Max Movie Review: ಶಕ್ತಿಮಾನ್‌ನಂತೆ ಫೈಟಿಂಗ್, ಬೆಂಕಿಯಂತೆ ಆ್ಯಕ್ಟಿಂಗ್, ಇದು ಕಿಚ್ಚನ ಪ್ರಳಯ ರಾತ್ರಿ- ಮ್ಯಾಕ್ಸ್ ಸಿನಿಮಾ ವಿಮರ್ಶೆ
Max Movie Review: ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ಮ್ಯಾಕ್ಸಿಮಮ್ ಫೈಟಿಂಗ್ ಇದೆ. ಮಿನಿಮಮ್ ಸೆಂಟಿಮೆಂಟ್ ಇದೆ. ಕಾಮಿಡಿ ಝೀರೋ ಇದೆ. "ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಿನಿಮಾ" ಬಯಸುವವರಿಗೆ ಮ್ಯಾಕ್ಸ್ ತುಸು ನಿರಾಸೆ ಮೂಡಿಸಬಹುದು. "ಫ್ಯಾನ್ಸ್ ಎಂಟರ್‌ಟೇನ್‌ಮೆಂಟ್ ಮೂವಿ" ಬಯಸುವವರಿಗೆ ಮ್ಯಾಕ್ಸ್ ಖುಷಿ ಕೊಡಬಹುದು.
Max Movie Review: ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ಏನಿದೆ? ಏನಿಲ್ಲ? ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳೋಣ. ಸಿನಿಮಾದಲ್ಲಿ ಲವ್ ಸ್ಟೋರಿ ಇದೆಯಾ? ಇಲ್ಲ. ಸೆಂಟಿಮೆಂಟ್ ಇರುವುದೇ? ಹೃದಯ ತಟ್ಟುವಷ್ಟು ಅಥವಾ ಹೃದಯ ಮುಟ್ಟುವಷ್ಟು ಇಲ್ಲ. ಕಾಮಿಡಿ ಇದೆಯೇ? ಇಲ್ಲ..! ಸಂದೇಶಾತ್ಮಕ ಚಿತ್ರವೇ? ಅಲ್ಲವೇ ಅಲ್ಲ. ಪೊಲೀಸ್ ಡ್ರೆಸ್‌ನಲ್ಲಿ ಸುದೀಪ್ ಕಾಣಿಸುತ್ತಾರೆಯೇ? ಇಲ್ಲವೇ ಇಲ್ಲ. ಕಾಡುವಂತಹ ಹಾಡು ಇದೆಯಾ? ಕಾಣಿಸುವುದಿಲ್ಲ. ಫೈಟಿಂಗ್ ಇದೆಯಾ? ಸಿನಿಮಾ ಪೂರ್ತಿ ಇರೋದೇ ಅದು! ಮ್ಯಾಕ್ಸಿಮಮ್ ಆ್ಯಕ್ಷನ್ ಬಯಸುವ ಮಾಸ್ ಪ್ರೇಕ್ಷಕರಿಗೆ ಮ್ಯಾಕ್ಸ್ ಸಿನಿಮಾ "ಬೆಂಕಿ"ಯಂತೆ ಇದೆ ಎಂದರೆ ತಪ್ಪಾಗದು.
ಮ್ಯಾಕ್ಸ್ ಸಿನಿಮಾದ ಕಥೆ ಮತ್ತು ವಿಮರ್ಶೆ
ಒಂದು ರಾತ್ರಿ ಬೆಳಗಾಗುವುದರೊಳಗೆ ನಡೆಯುವ ಘಟನೆಗಳೇ ಮ್ಯಾಕ್ಸ್ ಸಿನಿಮಾದ ಕಥೆ. ಅಮಾನತುಗೊಂಡಿದ್ದ ಎಸಿಪಿ ಅರ್ಜುನ್ ಮಹಾಕ್ಷಯ್ ಮತ್ತೆ ಡ್ಯೂಟಿಗೆ ಹಾಜರಾಗುವ ಒಂದು ದಿನದ ಹಿಂದೆ ಈ ಘಟನೆಗಳು ನಡೆಯುತ್ತವೆ. ಇದೇ ಕಾರಣಕ್ಕೆ ಚಿತ್ರದಲ್ಲಿ ಎಲ್ಲೂ ಸುದೀಪ್ ಪೊಲೀಸ್ ಧಿರಿಸಿನಲ್ಲಿ ಇರುವುದಿಲ್ಲ. ಆ ಒಂದು ರಾತ್ರಿ ಏನು ನಡೆಯುತ್ತದೆ ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ರಾಜಕಾರಣಿಗಳ ಇಬ್ಬರು ರೌಡಿ ಮಕ್ಕಳನ್ನು ಸುದೀಪ್ ಲಾಕಪ್‌ಗೆ ಹಾಕುತ್ತಾರೆ. ಎಸಿಪಿ ಅರ್ಜುನ್ ಇಲ್ಲದೆ ಇರುವ ಸಮಯದಲ್ಲಿ ಆ ಇಬ್ಬರು ರೌಡಿಗಳು "ಪರಸ್ಪರ ಹೊಡೆದಾಡಿಕೊಂಡು" ಸಾಯುತ್ತಾರೆ. ಅವರಿಬ್ಬರನ್ನು ಹುಡುಕಿಕೊಂಡು ನೂರಾರು ರೌಡಿಗಳು ಸ್ಟೇಷನ್‌ನತ್ತ ಬರುತ್ತಾರೆ. ಹಲವು ಗ್ಯಾಂಗ್‌ಗಳು ಮತ್ತು ಸುದೀಪ್ ನಡುವಿನ ಮಹಾಯುದ್ಧ ನಡೆಯುತ್ತದೆ. ಒಟ್ಟಾರೆ ಒಂದು ದಿನದ ಕಥೆ ಇಟ್ಟುಕೊಂಡು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ.
