'ನೋಡಿದವರು ಏನಂತಾರೆ' ಸಿನಿಮಾ ವಿಮರ್ಶೆ; ಇದು ನಮ್ಮೊಳಗಿನ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳುವ ಪರಿ
ನವೀನ್ ಶಂಕರ್ ಅಭಿನಯದ 'ನೋಡಿದವರು ಏನಂತಾರೆ' ಸಿನಿಮಾ ಬಿಡುಗಡೆಯಾಗಿದೆ. ಯಾವುದೇ ಕೆಲಸ ಮಾಡಲು ಹೋದರೂ ನಮ್ಮ ತೃಪ್ತಿಗಿಂತ "ನೋಡಿದವರು ಏನಂತಾರೆ?" ಎನ್ನುವ ಪ್ರಶ್ನೆಯೇ ನಮ್ಮಲ್ಲಿ ಮೂಡುತ್ತದೆ. ಈ ಸಿನಿಮಾ ಕೂಡ ಅದೇ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿದೆ.

'ನೋಡಿದವರು ಏನಂತಾರೆ' ಸಿನಿಮಾ ಜನವರಿ 31ರಂದು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾದ ಹೆಸರೇ ಕುತೂಹಲ ಮೂಡಿಸುವಂತಿದೆ. ಇದೊಂದು ಭಾವಯಾನಕ್ಕೆ ವೀಕ್ಷಕರನ್ನು ಕರೆದೊಯ್ಯುತ್ತದೆ. ನವೀನ್ ಶಂಕರ್ ಅಭಿನಯವೇ ಚಿತ್ರದುದ್ದಕ್ಕೂ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ನಾಯಕ ಇಲ್ಲದ ಒಂದು ದೃಶ್ಯವೂ ಈ ಸಿನಿಮಾದಲ್ಲಿ ಇಲ್ಲ ಎಂದೇಹೇಳಬಹುದು. “ಬೆಂಗಳೂರಿನಲ್ಲಿದ್ದುಕೊಂಡು, ಒಳ್ಳೆಯ ಕೆಲಸ ಹಾಗೂ ಸಂಪಾದನೆ ಮಾಡಿಕೊಂಡು ಬದುಕುತ್ತಿದ್ದರೂ ಜೀವನದಲ್ಲಿ ನೆಮ್ಮದಿಯೇ ಇಲ್ಲ. ನಾವು ಇನ್ನೊಬ್ಬರ ಮಾತನ್ನು ಕೇಳಿಕೊಂಡು ಅವರ ಕೈಕೆಳಗೆ ದಾಸರಾಗಿ ಬದುಕುತ್ತಿದ್ದೇವೆ” ಎಂದೆನಿಸುವ ಎಲ್ಲರಿಗೂ ಈ ಸಿನಿಮಾ ಹತ್ತಿರವಾಗುತ್ತಾ ಹೋಗುತ್ತದೆ. ಮುಖ್ಯವಾಗಿ ಯುವಜನತೆಯನ್ನು ಈ ಸಿನಿಮಾ ಹೆಚ್ಚಾಗಿ ಆವರಿಸುತ್ತದೆ.
ಸಿನಿಮಾ ಹೇಗಿದೆ?
ಸಿನಿಮಾದಲ್ಲಿ ಜನರ ಭಾವನೆಯನ್ನು ನೇರವಾಗಿ ಸಂಪರ್ಕಿಸುತ್ತದೆ. ಚಿತ್ರದ ನಾಯಕನ ಪರಿಸ್ಥಿತಿ ಹೇಗಿದೆಯೋ ಇಂದು ಸಾಕಷ್ಟು ಜನ ಅದೇ ರೀತಿ ಬದುಕುತ್ತಿದ್ದಾರೆ. ಕೆಲಸ ಮಾಡಿ ಹಣ ಸಂಪಾದನೆ ಮಾಡಬೇಕು, ನಮ್ಮ ಜೀವನ ನಾವು ನಡೆಸಿಕೊಳ್ಳಬೇಕು ಎನ್ನುವುದಕ್ಕಿಂದ ಹೆಚ್ಚಾಗಿ ಕೌಟುಂಬಿಕ ಒತ್ತಾಯಗಳೇ ಹೆಚ್ಚಾಗಿ, ಅವರ ನಿರೀಕ್ಷೆಗೆ ತಕ್ಕಂತೆ ಮಕ್ಕಳು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ನೋಡಿದವರು ಏನಂತಾರೆ? ಇದೊಂದೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗದ ಎಷ್ಟೋ ಜನರಿದ್ದಾರೆ. ಅವರೆಲ್ಲರ ಪ್ರಶ್ನೆಗೂ ಉತ್ತರವಾಗಿ ನಿಲ್ಲುವ ಸಿನಿಮಾ ಇದು.
ಸಿನಿಮಾದ ತುಂಬೆಲ್ಲ ಸುಂದರ ನೋಟ
ಸಿನಿಮಾದ ಛಾಯಾಗ್ರಹಣ ಹಾಗೂ ಸಂಕಲನ ಚೆನ್ನಾಗಿದೆ. ಕೆಲ ದೃಶ್ಯಗಳನ್ನು ವಿಶೇಷವಾಗಿ ಕಟ್ಟಿಕೊಟ್ಟಿದ್ದಾರೆ. ಹಳ್ಳಿ ಹಾಗೂ ಪೇಟೆ ಹೀಗೆ ಪ್ರತ್ಯೇಕತೆ ಬಂದಾಗಲೂ ಎರಡೂ ಸ್ಥಳಗಳ ಅಂದವನ್ನು ತುಂಬಾ ಸುಂದರವಾಗಿ ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಕಲನವೂ ಚೆನ್ನಾಗಿ ಮೂಡಿಬಂದಿದೆ.
