ʻಅವನಿರಬೇಕಿತ್ತುʼ ಸಿನಿಮಾ ವಿಮರ್ಶೆ: ಇದು ಆನ್‌ಲೈನ್‌ ವಂಚನೆಯ ಹೊಸ ತಳಿ!
ಕನ್ನಡ ಸುದ್ದಿ  /  ಮನರಂಜನೆ  /  ʻಅವನಿರಬೇಕಿತ್ತುʼ ಸಿನಿಮಾ ವಿಮರ್ಶೆ: ಇದು ಆನ್‌ಲೈನ್‌ ವಂಚನೆಯ ಹೊಸ ತಳಿ!

ʻಅವನಿರಬೇಕಿತ್ತುʼ ಸಿನಿಮಾ ವಿಮರ್ಶೆ: ಇದು ಆನ್‌ಲೈನ್‌ ವಂಚನೆಯ ಹೊಸ ತಳಿ!

ಐಡೆಂಟಿಟಿ ಥೆಫ್ಟ್ ಮತ್ತು ಮಿಸ್ಟರಿ ಶಾಪಿಂಗ್‌ ಎಂಬ ಎರಡು ಹೊಸ ವಂಚನೆಯನ್ನೂ ಈ ಸಿನಿಮಾ ಮೂಲಕ ಪರಿಚಯಿಸಿ ನೋಡುಗರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಅಂದಹಾಗೆ, ಇದು ನಿರ್ದೇಶಕ ಅಶೋಕ್‌ ಸಾಮ್ರಾಟ್‌ ಅವರ ಜೀವನದಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ.

ಅವನಿರಬೇಕಿತ್ತು ಸಿನಿಮಾ ವಿಮರ್ಶೆ: ಇದು ಆನ್‌ಲೈನ್‌ ವಂಚನೆಯ ಹೊಸ ತಳಿ
ಅವನಿರಬೇಕಿತ್ತು ಸಿನಿಮಾ ವಿಮರ್ಶೆ: ಇದು ಆನ್‌ಲೈನ್‌ ವಂಚನೆಯ ಹೊಸ ತಳಿ

ವಂಚನೆ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಬೆಳ್ಳಿತೆರೆ ಮೇಲೆ ಮೂಡಿಬಂದ ಉದಾಹರಣೆಗಳಿವೆ. ಕೆಲವೊಂದಿಷ್ಟು ನೈಜ ಘಟನೆಗಳನ್ನೇ ಆಧರಿಸಿ ನೋಡುಗರನ್ನು ಕುತೂಹಲಕ್ಕೆ ದೂಡಿದ್ದೂ ಉಂಟು. ಇದೀಗ ಅಂಥದ್ದೇ ಫ್ರಾಡ್‌ ಕಥೆಯೊಂದರ ಜಾಡಿನಲ್ಲಿ ಮೂಡಿಬಂದಿದೆ ʻಅವನಿರಬೇಕಿತ್ತುʼ ಅನ್ನೋ ಸಿನಿಮಾ. ಅಶೋಕ್‌ ಸಾಮ್ರಾಟ್‌ ಎಂಬ ಯುವ ನಿರ್ದೇಶಕ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಶುಕ್ರವಾರ (ಜೂ 28) ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೀಗಿದೆ ಈ ಚಿತ್ರದ ವಿಮರ್ಶೆ.

ಕಾಲಘಟ್ಟ ಬದಲಾದಂತೆ, ಮನುಷ್ಯ ತನ್ನ ಕೆಲಸವನ್ನು ಸಲೀಸು ಮಾಡಿಕೊಳ್ಳಲು ತಂತ್ರಜ್ಞಾನದ ಮೂಲಕ ಸಾಕಷ್ಟು ಆವಿಷ್ಕಾರಗಳಿಗೆ ನಾಂದಿ ಹಾಡಿದ್ದಾನೆ. ಅದರಲ್ಲೂ ಆನ್‌ಲೈನ್‌ ವ್ಯವಹಾರ ಸದ್ಯ ಈ ಜಗತ್ತಿನ್ನು ಆಳುತ್ತಿದೆ. ಎಲ್ಲವೂ ಡಿಜಿಟಲೀಕರಣವಾಗಿದೆ. ಅದೇ ರೀತಿ ಟೆಕ್ನಾಲಜಿ ಬೆಳದಂತೆ, ಮೋಸದ ಜಾಲವೂ ಅದೇ ಆನ್‌ಲೈನ್‌ನಲ್ಲಿ ಹುಟ್ಟಿಕೊಂಡಿದೆ. ಬಲೆಗೆ ಬಿದ್ದಿದ್ದೇ ತಡ ಲಕ್ಷ ಲಕ್ಷ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಮಂಗಮಾಯವಾದ ಉದಾಹರಣೆಗಳೂ ಇವೆ. ಈ ಆಧುನಿಕ ಯುಗದ ವಂಚನೆಯ ಸುತ್ತ ಹೆಣೆದ ಕಥೆಯೇ ʻಅವನಿರಬೇಕಿತ್ತುʼ ಸಿನಿಮಾ.

