Darshan: ಚಾಲೆಂಜ್ ಹೀರೋ ಬಿರುದು ದೊರೆತು ಇಂದಿಗೆ 20 ವರ್ಷಗಳು; ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿದ್ದು ಹೇಗೆ, ಇಲ್ಲಿದೆ ನೋಡಿ ಡೀಟೆಲ್ಸ್
ಚಿತ್ರರಂಗದಲ್ಲಿ ಮುಂದೆ ಬರಲು ಸಾಕಷ್ಟು ಚಾಲೆಂಜ್ ಎದುರಿಸಿದ ದರ್ಶನ್ ಇಂದು ಚಾಲೆಂಜಿಂಗ್ ಸ್ಟಾರ್ ಎಂದೇ ಹೆಸರಾಗಿದ್ದಾರೆ. ಅಭಿಮಾನಿಗಳು ದರ್ಶನ್‌ಗೆ ಮೊದಲು 'ಚಾಲೆಂಜ್ ಹೀರೋ' ಎಂಬ ಬಿರುದು ನೀಡಿದ್ದರು. ಈ ಬಿರುದು ನೀಡಿ ಇಂದಿಗೆ (ಮೇ 23) 20 ವರ್ಷಗಳು ತುಂಬಿದೆ.
1997ರಲ್ಲಿ ತೆರೆ ಕಂಡ 'ಮಹಾಭಾರತ' ಸಿನಿಮಾ ಮೂಲಕ ಬಣ್ಣ ಹಚ್ಚಿದ ನಟ ದರ್ಶನ್ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ದರ್ಶನ್ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದರೂ ಅದಕ್ಕೂ ಮುನ್ನ ಅವರು ಸುಮಾರು ಸಿನಿಮಾಗಳಲ್ಲಿ ಪೋಷಕ ನಟನ ಪಾತ್ರದಲ್ಲಿ ನಟಿಸಿದ್ದರು.
ಇದೀಗ ಅಭಿಮಾನಿಗಳ ಪ್ರೀತಿಯ ದಾಸ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಖ್ಯಾತ ಖಳನಟನ ಮಗನಾದರೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ದರ್ಶನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಸ್ಟಾರ್ ನಟನಾಗಿ ಬದಲಾಗುವ ಮುನ್ನ ದರ್ಶನ್ ಲೈಟ್ ಬಾಯ್ ಆಗಿ ಕೂಡಾ ಕೆಲಸ ಮಾಡುತ್ತಿದ್ದರು. ಅನೇಕ ಅವಮಾನ ಎದುರಿಸಿದ್ದರು. ಚಿತ್ರರಂಗದಲ್ಲಿ ಮುಂದೆ ಬರಲು ಸಾಕಷ್ಟು ಚಾಲೆಂಜ್ ಎದುರಿಸಿದ ದರ್ಶನ್ ಇಂದು ಚಾಲೆಂಜಿಂಗ್ ಸ್ಟಾರ್ ಎಂದೇ ಹೆಸರಾಗಿದ್ದಾರೆ. ಅಭಿಮಾನಿಗಳು ದರ್ಶನ್‌ಗೆ ಮೊದಲು 'ಚಾಲೆಂಜ್ ಹೀರೋ' ಎಂಬ ಬಿರುದು ನೀಡಿದ್ದರು. ಈ ಬಿರುದು ನೀಡಿ ಇಂದಿಗೆ (ಮೇ 23) 20 ವರ್ಷಗಳು ತುಂಬಿದೆ.
ಮೈಸೂರಿನ ಹೂಟಗಳ್ಳಿಯಲ್ಲಿ ನಡೆದ ಕಾರ್ಯಕ್ರಮ
20 ಮೇ 2003 ರಂದು ಅಭಿಮಾನಿಗಳು ಮೈಸೂರಿನ ಹೂಟಗಳ್ಳಿ ಬಳಿ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಸನ್ಮಾನ ಮಾಡಿದ್ದರು. 4 ದಿನಗಳ ಹಿಂದಷ್ಟೇ ದರ್ಶನ್ ಮದುವೆ ಆಗಿದ್ದರು. ತಮಗಾಗಿ ಫ್ಯಾನ್ಸ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನವ ದಂಪತಿ ಹಾಜರಾಗಿ ಅಭಿಮಾನಿಗಳ ಸನ್ಮಾನವನ್ನು ಸ್ವೀಕರಿಸಿದ್ದರು. ದರ್ಶನ್ ಆಪ್ತ ದೇಶಿಗೌಡ ಎನ್ನುವವರು ತಮ್ಮ ಮೆಚ್ಚಿನ ದರ್ಶನ್‌ಗೆ ಚಾಲೆಂಜ್ ಹೀರೋ ಎಂಬ ಬಿರುದು ನೀಡಿದ್ದರು. ಈ ಕಾರ್ಯಕ್ರಮದ ಫೋಟೋಗಳು ದರ್ಶನ್ ಅಭಿಮಾನಿಗಳ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹರಿದಾಡುತ್ತಿದೆ.
