Year End 2024: ಸ್ಯಾಂಡಲ್‌ವುಡ್‌ನಲ್ಲಿ ಗೆದ್ದಿದ್ದು ಬೆರಳೆಣಿಕೆ ಚಿತ್ರಗಳು ಮಾತ್ರ, ಸೋಲಿನದ್ದೇ ಮೇಲುಗೈ! ನಾಯಕ ನಟರ ವಾರ್ಷಿಕ ಫಲ
ಕನ್ನಡ ಸುದ್ದಿ  /  ಮನರಂಜನೆ  /  Year End 2024: ಸ್ಯಾಂಡಲ್‌ವುಡ್‌ನಲ್ಲಿ ಗೆದ್ದಿದ್ದು ಬೆರಳೆಣಿಕೆ ಚಿತ್ರಗಳು ಮಾತ್ರ, ಸೋಲಿನದ್ದೇ ಮೇಲುಗೈ! ನಾಯಕ ನಟರ ವಾರ್ಷಿಕ ಫಲ

Year End 2024: ಸ್ಯಾಂಡಲ್‌ವುಡ್‌ನಲ್ಲಿ ಗೆದ್ದಿದ್ದು ಬೆರಳೆಣಿಕೆ ಚಿತ್ರಗಳು ಮಾತ್ರ, ಸೋಲಿನದ್ದೇ ಮೇಲುಗೈ! ನಾಯಕ ನಟರ ವಾರ್ಷಿಕ ಫಲ

ಸ್ಯಾಂಡಲ್‌ವುಡ್‌ ಪಾಲಿಗೆ 2024 ಹೇಳಿಕೊಳ್ಳುವಂಥ ವರ್ಷವಾಗಿಲ್ಲ. ಬೆರಳೆಣಿಕೆ ಸಿನಿಮಾಗಳು ಮಾತ್ರ ಈ ವರ್ಷ ಗೆಲುವಿನ ನಗೆ ಬೀರಿದರೆ, ಮಿಕ್ಕಿದ್ದೆಲ್ಲವೂ ಮುಗ್ಗರಿಸಿವೆ. ಸಾಲು ಸಾಲು ಸ್ಟಾರ್‌ ನಟರು ಚಿತ್ರಮಂದಿರಕ್ಕೆ ಆಗಮಿಸಿದರೂ, ಅವರಿಂದಲೂ ಮ್ಯಾಜಿಕ್‌ ನಡೆಯಲಿಲ್ಲ. ಹಾಗಾದರೆ, ಈ ಸಲ ಗೆದ್ದವರು ಮತ್ತು ಸೋತವರು ಯಾರು? - ಚೇತನ್‌ ನಾಡಿಗೇರ್‌ ಬರಹ

2024ರಲ್ಲಿ ಹೇಗಿತ್ತು ಸ್ಯಾಂಡಲ್‌ವುಡ್‌? ಗೆದ್ದವರಾರು, ಸೋತವರು ಯಾರು?
2024ರಲ್ಲಿ ಹೇಗಿತ್ತು ಸ್ಯಾಂಡಲ್‌ವುಡ್‌? ಗೆದ್ದವರಾರು, ಸೋತವರು ಯಾರು? (imdb)

Sandalwood Film Industry 2024: ಪ್ರತಿ ವರ್ಷ ಮುಗಿಯುತ್ತಾ ಬಂದಂತೆ ವರ್ಷದ ಯಶಸ್ವಿ ನಾಯಕ, ನಾಯಕಿ ಯಾರು ಎಂಬಂತಹ ಲೆಕ್ಕಾಚಾರಗಳು ಶುರುವಾಗುತ್ತವೆ. ಯಾರು ಎಷ್ಟು ಸಿನಿಮಾಗಳನ್ನು ಮಾಡಿದರು? ಅದರಲ್ಲಿ ಎಷ್ಟು ಸಿನಿಮಾಗಳು ಗೆದ್ದವು? ಎಷ್ಟು ಸೋತವು? ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. 2024 ಈ ನಿಟ್ಟಿನಲ್ಲಿ ಒಂದು ವಿಶಿಷ್ಟವಾದ ವರ್ಷ. ಈ ವರ್ಷ ಬಿಡುಗಡೆಯಾದ 220 ಚಿತ್ರಗಳ ಪೈಕಿ, ಸುಮಾರು 30 ಹಳಬರ 50 ಚಿತ್ರಗಳು ಸಿಗಬಹುದು ಅಷ್ಟೇ. ಆ 30 ಹೀರೋಗಳ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾವ ಚಿತ್ರಗಳು ದೊಡ್ಡ ಯಶಸ್ಸು ಕಂಡ ಉದಾಹರಣೆಗಳು ಸಿಗುವುದಿಲ್ಲ.

ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಏಳು ಜನಪ್ರಿಯ ಸ್ಟಾರ್ ನಟರ ಚಿತ್ರಗಳು ಸಿಗುತ್ತವೆ. ವಿಶೇಷವೆಂದರೆ, ಈ ಏಳೂ ಚಿತ್ರಗಳು 20 ಕೋಟಿ ರೂ. ಗಳಿಕೆ ಮಾಡಿದ ಚಿತ್ರಗಳು. ಕೆಲವು ಚಿತ್ರಗಳ ಬಜೆಟ್‍ ಅಷ್ಟೇ ಆದರೆ, ಇನ್ನೂ ಕೆಲವು ಚಿತ್ರಗಳ ಬಜೆಟ್‍, ಚಿತ್ರಗಳ ಗಳಿಕೆಗಿಂತಲೂ ಹೆಚ್ಚಿದೆ. ಆ ನಿಟ್ಟಿನಲ್ಲಿ ಈ ಚಿತ್ರಗಳು ಯಶಸ್ವಿ ಅಥವಾ ಗೆದ್ದಿವೆ ಎಂದು ಹೇಳಿಕೆ ಅಷ್ಟೇ. ಚಿತ್ರಮಂದಿರಗಳ ಗಳಿಕೆ ಒಂದು ಭಾಗವಷ್ಟೇ. ಮಿಕ್ಕಂತೆ ಸ್ಯಾಟಲೈಟ್‍, ಡಿಜಿಟಲ್‍ ಮತ್ತು ಡಬ್ಬಿಂಗ್‍ ಹಕ್ಕುಗಳಿಂದ ಒಂದಿಷ್ಟು ಹಣ ನಿರ್ಮಾಪಕರಿಗೆ ಬಂದಿದೆ. ಕೆಲವು ಚಿತ್ರಗಳಿಗೆ ಹಾಕಿದ ಬಂಡವಾಳಕ್ಕೆ, ಅಲ್ಲಿಂದಲ್ಲಿಗೆ ಹಣ ಬಂದಿವೆ. ಇನ್ನೂ ಕೆಲವು ಚಿತ್ರಗಳು ಬೆರಳಣಿಕೆಯಷ್ಟು ಕೋಟಿ ಲಾಭ ಮಾಡಿದೆ. ಆದರೆ, 220 ಪ್ಲಸ್‍ ಚಿತ್ರಗಳಲ್ಲಿ ಯಾವೊಂದು ಚಿತ್ರದ ಲಾಭವೂ 10 ಕೋಟಿಯನ್ನೂ ಮೀರಿಲ್ಲ ಎಂಬುದು ಸತ್ಯ.

ಒಂದು ಸೋಲು; ಒಂದು ಅಲ್ಲಿಂದಲ್ಲಿಗೆ

2024ರಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟರೆಂದರೆ ಅದು ಶಿವರಾಜಕುಮಾರ್. ಶಿವಣ್ಣ ಅಭಿನಯದ ‘ಕರಟಕ ದಮನಕ’ ಮತ್ತು ‘ಭೈರತಿ ರಣಗಲ್‍’ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ‘ಕರಟಕ ದಮನಕ’ ಅತ್ಯಂತ ಕೆಟ್ಟ ಸೋಲು ಕಂಡರೆ, ‘ಭೈರತಿ ರಣಗಲ್‍’ ಅಲ್ಲಿಂದಲ್ಲಿಗೆ ಆಗಿದೆ. ‘ಕರಟಕ ದಮನಕ’ ಚಿತ್ರದ ಹಿಂದೆ ರಾಕ್‍ಲೈನ್‍ ವೆಂಕಟೇಶ್‍ರಂತಹ ನಿರ್ಮಾಪಕರಿದ್ದರು. ಯೋಗರಾಜ್‍ ಭಟ್‍ರಂತಹ ನಿರ್ದೇಶಕರಿದ್ದರು. 15 ಕೋಟಿ ರೂ. ಬಜೆಟ್‍ನ ಈ ಚಿತ್ರ ಗಲ್ಲಾಪೆಟ್ಟಿಗೆಯ್ಲಲಿ ಮೂರು ಕೋಟಿ ಸಹ ಗಳಿಸಲಿಲ್ಲ ಎಂದು ಹೇಳಲಾಗುತ್ತದೆ. ಇನ್ನು, ‘ಭೈರತಿ ರಣಗಲ್‍’ ಚಿತ್ರವು 18 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತದೆ.

