ಹೊಸಬರ ʻಕಪಟ ನಾಟಕ ಸೂತ್ರಧಾರಿʼಗೆ ಸಾಥ್ ನೀಡಿದ ಡಾಲಿ ಧನಂಜಯ್; ಚಿತ್ರದ ಫಸ್ಟ್ ಲುಕ್ ರಿಲೀಸ್
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ, ನಟಿ ಸಂಗೀತಾ ಭಟ್, ನಿರ್ದೇಶಕರಾದ ಮಂಸೋರೆ, ಕೆ.ಎಂ ಚೈತನ್ಯ ಸೇರಿ ಹಲವರು ʻಕಪಟ ನಾಟಕ ಸೂತ್ರಧಾರಿʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

Kapata Nataka Soothradaari: ಸ್ಯಾಂಡಲ್‌ವುಡ್‌ನಲ್ಲಿ ಹೊಸಬರ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಹೊಸಬರ ತಂಡ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ತಯಾರಾಗಿದೆ. ನವ ಪ್ರತಿಭೆಗಳು ಸೇರಿ ರೂಪಿಸಿರುವ ʻಕಪಟ ನಾಟಕ ಸೂತ್ರಧಾರಿʼ ಚಿತ್ರ ಚಿತ್ರೀಕರಣವನ್ನು ಮುಗಿಸಿಕೊಂಡು ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಧೀರಜ್ ಎಂ.ವಿ ನಿರ್ದೇಶನ ಹಾಗೂ ಅಭಿರಾಮ ಅರ್ಜುನ ಬಿಜಿನೆಸ್ ಹೆಡ್ ಆಗಿ ಪದಾರ್ಪಣೆ ಮಾಡುತ್ತಿರುವ ಈ ಚೊಚ್ಚಲ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ.
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ, ನಟಿ ಸಂಗೀತಾ ಭಟ್, ನಿರ್ದೇಶಕರಾದ ಮಂಸೋರೆ, ಕೆ.ಎಂ ಚೈತನ್ಯ ಸೇರಿ ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಪೋಸ್ಟರ್ ಮೂಲಕವೇ ಒಟ್ಟಾರೆ ಕಥನದ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತಲೇ, ಮತ್ತೊಂದಷ್ಟು ವಿಚಾರಗಳೂ ಜಾಹೀರಾಗಿವೆ. ಹಾಗಾದರೆ ಪೋಸ್ಟರ್‌ನಲ್ಲಿ ಕಂಡಿದ್ದೇನು?
ಸಮಾಜಕ್ಕೆ ಹಿಡಿದ ಕನ್ನಡಿ
ʻಕಪಟ ನಾಟಕ ಸೂತ್ರಧಾರಿʼ ಸಮಾಜಕ್ಕೆ ಕನ್ನಡಿ ಹಿಡಿದ ಕಥೆಯನ್ನು ಒಳಗೊಂಡಿರುವ ಚಿತ್ರ. ಇಲ್ಲಿ ಹಾಸುಹೊಕ್ಕಾಗಿರುವ ತಾರತಮ್ಯ, ಶೋಷಣೆಗಳ ಕಥಾ ಎಳೆಯನ್ನು ಒಳಗೊಂಡಿರುವ ಈ ಸಿನಿಮಾ ಸಾಮಾಜಿಕ, ರಾಜಕೀಯ ವಿಡಂಬನಾತ್ಮಕ ಡ್ರಾಮಾ ಜಾನರಿಗೆ ಸೇರಿದ ಎಳೆ. ಇದರ ಚಿತ್ರೀಕರಣ ನಡೆದ ಸ್ಥಳ ಮತ್ತು ರೀತಿಯ ವಿವರ ನೋಡಿದರೆ, ಕಥೆಯ ಬಗೆಗೊಂದು ಕುತೂಹಲ ಮೂಡಿಕೊಳ್ಳುತ್ತೆ. ಇದರ ಬಹುಪಾಲು ಚಿತ್ರೀಕರಣ ಒಂದು ಸಾವಿರ ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿರುವ ಉತ್ತರಕರ್ನಾಟಕದ ದೇವಸ್ಥಾನದ ಆವರಣದಲ್ಲಿ ನಡೆದಿದೆ. ಐವತೈದು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಇದೀಗ ಅಂತಿಮ ಹಂತದಲ್ಲಿದೆ.
ನೂರಕ್ಕೂ ಅಧಿಕ ಕಲಾವಿದರ ದಂಡು
ವಿಶೇಷವೆಂದರೆ, ನೂರಕ್ಕೂ ಹೆಚ್ಚು ಮಂದಿ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಒಂದಷ್ಟು ಹೂಡಿಕೆದಾರರು ಸೇರಿ ವಿಎಸ್‌ಕೆ ಸಿನಿಮಾಸ್ ಬ್ಯಾನರಿನಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ಅಭಿರಾಮ ಅರ್ಜುನ್ ಈ ಸಿನಿಮಾದ ಬಿಜಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಭಿನ್ನ ಧಾಟಿಯ, ಚೆಂದದ ಸಿನಿಮಾಗಳನ್ನು ರೂಪಿಸುವ, ಪ್ರತಿಭಾನ್ವಿತ ತಂಡಕ್ಕೆ ಸಾಥ್ ಕೊಡುವ ಮಹತ್ವಾಕಾಂಕ್ಷೆಯೊಂದಿಗೇ ಅಭಿರಾಮ ಚಿತ್ರರಂಗಕ್ಕೆ ಅಡಿಯಿರಿಸಿದ್ದಾರೆ. ಮೂಲತಃ ಇಂಜಿನಿಯರ್ ಆಗಿರುವ ಧೀರಜ್ ಎಂ.ವಿ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಸುನಿಲ್ ಕುಮಾರ್ ದೇಸಾಯಿ, ಮಠ ಗುರುಪ್ರಸಾದ್ ಮುಂತಾದವರ ಗರಡಿಯಲ್ಲಿ ಕಾರ್ಯನಿರ್ವಹಿಸಿರುವ ಧೀರಜ್ ಈಗಾಗಲೇ ಒಂದು ಕಿರುಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ವೀರೇಶ್ ಎನ್ ಟಿ ಎ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಹಾಗೂ ಮುರಳಿ ಶಂಕರ್ ಸಹ ನಿರ್ದೇಶನವಿರುವ ಈ ಚಿತ್ರದಲ್ಲಿ ಹರೀಶ್ ರಂಗರಾವ್ ಕ್ರಿಯೇಟಿವ್ ಹೆಡ್ ಆಗಿ, ವರುಣ್ ಗುರುರಾಜ್ ಪ್ರೊಡಕ್ಷನ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ತಾರಾಗಣದ ಬಗೆಗಿನ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.