ಭವ್ಯಾ (ಸೌಮ್ಯ) ಮತ್ತು ದೇವ್‌ (ಭರತ್) ಎಂಬ ಜೋಡಿಯೇ ಈ ʻಅವನಿರಬೇಕಿತ್ತುʼ ಚಿತ್ರದ ಮುಖ್ಯ ಪಾತ್ರಧಾರಿಗಳು. ಯಾವುದೋ ಒಂದು ಕಾರಣಕ್ಕೆ ಭವ್ಯಾಳನ್ನು ಕಿಡ್ನಾಪ್‌ ಮಾಡುತ್ತಾನೆ ದೇವ್‌. ಅದಾದ ಮೇಲೆ ಇಬ್ಬರ ಹೆಸರು, ಹುಟ್ಟಿದ ದಿನಾಂಕ ಮಾತ್ರವಲ್ಲದೆ, ತಂದೆಯ ಹೆಸರೂ ಒಂದೇ ಆಗಿರುವುದರಿಂದ ಅದನ್ನೇ ಎನ್‌ʻಕ್ಯಾಶ್‌ʼ ಮಾಡಿಕೊಳ್ಳಬೇಕೆಂದು ಕೆಲವರು ಮಸಲತ್ತು ಮಾಡುತ್ತಾರೆ. ಅಲ್ಲಿಂದ ಕಥೆಯ ವೇಗ ಹೆಚ್ಚುತ್ತದೆ. ಮುಂದೇನು ಅನ್ನೋದನ್ನು ಚಿತ್ರಮಂದಿರಗಳಲ್ಲಿಯೇ ನೋಡಬೇಕು.

ಅಂದಹಾಗೆ, ಇದು ನಿರ್ದೇಶಕ ಅಶೋಕ್‌ ಸಾಮ್ರಾಟ್‌ ಅವರ ನಿಜ ಜೀವನದಲ್ಲಿ ನಡೆದ ಒಂದು ಘಟನೆ ಆಧರಿಸಿದ ಸಿನಿಮಾ. ಐಡೆಂಟಿಟಿ ಥೆಫ್ಟ್ ಮತ್ತು ಮಿಸ್ಟರಿ ಶಾಪಿಂಗ್‌ ಎಂಬ ಎರಡು ಹೊಸ ವಂಚನೆಯನ್ನೂ ಈ ಸಿನಿಮಾ ಮೂಲಕ ಪರಿಚಯಿಸಿ ನೋಡುಗರನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ʻಅವನಿರಬೇಕಿತ್ತುʼ ಅಶೋಕ್‌ ಅವರ ಚೊಚ್ಚಲ ಚಿತ್ರವೂ ಆಗಿರುವುದರಿಂದ ಕೊಂಚ ಗಲಿಬಿಲಿ ಆದಂತಿದೆ. ಪ್ರೇಕ್ಷಕನನ್ನು ಗೊಂದಲಕ್ಕೀಡು ಮಾಡಬೇಕು ಅನ್ನೋ ಉದ್ದೇಶಕ್ಕೋ, ತಾಳ್ಮೆ ಪರೀಕ್ಷಿಸಲೋ ಏನೋ ಭೂತ ವರ್ತಮಾನದಲ್ಲಿ ಆಟವಾಡಿದ್ದಾರೆ. ಕೊನೆಯ ಕ್ಲೈಮ್ಯಾಕ್ಸ್‌ನಲ್ಲಿ ಅದೆಲ್ಲದಕ್ಕೂ ಉತ್ತರವನ್ನೂ ನೀಡಿದ್ದಾರೆ.

ಇನ್ನುಳಿದಂತೆ ಹಾಡುಗಳು, ಹಿನ್ನೆಲೆ ಸಂಗೀತ ಚಿತ್ರದ ಕಥೆಗೆ ಪೂರಕವಾಗಿದೆ. ಟ್ಯೂನ್‌ ಮಾಡಿದ ಲೋಕಿ ತವಸ್ಯ ಮೆಚ್ಚುಗೆ ಪಡೆಯುತ್ತಾರೆ. ದೇವರಾಜ್‌ ಪೂಜಾರಿ ಅವರ ಛಾಯಾಗ್ರಹಣಕ್ಕೂ ಪೂರ್ಣಾಂಕ ಸಲ್ಲಲೇಬೇಕು. ನಿರ್ದೇಶಕರೇ ಈ ಚಿತ್ರದ ಸಂಕಲನಕಾರರೂ ಆಗಿದ್ದು, ದೃಶ್ಯಗಳನ್ನು ಇನ್ನಷ್ಟು ಶಾರ್ಪ್‌ ಮಾಡಬಹುದಿತ್ತು. ಭರತ್‌ ಮತ್ತು ಸೌಮ್ಯ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎಂ.ಎನ್. ಲಕ್ಷ್ಮೀದೇವಿ, ಪ್ರಶಾಂತ್‍ ಸಿದ್ದಿ, ಕಿರಣ್ ನಾಯ್ಕ್ ಅಚ್ಚುಕಟ್ಟು ನಟನೆ ಒಪ್ಪಿಸಿದ್ದಾರೆ.

ಚಿತ್ರ: ಅವನಿರಬೇಕಿತ್ತು

ನಿರ್ದೇಶನ: ಅಶೋಕ್‍ ಸಾಮ್ರಾಟ್‍

ನಿರ್ಮಾಣ: ಮುರಳಿ ಬಿ.ಟಿ

ತಾರಾಗಣ: ಭರತ್‍, ಸೌಮ್ಯ ಜಾನ್‍, ಕಿರಣ್‍ ನಾಯ್ಕ್, ಪ್ರಶಾಂತ್ ಸಿದ್ದಿ ಮುಂತಾದವರು