‘ಇವನು ನವರಸನಾಯಕ ಜಗ್ಗೇಶ್ ಅಲ್ಲ ಬೋ* ಮಗ, ಹಾಗೇ ಮಾಡಿಟ್ಟು ಹೋಗ್ತಿನಿ ನೋಡ್ತಿರಿ’ ಎಂದಿದ್ದ ನಿರ್ದೇಶಕ ಗುರುಪ್ರಸಾದ್
ನಿರ್ದೇಶಕ ಗುರುಪ್ರಸಾದ್ ಅವರ ಮರಣೋತ್ತರ ಪರೀಕ್ಷೆ ಆರಂಭವಾಗಿದೆ. ಈ ನಡುವೆ ನಟ ಜಗ್ಗೇಶ್, ಇದೇ ಗುರುಪ್ರಸಾದ್ ಅವರ ಬಗ್ಗೆ ಗೊತ್ತಿಲ್ಲದ ಒಂದಷ್ಟು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
Director Guruprasad Death: ಗುರುಪ್ರಸಾದ್ ಕನ್ನಡದ ಓರ್ವ ಖ್ಯಾತ ನಿರ್ದೇಶಕ. ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ, ಅವುಗಳು ಬೀರಿದ ಪರಿಣಾಮ ಸಣ್ಣದೇನಲ್ಲ. ನಿರ್ದೇಶನದ ಜತೆಗೆ ನಟನೆಯಲ್ಲಿಯೂ ಗುರುತಿಸಿಕೊಂಡವರು. ಸಿನಿಮಾಗಳಿಗೆ ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ. ಆದರೆ, ಸಾಲದ ವಿಚಾರದಲ್ಲಿ ಎಡವಿದ್ದಾರೆ. ಮೈ ಮೇಲೆ ಲಕ್ಷ ಲಕ್ಷ ಸಾಲ ಹೇರಿಕೊಂಡು, ಸದಾ ಕುಡಿತ, ಸಿಗರೇಟ್ ಚಟಕ್ಕೆ ದಾಸರಾಗಿ, ತಮ್ಮ ಜೀವನವನ್ನು ತಾವೇ ಸರ್ವನಾಶ ಮಾಡಿಕೊಂಡಿದ್ದಾರೆ. ಆದರೆ, ಒಂದು ಕಾಲದಲ್ಲಿ ಇದೇ ಗುರುಪ್ರಸಾದ್ ಹೀಗಿರಲಿಲ್ಲ. ಸಿನಿಮಾ ವಿಚಾರದಲ್ಲಿ ತುಂಬ ಸೀರಿಯಸ್ ಮನುಷ್ಯ. ಆದರೆ, ಹಣಕಾಸಿನ ಸಮಸ್ಯೆ ಅವರನ್ನು ನಿರ್ದೇಶನದ ಆ ಕೌಶಲವನ್ನೇ ಕಸಿಯಿತು.
2006 ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮಠ ಅನ್ನೋ ಸಿನಿಮಾ ತೆರೆಕಾಣುತ್ತದೆ. ಬಹುತಾರಾಗಣದ ಈ ಸಿನಿಮಾದಲ್ಲಿ ನಟ ಜಗ್ಗೇಶ್, ಆರ್. ಎನ್ ಸುದರ್ಶನ್, ನಾಗತಿಹಳ್ಳಿ ಚಂದ್ರಶೇಖರ್, ವೈಜನಾಥ್ ಬಿರಾದಾರ, ಮಂಡ್ಯ ರಮೇಶ್, ತಬಲಾ ನಾಣಿ ಸೇರಿ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದರು. ಆವತ್ತಿನ ಕಾಲದಲ್ಲಿ ಈ ಸಿನಿಮಾ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿತ್ತು. ಆ ಮಠ ಸಿನಿಮಾ ಸಮಯದಲ್ಲಿ ಇದೇ ಗುರುಪ್ರಸಾದ್ ಹೇಗಿದ್ರು? ಅದನ್ನು ಜಗ್ಗೇಶ್ ವಿವರಿಸಿದ್ದಾರೆ.
