ಚಿತ್ರಮಂದಿರಕ್ಕೆ ಬರಲು ರೆಡಿಯಾದ ʻಮಾದೇವʼ; ಜೂನ್ ಮೊದಲ ವಾರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ಚಿತ್ರ ರಿಲೀಸ್
ಈಗಾಗಲೇ ಮೇಕಿಂಗ್ ಮತ್ತು 80ರ ಕಾಲಘಟ್ಟದ ಕಥೆಯ ಮೂಲಕ ಒಂದಷ್ಟು ಕಾರಣಕ್ಕೆ ಹೈಪ್ ಸೃಷ್ಟಿಸಿರುವ ವಿನೋದ್ ಪ್ರಭಾಕರ್ ನಟನೆಯ ʻಮಾದೇವʼ ಸಿನಿಮಾ, ಇದೀಗ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಮೂಲಕ ಜೂನ್ 6ರಂದು ಈ ಚಿತ್ರ ತೆರೆಗೆ ಬರಲಿದೆ.

ಸ್ಯಾಂಡಲ್‌ವುಡ್‌ನ ಮರಿ ಟೈಗರ್ ವಿನೋದ್ ಪ್ರಭಾಕರ್ ಇದೀಗ ʻಮಾದೇವʼ ಸಿನಿಮಾ ಮೂಲಕ ಚಿತ್ರಮಂದಿರಕ್ಕೆ ಎಂಟ್ರಿಕೊಡಲು ಸಿದ್ಧರಾಗಿದ್ದಾರೆ. ಈಗಾಗಲೇ ಮೇಕಿಂಗ್ ಮತ್ತು 80ರ ಕಾಲಘಟ್ಟದ ಕಥೆಯ ಮೂಲಕ ಒಂದಷ್ಟು ಕಾರಣಕ್ಕೆ ಹೈಪ್ ಸೃಷ್ಟಿಸಿರುವ ಈ ಸಿನಿಮಾ, ಇದೀಗ ತನ್ನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಮೂಲಕ ಜೂನ್ 6ರಂದು ಈ ಚಿತ್ರ ತೆರೆಗೆ ಬರಲಿದೆ. ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ ʻಮಾದೇವʼ ಚಿತ್ರವನ್ನು ನವೀನ್ ರೆಡ್ಡಿ ಬಿ ನಿರ್ದೇಶನ ಮಾಡಿದ್ದಾರೆ.
"ಕೋವಿಡ್ ಸಮಯದಲ್ಲಿ ನನಗೆ ನಿರ್ದೇಶಕರು ಈ ಕಥೆ ಹೇಳಿದರು. ಕಥೆ ಬಹಳ ಇಷ್ಟವಾಯಿತು. ನಿರ್ದೇಶಕರು ಹೇಳಿದ ಹಾಗೆ 80ರ ಕಾಲಘಟ್ಟದ ಕಥೆ. ʻಹ್ಯಾಂಗ್ ಮ್ಯಾನ್ʼ ಪಾತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನನಗೆ ತಿಳಿದಿರುವ ಹಾಗೆ ಕನ್ನಡದಲ್ಲಿ ʻಹ್ಯಾಂಗ್ ಮ್ಯಾನ್ʼ ಕುರಿತಾದ ಕಥೆ ಬಂದಿಲ್ಲ. ನಾನು ಈ ಚಿತ್ರದಲ್ಲಿ ಅಭಿನಯಿಸುವಾಗ ಕೆಲವು ಸನ್ನಿವೇಶಗಳು ನಮ್ಮ ತಂದೆ ಪ್ರಭಾಕರ್ ಅವರ ಅಭಿನಯದ ʻಜಿದ್ದುʼ ಹಾಗೂ ʻಕರುಳಿನ ಕೂಗುʼ ಚಿತ್ರಗಳು ನೆನಪಾದವು. ನಿರ್ಮಾಪಕ ಕೇಶವ್ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ʻರಾಬರ್ಟ್ʼ ಚಿತ್ರದ ನಂತರ ನಾನು ಹಾಗೂ ಸೋನಾಲ್ ಅವರು ಈ ಚಿತ್ರದಲ್ಲಿ ನಟಿಸಿದ್ದೇವೆ ಎಂದರು ನಾಯಕ ವಿನೋದ್ ಪ್ರಭಾಕರ್.
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಪಾರ್ವತಿ. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ವಿನೋದ್ ಪ್ರಭಾಕರ್ ಅವರು ಹೇಳಿದ ಹಾಗೆ ʻರಾಬರ್ಟ್ʼ ಚಿತ್ರದ ನಂತರ ನಾನು ಹಾಗೂ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದೇವೆ ಎಂದರು ನಾಯಕಿ ಸೋನಾಲ್ ಮೊಂತೆರೊ. ನಮ್ಮ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಕೇಶವ್ ಆರ್ (ದೇವಸಂದ್ರ). ನಟ ಕಾಕ್ರೋಚ್ ಸುಧೀ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಸಂಗೀತ ನಿರ್ದೇಶಕ ಪ್ರದ್ಯೋತನ್ ಸಂಗೀತದ ಬಗ್ಗೆ ಮಾಹಿತಿ ನೀಡಿದರು.
80ರ ಕಾಲಘಟ್ಟದ ಕಥೆ
ʻಮಾದೇವʼ ಚಿತ್ರ 1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಚಿತ್ರ. ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ʻಹ್ಯಾಂಗ್ ಮ್ಯಾನ್ʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಆ ಕಾಲಘಟ್ಟಕ್ಕೆ ಸರಿ ಹೊಂದುವ ಸ್ಥಳಗಳಲ್ಲೇ ಈ ಚಿತ್ರದ ಚಿತ್ರೀಕರಣವಾಗಿದೆ. ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ಅತಿಥಿ ಪಾತ್ರದಲ್ಲಿ ಮಾಲಾಶ್ರೀ ನಟಿಸಿದ್ದಾರೆ.
ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧೀ, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಡಿಫರೆಂಟ್ ಡ್ಯಾನಿ, ರಿಯಲ್ ಸತೀಶ್, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ, ಬಾಲಕೃಷ್ಣ ತೋಟ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಸಂಕಲನ ಹಾಗೂ ಗುಣ ಅವರ ಕಲಾ ನಿರ್ದೇಶನವಿರುವ ಈ ಚಿತ್ರ ಜೂನ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.