ಕೊರತೆ ನೀಗಿಸಿದ ಸುದೀಪ್‍ ಅಭಿಯದ ‘ಮ್ಯಾಕ್ಸ್’

ಸುದೀಪ್‍ ಅಭಿನಯದ ಎರಡೂವರೆ ವರ್ಷಗಳೇ ಆಗಿದ್ದವು. ಕಳೆದ ವರ್ಷ ಸುದೀಪ್‍ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ‘ಕಬ್ಜ’ ಚಿತ್ರವು ಬಿಡುಗಡೆಯಾಗಿತ್ತು. ಮಿಕ್ಕಂತೆ ‘ವಿಕ್ರಾಂತ್ ರೋಣ’ ನಂತರ ಸುದೀಪ್ ಪೂರ್ಣಪ್ರಮಾಣದಲ್ಲಿ ಹೀರೋ ಆಗಿ ನಟಿಸಿದ ಯಾವೊಂದು ಚಿತ್ರ ಸಹ ಬಿಡುಗಡೆ ಆಗಿರಲಿಲ್ಲ. ಆ ಕೊರತೆಯನ್ನು ‘ಮ್ಯಾಕ್ಸ್’ ನೀಗಿಸಿದೆ. ನಿನ್ನೆಯಷ್ಟೇ (ಡಿ. 25) ಚಿತ್ರ ಬಿಡುಗಡೆ ಆಗಿರುವುದರಿಂದ ಲಾಭ-ನಷ್ಟದ ಬಗ್ಗೆ ಈಗಲೇ ಹೇಳುವುದು ಕಷ್ಟ. ಚಿತ್ರದ ಮೊದಲ ದಿನ ಒಳ್ಳೆಯ ಓಪನಿಂಗ್‍ ಪಡೆದಿದ್ದು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸದ್ಯಕ್ಕಂತೂ ಸಿಗುತ್ತಿದೆ. ಆದರೂ ಚಿತ್ರ 25ರಿಂದ 30 ಕೋಟಿ ರೂ. ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ಚಿತ್ರದ ಬಜೆಟ್‍ ಸಹ ಜಾಸ್ತಿಯಾಗಿರುವುದರಿಂದ, ದೊಡ್ಡ ಲಾಭ ನಿರೀಕ್ಷಿಸುವುದು ಕಷ್ಟ.

ಸದ್ಯಕ್ಕಂತೂ ಅತೀ ಹೆಚ್ಚು ಗಳಿಕೆಯ ಚಿತ್ರ

ಉಪೇಂದ್ರ ಅಭಿನಯದ ‘UI’ ಮೊದಲ ವಾರದ ಗಳಿಕೆ 24 ಕೋಟಿಯಷ್ಟಾಗಬಹುದು ಎಂದು ನಿರೀಕ್ಷೆ ಇದೆ. ಸದ್ಯಕ್ಕೆ ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರವೆಂದರೆ ಅದು ‘UI’. ಈ ಚಿತ್ರವು ಮೂರು ದಿನಗಳಲ್ಲಿ ಒಟ್ಟು 20 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತದೆ. ಸೋಮವಾರದ ನಂತರ ಗಳಿಕೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರವು 30 ಕೋಟಿ ರೂ. ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಉಪೇಂದ್ರ ಒಂದೊಳ್ಳೆಯ ಚಿತ್ರ ಕೊಟ್ಟಿದ್ದಾರೆಂದರೆ, ಇನ್ನೂ ಕೆಲವರು ಉಪೇಂದ್ರ ತಮ್ಮ ವಿಚಾರಧಾರೆಯ ಮೂಲಕ ಓವರ್‍ಡೋಸ್‍ ಕೊಟ್ಟಿದ್ದಾರೆ ಎಂದು ಅಭಿಪ್ರಾಯ ವಯಕ್ತಪಡಿಸಿದ್ದಾರೆ.

20 ಕೋಟಿ ರೂ. ಕ್ಲಬ್‍ನಲ್ಲಿ ಮೂರು ಚಿತ್ರಗಳು

‘UI’ ಬಿಟ್ಟರೆ, ಈ ವರ್ಷ ಗಳಿಕೆ ಮಾಡಿದ ಚಿತ್ರಗಳೆಂದರೆ ಅದು ಕನ್ನಡದ ಮೊದಲ ಸೂಪರ್ ಹೀರೋ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀಮುರಳಿ ಅಭಿನಯದ ‘ಬಘೀರ’. ಚಿತ್ರವು 20.55 ಕೋಟಿ ರೂ. ಗಳಿಕೆ ಮಾಡಿದೆಯಂತೆ. ‘ದುನಿಯಾ’ ವಿಜಯ್‍ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಎರಡು ವಾರಗಳಲ್ಲಿ 19.55 ಕೋಟಿ ರೂ. ಗಳಿಕೆ ಮಾಡಿದೆ ಎಂಬ ಸುದ್ದಿ ಇದೆ. ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು 19 ಕೋಟಿಯವರೆಗೂ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತದೆ.

