Friday Movies: ಈ ಶುಭ ಶುಕ್ರವಾರ ತೆರೆಗೆ ಬರುತ್ತಿರುವ ಸಿನಿಮಾಗಳ ವಿವರ ಹೀಗಿದೆ
ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಮೂರು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ಪೈಕಿ ನವೀನ್ ಶಂಕರ್ ಅವರ ಕ್ಷೇತ್ರಪತಿ ಚಿತ್ರ, ಶಾನ್ವಿ ಶ್ರೀವಾಸ್ತವ, ರಘು ದೀಕ್ಷಿತ್ ಮುಖ್ಯಭೂಮಿಕೆ ನಿಭಾಯಿಸಿರುವ ಬ್ಯಾಂಗ್ ಸಿನಿಮಾ ಈ ವಾರ ರಿಲೀಸ್ ಆಗುತ್ತಿವೆ.
Friday Movies: ಮತ್ತೆ ಶುಭ ಶುಕ್ರವಾರ ಬಂದೇ ಬಿಟ್ಟಿದೆ. ಚಂದನವನದಲ್ಲಿ ಈ ವಾರವೂ ಕೆಲವು ಸಿನಿಮಾಗಳು ಪ್ರೇಕ್ಷಕರ ಮನತಣಿಸಲು ಆಗಮಿಸುತ್ತಿವೆ. ಆದರೆ, ಕಳೆದ ಎರಡ್ಮೂರು ವಾರಗಳಿಂದ ಐದಾರು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆದರೆ, ಈ ವಾರ ಕೇವಲ ಮೂರೇ ಚಿತ್ರಗಳು ಬಿಡುಗಡೆಯಾಗುತ್ತಿವೆ. ಇತ್ತ ಬೆಂಗಳೂರಿನಲ್ಲಿ ಬಹುತೇಕ ಚಿತ್ರಮಂದಿರಗಳು ಮತ್ತು ಮಲ್ಟಿಫ್ಲೆಕ್ಸ್ ಶೋಗಳನ್ನು ಜೈಲರ್ ಚಿತ್ರವೇ ಬಾಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಹೆಚ್ಚು ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿಲ್ಲ.
ರಜಿನಿಕಾಂತ್ ಜೈಲರ್ ಹಾವಳಿಯ ನಡುವೆಯೇ ಕನ್ನಡದ ಮೂರು ಸಿನಿಮಾಗಳು ಮಾತ್ರ ಈ ವಾರ ಬಿಡುಗಡೆಯಾಗುತ್ತಿವೆ. ಗುಲ್ಟು, ಹೊಂದಿಸಿ ಬರೆಯಿರಿ, ಹೊಯ್ಸಳ ಸಿನಿಮಾ ಖ್ಯಾತಿಯ ನವೀನ್ ಶಂಕರ್ ನಾಯಕನಾಗಿ ನಟಿಸಿರುವ ಕ್ಷೇತ್ರಪತಿ ಚಿತ್ರ ಈ ಶುಕ್ರವಾರ (ಆ. 18) ಬಿಡುಗಡೆ ಆಗುತ್ತಿದೆ. ಇತ್ತ ನಾಯಕಿಪ್ರಧಾನ ಸಿನಿಮಾ ಬ್ಯಾಂಗ್ ಸಹ ಬಿಡುಗಡೆಯಾಗುತ್ತಿದ್ದು, ಶಾನ್ಸಿ ಶ್ರೀವಾಸ್ತವ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ ಟ್ರೇಲರ್ ಮೂಲಕ ಸದ್ದು ಮಾಡಿದೆ. ಇದರ ಜತೆಗೆ ಹೊಸಬರ ನಿಶಾಚರ ಸಿನಿಮಾಗಳು ಈ ಶುಕ್ರವಾರ ಬಿಡುಗಡೆಯಾಗಲಿವೆ.
