್. ನೀವು ಹೇಗೂ ಹೇಳಿದ್ದೀರಲ್ಲಾ? ತಕ್ಕಂತೆ ಬಂದೋಬಸ್ತ್ ಮಾಡೋಣ. ಅಂತಹ ಪರಿಸ್ಥಿತಿ ಎದುರಾದರೆ ಬೇರೆ ವೆಹಿಕಲ್ ನಲ್ಲಿ ಬೇರೆ ಕಡೆಗೆ ತಮ್ಮನ್ನು ಸಾಗಿಸುತ್ತೇವೆ. ಮೂರು ಕಡೆ ವೆಹಿಕಲ್ ರೆಡಿ ಇರುತ್ತೆ. ಕಮೀಷನರ್ ತಿಳಿಸಿದ್ದಾರೆ" ವಿಷ್ಣು ಅವರಿಗೆ ಭರವಸೆ ಇತ್ತೆ.

"ಮೂರು ಕಡೆ ಅಂದರೆ ಎಲ್ಲೆಲ್ಲಿ ?" ವಿಷ್ಣು ಪ್ರಶ್ನೆ.

"ಎರಡು ಮೇನ್‌ ಗೇಟ್ ಗಳಲ್ಲಿ ಒಂದೊಂದು ಜೀಪಿರುತ್ತೆ. ಇನ್ನೊಂದು ದೇವಸ್ಥಾನದ ಕಡೆ ನಿಂತಿರುತ್ತೆ "

"ದೇವಸ್ಥಾನ ಅಂದ್ರೆ ಒಂದೂವರಾಣೆ ಗಲ್ಲಿ ಕಡೇನಾ?! "

"ಹೌದು ಸಾರ್ , ಆದರೆ ಈಗಲ್ಲಿ ಆ ಒಂದೂವರಾಣೆ ಮಾರ್ಕೆಟ್ ಇಲ್ಲ" ಅಂದೆ.

ಓಹ್! ವಿಷ್ಣು ಮೈಸೂರಿನವರೇ ಅಲ್ಲವೇ? ಅವರಿಗೆ ಒಂದೂವರಾಣೆ ಗಲ್ಲಿಯೂ ನೆನಪಿದೆ !

ಹುಟ್ಟು ಹಬ್ಬದ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಯಾವುದೋ ಅಮಂಗಳ ನಿರೀಕ್ಷೆಯ ದುಗುಡದಲ್ಲಿ ವಿಷ್ಣು ಕುಳಿತಿದ್ದರು. ಆಪೋಸಿಟ್ ಅಭಿಮಾನಿ ಸಂಘದವರು ಅಟ್ಯಾಕ್ ಮಾಡಿಬಿಟ್ಟರೆ ? ಯಾವ ಗಳಿಗೇಲಿ ಏನಾಗುತ್ತೋ ?

ಎರಡು ಬಾರಿ ವಿಷ್ಣು ಕರೆದು "ಏನೂ ಪ್ರಾಬ್ಲಂ ಇಲ್ಲ ತಾನೇ ? "

"ಈಗ ಪಟಾಕಿ ಹೊಡೆದು ಕೂಗಾಡ್ತಿರೋರು ನಿಮ್ಮ ಅಭಿಮಾನಿಗಳೇ. ಅಲ್ಲಿ ಸುತ್ತ ಪೊಲೀಸ್ನೋರು , ಐದಾರು ಜನ ಆಫೀಸರ್ಸ್ ಇದ್ದಾರೆ. ವರಿ ಮಾಡ್ಬೇಡಿ ಸರ್ " ಧೈರ್ಯ ತುಂಬಿದೆ.

ಯಾವ ದುರ್ಘಟನೆಯೂ ನಡೆಯಲಿಲ್ಲ.

ವಿಷ್ಣು ಅವರನ್ನು ಸೇಫಾಗಿ ಅವರು ಉಳಿದು ಕೊಂಡಿದ್ದ ಹೋಟೆಲ್ ಗೆ ಕರೆದೊಯ್ದು ಬಿಟ್ಟೆ.

" ಏನಾಗುತ್ತೋ ಅಂತ worry ಯಾಗಿತ್ತು. ಚೆನ್ನಾಗಿ ಸೆಕ್ಯುರಿಟಿ ಕೊಟ್ರಿ ಥ್ಯಾಂಕ್ಸ್ . ನಮ್ಮ ಜೊತೆಲೇ ಊಟ ಮಾಡಿ ಪ್ಲೀಸ್" ಎಂದರು ವಿಷ್ಣು.

" ಸಾರಿ ಸರ್. ಈವತ್ತೇ ನನ್ನ ಮಗಳ ಹುಟ್ಟಿದ ಹಬ್ಬ. ಮನೇಲಿ ಕಾಯ್ತಾ ಇರ್ತಾರೆ. ಬೇಗ ಹೋಗ್ಬೇಕು ಸರ್ " ಎಂದು ಆ ಟೈಮಿಗೆ ಹೊಳೆದ ಸುಳ್ಳು ಬಿಟ್ಟೆ. ಮೋಜು ಕೂಟದ ಊಟ ಅಂದರೆ ಏಳು ಮಧ್ಯಾಹ್ನವಾದರೂ ಮುಗಿಯೋಲ್ಲ.

"ಒಂದೈದೇ ನಿಮಿಷ ಕೂತ್ಕೊಳ್ಳಿ" ಎಂದವರೇ ಸಹಾಯಕರಿಗೆ ಏನೋ ಹೇಳಿದರು. ದೊಡ್ಡ ಕೇಕ್ ಡಬ್ಬ, ಬುಕೆ, ಹಣ್ಣುಹಂಪಲಿನ ಕರಂಡ ಕೊಟ್ಟು " ನಿಮ್ಮ ಮಗಳಿಗೆ ನನ್ನ ಬೆಸ್ಟ್ ವಿಶಸ್ ಹೇಳಿ " ಎಂದು ಬೀಳ್ಕೊಂಡರು.

ಜೀಪ್ ಹತ್ತಿದೆ. ಜೊತೆಗಿದ್ದ ಐವರು ಪೊಲೀಸರ ಕೈಲೂ ಒಂದೊಂದು ಕೇಕ್ ಬಾಕ್ಸ್!

ಚಿರಾಯು ವಿಷ್ಣು !

ಜೆ.ಬಿ.ರಂಗಸ್ವಾಮಿ , ವಿಶ್ರಾಂತ ಪೊಲೀಸ್ ಅಧಿಕಾರಿ , ಮೈಸೂರು.

Whats_app_banner