Martin Movie: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಅಕ್ಟೋಬರ್ 11ರಂದು ರಿಲೀಸ್ ಕನ್ಫರ್ಮ್! ಬಿಡುಗಡೆಗಿಲ್ಲ ಯಾವುದೇ ವಿಘ್ನ
Dhruva Sarja Martin Movie: ಎಪಿ ಅರ್ಜುನ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆಯಾಗಲಿದೆ. ಅದರಂತೆ ರಿಲೀಸ್ ತಯಾರಿಯೂ ಶುರುವಾಗಿದ್ದು, ಬಾಕಿ ಉಳಿದ ಕೆಲಸಗಳನ್ನು ಮುಗಿಸಿಕೊಳ್ಳುತ್ತಿದೆ ಚಿತ್ರತಂಡ.
ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಮಾರ್ಟಿನ್ ಸಿನಿಮಾವು ಒಂದು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 5ನೇ ಸಿನಿಮಾ ಇದಾಗಿದೆ. ಈ ಸಿನಿಮಾಕ್ಕೆ ಕಥೆ ಬರೆದದ್ದು ಧ್ರುವನ ಮಾವ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ . ಈ ಸಿನಿಮಾದ ಮೂಲಕ ಧ್ರುವ ಸರ್ಜಾ ಮತ್ತು ನಿರ್ದೇಶಕ ಎಪಿ ಅರ್ಜುನ್ ಜತೆಯಾಗಿದ್ದಾರೆ. ಇದಕ್ಕೂ ಮೊದಲು ಧ್ರುವ ಸರ್ಜಾ ಈ ನಿರ್ದೇಶಕರ ಜತೆ 2012ರಲ್ಲಿ ಅದ್ಧೂರಿ ಸಿನಿಮಾ ಮಾಡಿದ್ದರು. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರ ಬಿಗ್‌ಬಜೆಟ್‌ನ ಮಾರ್ಟಿನ್ ಸಿನಿಮಾವು 2022ರ ದಸರಾ ಸಮಯದಲ್ಲಿ ಬಿಡುಗಡೆಯಾಗಬೇಕಿತ್ತು. ಸಿನಿಮಾ ನಿರ್ಮಾಣ ಮತ್ತು ನಿರ್ಮಾಣ ಬಳಿಕದ ಕೆಲಸಗಳಿಂದ ಮಾರ್ಟಿನ್ ಬಿಡುಗಡೆ ವಿಳಂಬವಾಗಿತ್ತು. 2021ರಲ್ಲಿ ಸೆಟ್ಟೇರಿದ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. 2024ರ ಈ ಸಮಯದಲ್ಲೂ ಮಾರ್ಟಿನ್ ಬಿಡುಗಡೆ ದಿನಾಂಕದ ಕುರಿತು ಗೊಂದಲಗಳಿದ್ದವು.
ಅಪ್‌ಡೇಟ್ (ಜುಲೈ 20): ಮಾರ್ಟಿನ್ ಸಿನಿಮಾ ಬಿಡುಗಡೆ ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ. ದೇಶ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಮಾರ್ಟಿನ್ ಅನ್ನು ಈ ಮೊದಲೇ ನಿಗದಿಪಡಿಸಿದ ದಿನಾಂಕದಂದು (ಸೆಪ್ಟೆಂಬರ್ 11) ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲಾಗುವುದು ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ಮಾರ್ಟಿನ್ ನಿರ್ಮಾಪಕ ಉದಯ್ ಕೆ ಮಹ್ತಾ ಇದೀಗ ಸ್ಪಷ್ಟಪಡಿಸಿದ್ದಾರೆ.
ಮಾರ್ಟಿನ್ ಸಿನಿಮಾ ಬಿಡುಗಡೆ ದಿನಾಂಕ
ಎಲ್ಲರಿಗೂ ಗೊತ್ತಿರುವಂತೆ ಮಾರ್ಟಿನ್ ಚಿತ್ರತಂಡ ಈಗಾಗಲೇ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ. ಅಕ್ಟೋಬರ್ 11 ಮಾರ್ಟಿನ್ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಅಪ್‌ಡೇಟ್ ನೀಡಲಾಗಿದೆ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲೂ ಆಗಾಗ ಧ್ರುವ ಸರ್ಜಾ ಈ ಅಪ್‌ಡೇಟ್ ನೀಡುತ್ತ ಇದ್ದಾರೆ. ಈ ವಾರವೂ ಮಾರ್ಟಿನ್ ಬಿಡುಗಡೆ ವಿಳಂಬವಾಗಬಹುದು ಎಂಬ ವದಂತಿಯ ನಡುವೆಯೂ ಧ್ರುವ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಕ್ಟೋಬರ್ 11ರಂದು ಮಾರ್ಟಿನ್ ಬಿಡುಗಡೆಯಾಗುತ್ತದೆ ಎಂದು ಅಪ್‌ಡೇಟ್ ನೀಡುತ್ತಿದ್ದಾರೆ.
ಮಾರ್ಟಿನ್ ಬಿಡುಗಡೆ ವಿಳಂಬವಾಗಬಹುದೇ?
