AIನಲ್ಲಿ ಮೂಡಿಬರಲಿದೆ ಮಾಗಡಿ ಕೆಂಪೇಗೌಡರ ಕಥೆ; ‘ಲವ್‍ ಯು’ ತಂಡದವರಿಂದ ಹೊಸ ಪ್ರಯತ್ನ
ಕನ್ನಡ ಸುದ್ದಿ  /  ಮನರಂಜನೆ  /  Aiನಲ್ಲಿ ಮೂಡಿಬರಲಿದೆ ಮಾಗಡಿ ಕೆಂಪೇಗೌಡರ ಕಥೆ; ‘ಲವ್‍ ಯು’ ತಂಡದವರಿಂದ ಹೊಸ ಪ್ರಯತ್ನ

AIನಲ್ಲಿ ಮೂಡಿಬರಲಿದೆ ಮಾಗಡಿ ಕೆಂಪೇಗೌಡರ ಕಥೆ; ‘ಲವ್‍ ಯು’ ತಂಡದವರಿಂದ ಹೊಸ ಪ್ರಯತ್ನ

ಭಾರತದ ಮೊದಲ AI ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡದ ‘ಲವ್‍ ಯೂ’ ಚಿತ್ರವು ಮೇ 16ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ನಂತರ ಇದೇ ತಂಡವು ಮಾಗಡಿ ಕೆಂಪೇಗೌಡರ ಕುರಿತು ಹೊಸದೊಂದು ಚಿತ್ರ ಮಾಡುವುದಕ್ಕೆ ತಯಾರಿ ನಡೆಸಿದ್ದು, ಆದಷ್ಟು ಬೇಗ ಆ ಚಿತ್ರ ಹೊರಬರಲಿದೆಯಂತೆ. (ವರದಿ: ಚೇತನ್‌ ನಾಡಿಗೇರ್‌)

AIನಲ್ಲಿ ಮೂಡಿಬರಲಿದೆ ಮಾಗಡಿ ಕೆಂಪೇಗೌಡರ ಕಥೆ
AIನಲ್ಲಿ ಮೂಡಿಬರಲಿದೆ ಮಾಗಡಿ ಕೆಂಪೇಗೌಡರ ಕಥೆ

ಬೆಂಗಳೂರು: ಭಾರತದ ಮೊದಲ AI ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡದ ‘ಲವ್‍ ಯೂ’ ಚಿತ್ರವು ಮೇ 16ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ನಂತರ ಇದೇ ತಂಡವು ಮಾಗಡಿ ಕೆಂಪೇಗೌಡರ ಕುರಿತು ಹೊಸದೊಂದು ಚಿತ್ರ ಮಾಡುವುದಕ್ಕೆ ತಯಾರಿ ನಡೆಸಿದ್ದು, ಆದಷ್ಟು ಬೇಗ ಆ ಚಿತ್ರ ಹೊರಬರಲಿದೆಯಂತೆ.

ಇತ್ತೀಚೆಗೆ ‘ಲವ್‍ ಯು’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರವನ್ನು AIನಲ್ಲಿ ಸೃಷ್ಟಿಸಿರುವ ನೂತನ್‍, ‘ಚಿತ್ರದಲ್ಲಿ ಸಾಕಷ್ಟು ನ್ಯೂನತೆಗಳಿರಬಹುದು. ಕಾರಣ ಆರು ತಿಂಗಳ ಹಿಂದೆ ನಾವು ಈ ಚಿತ್ರ ಮಾಡಿದಾಗ, ಹೆಚ್ಚು ಸೌಲಭ್ಯಗಳಿರಲಿಲ್ಲ. ಈಗ ಸಾಕಷ್ಟು ಬೆಳವಣಿಗೆಗಳಾಗಿದ್ದು, ಮುಂದಿನ ದಿನಗಳಲ್ಲಿ AI ತಂತ್ರಜ್ಞಾನದಲ್ಲಿ ಇನ್ನಷ್ಟು ಅದ್ಭುತ ಪ್ರಯತ್ನಗಳನ್ನು ಮಾಡಬಹುದು. ಇಡೀ ದೇಶದಲ್ಲಿ ಕನ್ನಡದಲ್ಲಿ ಮೊದಲು ಇಂಥದ್ದೊಂದು ಪ್ರಯತ್ನವಾಗಲೀ ಎಂಬ ಕಾರಣಕ್ಕೆ ನಾವು ಚಿತ್ರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕೆಂಪೇಗೌಡರ ಕುರಿತು ಒಂದು ಸಿನಿಮಾ ಮಾಡುತ್ತಿದ್ದೇವೆ’ ಎಂದರು.