"ಮಠ ಸಿನಿಮಾದಲ್ಲಿ, ನಾನು ಆತನನ್ನು ಕೇವಲ ನಿರ್ದೇಶಕನಾಗಿ ನೋಡಲಿಲ್ಲ. ಅವನು ಸಿನಿಮಾದ ಎಲ್ಲ ಪಾತ್ರವಾಗಿದ್ದ. ಪ್ರತಿ ಪಾತ್ರವನ್ನು ಆಕ್ಟ್ ಮಾಡಿ ತೋರಿಸೋನು. ಸಿನಿಮಾದ ಸ್ಕ್ರೀಪ್ಟ್‌ಅನ್ನು ಸಿನಿಮಾ ಮುಗಿಯುವ ವರೆಗೂ ಕೈಯಲ್ಲಿ ಹಿಡಿದುಕೊಂಡಿದ್ದ. ಒಂದು ಸಣ್ಣ ಮಿಸ್ಟೇಕ್ ಇರುತ್ತಿರಲಿಲ್ಲ. ಒಂದು ಸೀನ್ ಚೆನ್ನಾಗಿ ಬಂದರೆ ಆ ಸಂತೃಪ್ತಿಯನ್ನ ವ್ಯಕ್ತಪಡಿಸೋದು ಹೇಗೆ ಅಂದರೆ, ಮಕ್ಕಳು ಕೆಳಕ್ಕೆ ಬಿದ್ದು ಒದ್ದಾಡ್ತಾರಲ್ಲ. ಆ ರೀತಿ ಒದ್ದಾಡಿ ನಗೋನು, ಕಿಸ್ ಮಾಡೋನು, ಕಾಲಿಗೆ ನಮಸ್ಕಾರ ಮಾಡೋನು. ಆದರೆ, ಈಗ ಹಾಗಿರಲಿಲ್ಲ"
"ಇದೊಂದು ಮಾಯಾಲೋಕ. ನಮಗೆ ಅಂತ ಆ ದೇವರು ಒಂದು ಹೆಂಡತಿ, ಮಕ್ಕಳನ್ನು ಕೊಟ್ಟಿರುತ್ತಾನೆ. ಅದಕ್ಕೂ ನಾವು ಸಂತೃಪ್ತಿ ಆಗದೇ, ಮತ್ತೆ ಮತ್ತೆ ಅದನ್ನೇ ಹುಡುಕಲು ಆಚೆ ಹೋಗ್ತಾರಲ್ಲ, ಅಂಥ ಮನುಷ್ಯ ಹುಚ್ಚ ಆಗ್ತಾನೆ. ಆ ಸಾಲಿಗೆ ಇವನೂ ಬಂದಿದ್ದಾನೆ. ನಾನು ಮೊದಲ ಸಲ ಆತನನ್ನು ನೋಡಿದ್ದ 2005 ಅಂತ ಕಾಣುತ್ತೆ. 2006ರಲ್ಲಿ ಎದ್ದೇಳು ಮಂಜುನಾಥ್ ಮಾಡಿದ್ವಿ. ಅಲ್ಲಿಂದ ನಾನು ಆತನನ್ನು ಭೇಟಿನೇ ಮಾಡಿಲ್ಲ. ಮಾಧ್ಯಮದಲ್ಲಿಯೇ ಅವನ ಹುಚ್ಚಾಗಳನ್ನು ನೋಡಿದ್ದೆ"
"ಇತ್ತೀಚೆಗೆ ಎರಡು ವರ್ಷದ ಹಿಂದೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಶೂಟಿಂಗ್ ವೇಳೆ ನಿರ್ಮಾಪಕ ವಿಖ್ಯಾತ ಈ ಗುರುಪ್ರಸಾದ್ ಅವರನ್ನು ಕರೆದುಕೊಂಡು ಬಂದ. ಕಥೆಯನ್ನೂ ಹೇಳಿದ. ಒಳ್ಳೆಯ ಸ್ಕ್ರಿಪ್ಟ್. ಆದರೆ, ಪೂರ್ತಿ ಆಗಿರಲಿಲ್ಲ. ತುಂಬ ಸಾಲಗಳನ್ನು ಮಾಡಿಕೊಂಡಿದ್ದ. ಹೀಗಿರುವಾಗ ಈ ಸಿನಿಮಾಕ್ಕೆ ನಂಬ್ತಿರೋ ಬಿಡ್ತಿರೋ ಬರೋಬ್ಬರಿ 90ಲಕ್ಷ ಸಂಬಳ ಕೊಡಿಸಿದ್ದೇನೆ. ಯಾರಾದ್ರೋ ಜಾಣನೋ, ಬುದ್ಧಿವಂತನೋ ಆಗಿದ್ದರೆ ಆ ದುಡ್ಡಲ್ಲಿ ಆ ವ್ಯಕ್ತಿ ಸೆಟಲ್ ಆಗಿ ಬಿಡ್ತಿದ್ದ. ಆದರೆ, ಯಾವಾಗ ಒಬ್ಬ ವ್ಯಕ್ತಿ ಚಟಗಳಿಗೆ ದಾಸ ಆಗ್ತಾನೋ, ಯಾವ ದೇವರು ಆತನನ್ನು ಕಾಪಾಡಲ್ಲ"
