Rudra Garuda Purana Review: ಪುರಾಣದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಹೋರಾಟ; ರುದ್ರ ಗರುಡ ಪುರಾಣ ಸಿನಿಮಾ ವಿಮರ್ಶೆ
Rudra Garuda Purana Review: ‘ರುದ್ರ ಗರುಡ ಪುರಾಣ’ ಒಂದು ಮಿಸ್ಟ್ರಿ ಚಿತ್ರ. ಬರೀ ಮಿಸ್ಟ್ರಿ ಅಷ್ಟೇ ಅಲ್ಲ, ಹಾರರ್ ಅಂಶಗಳಿರುವ ಥ್ರಿಲ್ಲರ್ ಚಿತ್ರ. ಮೊದಲೇ ಹೇಳಿದಂತೆ ಕಥೆಗೆ ಗರುಡ ಪುರಾಣದ ಹಿನ್ನೆಲೆ ಇದೆ. ಇವೆಲ್ಲವನ್ನೂ ಸೇರಿಸಿ ಒಂದು ಥ್ರಿಲ್ಲರ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದೀಶ್. ಇಲ್ಲಿದೆ ಸಿನಿಮಾ ವಿಮರ್ಶೆ.

Rudra Garuda Purana Review: 18 ಮಹಾಪುರಾಣಗಳ ಪೈಕಿ ಗರುಡ ಪುರಾಣ ಸಹ ಒಂದು. ಗರುಡ ಪುರಾಣ ಎಂಬ ಹೆಸರು ಕೇಳುತ್ತಿದ್ದಂತೆಯೇ, ಚಿತ್ರ ಏನಿರಬಹುದು ಎಂಬ ಅಂದಾಜು ಪ್ರೇಕ್ಷಕರಿಗೆ ಸಿಗುತ್ತದೆ. ಅದಕ್ಕೆ ಕಾರಣ, ಈ ಹಿಂದೆ ಗರುಡ ಪುರಾಣವನ್ನು ಹಿನ್ನೆಲೆಯಾಗಿಟ್ಟುಕೊಂಡು ತಮಿಳಿನ ‘ಅನ್ನಿಯನ್’ ಸೇರಿದಂತೆ ಕೆಲವು ಚಿತ್ರಗಳು ಬಂದಿವೆ. ಇದು ಆ ತರಹದ ಚಿತ್ರವೇ. ಆದರೆ, ಇದು ಬರೀ ಗರುಡ ಪುರಾಣವಷ್ಟೇ ಅಲ್ಲ, ‘ರಿಷಿ ಗರುಡ ಪುರಾಣ’. ಇಲ್ಲಿ ರಿಷಿ ಎಂಬ ಪೊಲೀಸ್ ಅಧಿಕಾರಿ, ಗರುಡ ಪುರಾಣವನ್ನು ಇಟ್ಟುಕೊಂಡು ಏನೆಲ್ಲಾ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ.
‘ರುದ್ರ ಗರುಡ ಪುರಾಣ’ ಚಿತ್ರದ ಕಥೆ ಏನು?
ರುದ್ರ (ರಿಷಿ) ಎಂಬ ಖಡಕ್ ಪೊಲೀಸ್ ಅಧಿಕಾರಿಗೆ ರೇಪಿಸ್ಟ್ ಒಬ್ಬನನ್ನು ಎನ್‍ಕೌಂಟರ್ ಮಾಡಿದ್ದಕ್ಕೆ ಶಿಕ್ಷೆಯಾಗಿ, ಪೊಲೀಸ್ ಬ್ಯಾಂಡ್‍ಗೆ ವರ್ಗಾವಣೆ ಮಾಡಲಾಗುತ್ತದೆ. ಮಾಡುವುದಕ್ಕೆ ಸೂಕ್ತವಾದ ಕೆಲಸವಿಲ್ಲದೆ ಒದ್ದಾಡುವ ರಿಷಿಗೆ, ಒಂದು ಜವಾಬ್ದಾರಿಯನ್ನು ವಹಿಸುತ್ತಾರೆ ಅವನ ಮೇಲಧಿಕಾರಿ. ಸಚಿವ ದೇವಿ ಶೆಟ್ಟಿಯ (ವಿನೋದ್ ಆಳ್ವ) ಮಗ ನಿಗೂಢವಾಗಿ ನಾಪತ್ತೆಯಾಗಿದ್ದು, ಆತನನ್ನು ಹುಡುಕುವ ಕೆಲಸವನ್ನು ಅವನ ಮೇಲೆ ಹೊರಿಸಲಾಗುತ್ತದೆ. ನಾಪತ್ತೆಯಾದ ಯುವಕ ಹೋಗಿದ್ದೆಲ್ಲಿಗೆ? ಈ ಕೇಸಿನಲ್ಲಿ ರಿಷಿ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದು ಚಿತ್ರದ ಕಥೆ.
