ನೋಡಿದವರು ಏನಂತಾರೆ, ಗಣ, ಬೇಗೂರು ಕಾಲೋನಿ; ಈ ಶುಕ್ರವಾರ ಒಂದಲ್ಲ ಎರಡಲ್ಲ ಬರೋಬ್ಬರಿ 9 ಕನ್ನಡ ಸಿನಿಮಾಗಳ ಬಿಡುಗಡೆ
ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಸಿನಿಮಾ ಟ್ರಾಫಿಕ್ ಜಾಸ್ತಿಯಾಗಿದೆ. ಸ್ಟಾರ್ ಸಿನಿಮಾಗಳ ಅಬ್ಬರ ತಗ್ಗಿದ ಹಿನ್ನೆಲೆಯಲ್ಲಿ ಒಂದಷ್ಟು ಹೊಸಬರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಆ ಪೈಕಿ ಈ ವಾರ ಒಟ್ಟು 9 ಸಿನಿಮಾಗಳು ಬಿಡುಗಡೆ ಆಗುತ್ತಿವೆ.

Theatrical Releases This Week: ಶುಭ ಶುಕ್ರವಾರ ಬಂದೇ ಬಿಡ್ತು. ಇಂದು (ಜ. 31) ಚಿತ್ರಮಂದಿರಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬಹುತೇಕ ಹೊಸಬರ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ. ಕೆಲ ವರ್ಷಗಳ ಹಿಂದೆ ನಿರ್ಮಾಣ ಆಗಿದ್ದ ಮತ್ತು ತಡವಾಗಿ ಚಿತ್ರಮಂದಿರಗಳಿಗೆ ಎಂಟ್ರಿ ಪಡೆದ ಹಲವು ಸಿನಿಮಾಗಳು ಈ ಲಿಸ್ಟ್‌ನಲ್ಲಿವೆ. ಹಾಗಾದರೆ, ಇಂದು ತೆರೆಕಾಣುತ್ತಿರುವ ಸಿನಿಮಾಗಳು ಯಾವವು? ಇಲ್ಲಿದೆ ಮಾಹಿತಿ.
ಚಿತ್ರಮಂದಿರಕ್ಕೆ ಬಂದ ಸಿನಿಮಾಗಳು
ಗಣ: ಹೈದರಾಬಾದ್ ಮೂಲದ ಪಾರ್ಥು ಎಂಬುವವರು ತಮ್ಮ ಚೆರಿ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಗಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಹರಿಪ್ರಸಾದ್ ಜಕ್ಕ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ.
ರಾವುತ: ಶ್ರೀ ವಿಶ್ವಕರ್ಮ ಸಿನಿಮಾಸ್ ನಿರ್ಮಾಣದ ರಾವುತ ಚಿತ್ರವು ಒಂದು ವಿಭಿನ್ನ ಪ್ರಯತ್ನದ ಸಿನಿಮಾ, ಗಂಡುಗಲಿ ಕುಮಾರರಾಮ ಕಾಲದ ಸಾಮಾನ್ಯ ಜನರ ಮತ್ತು ಸಾಧಕರ ಕಥೆ. ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್ ಈ ಚಿತ್ರದಲ್ಲಿದ್ದಾರೆ. ಸಿದ್ದು ವಜ್ರಪ್ಪ ನಿರ್ದೇಶನದ ಸಿನಿಮಾ ಇದಾಗಿದೆ.
ನೋಡಿದವರು ಏನಂತಾರೆ: ಕುಲದೀಪ್ ಕಾರಿಯಪ್ಪ ಬರೆದು ನಿರ್ದೇಶಿಸಿರುವ ನೋಡಿದವರು ಏನಂತಾರೆ ಚಿತ್ರವನ್ನು ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ. ಹೊಯ್ಸಳ, ಕ್ಷೇತ್ರಪತಿ ಮತ್ತು ಸಲಾರ್ ಸಿನಿಮಾಗಳಲ್ಲಿ ರಗಡ್ ಪಾತ್ರಗಳ ಮೂಲಕ ಎಲ್ಲರ ಗಮನಸೆಳೆದಿದ್ದ ನವೀನ್ ಶಂಕರ್ ನಾಯಕನಾಗಿ ನಟಿಸಿದರೆ, ಅಪೂರ್ವ ಭಾರದ್ವಾಜ್ ನಾಯಕಿ.