ಈ ಸಿನಿಮಾದ ಘಟನೆಗಳು ಒಂದು ರಾತ್ರಿಯಲ್ಲಿ ನಡೆಯುತ್ತವೆ. ಹಾಗಂತ, ಸಿನಿಮಾ ಪೂರ್ತಿ ಕಪ್ಪು ಕಪ್ಪು ಕತ್ತಲು ಎನ್ನುವಂತೆ ಇಲ್ಲ. ಕತ್ತಲೆಯನ್ನು ಓಡಿಸಲು ಸಾಕಷ್ಟು ಬೆಂಕಿಯನ್ನೂ ಹಚ್ಚಲಾಗಿದೆ. ಕತ್ತಲೆ ತರುವ ಮಂಕು ತಪ್ಪಿಸಲು ಸುದೀಪ್ ಡೈಲಾಗ್‌ಗಳೂ, ಫೈಟಿಂಗ್‌ಗಳೂ ಇವೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾದರೂ ಬೋರ್ ಹೊಡೆಸದು. ಏಕೆಂದರೆ, ಚಿತ್ರದ ಪೂರ್ತಿ ಸುದೀಪ್ "ಶಕ್ತಿಮಾನ್"ನಂತೆ ನೂರಾರು ರೌಡಿಗಳನ್ನು ಚಚ್ಚಿ ಹಾಕುವ ಹಲವು ದೃಶ್ಯಗಳು ಇವೆ. ಇದು ಕಂಪ್ಲೀಟ್ ಆಕ್ಷನ್ ಸಿನಿಮಾ. ಚಿತ್ರದ ನಾಯಕಿ ಇಲ್ಲಿ ಹೀರೋನ ಲವರ್ ಅಲ್ಲ. ಯಾಕೆಂದ್ರೆ ಆಕೆ ವಿಲನ್. ಉಳಿದ ಇಬ್ಬರೂ ನಟಿಯರೂ ಎಸಿಪಿಯ "ಲವರ್"ಗಳಲ್ಲ.
ಕಲಾವಿದರ ನಟನೆ ಹೇಗಿದೆ?
ಚಿತ್ರ ಸಂಪೂರ್ಣವಾಗಿ ಸುದೀಪ್‌ಮಯ. ಸಂಪೂರ್ಣವಾಗಿ ಮಾಸ್ ವಿಲನ್‌ನಂತೆ ನಟಸಿದ್ದಾರೆ. ಕ್ರೈಮ್ ಇನ್‌ಸ್ಪೆಕ್ಟರ್ ರೂಪ ಪಾತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ನಟನೆಯೂ ಉತ್ತಮ. ಆದರೆ, ಇವರ ನಟನೆ ಸುದೀಪ್ ಮುಂದೆ ಮಂಕಾಗಿ ಕಾಣಿಸುತ್ತದೆ. ಸುದೀಪ್ ಟೀಮ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಉಗ್ರಂ ಮಂಜು, ಪೊಲೀಸ್ ಪಾತ್ರಗಳಲ್ಲಿ ಸಂಯುಕ್ತ ಹೊರನಾಡು, ಸುಕೃತಾ ವಾಗ್ಲೆ ಮತ್ತು ಇತರರು ಗಮನ ಸೆಳೆಯುತ್ತಾರೆ. ವಿಲನ್ ಪಾತ್ರದಲ್ಲಿ ಸುನಿಲ್ ನಟನೆ "ಭಯಾನಕ" ಎಂದು ಹೇಳುವಂತೆ ಇಲ್ಲ. ಅವರ ದೊಡ್ಡ ಮುಖದಲ್ಲಿ ಗಂಭೀರತೆ ಹೊರತುಪಡಿಸಿ ಬೇರೆ ಯಾವುದೇ ಭಾವನೆಗಳು, ಆಂಗಿಕ ಅಭಿನಯ ಅಷ್ಟಾಗಿ ಕಾಣಿಸುವುದೇ ಇಲ್ಲ.
ತಾಂತ್ರಿಕವಾಗಿ ಮ್ಯಾಕ್ಸ್ ಹೇಗಿದೆ?