ಸಾಮಾಜಿಕ ಸಮಸ್ಯೆ ಹೊತ್ತು ಬಂದ ಕ್ಷೇತ್ರಪತಿ
ಕ್ಷೇತ್ರಪತಿ ಸಿನಿಮಾದ ಟ್ರೇಲರ್ ಪ್ರಾಮಿಸಿಂಗ್ ಆಗಿ ಮೂಡಿಬಂದಿದೆ. ನವೀನ್ ಅವರ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್ ಸಿನಿಮಾ ಮಂದಿಯೂ ಸಾಥ್ ನೀಡಿದ್ದಾರೆ. ಮೂಲತಃ ಉತ್ತರ ಕರ್ನಾಟಕದವರೇ ಆದ ನವೀನ್, ಆ ಭಾಗದ ಕಥೆಯನ್ನೇ ಕ್ಷೇತ್ರಪತಿಯಲ್ಲಿ ಹೇಳಲಿದ್ದಾರೆ. ಈ ಸಿನಿಮಾ ನಿರ್ದೇಶನ ಮಾಡಿದ ಶ್ರೀಕಾಂತ್ ಕಟಗಿ ಸಹ ಉತ್ತರ ಕರ್ನಾಟಕ ಭಾಗದವರೇ. ಸಾಮಾಜಿಕ ಸಮಸ್ಯೆ ಜತೆಗೆ ರೈತರ ಆತ್ಮಹತ್ಯೆಯಂಥ ಕಥೆಯನ್ನು ಈ ಸಿನಿಮಾ ಮೂಲಕ ತಲುಪಿಸುವ ಹೊಣೆ ಹೊತ್ತಿದೆ ಚಿತ್ರತಂಡ.
ಕೆಜಿಎಫ್ ಚಿತ್ರದಲ್ಲಿ ಕಥಾನಾಯಕನ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರ್ಚನಾ ಜೋಯಿಸ್, ಕ್ಷೇತ್ರಪತಿ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗದವರೇ ಆದ ರಾಹುಲ್ ಐನಾಪುರ, ಹರ್ಷ್ ಅರ್ಜುನ್ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀನಿವಾಸ್, ದರ್ಶನ್ ಜಯಣ್ಣ, ವಿವೇಕ್ ಈ ಚಿತ್ರದ ಸಹ ನಿರ್ಮಾಪಕರು. ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಶಾನ್ವಿ ಕಾಲ್ಪನಿಕ ಕಥೆಯ ಬ್ಯಾಂಗ್
ನಟಿ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿ ನಟಿಸಿರುವ ಬ್ಯಾಂಗ್, ಒಂದು ಕಾಲ್ಪನಿಕ ಕಥಾಹಂದರವುಳ್ಳ ಚಿತ್ರ. ಈ ಹಿಂದೆ ಸಂಕಷ್ಟಹರ ಗಣಪತಿ ಸಿನಿಮಾಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶ್ರೀ ಗಣೇಶ್ ಪರಶುರಾಮ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾರ್ಕ್ ಡ್ರೈಮ್ ಶೈಲಿಯ ಈ ಚಿತ್ರದಲ್ಲಿ ರಘೂ ದೀಕ್ಷಿತ್, ಸುನೀಲ್ ಗುಜ್ಜರ್, ಜಹಾಂಗೀರ್, ನಾಗೇಂದ್ರ ಶಾ, ನಾಟ್ಯ ರಂಗ, ಸಾತ್ವಿಕಾ, ರಿತ್ವಿಕ್ ಮುರಳೀಧರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಿತ್ವಿಕ್ ಮುರಳೀಧರ್ ನಟನೆಯ ಜತೆಗೆ ಸಂಗೀತದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಪೂಜಾ ವಸಂತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ನಿಶಾಚರ
ನಿಶಾಚರ ಹೆಸರಿನ ಹೊಸಬರ ಕನ್ನಡ ಚಿತ್ರವೂ ಇದೇ ವಾರ ಬಿಡುಗಡೆ ಆಗುತ್ತಿದೆ.
ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