ಕನ್ನಡ ಸುದ್ದಿ  /  ಮನರಂಜನೆ  /  Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ; ವಾಸ್ತವಕ್ಕೆ ಹತ್ತಿರವಾಗಿರುವ ಕಥೆಗಳ ಮೂಲಕ ಗಮನ ಸೆಳೆಯುತ್ತಿದೆ ಗ್ರಾಮೀಣ ಯುವಕರ ತಂಡ

Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ; ವಾಸ್ತವಕ್ಕೆ ಹತ್ತಿರವಾಗಿರುವ ಕಥೆಗಳ ಮೂಲಕ ಗಮನ ಸೆಳೆಯುತ್ತಿದೆ ಗ್ರಾಮೀಣ ಯುವಕರ ತಂಡ

Kannada Short Movies: ಮಂಗಳೂರಿನ ಯುವಕರ ತಂಡವೊಂದು ಪೀಠ ಕ್ರಿಯೇಷನ್ಸ್‌ನಡಿ "ಆರ್ಯೆ" ಎಂಬ ಕನ್ನಡ ಕಿರುಚಿತ್ರವನ್ನು ಬಿಡುಗಡೆ ಮಾಡಿದೆ. ಈಗಾಗಲೇ ಈ ಗ್ರಾಮೀಣ ಪ್ರತಿಭೆಗಳನ್ನು ಒಳಗೊಂಡ ಟೀಮ್‌ ಹದಿನಾರು ಕನ್ನಡ, ತುಳು ಕಿರುಚಿತ್ರಗಳನ್ನು ರಿಲೀಸ್‌ ಮಾಡಿದೆ.

Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ
Short Movies: ಆರ್ಯೆ ಕನ್ನಡ ಕಿರುಚಿತ್ರ ಬಿಡುಗಡೆ

ಮಂಗಳೂರು ವಿಶ್ವವಿದ್ಯಾಲಯದ ಕೊಡವ ಅಧ್ಯಯನ ಕೇಂದ್ರದಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ದಿಲೀಪ್‌ ರೈ ನಿರ್ದೇಶನದ ಕನ್ನಡ ಕಿರುಚಿತ್ರ "ಆರ್ಯೆ" ಬಿಡುಗಡೆಯಾಗಿದೆ. ಮಂಗಳೂರು, ಪುತ್ತೂರಿನ ಸ್ನೇಹಿತರ ಗುಂಪಿನೊಂದಿಗೆ ದಿಲೀಪ್‌ ರೈ ಈಗಾಗಲೇ "ಪೀಠ ಕ್ರಿಯೇಷನ್‌"ನಡಿ ಹದಿನಾರು ಶಾರ್ಟ್‌ ಮೂವಿಗಳನ್ನು ಹೊರತಂದಿದ್ದಾರೆ. ಆರ್ಯೆ ಎಂಬ ಕಿರುಚಿತ್ರ ಮೇ 2ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಜನರಿಂದ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ದಿಲೀಪ್‌ ರೈ ಜತೆಗೆ ಅವರ ಕಿರುಚಿತ್ರ ಜರ್ನಿಯ ಕುರಿತು ಮಾತನಾಡಿದ್ದು, ಆರ್ಯೆ ಮತ್ತು ಇತರೆ ಕಿರುಚಿತ್ರಗಳ ಬಗ್ಗೆ, ಶಾರ್ಟ್‌ ಮೂವಿಗಳನ್ನು ಮಾಡುವ ಸವಾಲುಗಳ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಪೀಠ ಕ್ರಿಯೇಷನ್‌ನ ಬಹುತೇಕ ಕಿರುಚಿತ್ರಗಳು ವೀಕ್ಷಕರನ್ನು ಯೋಚನೆಗೆ ಹಚ್ಚುವಂತೆ ಮಾಡುತ್ತದೆ. ಯಾವುದೇ ಕಾಲ್ಪನಿಕ ಸಂಗತಿಗಳನ್ನು ತುರುಕದೇ ವಾಸ್ತವಕ್ಕೆ ಹತ್ತಿರವಾಗಿರುವಂತೆ ಶಾರ್ಟ್‌ ಮೂವಿಗಳನ್ನು ಹೊರತರುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್ಯೆ ಕನ್ನಡ ಕಿರುಚಿತ್ರದ ಬಗ್ಗೆ