ಮ್ಯಾಕ್ಸ್ ಆಕ್ಷನ್, ಥ್ರಿಲ್ಲರ್ ಸಿನಿಮಾವಾಗಿರುವುದರಿಂದ ಟೆಕ್ನಿಕಲ್ ಆಗಿ ಗಮನ ಸೆಳೆಯುತ್ತದೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಸುದೀಪ್ ಪ್ರತಿಭೆಯನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ನೂರಾರು ಜನರನ್ನು ಚೆಂಡಾಡುವ ದೃಶ್ಯಗಳಿದ್ದರೂ ಪ್ರೇಕ್ಷಕರ ಮನಸ್ಸಿಗೆ ರಕ್ತ ರಾಚದಂತೆ ಎಚ್ಚರ ವಹಿಸಿದ್ದಾರೆ. ಸಾಹಸ, ಥ್ರಿಲ್ಲರ್‌ಗೆ ತಕ್ಕಂತೆ ಅಜನೀಶ್ ಲೋಕನಾಥ್ ಸಂಗೀತವೂ ಮೋಡಿ ಮಾಡುತ್ತದೆ. ಬಿಜಿಎಂ ಭರ್ಜರಿಯಾಗಿಯೇ ಇದೆ. ಹಾಡುಗಳು ನೆನಪಿನಲ್ಲಿಟ್ಟುಕೊಳ್ಳುವಂತೆ ಇಲ್ಲದೆ ಇದ್ದರೂ ಓಕೆ ಎನ್ನುವಂತೆ ಇವೆ. ಈ ಸಸ್ಪೆನ್ಸ್ ಥ್ರಿಲ್ಲರ್‌ಗೆ ಹೆಚ್ಚು ಹಾಡು ತುರುಕದೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದುಕೊಳ್ಳಬಹುದು. ಈ ಚಿತ್ರ ವೇಗವಾಗಿ ಸಾಗುವಂತೆ ಮಾಡುವಲ್ಲಿ ಎಸ್. ಆರ್. ಗಣೇಶ್ ಬಾಬು ಸಂಕಲನವೂ ಸಾಥ್ ನೀಡಿದೆ ಎನ್ನಬಹುದು.
ಚಿತ್ರದಲ್ಲಿ ಅಲ್ಲಲ್ಲಿ ಕೆಲವೊಂದು ಟ್ವಿಸ್ಟ್‌ಗಳೂ ಇವೆ. ತನ್ನ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿ ಸುದೀಪ್ ಸಂಪೂರ್ಣವಾಗಿ ಆಕ್ಷನ್ ಮೋಡ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಕೊನೆಯವರೆಗೂ ಒಂದೇ ರೀತಿ ಕಾಣಿಸಿದ್ದಾರೆ. ಒಟ್ಟಾರೆ ಮ್ಯಾಕ್ಸ್ ಸಿನಿಮಾದಲ್ಲಿ ಮ್ಯಾಕ್ಸಿಮಮ್ ಫೈಟಿಂಗ್ ಇದೆ. ಮಿನಿಮಮ್ ಸೆಂಟಿಮೆಂಟ್ ಇದೆ. ಕಾಮಿಡಿ ಝೀರೋ ಇದೆ. "ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಿನಿಮಾ" ಬಯಸುವವರಿಗೆ ಮ್ಯಾಕ್ಸ್ ತುಸು ನಿರಾಸೆ ಮೂಡಿಸಬಹುದು. "ಫ್ಯಾನ್ಸ್ ಎಂಟರ್‌ಟೇನ್‌ಮೆಂಟ್ ಮೂವಿ" ಬಯಸುವವರಿಗೆ ಮ್ಯಾಕ್ಸ್ ಖುಷಿ ಕೊಡಬಹುದು.
ಸಿನಿಮಾ: ಮ್ಯಾಕ್ಸ್
ಜಾನರ್: ಆಕ್ಷನ್ ಥ್ರಿಲ್ಲರ್
ನಿರ್ದೇಶನ: ವಿಜಯ್ ಕಾರ್ತಿಕೇಯ
ನಿರ್ಮಾಣ: ಕಲೈಪ್ಪುಲಿ ಎಸ್. ಥಾನು
ಸಂಗೀತ: ಅಜನೀಶ್ ಲೋಕನಾಥ್
ಸಿನಿಮಾಟೋಗ್ರಾಫಿ: ಶೇಖರ್ ಚಂದ್ರ
ಸಂಕಲನ: ಎಸ್. ಆರ್. ಗಣೇಶ್ ಬಾಬು
ಸಿನಿಮಾದ ಅವಧಿ: 132 ನಿಮಿಷ
ತಾರಾಗಣ: ಸುದೀಪ್, ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ
ಎಚ್‌ಟಿ ಕನ್ನಡ ರೇಟಿಂಗ್: 3/5
ಸಿನಿಮಾ ವಿಮರ್ಶೆ: ಪ್ರವೀಣ್ ಚಂದ್ರ ಪುತ್ತೂರು