ಬೇಗೂರು ಕಾಲೋನಿ: ಶ್ರೀಮಾ ಸಿನಿಮಾಸ್ ಬ್ಯಾನರ್‌ನಲ್ಲಿ ಎಂ ಶ್ರೀನಿವಾಸ್ ಬಾಬು ಅವರು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಸಿನಿಮಾ ಬೇಗೂರು ಕಾಲೋನಿ. ನಟ ರಾಜೀವ್ ಹನು ಈ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದಾರೆ.
ಅಲ್ಲೇ ಡ್ರಾ ಅಲ್ಲೇ ಬಹುಮಾನ: ಹಾರರ್, ಥ್ರಿಲ್ಲರ್ ಕಥೆಯ ಸಿನಿಮಾ ಅಲ್ಲೇ ಡ್ರಾ, ಅಲ್ಲೇ ಬಹುಮಾನ. ರತ್ನತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಜನನಿ ಫಿಲಂಸ್‍ನಡಿ ಪ್ರಶಾಂತ್ ಬಿ.ಜೆ. ನಿರ್ಮಿಸಿದ್ದಾರೆ. ಟಗರು ಖ್ಯಾತಿಯ ನಟಿ ರಿಷಿಕಾ ರಾಜ್ ಮತ್ತು ಶೌರ್ಯ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಹೈನ: ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಹೊಂದಿರುವ ಹೈನ ಚಿತ್ರ ದೇಶಭಕ್ತಿ ಕಥೆಯಿರುವ ಸಿನಿಮಾ. ವೆಂಕಟ್ ಭಾರದ್ವಾಜ್ ಹಾಗೂ ರಾಜ್ ಕಮಲ್ ನಿರ್ಮಿಸಿರುವ ಈ ಚಿತ್ರದಲ್ಲಿ ಹರ್ಷ ಅರ್ಜುನ್, ದಿಗಂತ ಸ್ವರೂಪ, ರಾಜ್ ಕಮಲ್, ಲಕ್ಷ್ಮಣ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ನಟಿಸಿದ್ದಾರೆ.
ಪಾರು ಪಾರ್ವತಿ: EIGHTEEN THIRTY SIX ಪಿಕ್ಚರ್ಸ್ ಬ್ಯಾನರ್‌ನಲ್ಲಿ ಪಿ.ಬಿ. ಪ್ರೇಂನಾಥ್ ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ ಬಂದ ಸಿನಿಮಾ #ಪಾರು ಪಾರ್ವತಿ. ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ನಟ ಕಿಚ್ಚ ಸುದೀಪ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರು.
ಕಾಡುಮಳೆ: COSMOS MOVIES ನಿರ್ಮಾಣದ, ಸಮರ್ಥ ನಿರ್ದೇಶನದ ಹಾಗೂ ನಟ ಅರ್ಥ, ನಟಿ ಸಂಗೀತ ಅಭಿನಯದ ಸಿನಿಮಾ ಕಾಡುಮಳೆ. ಬ್ರೇನ್ ಸ್ಕ್ಯಾಮಿಂಗ್ ಹಿನ್ನೆಲೆಯ ಈ ಸಿನಿಮಾ, ದಟ್ಟ ಕಾಡು ಹಚ್ಚ-ಹಸಿರಿನ ವಾತಾವರಣದ ಮಧ್ಯೆ ಭ್ರಮೆ ಮತ್ತು ವಾಸ್ತವದ ಹೋರಾಟದ ಕಥೆಯಾಗಿದೆ. ಸಮರ್ಥ ಈ ಚಿತ್ರದ ನಿರ್ದೇಶಕರು. ನಟ ಹರ್ಷನ್ ನಾಯಕನಾಗಿ ನಟಿಸಿದರೆ, ರಾಜು ಎನ್ ಎಮ್ ಅವರ ಛಾಯಾಗ್ರಹಣ, ಮಹಾರಾಜ ಅವರ ಸಂಗೀತ ಚಿತ್ರಕ್ಕಿದೆ.
ಇಟ್ಟಿಗೆ ಗೂಡಿನಲ್ಲಿ ರಾಜ ರಾಣಿ: ಇದರ ಜತೆಗೆ ಹೊಸಬರ ಇಟ್ಟಿಗೆ ಗೂಡಿನಲ್ಲಿ ರಾಜಾ ರಾಣಿ ಸಿನಿಮಾ ಸಹ ಇಂದು ಬಿಡುಗಡೆ ಆಗುತ್ತಿದೆ.