ಕೊಟ್ಟಮಾತಿನಂತೆ ಅಕ್ಟೋಬರ್ 11ರಂದು ಚಿತ್ರಬಿಡುಗಡೆಯಾಗಲು ಅಡ್ಡಿಯಾಗುವ ಅಂಶಗಳು ಯಾವುವು ಎಂಬ ಸಂದೇಹ ನಿಮ್ಮಲ್ಲಿರಬಹುದು. ಮೂಲಗಳ ಪ್ರಕಾರ ವಿಎಫ್‌ಎಕ್ಸ್ ಕೆಲಸ ಇನ್ನೂ ಮುಗಿದಿಲ್ಲ. ವಿಎಫ್‌ಎಕ್ಸ್ ಕೆಲಸ ಸರಿಯಾಗದೆ ಆಗದೆ ಇದ್ದರೆ ಮಾರ್ಟಿನ್‌ಗೆ ತೊಂದರೆಯಾಗಬಹುದು. ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮತ್ತು ಬಿಡುಗಡೆ ಮಾಡಿದ ಬಳಿಕದ ಬಿಸ್ನೆಸ್ ಡೀಲ್‌ಗಳು ಇನ್ನೂ ಅಂತಿಮವಾಗಿಲ್ಲ. ಇದು ದೊಡ್ಡ ಬಜೆಟ್‌ನ ಸಿನಿಮಾ. ಹಾಕಿದ ಹಣಕ್ಕೆ ಮೋಸವಾಗದಂತೆ ಮಾರುಕಟ್ಟೆಯಿಂದ ಉತ್ತಮ ರಿಟರ್ನ್ ಪಡೆಯಬೇಕಾದರೆ ಇಂತಹ ಡೀಲ್‌ಗಳು ಸಮರ್ಪಕವಾಗಿ ನಡೆಯಬೇಕು. ಇದು ಎಷ್ಟು ಬಜೆಟ್‌ನ ಸಿನಿಮಾ ಎಂದು ಚಿತ್ರತಂಡ ತಿಳಿಸಿಲ್ಲ. ಆದರೆ, ಇದು 100-200 ಕೋಟಿ ರೂ. ನಡುವಿನ ಸಿನಿಮಾ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಬಿಡುಗಡೆಯಾದ ಕಾರಣ ದೇಶದ ವಿವಿಧ ಕಡೆಗಳಲ್ಲಿ ಹಲವು ಡೀಲ್‌ಗಳು, ವ್ಯವಹಾರಗಳು ನಡೆಯಬೇಕಿವೆ.
ಇದೇ ಸಮಯದಲ್ಲಿ ಮಾರ್ಟಿನ್ ಸಿನಿಮಾವನ್ನು ವಿದೇಶದ ಮಾರುಕಟ್ಟೆಗೆ ವಿತರಣೆ ಮಾಡುವ ಕುರಿತು ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಓವರ್‌ಸೀಸ್ ಮಾರುಕಟ್ಟೆಗೆ ವಿತರಣೆ ಮಾಡುವ ಸಲುವಾಗಿ ಚಿತ್ರತಂಡ ನಿಗದಿಪಡಿಸಿದ ಮೊತ್ತಕ್ಕೂ, ವಿತರಕರ ನಿರೀಕ್ಷೆಗೂ ಹೊಂದಾಣಿಕೆಯಾಗಬೇಕು. ಮಾರ್ಟಿನ್ ಕುರಿತು ನಿರೀಕ್ಷೆಗಳು ಸಾಕಷ್ಟಿವೆ. ಆದರೆ, ಎಲ್ಲಾದರೂ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡದೆ ಇದ್ದರೆ ನಷ್ಟವಾಗಬಹುದು ಎಂಬ ಆತಂಕವೂ ವಿತರಕರಿಗೆ ಇರುತ್ತದೆ. ಹೀಗೆ, ನಿಗದಿತ ದಿನಾಂಕದಂದು ಮಾರ್ಟಿನ್ ಬಿಡುಗಡೆಗೆ ಸಾಕಷ್ಟು ಅಡ್ಡಿ ಆತಂಕಗಳು ಇವೆ. ಇವನ್ನೆಲ್ಲ ಸಮರ್ಥವಾಗಿ ನಿಭಾಯಿಸಿ ಚಿತ್ರತಂಡ ಅಕ್ಟೋಬರ್ 11ರಂದೇ ಮಾರ್ಟಿನ್ ರಿಲೀಸ್ ಮಾಡುತ್ತ? ಅಥವಾ ಬಿಡುಗಡೆ ವಿಳಂಬದ ಕುರಿತು ಅಪ್‌ಡೇಟ್ ನೀಡಿ ಹೊಸ ದಿನಾಂಕ ಘೋಷಣೆ ಮಾಡುತ್ತ ಎನ್ನುವುದು ಸದ್ಯದಲ್ಲಿಯೇ ತಿಳಿಯಲಿದೆ. (ಮೊದಲೇ ನಿರ್ಧರಿಸಿದಂತೆ ಅಕ್ಟೋಬರ್ 11ರಂದೇ ಮಾರ್ಟಿನ್ ರಿಲೀಸ್ ಆಗಲಿದೆ ಎಂದು ಚಿತ್ರದ ನಿರ್ಮಾಪಕರು ಇದೀಗ ಸ್ಪಷ್ಟಪಡಿಸಿದ್ದಾರೆ).
ಒಟ್ಟಾರೆ, ಈ ವರ್ಷದ ಮುಂಬರುವ ದಿನಗಳಲ್ಲಿ ಹಲವು ಕನ್ನಡ ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಈ ಚಿತ್ರಗಳ ಕುರಿತು ಅಪ್‌ಡೇಟ್ ಪಡೆಯಲು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಮನರಂಜನೆ ವಿಭಾಗಕ್ಕೆ ವಿಸಿಟ್ ಮಾಡಲು ಮರೆಯದಿರಿ.