Out of Syllabus Review: ಬದುಕಿಗೂ ಬೋಧನೆ ಬೇಕು, ಆದರದು ಬೋಧನೆಯಂತಿರಬಾರದು; ಔಟ್ ಆಫ್ ಸಿಲಬಸ್ ಸಿನಿಮಾ ವಿಮರ್ಶೆ
ಔಟ್ ಆಫ್ ಸಿಲಬಸ್ ಸಿನಿಮಾ ವಿಮರ್ಶೆ: ಪಠ್ಯ ಪುಸ್ತಕದಲ್ಲಿ ಇರುವುದೆಲ್ಲವೂ ಜೀವನಕ್ಕೆ ಉಪಯುಕ್ತವಾ? ಓದಿದ್ದಕ್ಕೂ ಪ್ರಸ್ತುತ ಜೀವನಕ್ಕೂ ನಂಟಿದೆಯೇ? ಎಂಬ ವಿಚಾರಗಳನ್ನು ಪ್ರೇಮಕಥೆಯೊಂದರ ಚುಂಗು ಹಿಡಿದು ಔಟ್ ಆಫ್ ಸಿಲಬಸ್ ಸಿನಿಮಾದಲ್ಲಿ ಹೇಳಿ ಮುಗಿಸಿದ್ದಾರೆ ನಿರ್ದೇಶಕ ಪ್ರದೀಪ್ ದೊಡ್ಡಯ್ಯ.
Out of Syllabus Review: ಔಟ್ ಆಫ್ ಸಿಲಬಸ್.. ಶೀರ್ಷಿಕೆಯೇ ಹೇಳುವಂತೆ ಇದೊಂದು ಕಾಲೇಜು ಜೀವನದ ಕಥೆ ಮಾತ್ರವಲ್ಲ, ಬದುಕು ಮತ್ತು ಮದುವೆ ಹಿನ್ನೆಲೆಯಲ್ಲಿಯೂ ತೆರೆದುಕೊಳ್ಳುವ ಕಹಾನಿ. ಚಂದನವನದಲ್ಲಿ ಇಂಥ ಕ್ಯಾಂಪಸ್ ಕಥೆಗಳು ಈಗಾಗಲೇ ಬಂದಿವೆ. ಇಷ್ಟಿದ್ದರೂ, ಕಾಲೇಜು ಕಥೆಗಳಿಗೆ ಸಿನಿಮಾ ಪರದೆ ಮೇಲೆ ಸಾವಿಲ್ಲ. ಈಗ ಇಂಥದ್ದೇ ಯುವಪೀಳಿಗೆಯ ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ಪ್ರದೀಪ್ ದೊಡ್ಡಯ್ಯ. ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಸದ್ದಿಲ್ಲದೆ ಶುಕ್ರವಾರ (ಡಿ. 27) ಈ ಸಿನಿಮಾ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಹೀಗಿದೆ ಈ ಸಿನಿಮಾ ವಿಮರ್ಶೆ.
ಏನಿದು ಕಥೆ?
ಪ್ರದೀಪ್ ದೊಡ್ಡಯ್ಯ ಸೋಷಿಯಲ್ ಮೀಡಿಯಾದಲ್ಲಿ ಮೋಟಿವೇಷನಲ್ ವಿಡಿಯೋಗಳ ಮೂಲಕವೇ ಹೆಚ್ಚು ಆಪ್ತರಾದವರು. ಸಾಕಷ್ಟು ವೇದಿಕೆ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆಗೆ ಸ್ಫೂರ್ತಿ ತುಂಬುವ ಕೆಲಸವೂ ಇವರಿಂದಾಗಿದೆ. ಹೀಗಿರುವ ಇದೇ ಪ್ರದೀಪ್ ದೊಡ್ಡಯ್ಯ, ತಮ್ಮ ಔಟ್ ಆಫ್ ಸಿಲಬಸ್ ಮೂಲಕ ಈ ಸಿನಿಮಾದಲ್ಲಿ ಏನನ್ನು ಹೇಳಿರಬಹುದು? ಮಗದೊಮ್ಮೆ ಮೋಟಿವೇಟ್ ಮಾಡಿದ್ದಾರೆ. ಪ್ರೀತಿಯಲ್ಲಿ ಧುತ್ತೆಂದು ಎದುರಾಗುವುದು ಅನುಮಾನ! ಆ ಅನುಮಾನವನ್ನು ಇನ್ನಿಲ್ಲದಂತೆ ಮಾಡುವುದು ಹೇಗೆ? ಕಾಲೇಜು ತರಲೆ, ಪ್ರೀತಿಯ ಬಳಿಕ ಬದುಕಿನ ಪುಟ ತೆರೆದಾಗ ಎದುರಾಗೋ ಸಮಸ್ಯೆಗಳನ್ನೂ ಈ ಸಿನಿಮಾ ಮೂಲಕ ಟಚ್ ಮಾಡಿದ್ದಾರೆ.