ಆರ್ಯೆ ಎಂದರೆ ಹೆಣ್ಣು ಎಂಬ ಪದಕ್ಕೆ ಇರುವ ಸಮಾನಾರ್ಥಕ ಪದವಾಗಿದೆ. ಈ ಕಿರುಚಿತ್ರದಲ್ಲಿ ಶಿಕ್ಷಣ ಸಂಸ್ಥೆಯೊಂದರ ಬೋಧಕರಿಂದ ವಿದ್ಯಾರ್ಥಿನಿಗೆ, ಮೇಲಾಧಿಕಾರಿಯಿಂದ ಮಹಿಳಾ ಉದ್ಯೋಗಿಗೆ ಆಗುವ ಕಿರುಕುಳದ ವಿವರ ಇದೆ. ಜತೆಗೆ, ಇಂತಹ ಘಟನೆ ನಡೆದಾಗ ಅಪರಾಧಿಗಳಿಗೆ ಶಿಕ್ಷೆ ನೀಡುವ ಅಗತ್ಯವನ್ನೂ ಹೇಳಿದೆ. ಆರ್ಯೆ ಎಂಬ ಮಹಿಳಾ ಪ್ರಧಾನ ಕಿರುಚಿತ್ರದಲ್ಲಿ ಸುನಿಲ್‌ ಪಲ್ಲಮಜಲು (ಒಂದು ಮೊಟ್ಟೆಯ ಕಥೆ ಸಿನಿಮಾದ ನಟ), ಶ್ರೀದೇವಿ ಶಶಾಂಕ್‌, ರಮಿತಾ ಕುಡುಪು, ಧನುಶ್‌ ಕುಡುಪು, ಯತೀಶ್‌ ಕುಡುಪು, ಅಶ್ವಿತಾ ಕುಂದಾಪುರ, ದಾಮೋದರ್‌ ಕನ್ನಜಾಲು, ಕಿರಣ್‌ ಮಂಗಳನಗರ, ವಿನ್ಯಾಸ್‌, ಪ್ರಶಾಂತ್‌, ಹೇಮಾ ಮಹೇಶ್‌, ಜೆಶಾಲ್‌ ಡಿಸೋಜಾ, ಶ್ರವಣ್‌ ಮತ್ತು ಪುತ್ತೂರಿನ ಅಕ್ಷಯ್‌ ಕಾಲೇಜಿನ ವಿದ್ಯಾರ್ಥಿಗಳು ನಟಿಸಿದ್ದಾರೆ.

ಆರ್ಯೆ ಕಿರುಚಿತ್ರ ನಿರ್ದೇಶಕ ದಿಲೀಪ್‌ ರೈ ಕೆವಿ
ಆರ್ಯೆ ಕಿರುಚಿತ್ರ ನಿರ್ದೇಶಕ ದಿಲೀಪ್‌ ರೈ ಕೆವಿ

ಈ ಕಿರುಚಿತ್ರಕ್ಕೆ ದಿಲೀಪ್‌ ರೈ ಕಥೆ, ಸಂಕಲನ, ನಿರ್ದೇಶನವಿದೆ. ಮಹೇಶ್‌ ಮೂಲ್ಯ ಸಿನಿಮಾಟೊಗ್ರಫಿ, ಎಕ್ಸಿಕ್ಯೂಟಿವ್‌ ಪ್ರೊಡ್ಯುಸರ್‌ ಆಗಿ ಯತೀಶ್‌ ಕುಡುಪು, ಮ್ಯೂಸಿಕ್‌ ಡಿಜೆ ಸ್ಯಾಂಡಿ, ಪೋಸ್ಟರ್‌ ವಿನ್ಯಾಸ ಜೀವನ್‌ ಆಚಾರ್ಯ, ಟೈಟಲ್‌ ಅನಿಮೇಷನ್‌ ಶಶಾಂಕ್‌ ವಾಮಂಜೂರು ಮತ್ತು ಶ್ರೀದೇವಿ ಕಲ್ಲಡ್ಕ, ರಾಘವೇಂದ್ರ ಕೆಕೆ ಡಬ್ಬಿಂಗ್‌ಗೆ ಸಹಕರಿಸಿದ್ದಾರೆ.

