ಚಂದನ್‌ ಶೆಟ್ಟಿ ನಟನೆಯ ʻಸೂತ್ರಧಾರಿʼ ಚಿತ್ರ ವಿಮರ್ಶೆ: ಹಲವು ಪಾತ್ರಧಾರಿಗಳ ನಡುವೆ ʻಸೂತ್ರಧಾರಿʼ ಯಾರು?
ಕನ್ನಡ ಸುದ್ದಿ  /  ಮನರಂಜನೆ  /  ಚಂದನ್‌ ಶೆಟ್ಟಿ ನಟನೆಯ ʻಸೂತ್ರಧಾರಿʼ ಚಿತ್ರ ವಿಮರ್ಶೆ: ಹಲವು ಪಾತ್ರಧಾರಿಗಳ ನಡುವೆ ʻಸೂತ್ರಧಾರಿʼ ಯಾರು?

ಚಂದನ್‌ ಶೆಟ್ಟಿ ನಟನೆಯ ʻಸೂತ್ರಧಾರಿʼ ಚಿತ್ರ ವಿಮರ್ಶೆ: ಹಲವು ಪಾತ್ರಧಾರಿಗಳ ನಡುವೆ ʻಸೂತ್ರಧಾರಿʼ ಯಾರು?

ಚಂದನ್‌ ಶೆಟ್ಟಿ ಮತ್ತು ಅಪೂರ್ವ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʻಸೂತ್ರಧಾರಿʼ ಸಿನಿಮಾ ಇಂದು (ಮೇ 9) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಸಿನಿಮಾದ ಚಿತ್ರ ವಿಮರ್ಶೆ ಹೀಗಿದೆ.

ಚಂದನ್‌ ಶೆಟ್ಟಿ ನಟನೆಯ ʻಸೂತ್ರಧಾರಿʼ ಚಿತ್ರ ವಿಮರ್ಶೆ: ಹಲವು ಪಾತ್ರಧಾರಿಗಳ ನಡುವೆ ʻಸೂತ್ರಧಾರಿʼ ಯಾರು?
ಚಂದನ್‌ ಶೆಟ್ಟಿ ನಟನೆಯ ʻಸೂತ್ರಧಾರಿʼ ಚಿತ್ರ ವಿಮರ್ಶೆ: ಹಲವು ಪಾತ್ರಧಾರಿಗಳ ನಡುವೆ ʻಸೂತ್ರಧಾರಿʼ ಯಾರು?

ಚಂದನ್‍ ಶೆಟ್ಟಿ ಸಂಗೀತ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಚಿರಪರಿಚಿತ. ಈಗ ಇದೇ ಮೊದಲ ಬಾರಿಗೆ ಅವರು ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ ‘ಸೂತ್ರಧಾರಿ’ ಚಿತ್ರದ ಮೂಲಕ ಪರಿಚಿತರಾಗುತ್ತಿದ್ದಾರೆ. ಹೆಸರು ಕೇಳುತ್ತಿದ್ದಂತೆಯೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಸ್ಪಷ್ಟವಾಗುತ್ತದೆ. ಇಷ್ಟಕ್ಕೂ ಈ ‘ಸೂತ್ರಧಾರಿ’ಯೇನು? ನೀವೇ ಓದಿ.

ಚಿತ್ರದ ಕಥೆ ಏನು?