ಅತ್ಯಂತ ಕೆಟ್ಟ ಸೋಲು ದಾಖಲಿಸಿದ ‘ಮಾರ್ಟಿನ್‍’

ಈ ವರ್ಷದ ಅತ್ಯಂತ ಕೆಟ್ಟ ಸೋಲು ಎಂದರೆ ಎ.ಪಿ. ಅರ್ಜುನ್‍ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್‍’. ಬರೀ ಈ ವರ್ಷವಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯಾವುದೇ ಚಿತ್ರಕ್ಕೂ ಇದು ದೊಡ್ಡ ಸೋಲು. ಚಿತ್ರತಂಡದವರೇ ಹೇಳಿಕೊಂಡಂತೆ ಚಿತ್ರಕ್ಕೆ 240 ದಿನಗಳ ಕಾಳ ಚಿತ್ರೀಕರಣವಾಗಿದ್ದು, 100 ಕೋಟಿ ರೂ.ನಷ್ಟು ಬಜೆಟ್‍ ಆಗಿದೆ. ಅದಕ್ಕೆ ಬದಲಿಯಾಗಿ ಚಿತ್ರವು ಚಿತ್ರಮಂದಿರಗಳಿಂದ 20 ಕೋಟಿ ರೂ.ಗಳಷ್ಟು ಸಂಪಾದಿಸಿದೆಯಂತೆ. ಇನ್ನು, ಬೇರೆ ಹಕ್ಕುಗಳನ್ನು ಹೋಲಿಸಿದರೆ 50 ಕೋಟಿ ರೂ.ಗಳಷ್ಟು ವಾಪಸ್ಸು ಬಂದ ಹಾಗಾಗುತ್ತದೆ. ಮಿಕ್ಕಂತೆ ಚಿತ್ರದಿಂದ ಏನಿಲ್ಲವೆಂದರೂ 50 ಕೋಟಿ ನಷ್ಟವಾಗಿದೆ ಎಂಬ ಮಾತಿದೆ. ಆದರೆ, ಚಿತ್ರತಂಡದವರು ಈ ಕುರಿತು ಯಾವುದೇ ವಿಷಯವನ್ನೂ ಹಂಚಿಕೊಂಡಿಲ್ಲ.

ಮಿಕ್ಕವರ ಚಿತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ

ಮಿಕ್ಕಂತೆ ಈ ವರ್ಷ ಧನಂಜಯ್‍ ಅಭಿನಯದ ‘ಕೋಟಿ’, ಜಗ್ಗೇಶ್ ಅಭಿನಯದ ‘ರಂಗನಾಯಕ’, ರವಿಚಂದ್ರನ್‍ ಅಭಿನಯದ ‘ದಿ ಜಡ್ಜ್ಮೆಂಟ್‍’, ರಮೇಶ್‍ ಅರವಿಂದ್‍ ಅಭಿನಯದ ‘ಭೈರಾದೇವಿ’, ಕೋಮಲ್ ಕುಮಾರ್ ಅಭಿನಯದ ‘ಎಲಾ ಕುನ್ನಿ’, ಶರಣ್‍ ನಟನೆಯ ‘ಅವತಾರ ಪುರುಷ 2’, ಯೋಗಿ ಅಭಿನಯದ ‘ಬ್ಯಾಚುಲರ್ ಪಾರ್ಟಿ’, ಸತೀಶ್‍ ನೀನಾಸಂ ನಟನೆಯ ‘ಮ್ಯಾಟ್ನಿ’ ಮತ್ತು ವಸಿಷ್ಠ ಸಿಂಹ ಅಭಿನಯದ ‘ಲವ್‍ ಲೀ’ ಚಿತ್ರಗಳು ಬಿಡುಗಡೆಯಾಗಿವೆ. ಹಾಗೆಯೇ, ತನುಷ್‍ (ಮಿಸ್ಟರ್ ನಟ್ವರ್ ಲಾಲ್‍), ರಿಷಿ (ರಾಮನ ಅವತಾರ), ಅನಿರುದ್ಧ್ (ಚೆಫ್‍ ಚಿದಂಬರ) ಮತ್ತು ಅನೀಶ್‍ ತೇಜೇಶ್ವರ್ (ಆರಾಮ್‍ ಅರವಿಂದ ಸ್ವಾಮಿ) ಚಿತ್ರಗಳು ಸಹ ಬಿಡುಗಡೆಯಾಗಿವೆ. ಈ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದನ್ನೇನೂ ಮಾಡಲಿಲ್ಲ.

