Sidlingu 2 Movie Review: ಸಿದ್ಲಿಂಗು 2 ಸಿನಿಮಾ ವಿಮರ್ಶೆ; ಹೊಸ ಪ್ರಪಂಚದಲ್ಲಿ ಅದೇ ಹಳೆಯ ಕಾರು
ಲೂಸ್ ಮಾದ ಯೋಗಿ ಅಭಿನಯದ ಸಿನಿಮಾ ‘ಸಿದ್ಲಿಂಗು 2’ ಇಂದು ಬಿಡುಗಡೆಯಾಗಿದೆ. ‘ಸಿದ್ಲಿಂಗು 2’ ಚಿತ್ರವು 2012ರಲ್ಲಿ ಬಿಡುಗಡೆಯಾದ ‘ಸಿದ್ಲಿಂಗು’ ಚಿತ್ರದ ಅಕ್ಷರಶಃ ಮುಂದುವರೆದ ಭಾಗವಾಗಿದ್ದು, ಯೋಗಿ ಅಭಿನಯದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

‘2’ ಹೆಸರಿನಲ್ಲಿ ಸಿನಿಮಾ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಆದರೆ, ಮೊದಲ ಚಿತ್ರಕ್ಕೂ ಎರಡನೆಯ ಚಿತ್ರಕ್ಕೂ ಸಂಬಂಧವೇ ಇರುವುದಿಲ್ಲ. ಇಂದು (ಫೆ 14) ಬಿಡುಗಡೆಯಾದ ‘ಸಿದ್ಲಿಂಗು 2’ ಚಿತ್ರವು 2012ರಲ್ಲಿ ಬಿಡುಗಡೆಯಾದ ‘ಸಿದ್ಲಿಂಗು’ ಚಿತ್ರದ ಅಕ್ಷರಶಃ ಮುಂದುವರೆದ ಭಾಗ. ಅಲ್ಲಿನ ಸಿದ್ಲಿಂಗು ಜೀವನ ಈಗ ಎಷ್ಟು ಬದಲಾಗಿದೆ ಮತ್ತು ಕಾರು ಕೊಂಡುಕೊಳ್ಳಬೇಕು ಎಂಬ ಅವನ ಆಸೆ ಈಡೇರುತ್ತದಾ? ಎಂಬುದರ ಕುರಿತು ‘ಸಿದ್ಲಿಂಗು 2’ ಚಿತ್ರ ಸಾಗುತ್ತದೆ.
‘ಸಿದ್ಲಿಂಗು 2’ ಚಿತ್ರದ ಕಥೆ ಏನು?
‘ಸಿದ್ಲಿಂಗು’ ಚಿತ್ರ ಪ್ರೇಕ್ಷಕರಿಗೆ ನೆನಪಿದ್ದರೆ, ಅದರಲ್ಲಿ ಹಳೆಯ ಕಾರೊಂದನ್ನು ಖರೀದಿಸಬೇಕು ಎಂಬ ಸಿದ್ಲಿಂಗು ಎಂಬ ಯುವಕನ ಆಸೆಯ ಕುರಿತಾಗಿ ಚಿತ್ರ ಸಾಗುತ್ತದೆ. ಆದರೆ, ಅವನು ಇಷ್ಟಪಟ್ಟ ಕಾರು ಮತ್ತು ಮಂಗಳಾ ಟೀಚರ್ (ರಮ್ಯಾ) ಇಬ್ಬರೂ ಸಿಗುವುದಿಲ್ಲ. ತನ್ನ ಆಸೆ ಕೈಗೂಡದೆ ತನ್ನವರನ್ನು ಕಳೆದುಕೊಂಡ ದುಖದಲ್ಲಿದ್ದ ಸಿದ್ಲಿಂಗುಗೆ ಈ ಬಾರಿ ಒಂದಿಷ್ಟು ಹೊಸ ಜನರ ಪರಿಚಯವಾಗುತ್ತದೆ. ಅವರ ಜೊತೆಗೆ ಜೀವನ ಸಾಗಿಸುತ್ತಿರುವಾಗಲೇ ತನ್ನ ಹಳೆಯ ಕಾರು ಮತ್ತೊಮ್ಮೆ ಕಾಣುತ್ತದೆ. ಆ ಕಾರು ಖರೀದಿಸಬೇಕು ಎಂಬ ಅವನ ಆಸೆ ಈ ಬಾರಿ ಈಡೇರುತ್ತದಾ? ಈ ನಿಟ್ಟಿನಲ್ಲಿ ಅವನು ಏನೆಲ್ಲಾ ಹೋರಾಟಗಳನ್ನು ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ.
ಹೇಗಿದೆ ‘ಸಿದ್ಲಿಂಗು 2’?
