Raju James Bond: ರಾಜು ಜೇಮ್ಸ್ ಬಾಂಡ್ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮಿಂಚಿದ ಮೋಹಕ ತಾರೆ ರಮ್ಯಾ
ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಮತ್ತು ಗೃಹಸಚಿವ ಜಿ. ಪರಮೇಶ್ವರ್ ಈ ಪ್ರೀ ರಿಲೀಸ್ ಇವೆಂಟ್‌ಗೆ ಆಗಮಿಸಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ರಾಜು ಜೇಮ್ಸ್ ಬಾಂಡ್ ಚಿತ್ರವನ್ನು ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣ ಮಾಡಿದ್ದಾರೆ. ದೀಪಕ್ ಮಧುವನಹಳ್ಳಿ ಈ ಚಿತ್ರದ ನಿರ್ದೇಶಕರು.

Raju James Bond: ಫಸ್ಟ್ ರ‍್ಯಾಂಕ್ ರಾಜು ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಗುರುನಂದನ್, ಇದೀಗ ಅದೇ ರಾಜು ಹೆಸರನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಅಂದರೆ, ರಾಜು ಜೇಮ್ಸ್ ಬಾಂಡ್ ಸಿನಿಮಾ ಇನ್ನೇನು ಫೆ. 14ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಇತ್ತೀಚೆಗಷ್ಟೇ ಅಷ್ಟೇ ಅದ್ಧೂರಿಯಾಗಿ ನೆರವೇರಿತು.
ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಮತ್ತು ಗೃಹಸಚಿವ ಜಿ. ಪರಮೇಶ್ವರ್ ಈ ಪ್ರೀ ರಿಲೀಸ್ ಇವೆಂಟ್‌ಗೆ ಆಗಮಿಸಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ರಾಜು ಜೇಮ್ಸ್ ಬಾಂಡ್ ಚಿತ್ರವನ್ನು ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣ ಮಾಡಿದ್ದಾರೆ. ದೀಪಕ್ ಮಧುವನಹಳ್ಳಿ ಈ ಚಿತ್ರದ ನಿರ್ದೇಶಕರು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, "ರಾಜು ಜೇಮ್ಸ್ ಬಾಂಡ್" ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿದರೆ, ಚಿತ್ರ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳು ಇದೆ. ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಕೋರಿದರು.
ನಟಿ ರಮ್ಯಾ ಅವರಿಗೆ ಚಿತ್ರತಂಡ ವಿಶೇಷ ಉಡುಗೊರೆ ನೀಡಿ ಸ್ವಾಗತಿಸಿತು. ಚಿತ್ರದ ನಾಯಕಿ ಮೃದುಲಾ, ರಮ್ಯಾ ಅವರಿಗೆ ಬೆಳ್ಳಿ ಕ್ರೋನ್ ಹಾಕಿ ವೆಲ್‌ಕಮ್ ಮಾಡಿದರು. ಬಳಿಕ ಸಿನಿಮಾ ಬಗ್ಗೆ ಮಾತನಾಡಿದ ರಮ್ಯಾ, ಟ್ರೇಲರ್ ಹಾಗೂ ಹಾಡುಗಳು ತುಂಬಾ ಚೆನ್ನಾಗಿದೆ. ಛಾಯಾಗ್ರಹಣವಂತೂ ಸೂಪರ್. ಅಷ್ಟೇ ಚೆನ್ನಾಗಿ ನಾಯಕ ಹಾಗೂ ನಾಯಕಿ ಅಭಿನಯಿಸಿದ್ದಾರೆ. ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಬಂದಿರುವ ಸಚಿವರಿಗೆ, ರಮ್ಯ ಅವರಿಗೆ, ಆಗಮಿಸಿರುವ ಅತಿಥಿಗಳಿಗೆ ಹಾಗೂ ವಿಶೇಷವಾಗಿ ನಮ್ಮ ಚಿತ್ರತಂಡಕ್ಕೆ ತುಂಬು ಹೃದಯದ ಧನ್ಯವಾದ. ಈಗ ನಮಗೆ ಹೆರಿಗೆ ನೋವು ಶುರುವಾಗಿದೆ. ಫೆಬ್ರವರಿ 14 ಶುಕ್ರವಾರ ಹೆರಿಗೆ ಆಗಲಿದೆ. ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದರು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್.
ನಾನು ಸಿನಿಮಾ ಬಗ್ಗೆ ಈಗಾಗಲೇ ಎಲ್ಲಾ ಹೇಳಿ ಆಗಿದೆ. ಇನ್ನು ನಮ್ಮ ಚಿತ್ರವನ್ನು ಜನರ ಮಡಿಲಿಗೆ ಹಾಕುತ್ತಿದ್ದೇವೆ. ಅವರ ಅಭಿಪ್ರಾಯಕ್ಕೆ ಕಾಯುತ್ತಿದ್ದೇವೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.
ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ "ರಾಜು ಜೇಮ್ಸ್ ಬಾಂಡ್" ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ನಾಯಕಿ ತಪಸ್ವಿನಿ ಶರ್ಮ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