ಒಂದಿಷ್ಟು ಜನ ನಿಗೂಢವಾಗಿ ಕಿಡ್ನಾಪ್‍ ಆಗುತ್ತಿರುತ್ತಾರೆ. ಒಂದೆರಡು ದಿನಗಳ ನಂತರ ವಾಪಸ್ಸಾಗುವ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಇಂಥದ್ದೊಂದು ನಿಗೂಢ ಮತ್ತು ರೋಚಕ ಪ್ರಕರಣವನ್ನು ಇನ್‍ಸ್ಪೆಕ್ಟರ್ ವಿಜಯ್‍ಗೆ (ಚಂದನ್‍ ಶೆಟ್ಟಿ) ವಹಿಸಲಾಗುತ್ತದೆ. ಪ್ರಕರಣ ತನಿಖೆ ಮಾಡುತ್ತಿದ್ದಂತೆ ಒಂದಿಷ್ಟು ಜನರನ್ನು ವಿಜಯ್‍ ನೇತೃತ್ವದ ತಂಡ ಸೆರೆಹಿಡಿಯುತ್ತದೆ. ಆದರೆ, ಅವರೆಲ್ಲರೂ ಬರೀ ಪಾತ್ರಧಾರಿಗಳು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ, ಈ ಪಾತ್ರಧಾರಿಗಳ ಹಿಂದಿನ ‘ಸೂತ್ರಧಾರಿ’ ಯಾರು? ಆತ ಯಾಕೆ ಕಿಡ್ನಾಪ್‍ ಮಾಡುತ್ತಿರುತ್ತಾನೆ? ಕಿಡ್ನಾಪ್‍ ಆಗಿ ಬಂದವರೆಲ್ಲಾ ಯಾಕೆ ಸಾಯುತ್ತಿರುತ್ತಾರೆ? ಉತ್ತರ ಗೊತ್ತಾಗಬೇಕಿದ್ದರೆ ‘ಸೂತ್ರಧಾರಿ’ ಚಿತ್ರವನ್ನು ನೋಡಬೇಕು.

ಹೇಗಿದೆ ಚಿತ್ರ?

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬರುತ್ತಿವೆ. ಆ ಸಾಲಿಗೆ ‘ಸೂತ್ರಧಾರಿ’ ಸಹ ಹೊಸ ಸೇರ್ಪಡೆ. ಚಿತ್ರ ಪ್ರಾರಂಭವಾಗುವುದು ಒಂದು ರೋಚಕ ತಿರುವಿನಿಂದಾದರೂ ಕ್ರಮೇಣ ಹಾಡು, ಡ್ಯಾನ್ಸ್ ಬಂದು ಚಿತ್ರ ನಿಧಾನವಾಗುತ್ತದೆ. ಹುಡುಗಿಯರನ್ನು ಕಂಡರೆ ತನ್ನನ್ನೇ ಮರೆಯುವ ವಿಜಯ್‍, ಒಂದು ಹಂತದಲ್ಲಿ ಗಂಭೀರನಾಗುತ್ತಾನೆ. ಅವನು ಗಂಭೀರವಾಗುವುದರ ಜೊತೆಗೆ ಚಿತ್ರವೂ ಗಂಭೀರವಾಗುತ್ತಾ ಹೋಗುತ್ತದೆ. ಮಧ್ಯಂತರದಲ್ಲಿ ಚಿತ್ರಕ್ಕೊಂದು ಅದ್ಭುತ ಟ್ವಿಸ್ಟ್ ಸಿಗುತ್ತದೆ.

ಅಲ್ಲಿಂದ ದ್ವಿತೀಯಾರ್ಧದಲ್ಲಿ ಚಿತ್ರಕ್ಕೊಂದು ವೇಗ ಸಿಗುತ್ತದೆ. ದ್ವಿತೀಯಾರ್ಧದಲ್ಲಿನ ಸಾಕಷ್ಟು ತಿರುವುಗಳು ಪ್ರೇಕ್ಷಕರ ತಲೆಗೆ ಹುಳ ಬಿಡುತ್ತದೆ. ಮೊದಲಾರ್ಧ ಹಾಡು, ಚೆಲ್ಲಾಟ ಕಡಿಮೆ ಮಾಡಿ, ಇನ್ನಷ್ಟು ರೋಚಕವಾಗಿಸಿದ್ದರೆ ಚಿತ್ರ ಒಂದು ಅಪರೂಪದ ಪ್ರಯತ್ನವಾಗಿರುತ್ತಿತ್ತು. ಚಿತ್ರದಲ್ಲಿ ಸಸ್ಪೆನ್ಸ್ ಅಂಶಗಳ ಜೊತೆಗೆ, ಒಂದೊಳ್ಳೆಯ ಕಾಳಜಿ ಸಹ ಇದೆ.

