Duniya Vijay: ನಾನು ಬಡವರ ಪ್ರತಿನಿಧಿ- ಹುಟ್ಟುಹಬ್ಬದಂದು ದುನಿಯಾ ವಿಜಯ್‍ ಮಾತು; ‘ಲ್ಯಾಂಡ್‌ ಲಾರ್ಡ್’ ಸಿನಿಮಾ ಬಗ್ಗೆಯೂ ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  Duniya Vijay: ನಾನು ಬಡವರ ಪ್ರತಿನಿಧಿ- ಹುಟ್ಟುಹಬ್ಬದಂದು ದುನಿಯಾ ವಿಜಯ್‍ ಮಾತು; ‘ಲ್ಯಾಂಡ್‌ ಲಾರ್ಡ್’ ಸಿನಿಮಾ ಬಗ್ಗೆಯೂ ಇಲ್ಲಿದೆ ಮಾಹಿತಿ

Duniya Vijay: ನಾನು ಬಡವರ ಪ್ರತಿನಿಧಿ- ಹುಟ್ಟುಹಬ್ಬದಂದು ದುನಿಯಾ ವಿಜಯ್‍ ಮಾತು; ‘ಲ್ಯಾಂಡ್‌ ಲಾರ್ಡ್’ ಸಿನಿಮಾ ಬಗ್ಗೆಯೂ ಇಲ್ಲಿದೆ ಮಾಹಿತಿ

Duniya Vijay: ದುನಿಯಾ ವಿಜಯ್ ಈ ಬಾರಿ ತಮ್ಮ ಹುಟ್ಟುಹಬ್ಬದಂದು ಚಿತ್ರೀಕರಣದಲ್ಲೇ ತೊಡಗಿಕೊಳ್ಳುತ್ತಿರುವುದರ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅವರ ಸಿನಿಮಾ 'ಲ್ಯಾಂಡ್‌ ಲಾರ್ಡ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದಂದು ದುನಿಯಾ ವಿಜಯ್‍ ಮಾತು
ಹುಟ್ಟುಹಬ್ಬದಂದು ದುನಿಯಾ ವಿಜಯ್‍ ಮಾತು

‘ದುನಿಯಾ’ ವಿಜಯ್‍ ಕಳೆದೆರಡು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಆನೇಕಲ್‍ನ ತಮ್ಮ ಸ್ವಗ್ರಾಮದಲ್ಲಿ, ತಮ್ಮ ತಂದೆ-ತಾಯಿ ಸಮಾಧಿ ಎದುರು ಆಚರಿಸಿಕೊಂಡಿದ್ದರು. ಆದರೆ, ಈ ಬಾರಿ ಅವರು ಆನೇಕಲ್‍ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಭೇಟಿಯಾಗಲು ಸಾಧ್ಯವಿಲ್ಲ ಎಂದು ಅಭಿಮಾನಿಗಳಿಗೆ ಮೊದಲೇ ಹೇಳಿದ್ದರು. ಅದರಂತೆ ಸೋಮವಾರ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ನೆಲಮಂಗಲದ ಬಳಿ ಇರುವ ಬರದಿ ಬೆಟ್ಟದಲ್ಲಿ ‘ಲ್ಯಾಂಡ್‍ ಲಾರ್ಡ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು.

ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಮಾತನಾಡಿದ ‘ದುನಿಯಾ ವಿಜಯ್‍’, ‘ಕಳೆದ ಎರಡು ವರ್ಷಗಳಿಂದ ಹುಟ್ಟೂರಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೆ. ಆದರೆ, ಈ ವರ್ಷ ಚಿತ್ರೀಕರಣವಿತ್ತು. ದೊಡ್ಡ ಕಲಾವಿದರನ್ನೆಲ್ಲಾ ಸೇರಿಸಿ ಚಿತ್ರೀಕರಣ ಮಾಡುತ್ತಿರುವುದರಿಂದ, ಸ್ವಲ್ಪ ವಿಳಂಬವಾದರೂ, ಚಿತ್ರೀಕರಣಕ್ಕೆ ಪೆಟ್ಟು ಬೀಳುತ್ತದೆ. ಹಾಗಾಗಿ, ಈ ಬಾರಿ ಅಲ್ಲಿಗೆ ಹೋಗದೆ ಚಿತ್ರೀಕರಣದಲ್ಲಿ ತೊಡಿಸಿಕೊಂಡಿದ್ದೇನೆ. ಮುಂದಿನ ವರ್ಷ ಅಲ್ಲೇ ಸೇರೋಣ’ ಎಂದರು.

