ಬಂದೇ ಬಿಡ್ತು ʻಸೂತ್ರಧಾರಿʼಯ ಟೈಟಲ್ ಟ್ರ್ಯಾಕ್, ಮುಂದಿನ ತಿಂಗಳೇ ಚಂದನ್ ಶೆಟ್ಟಿ ಸಿನಿಮಾ ಬಿಡುಗಡೆ
ಈಗಲ್ ಮೀಡಿಯಾ ಕ್ರಿಯೇಷನ್ಸ್‌ನ ನವರಸನ್ ನಿರ್ಮಾಣದ ಸಿನಿಮಾ ಸೂತ್ರಧಾರಿ. ಇದೇ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಬಿಡುಗಡೆಯಾಯಿತು. ವಿಜಯ್ ಈಶ್ವರ್ ಬರೆದಿರುವ ʻಸೂತ್ರಧಾರಿʼ ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೇ ಹಾಡಿದ್ದಾರೆ.

ರ್ಯಾಪರ್ ಆಗಿ ಸದ್ದು ಮಾಡಿ, ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡು, ಬಿಗ್ ಬಾಸ್ ವಿಜೇತರಾಗಿ ಕರುನಾಡಿನ ಜನರ ಮನಗೆದ್ದವರು ಚಂದನ್ ಶೆಟ್ಟಿ. ಇದೆಲ್ಲದರ ನಡುವೆ ನಾಯಕನಾಗಿಯೂ ಅದೃಷ್ಟಪರೀಕ್ಷೆ ಇಳಿದಿದ್ದಾರೆ ಚಂದನ್. ಅದರಂತೆ, ಈದೀಗ ʻಸೂತ್ರಧಾರಿʼ ಹೆಸರಿನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಪ್ರಚಾರ ಕಣಕ್ಕಿಳಿದಿರುವ ಚಿತ್ರತಂಡ, ಇದೇ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ ಮೇ 9ರಂದು ಸಿನಿಮಾ ತೆರೆಗೆ ಬರುವುದಾಗಿಯೂ ಅಧಿಕೃತ ಘೋಷಣೆ ಮಾಡಿದೆ.
ಈಗಲ್ ಮೀಡಿಯಾ ಕ್ರಿಯೇಷನ್ಸ್‌ನ ನವರಸನ್ ನಿರ್ಮಾಣದ ಸಿನಿಮಾ ಸೂತ್ರಧಾರಿ. ಇದೇ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಬಿಡುಗಡೆಯಾಯಿತು. ವಿಜಯ್ ಈಶ್ವರ್ ಬರೆದಿರುವ ʻಸೂತ್ರಧಾರಿʼ ಚಿತ್ರದ ಶೀರ್ಷಿಕೆ ಗೀತೆಯನ್ನು ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿ ಅವರೇ ಹಾಡಿದ್ದಾರೆ. ಸಂಗೀತವನ್ನೂ ಸಂಯೋಜಿಸಿದ್ದಾರೆ. A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಚಂದನ್ ಶೆಟ್ಟಿ ಹೇಳಿದ್ದೇನು?
"ನಾನು ನಾಯಕನಾಗಬೇಕೆಂಬ ಆಸೆ ನಮ್ಮ ಅಪ್ಪನದು. ಇದೇ ಮೇ 9ನೇ ತಾರೀಖು ಅವರ ಆಸೆ ಈಡೇರುತ್ತಿದೆ. ನಾನು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ ಅಂದು ಬಿಡುಗಡೆಯಾಗುತ್ತಿದೆ. ಗಾಯಕನಾಗಿ ನನ್ನನ್ನು ಎಲ್ಲರೂ ಮೆಚ್ಚಿಕೊಂಡು ಆಶೀರ್ವದಿಸಿದ್ದೀರಿ. ಈಗ ನಾಯಕನಾಗೂ ಮೆಚ್ಚಿಕೊಳ್ಳುತ್ತೀರಾ ಎಂಬ ಭರವಸೆ ಇದೆ. ಈ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನೆ. ಅಪೂರ್ವ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಂಜನಾ ಆನಂದ್, ತಬಲ ನಾಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ" ಎಂದರು ಚಂದನ್ ಶೆಟ್ಟಿ.
ಮುಂದುವರಿದು ಮಾತನಾಡಿದ ಚಂದನ್ ಶೆಟ್ಟಿ, ವಿಜಯ್ ಈಶ್ವರ್ ಅವರು ಬರೆದು ನಾನೇ ಹಾಡಿ ಸಂಗೀತವನ್ನೂ ನೀಡಿರುವ ಚಿತ್ರದ ಶೀರ್ಷಿಕೆ ಗೀತೆ ಇಂದು ಬಿಡುಗಡೆಯಾಗಿದೆ. ಸೂತ್ರಧಾರಿ ಚಿತ್ರದ ಡ್ಯಾಶ್ ಸಾಂಗ್ ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಈ ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ. ಉತ್ತಮ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ. ಈ ಚಿತ್ರದಲ್ಲಿ ನಾನು ನಾಯಕನಾಗಿ ನಟಿಸಲು ನವರಸನ್ ಅವರೇ ಮುಖ್ಯ ಕಾರಣ ಅವರಿಗೆ ವಿಶೇಷ ಧನ್ಯವಾದ ಎಂದರು ಚಂದನ್ ಶೆಟ್ಟಿ.
ನಿರ್ಮಾಪಕರ ಮಾತು
ʻಸೂತ್ರಧಾರಿʼ ಸಿನಿಮಾ ಆರಂಭವಾದಾಗಿನಿಂದಲೂ ತಾವೆಲ್ಲರೂ ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ಇನ್ನೂ ಸದಾ ನನ್ನ ಎಲ್ಲಾ ಕೆಲಸಗಳಿಗೂ ಜೊತೆಗಿದ್ದು, ಪ್ರೋತ್ಸಾಹ ನೀಡುವ ಸಾಯಿ ಗೋಲ್ಡ್ ಪ್ಯಾಲೆಸ್‌ನ ಶರವಣ, ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್, ಗಜೇಂದ್ರ ಮುಂತಾದವರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ. ವಿಜಯ್ ಈಶ್ವರ್ ಅವರು ಬರೆದಿರುವ ಈ ಚಿತ್ರದ ಟೈಟಲ್ ಸಾಂಗ್ ತುಂಬಾ ಚೆನ್ನಾಗಿದೆ. ಅರ್ಥಗರ್ಭಿತ ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ. ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕ ನವರಸನ್.
ಚಿತ್ರದ ನಿರ್ದೇಶಕ ಕಿರಣ್ ಕುಮಾರ್, ನಾಯಕಿ ಅಪೂರ್ವ, ನಟ ತಬಲ ನಾಣಿ ಹಾಗೂ ಹಾಡು ಬರೆದಿರುವ ವಿಜಯ್ ಈಶ್ವರ್ ಮುಂತಾದವರು ಮಾತನಾಡಿದರು. ಸಾಯಿ ಗೋಲ್ಡ್ ಪ್ಯಾಲೆಸ್‌ನ ಶರವಣ ಈ ಸಮಾರಂಭ ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ನಿರ್ಮಾಪಕರಾದ ಚೇತನ್ ಗೌಡ, ಜಗದೀಶ್ ಗೌಡ, ರಾಜೇಶ್ ಹಾಗೂ ಗಜೇಂದ್ರ ಅವರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.