ಗಮನಸೆಳೆಯುವ ಚಂದನ್‍ ಶೆಟ್ಟಿ

ನಟನಾಗಿ ಚಂದನ್‍ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಗಮನಸೆಳೆಯುತ್ತಾರೆ. ಹಾಡು, ನೃತ್ಯಗಳಲ್ಲಿ ಅವರು ಸಲೀಸು. ಗಂಭೀರ ದೃಶ್ಯಗಳಲ್ಲೂ ಅವರು ತಮ್ಮ ಛಾಪು ಮೂಡಿಸುತ್ತಾರೆ. ಅಪೂರ್ವಗೆ ನಟಿಸುವುದಕ್ಕೆ ಒಂದಿಷ್ಟು ದೃಶ್ಯಗಳಿವೆ. ತಬಲಾ ನಾಣಿ ಸ್ವಲ್ಪ ಗಂಭೀರವಾಗಿ, ಸ್ವಲ್ಪ ಜಾಲಿಯಾಗಿ ತಮ್ಮ ಪಾತ್ರವನ್ನ ಚೆನ್ನಾಗಿ ನಿರ್ವಹಿಸಿದ್ದಾರೆ. ನವರಸನ್‍ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಿಕ್ಕಂತೆ ಚಿತ್ರದಲ್ಲಿ ಸಾಕಷ್ಟು ಹೊಸ ಮುಖಗಳಿವೆ. ಕೆಲವು ಪಾತ್ರಗಳಿಗೆ ಇನ್ನಷ್ಟು ನುರಿತ ಕಲಾವಿದರು ಇದ್ದಿದ್ದರೆ ಚಿತ್ರಕ್ಕೆ ಇನ್ನಷ್ಟು ತೂಕ ಬರುತ್ತಿತ್ತು.

ಚಂದನ್‍ ಶೆಟ್ಟಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಎರಡು ಹಾಡುಗಳು ಗುನುಗುವಂತಿವೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಎಚ್‍. ದಾಸ್‍ ಕಥೆಯ ಮೂಡ್‍ಗೆ ತಕ್ಕ ಹಾಗೆ ಚಿತ್ರವನ್ನು ಸೆರೆಹಿಡಿದಿದ್ದಾರೆ. ಬೇರೆ ಭಾಷೆಯಲ್ಲಿನ ರೋಚಕ ಸಸ್ಪೆನ್ಸ್ ಥ್ರಿಲ್ಲರ್‌ಗಳನ್ನು ನೋಡಿದವರಿಗೆ, ‘ಸೂತ್ರಧಾರಿ’ ವಿಶೇಷ ಎಂದನಿಸದಿದ್ದರೂ, ಈಗ ಬರುತ್ತಿರುವ ಇತರೆ ಚಿತ್ರಗಳಿಗೆ ಹೋಲಿಸಿದರೆ, ವಿಭಿನ್ನವೆನಿಸುತ್ತದೆ.

ಸಿನಿಮಾ: ಸೂತ್ರಧಾರಿ

ಜಾನರ್: ಸಸ್ಪೆನ್ಸ್ ಥ್ರಿಲ್ಲರ್

ನಿರ್ದೇಶನ: ಕಿರಣ್ ಕುಮಾರ್

ನಿರ್ಮಾಣ: ನವರಸನ್‍

ಸಂಗೀತ: ಚಂದನ್‍ ಶೆಟ್ಟಿ

ಛಾಯಾಗ್ರಹಣ: ಪಿ.ಕೆ.ಎಚ್‍. ದಾಸ್‍

ಸಿನಿಮಾದ ಅವಧಿ: 123 ನಿಮಿಷಗಳು

ಎಚ್‍ಟಿ ಕನ್ನಡ ರೇಟಿಂಗ್‍: 3/5

ವಿಮರ್ಶೆ: ಚೇತನ್‌ ನಾಡಿಗೇರ್

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.