‘ಸಿದ್ಲಿಂಗು 2’ ಒಂದು ಟಿಪಿಕಲ್ ವಿಜಯಪ್ರಸಾದ್ ಚಿತ್ರ. ಸಾಮಾನ್ಯ ಜನರನ್ನು ಪ್ರತಿನಿಧಿಸುವ ಪಾತ್ರಗಳನ್ನು ಬಹಳ ಆಪ್ತವಾಗಿ ಕಟ್ಟಿಕೊಡುವ ವಿಜಯಪ್ರಸಾದ್, ಇಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಈ ಬಾರಿ ಅವರು ಸೀತಮ್ಮ, ವಿಶಾಲು, ನಿವೇದಿತಾ ಟೀಚರ್, ಮಿಣ್‍ಮಿಣಿ, ಹಳೇ ಬೇವರ್ಸಿ, ಲಾಯರ್ ಮುಂತಾದ ಹೊಸ ಪಾತ್ರಗಳನ್ನು ಪರಿಚಯಿಸಿದ್ದಾರೆ. ತಾವೇ ಒಂದು ಮುಖ್ಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಂಡಾಳಮ್ಮ, ಆರ್ಮುಗಂನಂತಹ ಒಂದಿಷ್ಟು ಹಳೆಯ ಪಾತ್ರಗಳನ್ನು ಮುಂದುವರೆಸಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲೂ ಹಳೆಯ ಕಾರು ಮುಂದುವರೆದಿದೆ. ಇವೆರೆಲ್ಲರನ್ನೂ ಇಟ್ಟುಕೊಂಡು ಕಥೆಯನ್ನು ಮುಂದುವರೆಸಿದ್ದಾರೆ.
ಬದಲಾಗಿದ್ದಾರೆ ವಿಜಯಪ್ರಸಾದ್
ವಿಜಯಪ್ರಸಾದ್ ಅವರ ಹಿಂದಿನ ಚಿತ್ರಗಳಾದ ‘ತೋತಾಪುರಿ’ ಮತ್ತು ‘ಪೆಟ್ರೋಮ್ಯಾಕ್ಸ್’ ಚಿತ್ರಗಳಲ್ಲಿ ಅತಿ ಎನಿಸುವಷ್ಟು ದ್ವಂದ್ವಾರ್ಥಗಳಿದ್ದವು. ಇದೇ ಕಾರಣಕ್ಕೆ ನೋಡುಗರಿಂದ ಸಾಕಷ್ಟು ಟೀಕೆಗಳನ್ನು ಅವರು ಎದುರಿಸಿದ್ದರು. ಈ ಬಾರಿ ಹಾಗಾಗುವುದಿಲ್ಲ, ಇದೊಂದು ಸದಭಿರುಚಿಯ ಚಿತ್ರವಾಗಿರುತ್ತದೆ ಎಂದು ವಿಜಯಪ್ರಸಾದ್ ಹೇಳಿದ್ದರು. ಆ ಮಾತನ್ನು ಇಲ್ಲಿ ಉಳಿಸಿಕೊಂಡಿದ್ದಾರೆ. ಚೇಷ್ಟೆ ಹೆಸರಿನ ದ್ವಂದ್ವಾರ್ಥವನ್ನು ಬಿಟ್ಟು ಅವರು ಈ ಬಾರಿ ಜನರನ್ನು ನಗಿಸಿದ್ದಾರೆ. ಪ್ರಸಕ್ತ ಬೆಳವಣಿಗೆಗಳನ್ನು ಉದಾಹರಿಸಿ ನಗಿಸುವ ಪ್ರಯತ್ನ ಮಾಡುತ್ತಾರೆ. ಹಲವು ರಾಜಕಾರಣಿಗಳು, ಸಿನಿಮಾ ನಟ-ನಟಿಯರ ಹೆಸರುಗಳನ್ನು ಎಳೆದು ತರುತ್ತಾರೆ. ಅವರ ಕೆಲವು ಒನ್‍ಲೈನ್‍ರ್‍ಗಳು ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ. ಕೆಲವೊಮ್ಮೆ ಮಾತು ಹೆಚ್ಚಾಗಿದೆ ಅಂತನಿಸಿದರೂ, ಹಿಂದಿನ ಚಿತ್ರಗಳಂತೆ ವಿಜಯಪ್ರಸಾದ್ ಬೇಸರಗೊಳಿಸುವುದಿಲ್ಲ. ನಗಿಸುತ್ತಲೇ ಒಂದು ಗಾಢವಾದ ಅನುಭವವನ್ನು ಕಟ್ಟಿಕೊಡುತ್ತಾರೆ. ಇನ್ನು, ಚಿತ್ರವನ್ನು ಸ್ವಲ್ಪ ಟ್ರಿಮ್ ಮಾಡಬಹುದಿತ್ತು. ಅದರಲ್ಲೂ ಕೋರ್ಟ್ ಸನ್ನಿವೇಶಗಳು ಸ್ವಲ್ಪ ಎಳೆದಂತಾಗಿದೆ. ಬಹುಶಃ ಚಿತ್ರವನ್ನು ಚುರುಕಾಗಿಸಿದ್ದರೆ, ಚಿತ್ರ ಇನ್ನಷ್ಟು ಮಜ ಕೊಡುತ್ತಿತ್ತು.