ಕಾಲೇಜೆಂದರೆ ಎಲ್ಲರ ಕಣ್ಣರಳುತ್ತವೆ. ಅಂದಿನ ನೆನಪುಗಳು ಕಣ್ಣಮುಂದೆ ಬಂದು ನಲಿಯುತ್ತವೆ. ಮೊದಲ ಕ್ರಷ್, ಮೊದಲ ಪ್ರೀತಿ, ಸ್ನೇಹಿತರ ಬಳಗ.. ಹೀಗೆ ಎಲ್ಲವೂ ಅರೇ ಕ್ಷಣ ಮನದಾಳಕ್ಕೆ ಹೊಕ್ಕು ಹಳೇ ದಿನಗಳಿಗೆ ಜಾರಿಸುತ್ತವೆ. ಇದೇ ಕಥೆಗೆ ಹೊಸ ಸಿಲಬಸ್ ಸೇರಿಸಿದ್ದಾರೆ ನಿರ್ದೇಶಕ ಪ್ರದೀಪ್ ದೊಡ್ಡಯ್ಯ. ಪಠ್ಯ ಪುಸ್ತಕಕ್ಕೂ ಜೀವನಕ್ಕೂ ಇರುವ ವ್ಯತ್ಯಾಸವೇನು? ಕಾಲೇಜಿನಲ್ಲಿ ಓದಿದ್ದು ಜೀವನಕ್ಕೆ ಎಷ್ಟು ಉಪಯೋಗ? ಕಾಲೇಜ್ ಅನ್ನೋ ಕಲರ್‌ಫುಲ್ ದಿನಗಳ ಜತೆಗೆ ಬದುಕಿಗೂ ಬೇಕಿರುವ ಒಂದಷ್ಟು ಬೋಧನೆ ಈ ಔಟ್ ಆಫ್ ಸಿಲಬಸ್ ಚಿತ್ರದಲ್ಲಾಗಿದೆ.
ಯುವಪೀಳಿಗೆಗೆ ಬದುಕಿನ ಪಾಠ
ಬದುಕಿಗೂ ಬೋಧನೆ ಬೇಕು. ಆದರೆ ಅದು ಬೋಧನೆಯಂತಿರಬಾರದು. ಈ ಮಾತನ್ನೇ ಚೆನ್ನಾಗಿ ಅರಿತ ನಿರ್ದೇಶಕ ಪ್ರದೀಪ್ ದೊಡ್ಡಯ್ಯ, ಔಟ್ ಆಫ್ ಸಿಲಬಸ್ ಸಿನಿಮಾ ಹೊರತಂದಿದ್ದಾರೆ. ಪಠ್ಯ ಪುಸ್ತಕದಲ್ಲಿ ಇರುವುದೆಲ್ಲವೂ ಜೀವನಕ್ಕೆ ಉಪಯುಕ್ತವಾ? ಓದಿದ್ದಕ್ಕೂ ಪ್ರಸ್ತುತ ಜೀವನಕ್ಕೂ ನಂಟಿದೆಯೇ? ಎಂಬ ವಿಚಾರಗಳನ್ನು ಪ್ರೇಮಕಥೆಯೊಂದರ ಚುಂಗು ಹಿಡಿದುಕೊಂಡು ಈ ಸಿನಿಮಾದಲ್ಲಿ ಹೇಳಿ ಮುಗಿಸಿದ್ದಾರೆ. ಇಂದಿನ ಪೀಳಿಗೆಯ ಮನಸ್ಸಿನಲ್ಲಿನ ದುಗುಡ, ದುಮ್ಮಾನಗಳಿಗೂ ಪ್ರದೀಪ್ ದೊಡ್ಡಯ್ಯ ಈ ಸಿನಿಮಾ ಮೂಲಕ ಉತ್ತರ ನೀಡಿದ್ದಾರೆ.