ಪ್ರೇಕ್ಷಕರ ತಲೆಗೂ ಹುಳ ಬಿಡುವ ನಂದೀಶ್
‘ರುದ್ರ ಗರುಡ ಪುರಾಣ’ ಒಂದು ಮಿಸ್ಟ್ರಿ ಚಿತ್ರ. ಬರೀ ಮಿಸ್ಟ್ರಿ ಅಷ್ಟೇ ಅಲ್ಲ, ಹಾರರ್ ಅಂಶಗಳಿರುವ ಥ್ರಿಲ್ಲರ್ ಚಿತ್ರ. ಮೊದಲೇ ಹೇಳಿದಂತೆ ಕಥೆಗೆ ಗರುಡ ಪುರಾಣದ ಹಿನ್ನೆಲೆ ಇದೆ. ಇವೆಲ್ಲವನ್ನೂ ಸೇರಿಸಿ ಒಂದು ಥ್ರಿಲ್ಲರ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದೀಶ್. ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕ ನಂದೀಶ್ ಸಾಕಷ್ಟು ತಲೆ ಓಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರೇಕ್ಷಕರ ತಲೆಗೂ ಹುಳ ಬಿಡುತ್ತಾರೆ. 10 ನಿಮಿಷಗಳಿಗೊಮ್ಮೆ ಅವರು ಚಿತ್ರಕ್ಕೆ ಹೊಸಹೊಸ ಟ್ವಿಸ್ಟ್‌ಗಳನ್ನು ಕೊಡುತ್ತಾ ಹೋಗುತ್ತಾರೆ. ಇದು ಥ್ರಿಲ್ಲರ್ ಚಿತ್ರವೋ, ಹಾರರ್ ಚಿತ್ರವೋ, ಅತಿಮಾನುಷ ಶಕ್ತಿಗಳ ಕುರಿತಾದ ಚಿತ್ರವೋ … ಎಂದು ತಲೆ ಕೆರೆದುಕೊಳ್ಳುವಂತೆ ಮಾಡುತ್ತಾರೆ. ಒಟ್ಟಾರೆ ಇದೊಂದು ಮೈಂಡ್ ಗೇಮ್ ಚಿತ್ರ. ಮೊದಲಾರ್ಧ ಚಿತ್ರ ನಿಧಾನವಾಗಿದೆಯಾದರೂ, ದ್ವಿತೀಯಾರ್ಧದಲ್ಲಿ ವೇಗ ಪಡೆದುಕೊಳ್ಳುತ್ತದೆ. ಕೊನೆಗೆ ಹೀಗೂ ಆಗಬಹುದಾ? ಎಂದು ಆಶ್ಚರ್ಯಪಡುವಂತೆ ಮಾಡುತ್ತಾರೆ. ಕೆಲವು ವಿಷಯಗಳು ನಂಬುವದಕ್ಕೆ ಕಷ್ಟವಾದರೂ, ಚಿತ್ರದ ವೇಗ ಅವೆಲ್ಲವನ್ನೂ ಮರೆಸಿಬಿಡುತ್ತದೆ.