ಈ ವರ್ಷ ಕೆಲವು ನಟರ ಮೂರು ಚಿತ್ರಗಳು ಬಿಡುಗಡೆಯಾಗಿದ್ದೂ ಇದೆ. ಆದರೆ, ಯಾವೊಂದು ಚಿತ್ರವೂ ದೊಡ್ಡ ಗಳಿಕೆ ಮಾಡಲಿಲ್ಲ ಎಂಬುದು ಗಮನಾರ್ಹ. ವಿಜಯ್ ರಾಘವೇಂದ್ರ ಅಭಿನಯದ ‘ಕೇಸ್‍ ಆಫ್‍ ಕೊಂಡಾನ’, ‘ಜೋಗ್ 101’, ‘ಗ್ರೇ ಗೇಮ್ಸ್’, ಪೃಥ್ವಿ ಅಂಬಾರ್ ಅಭಿನಯದ ‘ಜ್ಯೂನಿ’, ‘ಮತ್ಸ್ಯಗಂಧ’ ಮತ್ತು ‘ಫಾರ್ ರಿಜಿಸ್ಟ್ರೇಶನ್‍’, ಕಿರಣ್‍ ರಾಜ್ ನಟನೆಯ ‘ಭರ್ಜರಿ ಗಂಡು’, ‘ರಾನಿ’ ಮತ್ತು ‘ಮೇಘ’, ಮತ್ತು ದಿಗಂತ್‍ ಅಭಿನಯದ ‘ಬ್ಯಾಚುಲರ್ ಪಾರ್ಟಿ’, ‘ದಿ ಜಡ್ಜ್ಮೆಂಟ್‍’ ಮತ್ತು ‘ಮಾರಿಗೋಲ್ಡ್’ ಚಿತ್ರಗಳು ಬಿಡುಗಡೆಯಾಗಿದ್ದು, ಮೊದಲೇ ಹೇಳಿದಂತೆ ದೊಡ್ಡ ಗಳಿಕೆ ಮಾಡುವಲ್ಲಿ ಸೋತಿವೆ.

ಇದರ ಜೊತೆಗೆ ಕೆಲವು ನಟರ ಎರಡೆರಡು ಚಿತ್ರಗಳು ಬಿಡುಗಡೆಯಾಗಿವೆ. ವಿನಯ್‍ ರಾಜಕುಮಾರ್ ಅಭಿನಯದ ‘ಒಂದು ಸರಳ ಪ್ರೇಮಕಥೆ’ ಮತ್ತು ‘ಪೆಪೆ’, ಆದಿತ್ಯ ಅಭಿನಯದ ‘5ಡಿ’, ‘ಕಾಂಗರೂ’, ರಾಜವರ್ಧನ್‍ ಅಭಿನಯದ ‘ಪ್ರಣಯಂ’ ಮತ್ತು ‘ಹಿರಣ್ಯಾಕ್ಷ’, ದೀಕ್ಷಿತ್‍ ಶೆಟ್ಟಿ ಅಭಿನಯದ ‘ಬ್ಲಿಂಕ್‍’ ಮತ್ತು ‘ಕೆಟಿಎಂ’ ಮತ್ತು ಪ್ರವೀಣ್‍ ತೇಜ್‍ ಅಭಿನಯದ ‘ಓ2’ ಮತ್ತು ‘ಜಿಗರ್’ ಚಿತ್ರಗಳು ಬಿಡುಗಡೆಯಾಗಿವೆ. ಈ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಕಮಾಲ್‍ ಮಾಡಲಿಲ್ಲ. ಒಟ್ಟಾರೆ, ಈ ವರ್ಷ ಹೊಸಬರದ್ದೇ ಅಷ್ಟೇ ಅಲ್ಲ, ಹಳಬರ ಚಿತ್ರಗಳೂ ಪ್ರೇಕ್ಷಕರ ಗಮನಸೆಳೆಯುವಲ್ಲಿ ಸೋತಿವೆ. ಈ ವರ್ಷ ಸೋತವರು, ಮುಂದಿನ ವರ್ಷ ಪುಟಿದು ವಾಪಸ್ಸಾಗುತ್ತಾರಾ ನೋಡಬೇಕು.

(ಬರಹ: ಚೇತನ್‌ ನಾಡಿಗೇರ್)

Whats_app_banner