‘ಲ್ಯಾಂಡ್‍ ಲಾರ್ಡ್’ ಚಿತ್ರದ ಕುರಿತು ಮಾತನಾಡುವ ವಿಜಯ್‍, ‘ನನಗೆ ಬುದ್ಧಿ ಬಂದಾಗ ನಮ್ಮೂರಲ್ಲಿ ಕರೆಂಟ್‍ ಇರಲಿಲ್ಲ. ಬುಡ್ಡಿದೀಪದಲ್ಲಿ ನಾವೆಲ್ಲರೂ ಓದಿ ಬೆಳೆದವರು. ನಮ್ಮ ಹಿರೀಕರು ಇದೇ ಗೆಟಪ್‍ನಲ್ಲಿ ಇದ್ದರು. ಇಷ್ಟುದ್ಧ ಜುಟ್ಟುಬಿಟ್ಟು, ಅದನ್ನು ಒಪ್ಪವಾಗಿ ಕಟ್ಟಿಕೊಳ್ಳುತ್ತಿದ್ದರು. ಜಾತಿ, ಧರ್ಮ ಯಾವುದೇ ಇಲ್ಲದೆ ಎಲ್ಲರೂ ಒಟ್ಟಿಗೆ ಬೆಳೆದ ಕಾಲವಿತ್ತು. ಆ ಕಾಲದಲ್ಲಿ ಇದ್ದಿದ್ದು ಶ್ರೀಮಂತ ಮತ್ತು ಬಡವ ಎಂಬ ಬೇಧವಷ್ಟೆ. ಇದು ಬಡವರ ಕಥೆ. ನಾನಿಲ್ಲಿ ಬಡವನನ್ನು ಪ್ರತಿನಿಧಿಸುತ್ತಿದ್ದೇನೆ. ಒಬ್ಬ ಬಡವ ಹೇಗೆ ‘ಲ್ಯಾಂಡ್‍ ಲಾರ್ಡ್’ ಆಗುತ್ತಾನೆ ಎನ್ನುವುದು ಚಿತ್ರದ ಕಥೆ’ ಎಂದರು.

‘ಲ್ಯಾಂಡ್‍ ಲಾರ್ಡ್’ ಚಿತ್ರದ ಬಗ್ಗೆ

ವಿಜಯ್‍ ಆ್ಯಕ್ಷನ್‍ ದೃಶ್ಯಗಳಿಂದ ಗುರುತಿಸಿಕೊಂಡವರು. ಇಲ್ಲೂ ಹೊಡೆದಾಟ ಜೋರಾಗಿರುತ್ತದಾ ಎಂಬ ಪ್ರಶ್ನೆಗೆ, ‘ಇಲ್ಲಿ ಹೊಡೆದಾಡಬೇಕು ಎಂಬ ಕಾರಣಕ್ಕೆ ಫೈಟ್‍ಗಳಿಲ್ಲ. ಕಥೆಯ ಜೊತೆಗೆ ಹೊಡೆದಾಟ ಸಹ ಇರುತ್ತದೆ. ಕಮರ್ಷಿಯಲ್‍ ಅಂಶಗಳಿಗೋಸ್ಕರ್ ಫೈಟ್‍ಗಳನ್ನು ತುರುಕಿಲ್ಲ. ಕಥೆಯ ಜೊತೆಗೆ ಸಾಗುತ್ತದೆ. ನನ್ನ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ತರಹದ ಕಥೆ ಮತ್ತು ಪಾತ್ರ’ ಎಂದರು.