ಫನ್ ಆಗಿಯೇ ತೆರೆದುಕೊಳ್ಳುವ ಕಥೆಯ ಮೊದಲಾರ್ಧದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಕಲರವ. ಆರಂಭದಲ್ಲಿ ಸಿನಿಮಾ ಟೇಕಾಫ್ ತೆಗೆದುಕೊಳ್ಳುವಾಗಷ್ಟೇ ನೋಡುಗ ಕೊಂಚ ವಿಚಲಿತನಾಗುತ್ತಾನೆ. ಆದರೆ, ಎರಡನೇ ಭಾಗದಷ್ಟೊತ್ತಿಗೆ, ತಮ್ಮ ಜೀವನವನ್ನೇ ತೆರೆಮೇಲೆ ನೋಡಿದ ಭಾವ ಕಾಡುತ್ತದೆ. ಕ್ಲೈಮ್ಯಾಕ್ಸ್ ಸನಿಹ ಬಂದಂತೆ, ಪ್ರೇಕ್ಷಕನನ್ನೂ ಚಿಂತೆಯತ್ತ ದೂಡುತ್ತದೆ. ಗಟ್ಟಿ ವಿಚಾರಗಳನ್ನು ಪ್ರೇಕ್ಷಕನೆಡೆಗೆ ದಾಟಿಸುವ ಕೆಲಸವನ್ನು ಚೊಚ್ಚಲ ನಿರ್ದೇಶನದಲ್ಲಿಯೇ ಮಾಡಿದ್ದಾರೆ ಪ್ರದೀಪ್.
ಔಟ್ ಆಫ್ ಸಿಲಬಸ್ ಆದರೂ ಇಲ್ಲಿ ಹೆಚ್ಚಾನೆಚ್ಚು ಕಥೆ ಸಾಗುವುದು ಕ್ಯಾಂಪಸ್‌ನಲ್ಲೇ. ಪ್ರಾಧ್ಯಾಪಕರಾಗಿ ಯೋಗರಾಜ್ ಭಟ್ ನಗಿಸುವುದರ ಜತೆಗೆ ಜೀವನ ಬೋಧನೆಯನ್ನೂ ಅವರ ಬಾಯಿಂದ ಹೊರಡಿಸಿದ್ದಾರೆ. ಸಿಲಬಸ್‌ನಲ್ಲಿ ಇಲ್ಲದನ್ನೂ ಒಳ್ಳೊಳ್ಳೆ ಸಂಭಾಷಣೆಗಳ ಮೂಲಕ ಹೇಳಿಸಿದ್ದಾರೆ. ಅಚ್ಯುತ್ ಕುಮಾರ್ ಪಾತ್ರವೂ ಇಲ್ಲಿ ಒಂದು ರೀತಿ ಸ್ಟ್ರೇಸ್ ಬಸ್ಟರ್. ಪ್ರಿನ್ಸಿಪಾಲ್ ಅಸಿಸ್ಟಂಟ್ ಪಾತ್ರದಲ್ಲಿ ಎದುರಾಗುವ ಮಹಾಂತೇಶ್ ಹಿರೇಮಠ ಮತ್ತು ಜಹಾಂಗೀರ್ ನಗುವಿನ ಉಸ್ತುವಾರಿಗಳು. ಸಿಕ್ಕ ಅವಕಾಶದಲ್ಲಿ ಒಳ್ಳೆಯ ಕಾಮಿಡಿ ಸಂದಾಯವಾಗಿದೆ. ನಾಯಕಿಯಾಗಿರುವ ಹೃತಿಕಾ ಶ್ರೀನಿವಾಸ್ ಸಿಕ್ಕ ಪಾತ್ರದಲ್ಲಿ ಲವಲವಿಕೆಯಿಂದ ಕಾಣಿಸಿದ್ದಾರೆ.
ಔಟ್ ಆಫ್ ಸಿಲಬಸ್ ಸಿನಿಮಾ ಕುರಿತ ಮಾಹಿತಿ
ಚಿತ್ರ: ಔಟ್ ಆಫ್ ಸಿಲಬಸ್
ನಿರ್ಮಾಣ: ತನುಶ್ ಎಸ್.ವಿ. ದೇಸಾಯಿ ಗೌಡ, ಕೆ. ವಿಜಯಕಲಾ ಸುಧಾಕರ್
ನಿರ್ದೇಶನ: ಪ್ರದೀಪ್ ದೊಡ್ಡಯ್ಯ
ಪಾತ್ರವರ್ಗ: ಪ್ರದೀಪ್ ದೊಡ್ಡಯ್ಯ, ಹೃತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಮಹಂತೇಶ್ ಹಿರೇಮಠ, ಜಹಾಂಗೀರ್ ಇತರರು
ಛಾಯಾಗ್ರಹಣ: ದೇವ್ ವಡ್ಡೆ
ಸಂಗೀತ: ಶ್ರೀಹರಿ ಪ್ರೇಮ್ ಭರತ್, ಪ್ರಜ್ವಲ್ ಎನ್, ಗಿರೀಶ್ ಹೋತೂರ್, ಡಿ.ಶ್ರೀನಿವಾಸ್ ಆಚಾರ್, ಜೋಶುವಾ ಶ್ರೀಧರ್
ಸ್ಟಾರ್: 3/5
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.