ಮೂರು ಮುಖ್ಯ ಪಾತ್ರಗಳು
ನವೀನ್ ಶಂಕರ್ ಅಭಿನಯದ ಮೂಲಕ ಎಲ್ಲರನ್ನೂ ಮುಟ್ಟುತ್ತಾರೆ. ಇನ್ನು ನಟಿ ಅಪೂರ್ವ ಭಾರದ್ವಾಜ್ ಚಿತ್ರದಲ್ಲಿ ತುಂಬಾ ಬೋಲ್ಡ್ ಆಗಿ ನಟಿಸಿದ್ದಾರೆ. ಕೆಲ ಬೋಲ್ಡ್ ಸೀನ್‌ಗಳನ್ನು ನೋಡುತ್ತಿದ್ದರೆ, ಇದು ಕನ್ನಡದ ಸಿನಿಮಾ ಹೌದೋ ಅಲ್ಲವೋ ಎಂಬ ಅನುಮಾನ ಮೂಡುವಂತಿದೆ. ಮಲ್ಲಪ್ಪ ಎನ್ನುವ ಹುಡುಗನ ಪಾತ್ರವೂ ನೋಡುಗರನ್ನು ರಂಜಿಸಿದೆ.
ಭಾವನೆಗಳಿಗೆ ಒತ್ತು ಕೊಡಲು ಹೋಗಿ ನಿಧಾನವಾಯ್ತು ಸಿನಿಮಾ
ಸಿನಿಮಾ ಕಥೆಯೇ ಸಂಪೂರ್ಣ ಭಾವನಾತ್ಮಕವಾಗಿದೆ. ಒಬ್ಬ ಯುವಕನ ನೋವಿದೆ. ತನ್ನ ಜೀವನವನ್ನು ಮೂರಾಬಟ್ಟೆ ಮಾಡಿದ ತಾಯಿಯ ಬಗ್ಗೆ ಕಿಚ್ಚಿದೆ. ಅಪ್ಪನ ಪ್ರೀತಿಯ ಪರಿ ಇದೆ. "ಈ ಹೆಂಗಸರೇ ಇಷ್ಟು ಬರೀ ಮೋಸ" ಎನ್ನುವ ಮಾತಿದೆ. ಇಷ್ಟೆಲ್ಲವನ್ನೂ ತುಂಬಾ ಭಾವನಾತ್ಮಕ ಮತ್ತು ಕಾವ್ಯಾತ್ಮಕವಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ ಈ ಭಾವನೆಗಳನ್ನು ಹಿಡಿದಿಡುವ ಹೊತ್ತಿಗೆ ಸಿನಿಮಾದ ಮೊದಲಾರ್ಧ ತುಂಬಾ ನಿಧಾನವಾಗಿ ಸಾಗುತ್ತದೆ. ಇನ್ನಷ್ಟು ವೇಗವಾಗಿ ಇರಬಹುದಿತ್ತು.
ಚಿತ್ರದ ನಡುವೆ ಬರುವ ಕವಿತೆಗಳು, ಭಾವನಾತ್ಮಕ ಸಾಲುಗಳು ಆ ಸಾಲಿನಲ್ಲಿ ಪೋಣಿಸಿದ ಕನ್ನಡದ ಬಳಕೆ ಎಲ್ಲವೂ ಚೆನ್ನಾಗಿದೆ. ಆದರೆ ನಟ ಹಾಗೂ ನಟಿ ನಡುವಿನ ಸಂಭಾಷಣೆಗಳು ಹೆಚ್ಚು ಇಂಗ್ಲೀಷ್‌ನಲ್ಲೇ ನಡೆದಿರುವುದು ಕಿರಿಕಿರಿ ಉಂಟುಮಾಡುತ್ತದೆ.
ತಾರಾಗಣ: ನವೀನ್ ಶಂಕರ್, ಅಪೂರ್ವ ಭಾರದ್ವಾಜ್, ಪದ್ಮಾವತಿ ರಾವ್ (ಅಕ್ಷತಾ ರಾವ್), ಐರಾ ಕೃಷ್ಣ, ರಾಜೇಶ್ ಮತ್ತು ಇತರರು
ನಿರ್ದೇಶನ: ಕುಲದೀಪ್ ಕಾರಿಯಪ್ಪ
ಸಂಗೀತ: ಮಯೂರೇಶ್ ಅಧಿಕಾರಿ
ಛಾಯಾಗ್ರಹಣ: ಅಶ್ವಿನ್ ಕೆನಡಿ
ಸಂಕಲನ: ಮನು ಶೆಡಗಾರ್
ನಿರ್ಮಾಣ: ನಾಗೇಶ್ ಗೋಪಾಲ್ ಮತ್ತು ಮೋನಿಷಾ ಗೌಡ
ರೇಟಿಂಗ್: 3/5
ವಿಮರ್ಶೆ: ಸುಮಾ ಕಂಚೀಪಾಲ್