ಆರ್ಯೆ ಕನ್ನಡ ಶಾರ್ಟ್‌ ಮೂವಿ ನೋಡಿ

"ಮಂಗಳೂರು ಪರಿಸರದ ಒಂದಿಷ್ಟು ಸ್ನೇಹಿತರು ಸೇರಿಕೊಂಡು ಹಲವು ವರ್ಷಗಳಿಂದ ಈ ರೀತಿ ಕಿರುಚಿತ್ರ ಮಾಡುತ್ತ ಬಂದಿದ್ದೇವೆ. ಈಗಾಗಲೇ ಹಲವು ಕಿರುಚಿತ್ರಗಳು ಸಾಕಷ್ಟು ಜನರ ಗಮನ ಸೆಳೆದಿದೆ. ಪೊಲೀಸ್‌ ಡ್ಯೂಟಿ ಎಂಬ ಶಾರ್ಟ್‌ ಮೂವಿ 391ಕೆ ವೀಕ್ಷಣೆ ಪಡೆದಿದೆ. ಈ ಶಾರ್ಟ್‌ ಮೂವಿಯನ್ನು ಐಪಿಎಸ್‌ ಅಧಿಕಾರಿ ರವಿ ಚನ್ನಣ್ಣನವರ್ ಇಷ್ಟಪಟ್ಟು ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಂಗಳೂರು ಪೊಲೀಸರು ನಮ್ಮೆಲ್ಲರನ್ನು ಕರೆದು ಆತಿಥ್ಯ ನೀಡಿದ್ದರು. ಸ್ಕೂಲ್‌ ಅಡ್ಮಿಷನ್‌ ಎಂಬ ಶಾರ್ಟ್‌ ಮೂವಿಯೂ ಇದೇ ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಪೀಠ ಕ್ರಿಯೇಷನ್‌ ಹೊರತಂದ ಭಟ್ರೆ ಕಲ್ಲುರ್ಟಿ ಎಂಬ ಭಕ್ತಿಗೀತೆ ಸಾಕಷ್ಟು ಫೇಮಸ್‌ ಆಗಿದೆ. ಕಾಕಜಿ ಬತ್ತುಂಡ್‌ ಎಂಬ ತುಳು ಶಾರ್ಟ್‌ ಮೂವಿ ಕುರಿತು ಸಾಕಷ್ಟು ಜನರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಶವರ್ಮ ಎಂಬ ಸ್ಪೂರ್ತಿದಾಯಕ ಶಾರ್ಟ್‌ ಮೂವಿಯೂ ಫೇಮಸ್‌ ಆಗಿತ್ತು. ಇದೆಲ್ಲ ನಮಗೆ ಖುಷಿ ನೀಡಿದೆ. ಆರ್ಯೆ ಸೇರಿದಂತೆ ಒಟ್ಟು 16 ಶಾರ್ಟ್‌ ಮೂವಿ ಹೊರತಂದಿದ್ದೇವೆ ಎಂದು ದಿಲೀಪ್‌ ರೈ ಮಾಹಿತಿ ನೀಡಿದ್ದಾರೆ.

ಪೊಲೀಸ್‌ ಡ್ಯೂಟಿ ಕಿರುಚಿತ್ರ ವೀಕ್ಷಿಸಿ

"ನಾವು ನಮ್ಮ ಬಜೆಟ್‌ಗೆ ತಕ್ಕಂತೆ ಸ್ಕ್ರಿಪ್ಟ್‌ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ರಾತ್ರಿ ಶೂಟಿಂಗ್‌ ಇರುವುದನ್ನು ಅವಾಯ್ಡ್‌ ಮಾಡುತ್ತೇವೆ. ರಾತ್ರಿ ಶೂಟಿಂಗ್‌ ಮಾಡಬೇಕಿದ್ದರೆ ಬಜೆಟ್‌ ಹೆಚ್ಚು ಬೇಕಾಗುತ್ತದೆ. ಹೆಚ್ಚು ಲೊಕೆಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅಷ್ಟೆಲ್ಲ ಬಜೆಟ್‌ ಹೊಂದಿಸುವುದು ಕಷ್ಟ. ಜತೆಗೆ, ಹಾಕಿದ ಹಣ ಬರುವ ಖಾತ್ರಿ ಇರುವುದಿಲ್ಲ. ಸ್ಪಾನ್ಸರ್‌ಗಳ ಸಹಕಾರವನ್ನು ಪಡೆಯುತ್ತೇವೆ. ನಮ್ಮ ಸ್ನೇಹಿತರ ತಂಡದಲ್ಲಿ ಯಾವ ಪ್ರತಿಭೆ ಇದೆಯೋ ಅದಕ್ಕೆ ತಕ್ಕಂತೆ ಸ್ಕ್ರಿಪ್ಟ್‌ ಮಾಡುತ್ತೇವೆ. ನಮ್ಮ ಬಹುತೇಕ ಶಾರ್ಟ್‌ ಮೂವಿಗಳು ಒಳ್ಳೆಯ ಸಂದೇಶ ನೀಡುವ ಕಾರಣ ಫೇಮಸ್‌ ಆಗಿವೆ. ನನಗೆ ಏನು ಸಾಧ್ಯವಿದೆಯೋ ಅದನ್ನು ಮಾಡಬೇಕು. ನನಗೆ ಹಾಸ್ಯ ಪಾತ್ರ ಮಾಡಲು ಸಾಧ್ಯವಿಲ್ಲ" ಎಂದು ದಿಲೀಪ್‌ ಹೇಳಿದ್ದಾರೆ.

ಸ್ಕೂಲ್‌ ಅಡ್ಮಿಷನ್‌ ಕಿರುಚಿತ್ರ ವೀಕ್ಷಿಸಿ

IPL_Entry_Point