ತಂದೆ ಮಗಳ ಕಥೆ

ಈ ಚಿತ್ರದಲ್ಲಿ ಅವರ ಮಗಳು ರಿತನ್ಯಾ ಸಹ ಅವರ ಮಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್‍ ಈ ಚಿತ್ರದುದ್ದಕ್ಕೂ 50 ಪ್ಲಸ್‍ ವಯಸ್ಸಿನವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜೋಡಿಯಾಗಿ ರಚಿತಾ ರಾಮ್‍ ಕಾಣಿಸಿಕೊಳ್ಳುತ್ತಿದ್ದಾರೆ. ‘ಇದು ವ್ಯವಸ್ಥೆಯ ವಿರುದ್ಧದ ಹೋರಾಟದ ಕಥೆ ಎನ್ನುವುದಕ್ಕಿಂತ , ಅಸ್ತಿತ್ವದ ಹೋರಾಟದ ಕಥೆ. ಕರ್ನಾಟಕ-ಆಂಧ್ರ ಗಡಿಯಲ್ಲಿ ನಡೆಯುವ ಕಥೆ. ಜೀತ ಪದ್ಧತಿಯ ಜೊತೆಗೆ ತಂದೆ-ಮಗಳ ಕಥೆ ಇರುವ ಚಿತ್ರ.

ದುನಿಯಾ ವಿಜಯ್ ಮುಂದಿನ ಸಿನಿಮಾ ಯಾವುದು?

ಇನ್ನು, ‘ದುನಿಯಾ’ ವಿಜಯ್‍ ಕೈಯಲ್ಲಿ ಒಂದಿಷ್ಟು ಚಿತ್ರಗಳಿವೆ. ಯಾವುದಾದ ಮೇಲೆ ಯಾವುದು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಈಗಾಗಲೇ ‘ಲ್ಯಾಂಡ್‍ ಲಾರ್ಡ್’ ಚಿತ್ರದ ಅರ್ಧಕ್ಕಿಂತ ಹೆಚ್ಚು ಚಿತ್ರೀಕರಣ ಆಗಿದೆ. 30-35 ಚಿತ್ರಗಳ ಚಿತ್ರೀಕರಣ ಬಾಕಿ ಇದೆ. ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಮುಗಿಯುವ ನಿರೀಕ್ಷೆ ಇದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಚಿತ್ರ ಬಿಡುಗಡೆಯಾಗಬಹುದು. ಈ ಚಿತ್ರೀಕರಣ ಮುಗಿಸಿ, ‘ಸಿಟಿ ಲೈಟ್ಸ್’ ಚಿತ್ರೀಕರಣ ಶುರು ಮಾಡುತ್ತೇನೆ. ಅದಕ್ಕೆ ನಾನು ಬರೀ ನಿರ್ದೇಶಕ ಮಾತ್ರ. ವಿನಯ್‍ ರಾಜಕುಮಾರ್‍ ಮತ್ತು ನನ್ನ ಮಗಳು ಮೊನಿಷಾ ನಾಯಕ-ನಾಯಕಿಯರಾಗಿ ನಟಿಸುತ್ತಿದ್ದಾರೆ. ಅದನ್ನು ಆದಷ್ಟು ಬೇಗ ಮುಗಿಸಿ, ಇದೇ ವರ್ಷದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ‘ಸಿಟಿ ಲೈಟ್ಸ್’ ಚಿತ್ರೀಕರಣ ಮುಗಿಸಿ, ಕೆ.ಪಿ. ಶ್ರೀಕಾಂತ್ ನಿರ್ಮಾಣದ ‘ವಿಕೆ 30’ ಚಿತ್ರದಲ್ಲಿ ಭಾಗವಹಿಸುತ್ತೇನೆ. ಅದಕ್ಕೆ ಹಸಿರು ಪರಿಸರ ಬೇಕು. ಚೆನ್ನಾಗಿ ಮಳೆಯಾಗಿರಬೇಕು. ಹಾಗಾಗಿ, ಮಳೆಗಾಲದ ಸಂದರ್ಭದಲ್ಲಿ ಚಿತ್ರೀಕರಣ ಮಾಡತ್ತಿದ್ದೇವೆ. ಅದನ್ನು ನನ್ನ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ್ದ ವೆಟ್ರಿವೇಲ್‍ (ತಂಬಿ) ನಿರ್ದೇಶನ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

Whats_app_banner