ಈಗಾಗಲೇ ಕೆಂಪೇಗೌಡರ ಕುರಿತು ಕನ್ನಡದಲ್ಲಿ ಎರಡು ಚಿತ್ರಗಳು ನಿರ್ಮಾಣವಾಗುತ್ತಿರುವ ಸುದ್ದಿಯಿದೆ. ಹಿರಿಯ ನಿರ್ದೇಶಕ ನಾಗಾಭರಣ, ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ‘ನಾಡಪ್ರಭು ಕೆಂಪೇಗೌಡ’ ಎಂಬ ಚಿತ್ರವನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಆ ಚಿತ್ರದಲ್ಲಿ ಧನಂಜಯ್‍, ಕೆಂಪೇಗೌಡರ ಪಾತ್ರ ಮಾಡುತ್ತಿದ್ದಾರೆ. ಈ ಮಧ್ಯೆ, ಹಿರಿಯ ನಿರ್ದೇಶಕ ದಿನೇಶ್‍ ಬಾಬು ಸಹ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕುರಿತು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರವನ್ನು ಮಾಡಬಾರದು ಎಂದು ನಾಗಭರಣ ಅವರು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಇದೆಲ್ಲಾ ಆಗಿ ಒಂದು ವರ್ಷವಾಗಿದೆ. ಆ ಕಡೆ ‘ನಾಡಪ್ರಭು ಕೆಂಪೇಗೌಡ’ ಸಹ ಶುರುವಾಗಿಲ್ಲ. ಈ ಕಡೆ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ ‘ ಸಹ ಪ್ರಾರಂಭವಾಗಿಲ್ಲ.

ಹೀಗಿರುವಾಗಲೇ, ಕೆಂಪೇಗೌಡರ ಕುರಿತು ನೂತನ್‍ AI ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಹೊಸ ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅವರು ತಯಾರಿಯನ್ನೂ ನಡೆಸಿದ್ದಾರೆ. ಈ ಕುರಿತು ಮಾತನಾಡುವ ಅವರು, ‘ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ಕನ್ನಡದಲ್ಲಿ ಇದುವರೆಗೂ ಕೆಂಪೇಗೌಡರ ಕುರಿತು ಯಾವೊಂದು ಚಿತ್ರ ಸಹ ಬಂದಿಲ್ಲ. ನಾವು ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಮರಾಠಿಯಲ್ಲಿ ಶಿವಾಜಿ ಮಹಾರಾಜರ ಕುರಿತು ಹಲವು ಚಿತ್ರಗಳು ಬಂದಿವೆ. ಕನ್ನಡದಲ್ಲಿ ಮಾತ್ರ ಕರ್ನಾಟಕವನ್ನು ಆಳಿದ ಹಲವು ಮಹನಿಯರ ಕುರಿತು ಚಿತ್ರ ಬಂದಿಲ್ಲ. ನಾವು ಕಲಾವಿದರನ್ನು ಬಳಸಿಕೊಂಡು ಚಿತ್ರ ಮಾಡಿದರೆ, ಕೋಟ್ಯಂತರ ಖರ್ಚಾಗುತ್ತದೆ. ಸಾಕಷ್ಟು ಸಮಯವೂ ಬೇಕಾಗುತ್ತದೆ. ಆದರೆ, ನಮಗೆ ಅಷ್ಟೊಂದು ಸಮಯ ಕಾಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಜೂನ್‍ 27ರಂದು ಕೆಂಪೇಗೌಡರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಟೀಸರ್‌ ಬಿಡುಗಡೆ ಮಾಡುತ್ತೇವೆ’ ಎಂದರು. (ವರದಿ: ಚೇತನ್‌ ನಾಡಿಗೇರ್‌)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in