ಕನ್ನಡ ಸುದ್ದಿ  /  Entertainment  /  Sandalwood News Actor Comidian Sadhu Kokila Appointed As The New President Of Karnataka Film Academy 2024 Mnk

Sadhu Kokila: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಸಾಧುಕೋಕಿಲ ಆಯ್ಕೆ; ಸಿಎಂ ಸಿದ್ಧರಾಮಯ್ಯ ಘೋಷಣೆ

ಕಳೆದ ಕೆಲ ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನದ ನೇಮಕ ಪ್ರಕ್ರಿಯೆ ಮುಗಿದೆ. ನಟ, ನಿರ್ದೇಶಕ ಸಾಧುಕೋಕಿಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಲನಚಿತ್ರ ಅಕಾಡೆಮಿ ಸೇರಿ ಒಟ್ಟು 44 ನಿಗಮ ಮಂಡಳಿಯ ಅಧ್ಯಕ್ಷರ ಆಯ್ಕೆ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Sadhu Kokila: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಸಾಧುಕೋಕಿಲ ಆಯ್ಕೆ; ಸಿಎಂ ಸಿದ್ಧರಾಮಯ್ಯ ಘೋಷಣೆ
Sadhu Kokila: ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಸಾಧುಕೋಕಿಲ ಆಯ್ಕೆ; ಸಿಎಂ ಸಿದ್ಧರಾಮಯ್ಯ ಘೋಷಣೆ

Sadhu Kokila: ಸ್ಯಾಂಡಲ್‌ವುಡ್‌ ಹಾಸ್ಯ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಸಾಧು ಕೋಕಿಲ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇನ್ನೇನು ಲೋಕಸಭೆ ಚುನಾವಣೆ ಕಾವು ಶುರುವಾಗುವುದಕ್ಕೂ ಮುನ್ನವೇ ನಿಗಮ ಮಂಡಳಿಯ ಆಯ್ಕೆ ಪ್ರಕ್ರಿಯೆಯನ್ನು ಮಾಡಿ ಮುಗಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಕಳೆದ ಕೆಲ ತಿಂಗಳಿಂದ ಅಕಾಡೆಮಿ ಅಧ್ಯಕ್ಷರು ಯಾರು ಎಂಬ ವಿಚಾರ ನೆನೆಗುದಿಗೆ ಬಿದ್ದಿತ್ತು. ಈಗ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಘೋಷಿಸುವ ಮೂಲಕ ತೆರೆಎಳೆದಿದ್ದಾರೆ.

2022ರಲ್ಲಿ ಅಶೋಕ್‌ ಕಶ್ಯಪ್‌ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಸುನಿಲ್‌ ಪುರಾಣಿಕ್‌ ಅಧ್ಯಕ್ಷರಾಗಿದ್ದರು. ಇದೀಗ ಸಾಧು ಕೋಕಿಲ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ಮುಂದಿನ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲೂ ಶೇರ್‌ ಮಾಡಿಕೊಂಡಿರುವ ಸಿಎಂ, "ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ನೇಮಕಗೊಂಡ ಎಲ್ಲರಿಗೂ ಅಭಿನಂದನೆಗಳು. ನಮ್ಮ‌ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ನಾಡಿನ ಸರ್ವಾಂಗೀಣ ಪ್ರಗತಿಯ ನಮ್ಮ ಪ್ರಯತ್ನಕ್ಕೆ ತಾವೆಲ್ಲರೂ ಬೆಂಬಲವಾಗಿ ನಿಲ್ಲಲಿದ್ದೀರೆಂದು ನಂಬಿದ್ದೇನೆ" ಎಂದಿದ್ದಾರೆ ಸಿಎಂ.

ಸಿನಿಮಾ, ರಿಯಾಲಿಟಿ ಶೋಗಳ ಜತೆಗೆ ರಾಜಕೀಯದಲ್ಲೂ ಸಾಧುಕೋಕಿಲ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಜತೆಗೆ ಸಾಧು ಕೋಕಿಲ ಒಳ್ಳೆಯ ನಂಟು ಹೊಂದಿದ್ದಾರೆ. ಈ ಹಿಂದೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿಯೂ ಸಾಧುಕೋಕಿಲ ನೇಮಕವಾಗಿದ್ದರು. ಈ ನಡುವೆ ಅಕಾಡೆಮಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಹೀಗಿರುವಾಗಲೇ ಇದೀಗ ನಿಗಮ ಮಂಡಳಿಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಾಧು ಕೋಕಿಲ ಅವರಿಗೂ ಸ್ಥಾನ ಸಿಕ್ಕಿದೆ.

ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸಾಧುಕೋಕಿಲ

ಗಿಚ್ಚಿ ಗಿಲಿ ಗಿಲಿಯ ಇತ್ತೀಚಿನ ಪ್ರೋಮೋದಲ್ಲಿ ಕಾಮಿಡಿಗಿಂತ ಕೊಂಚ ಗಂಭೀರ ಭಾವ ಕಂಡಿತ್ತು. ಸಾಧುಕೋಕಿಲ ವಿರುದ್ಧ ಸ್ಪರ್ಧಿಗಳಲ್ಲಿ ಒಬ್ಬರಾದ ಪ್ರಶಾಂತ್‌ ಗಂಭೀರ ಆರೋಪ ಮಾಡಿದ್ದರು. ಈ ವಿಚಾರವನ್ನು ಎಲ್ಲರ ಸಮ್ಮುಖದಲ್ಲಿ ವೇದಿಕೆ ಮೇಲೆಯೇ ಪ್ರಶಾಂತ್‌ ಹೇಳಿಕೊಳ್ಳುತ್ತಿದ್ದಂತೆ, ಸಾಧುಕೋಕಿಲ ಶೋ ತ್ಯಜಿಸಿದ್ದರು. ಅಷ್ಟೇ ಅಲ್ಲ ಸ್ಪರ್ಧಿಗಳು, ತೀರ್ಪುಗಾರರು ಮತ್ತು ನಿರೂಪಕ ನಿರಂಜನ್‌ ದೇಶಪಾಂಡೆ ಸಹ ಶೋದಿಂದ ಹೊರನಡೆದಿದ್ದರು.

ಅಷ್ಟಕ್ಕೂ ಆಗಿದ್ದೇನು?

"ಅಣ್ಣ ಹೋದ ವಾರ ಯಾಕೋ ನೀನು ಸ್ಟೇಜ್‌ ಮೇಲೆ ಕಾಮಿಡಿ ಮಾಡಲಿಲ್ಲ ಅಂದ್ರೆ, ನಾನೇ ಮಾಡಿದ್ರೆ ಸಾಧು ಸರ್‌ ಏನ್‌ ಮಾಡ್ತಾರೆ ಅಂತ ಹೇಳ್ತಿದಾನೆ" ಎಂದಿದ್ದಾರೆ ತುಕಾಲಿ ಸಂತೋಷ್. "ಅವರು ಮಾಡೋ ಕಾಮಿಡಿ ಒಂದೊಂದು ಟೈಮ್‌ ಅರ್ಥ ಆಗಲ್ಲ ಅಂತ ಹೇಳಿರಬಹುದು" ಎಂದು ಪ್ರಶಾಂತ್‌‌ ಅದಕ್ಕೆ ಉತ್ತರಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಸಾಧುಕೋಕಿಲ, “ಏನು.. ನಾನು ಮಾಡ್ತಿರೋ ಕಾಮಿಡಿ ನಿನಗೆ ಅರ್ಥ ಆಗ್ತಿಲ್ಲ?”, ಅಷ್ಟೇ ಹೇಳಿರಬಹುದು ಎನ್ನುತ್ತಲೇ, ಅಯ್ಯಯ್ಯೋ ಹಾಗೆ ಹೇಳಿಲ್ಲ ಸರ್‌ ಎಂದಿದ್ದಾರೆ ಪ್ರಶಾಂತ್.‌ ಆಗ "ಈ ಸೀಟ್‌ಗೆ ಅವನ್ನೇ ಕೂರಿಸಿ" ಎಂದು ಬೇಸರ ಹೊರಹಾಕಿದ್ದಾರೆ ಸಾಧುಕೋಕಿಲ.

ಮಧ್ಯೆ ಪ್ರವೇಶಿಸಿದ ಕೋಮಲ್, "ಏನ್ರಿ ಅವರಿಗೆ ಬೇಜಾರಾದ್ರೆ ನಮಗೆ ಬೇಜಾರಾಗಲ್ವ?" ಎಂದಿದ್ದಾರೆ. ತಾವು ಧರಿಸಿದ್ದ ಜಾಕೆಟ್‌ ಬಿಚ್ಚಿ ಪ್ರಶಾಂತ್‌ ಕೈಗೆ ಕೊಟ್ಟಿದ್ದಾರೆ ಕೋಮಲ್. "ನಿಮಗೆಲ್ಲ ಬೇಜಾರಾದ್ರೆ, ನಾವೂ ಇಲ್ಲಿ ಇರಲ್ಲ ಸರ್‌" ಎಂದು ನಿರೂಪಕ ನಿರಂಜನ್‌ ದೇಶಪಾಂಡೆ ಸಹ ಹೊರ ನಡೆದಿದ್ದಾರೆ.

ಅಷ್ಟಕ್ಕೆ ಮುಗಿಯದ ಶೋ, ತೀರ್ಪುಗಾರರಾದ ಸಾಧುಕೋಕಿಲ, ಶ್ರುತಿ, ಕೋಮಲ್‌ ಕುಮಾರ್‌ ಹೊರನಡೆದಿದ್ದಾರೆ. ಅವರೂ ಹೋದರು ಅಂತ ಗ್ಯಾಲರಿಯಲ್ಲಿ ಕೂತಿದ್ದ ಎಲ್ಲ ಸ್ಪರ್ಧಿಗಳೂ ಪ್ರಶಾಂತ್‌ ಮಾತಿಗೆ ಬೇಸರ ಹೊರಹಾಕಿ ಹೊರನಡೆದಿದ್ದಾರೆ.‌ ಅಲ್ಲಿಗೆ ಪ್ರಶಾಂತ್‌ ಹ್ಯಾಪು ಮೋರೆ ಹಾಕಿದ್ದಾರೆ.