ಯೋಗಿಗೆ ಫುಲ್ ಮಾರ್ಕ್ಸ್
‘ಸಿದ್ಲಿಂಗು’ ಚಿತ್ರದಲ್ಲಿನ ಯೋಗಿ ಅಭಿನಯದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇಲ್ಲಿ ಅವರಿನ್ನೂ ಮಾಗಿದ್ದಾರೆ. ತಮ್ಮ ಮಾಗಿದ ಅಭಿನಯ ಮತ್ತು ಮಾತುಗಳಿಂದ ಇಷ್ಟವಾಗುತ್ತಾರೆ. ಪಾತ್ರಗಳನ್ನು ಸೃಷ್ಟಿಸುವುದು ಮುಖ್ಯವಲ್ಲ. ಜೀವ ತುಂಬುವುದು ಮುಖ್ಯ. ಆ ಕೆಲಸವನ್ನು ಪ್ರತಿಯೊಬ್ಬ ಕಲಾವಿದರೂ ಸಮರ್ಥವಾಗಿ ಮಾಡಿದ್ದಾರೆ. ಪದ್ಮಜಾ ರಾವ್, ಸೀತಾ ಕೋಟೆ, ಸೋನು ಗೌಡ, ಸುಮನ್ ರಂಗನಾಥ್ ಎಲ್ಲರೂ ಇಷ್ಟವಾಗುತ್ತಾರೆ. ಮಂಜುನಾಥ ಹೆಗಡೆ ತಮ್ಮ ಅಭಿನಯ ಮತ್ತು ಮಾತುಗಳಿಂದ ಶಿಳ್ಳೆ ಗಿಟ್ಟಿಸುತ್ತಾರೆ. ಚಿತ್ರದ ಇಡೀ ಪರಿಸರ ಬಹಳ ಆಪ್ತವಾಗಿದೆ. ಬಹಳ ಸರಳವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಹಾಡುಗಳು ಮತ್ತು ಛಾಯಾಗ್ರಹಣ ಚಿತ್ರಕ್ಕೆ, ಚಿತ್ರದ ಪರಿಸರಕ್ಕೆ ಪೂರಕವಾಗಿದೆ.
ಸಾಮಾನ್ಯವಾಗಿ ಮುಂದುವರೆದ ಭಾಗಗಳು, ಮೊದಲ ಚಿತ್ರಗಳಂತೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ವಿಫಲವಾಗಿರುತ್ತವೆ. ಆದರೆ, ‘ಸಿದ್ಲಿಂಗು 2’ ಚಿತ್ರವು ಮೊದಲನೆಯದಕ್ಕಿಂತ ಹೆಚ್ಚು ಭಾವುಕವಾಗಿದೆ, ಗಾಢವಾಗಿದೆ. ಈ ಹೊಸ ಪ್ರಪಂಚದಲ್ಲಿ, ಹಳೆಯ ಕಾರಿನಲ್ಲಿ ಒಂದು ಸುತ್ತು ಹಾಕಿಬರಬಹುದು.
ಸಿನಿಮಾ: ಸಿದ್ಲಿಂಗು 2
ಜಾನರ್: ಫ್ಯಾಮಿಲಿ ಡ್ರಾಮ
ನಿರ್ದೇಶನ: ವಿಜಯಪ್ರಸಾದ್
ನಿರ್ಮಾಣ: ಶ್ರೀಹರಿ, ರಾಜು ಶೇರಿಗಾರ್
ಸಂಗೀತ: ಅನೂಪ್ ಸೀಳಿನ್
ಛಾಯಾಗ್ರಹಣ: ಪ್ರಸನ್ನ ಗುರ್ಲಗೆರೆ
ಎಚ್‍ಟಿ ಕನ್ನಡ ರೇಟಿಂಗ್: 3/5
ವಿಮರ್ಶೆ: ಚೇತನ್ ನಾಡಿಗೇರ್
ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ದಿನವೇ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ ಶಮಂತ್ ಬ್ರೋ ಗೌಡ; ಇಲ್ಲಿದೆ ಜೋಡಿ ಫೋಟೋಸ್