ಚಿತ್ರವನ್ನು ಮುನ್ನಡೆಸುವ ರಿಷಿ
ಚಿತ್ರ ಮುಖ್ಯವಾಗಿ ನಿಂತಿರುವುದು ನಾಯಕ ರಿಷಿ ಹೆಗಲ ಮೇಲೆ. ‘ಕವಲುದಾರಿ’ ಚಿತ್ರದಲ್ಲೂ ಪೊಲೀಸ್ ಅಧಿಕಾರಿ ಮತ್ತು ಒಂದು ಘಟನೆಯ ಕುರಿತಾದ ತನಿಖೆ ಇತ್ತು. ಇಲ್ಲೂ ಅದೇ ಮರುಕಳಿಸಿದೆ. ಅಲ್ಲಿ ಗಂಭೀರವಾಗಿದ್ದ ರಿಷಿ, ಈ ಚಿತ್ರದಲ್ಲಿ ಹಲವು ಅವತಾರಗಳನ್ನು ಎತ್ತಿದ್ದಾರೆ. ಇಡೀ ಚಿತ್ರವನ್ನು ಆವರಿಸಿಕೊಳ್ಳುವ ಅವರು, ತಮ್ಮ ಅಭಿನಯದಿಂದ ಗಮನಸೆಳೆಯುತ್ತಾರೆ. ನಾಯಕಿ ಪ್ರಿಯಾಂಕಾ ಕುಮಾರ್‌ಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ಹಿರಿಯ ನಟರಾದ ಅವಿನಾಶ್, ವಿನೋದ್ ಆಳ್ವ, ‘ಸಿದ್ಲಿಂಗು’ ಶ್ರೀಧರ್, ಅಶ್ವಿನಿ ಗೌಡ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಿವರಾಜ್ ಕೆ.ಆರ್. ಪೇಟೆ ನಗಿಸಬಹುದು ಎಂದು ಬಂದವರಿಗೆ ಬೇಸರವಾಗಬಹುದು. ಆ ಕೆಲಸವನ್ನು ಗಿರಿ ಶಿವಣ್ಣ ಮಾಡುತ್ತಾರೆ. ಕೆಪಿ ಹಿನ್ನೆಲೆ ಸಂಗೀತ ಮತ್ತು ಸಂದೀಪ್ ಕುಮಾರ್ ಛಾಯಾಗ್ರಹಣ ಪೂರಕವಾಗಿದೆ.
ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರಗಳು ಕಡಿಮೆಯೇ. ‘ರುದ್ರ ಗರುಡ ಪುರಾಣ’ ಕಥೆ ಸೆಳೆದರೂ, ಇನ್ನಷ್ಟು ಬಿಗಿಯಾದ ನಿರೂಪಣೆ ಇದ್ದಿದ್ದರೆ, ಚಿತ್ರ ಇನ್ನಷ್ಟು ಪರಿಣಾಮಕಾರಿಗಿರುತ್ತಿತ್ತು. ಆದರೂ, ಥ್ರಿಲ್ಲರ್ ಮತ್ತು ಮಿಸ್ಟ್ರಿ ಚಿತ್ರಗಳನ್ನು ಇಷ್ಟಪಡುವವರಿಗೆ ‘ರುದ್ರ ಗರುಡ ಪುರಾಣ’ ಖುಷಿಯಾಗಬಹುದು.
ಸಿನಿಮಾ: ರುದ್ರ ಗರುಡ ಪುರಾಣ
ಜಾನರ್: ಕ್ರೈಮ್ ಥ್ರಿಲ್ಲರ್
ನಿರ್ದೇಶನ: ನಂದೀಶ್
ನಿರ್ಮಾಣ: ಅಶ್ವಿನಿ ಲೋಹಿತ್
ಸಂಗೀತ: ಕೆ.ಪಿ
ಛಾಯಾಗ್ರಹಣ: ಸಂದೀಪ್ ಕುಮಾರ್
ಸಿನಿಮಾದ ಅವಧಿ: 142.36 ನಿಮಿಷ
ಎಚ್‍ಟಿ ಕನ್ನಡ ರೇಟಿಂಗ್: 3/5
ವಿಮರ್ಶೆ: ಚೇತನ್ ನಾಡಿಗೇರ್