ಚಾಲೆಂಜ್ ಹೀರೋ ಬಿರುದು ದೊರೆತರ ನಂತರ ದರ್ಶನ್ ಅಭಿನಯದ 'ದಾಸ' ಸಿನಿಮಾ ತೆರೆ ಕಂಡಿತ್ತು. ಈ ಚಿತ್ರದ ಟೈಟಲ್ ಕಾರ್ಡಿನಲ್ಲಿ 'ಚಾಲೆಂಜ್ ಹೀರೋ' ಬದಲಿಗೆ 'ಚಾಲೆಂಜಿಂಗ್ ಹೀರೋ' ಎಂದು ಬರೆಯಲಾಗಿತ್ತು. ನಂತರ ರೆಬೆಲ್ ಸ್ಟಾರ್ ಜೊತೆ ನಟಿಸಿದ್ದ 'ಅಣ್ಣಾವ್ರು' ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ದರ್ಶನ್ ಬಿರುದನ್ನು 'ಚಾಲೆಂಜಿಂಗ್ ಸ್ಟಾರ್' ಎಂದು ಬರೆಯಲಾಗಿತ್ತು. ಅಂದಿನಿಂದ ಅದೇ ಬಿರುದು ಫಿಕ್ಸ್ ಆಯ್ತು. ದಾಸ, ಚಾಲೆಂಜಿಂಗ್ ಸ್ಟಾರ್ ಎಂಬ ಪದಗಳ ಜೊತೆಗೆ ಈಗ ಅಭಿಮಾನಿಗಳು ದರ್ಶನ್ ಅವರನ್ನು ಹೆಚ್ಚಾಗಿ 'ಡಿ ಬಾಸ್' ಎಂದು ಕರೆಯುತ್ತಿದ್ದಾರೆ. ಇದು ಅವರ ಅಭಿಮಾನ ಬಳಗ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.
'ಕಾಟೇರ' ಚಿತ್ರದಲ್ಲಿ ದರ್ಶನ್ ಬ್ಯುಸಿ
ಕ್ರಾಂತಿ ಸಿನಿಮಾ ನಂತರ ದರ್ಶನ್ ಕಾಟೇರ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಚಾರದಲ್ಲಿ ಬ್ಯುಸಿ ಇದ್ದ ದರ್ಶನ್ ಕೆಲವು ದಿನಗಳ ಕಾಲ ಶೂಟಿಂಗ್‌ನಿಂದ ದೂರ ಉಳಿದಿದ್ದರು. ಇದೀಗ ಚಿತ್ರೀಕರಣ ಮತ್ತೆ ಭರದಿಂದ ಸಾಗಿದೆ. 'ಕಾಟೇರ', ದರ್ಶನ್ ಅಭಿನಯದ 56ನೇ ಸಿನಿಮಾ. ಈ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸುತ್ತಿದ್ದಾರೆ. ಇತ್ತೀಚೆಗೆ ರಾಧನಾ, ಪ್ರಭಾವತಿ ಪಾತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗುತ್ತಿರುವ ಸಿನಿಮಾ. ಕಾಟೇರ ಚಿತ್ರವನ್ನು ರಾಕ್‌ಲೈನ್ ಸ್ಟುಡಿಯೋಸ್ ಬ್ಯಾನರ್ ಅಡಿ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದರೆ, ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ 'ರಾಬರ್ಟ್' ನಂತರ ಈ ಜೋಡಿ ಮತ್ತೆ ಈ ಸಿನಿಮಾ ಮೂಲಕ ಒಂದಾಗಿದ್ದಾರೆ.