"ಆವಾಗೆಲ್ಲ ನಮಗೆ 1000 ರೂ, 800 ಸಂಬಳ ಕೊಡೋರು. ಅದನ್ನು ಜೋಪಾನವಾಗಿ ತಂದು ಬೀರುನಲ್ಲಿ ಇಡ್ತಿದ್ದೆ. ಆಗಿನ ಸಮಯದಲ್ಲಿ 5 ಲಕ್ಷ ಪಡೀತಿದ್ದ ನನ್ನ ಸ್ನೇಹಿತ ವಿಪರೀತ ಕುಡಿತಿದ್ದ. ಆತನೂ ಏಳಿಗೆ ಕಾಣಲಿಲ್ಲ. ಡಿಸಿಪ್ಲೇನ್ ಎಲ್ಲಿ ಇರಲ್ಲ. ಅಲ್ಲಿ ಯಾವುದೇ ಬೆಳವಣಿಗೆ ಆಗಲ್ಲ. ಗುರುವಿನ ದೊಡ್ಡ ಹೆಂಡತಿ ಆರತಿ. ಅವರಿಗೆ 20 ವರ್ಷ ಮಗಳಿದ್ದಾಳೆ. ಅವರಿಬ್ಬರೂ ಯೋಗ ಪಟುಗಳು. ಎರಡನೇ ಮದುವೆ ಆದ ಹುಡುಗಿನೂ ಒಳ್ಳೆಯವಳೇ. ಅವಳಿಗೂ ಓರ್ವ ಮಗಳಿದ್ದಾಳೆ"
"42 ವರ್ಷ ಸಿನಿಮಾ ಜರ್ನಿಯಲ್ಲಿ ಒಂದೊಳ್ಳೆ ಸಿನಿಮಾ ಮಾಡ್ತಿನಿ ಅಂತ ಬಂದು, ರಂಗನಾಯಕ ಅಂತ ಕೆಟ್ಟ ಸಿನಿಮಾ ಮಾಡಿ, ಆ ಬೈಗುಳಗಳನೆಲ್ಲ ನನಗೆ ಬರೋಥರ ಮಾಡಿ ಹೋದ್ನಲ್ಲ ಇವನು. ಅದರಿಂದ ನಾನು ಹೇಗೆ ಆಚೆ ಬರುವುದು ಅಂತ ನೋಡ್ತಿದ್ದೇನೆ. ಕಳೆದೊಂದು ವರ್ಷದಿಂದ ನಾನು ಒಂದೇ ಒಂದು ಸಿನಿಮಾ ಸಹಿ ಮಾಡಿಲ್ಲ"
ಜಗ್ಗೇಶ್ ಹೆಸರು ಹಾಳು ಮಾಡುವ ಉದ್ದೇಶ
"ಇವನು ನವರಸನಾಯಕ ಅಲ್ಲ ಬೋ* ಮಗ ಹಾಗೇ ಮಾಡಿಟ್ಟು ಹೋಗ್ತಿನಿ ನೋಡ್ತಿರಿ ಎಂದಿದ್ದರಂತೆ ಗುರುಪ್ರಸಾದ್. ಎರಡು ಬಂಗಾರದಂಥ ಸಿನಿಮಾ ಕೊಟ್ಟಿದ್ದ ನಾನು, ಯಾಕೆ ನನ್ನನ್ನು ದ್ವೇಷಿಸ್ತಿದ್ದಾನೆ ಎಂದು ಬೇಜಾರಲ್ಲಿದ್ದೆ. ಅವನು ಸರಿಯಾಗ್ಲಿ ಕೋಟಿ ಬಾರಿ ಹೇಳಿದ್ದೆ. ಆದರೆ ಅವನು ಯಾರ ಮಾತನ್ನೂ ಕೇಳಲಿಲ್ಲ. ಸೋರಿಯಾಸಿಸ್ ಆಗಿತ್ತು ಅದಕ್ಕೂ ಚೂರು ಅಂಜಿದ್ದ. ಆತ್ಮಹತ್ಯೆ ಬಗ್ಗೆಯೂ ಮಾತನಾಡ್ತಿದ್ದ. ಈಗ ಹೇಳಿದಂತೆಯೇ ಸೂಸೈಡ್ ಮಾಡಿಕೊಂಡಿದ್ದಾನೆ" ಎಂದಿದ್ದಾರೆ ಜಗ್ಗೇಶ್.