ಕನ್ನಡ ಸುದ್ದಿ  /  ಮನರಂಜನೆ  /  Darshan Arrest: ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಆರೋಪ ಸಾಬೀತಾದ್ರೆ ನಟ ದರ್ಶನ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ?

Darshan Arrest: ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಆರೋಪ ಸಾಬೀತಾದ್ರೆ ನಟ ದರ್ಶನ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ?

ಅಭಿಮಾನಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವೇಳೆ ಕೊಲೆ ಆರೋಪ ಸಾಬೀತಾದ್ರೆ ದರ್ಶನ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆಯಾಗುತ್ತೆ, ಕಾನೂನು ಏನು ಹೇಳುತ್ತೆ ಅನ್ನೋದರ ವಿವರ ಇಲ್ಲಿದೆ.

ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಆರೋಪ ಸಾಬೀತಾದ್ರೆ ನಟ ದರ್ಶನ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ? (ಫೋಟೊ-ಎಕ್ಸ್)
ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಆರೋಪ ಸಾಬೀತಾದ್ರೆ ನಟ ದರ್ಶನ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ? (ಫೋಟೊ-ಎಕ್ಸ್) (HT_PRINT)

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ದರ್ಶನ್‌ (Actor Darshan Arrest) ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಭಿಮಾನಿ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy Murder Case) ನಗರದ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ದರ್ಶನ್ ಸೇರಿ 13 ಮಂದಿಯನ್ನು ಇಂದು (ಜೂನ್ 11, ಮಂಗಳವಾರ) ಬಂಧಿಸಿದ್ದಾರೆ. ದರ್ಶನ್ ಸ್ನೇಹಿತೆ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದಾರೆ ಎಂಬ ಕಾರಣಕ್ಕಾಗಿ ರೇಣುಕಾ ಸ್ವಾಮಿ ಅವರನ್ನು ಬೆಂಗಳೂರಿಗೆ ಕರೆತಂದ ದರ್ಶನ್ ಆಪ್ತರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆಗ ದರ್ಶನ್ ಕೂಡ ಸ್ಥಳದಲ್ಲಿದ್ದರು. ಇವರ ಮಾರ್ಗದರ್ಶನದಲ್ಲೇ ಹಲ್ಲೆ, ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಇವೆ. ದರ್ಶನ್ ಸೂಚನೆ ಮೇರೆಗೆ ಕೃತ್ಯದ ಬಗ್ಗೆ ಬಂಧಿತ ಇತರೆ ಆರೋಪಿಗಳು ಬಾಯ್ಬಿಟ್ಟಿರುವುದರಿಂದ ಪ್ರಕರಣದಲ್ಲಿ ದರ್ಶನ್‌ಗೆ ಸಂಕಷ್ಟ ತಪ್ಪಿದ್ದಲ್ಲ.

ಟ್ರೆಂಡಿಂಗ್​ ಸುದ್ದಿ

ಈ ಪ್ರಕರಣದಲ್ಲಿ ನಾನು ಭಾಗಿಯಾಗಿಲ್ಲ. ನನಗೇನು ಗೊತ್ತಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ದರ್ಶನ್ ಪೊಲೀಸರಿಗೆ ಹೇಳುತ್ತಿದ್ದಾರೆ. ಆದರೆ ಇತರೆ ಬಂಧಿತ ಆರೋಪಿಗಳು ದರ್ಶನ್ ಸೂಚನೆ ಮೇರೆಗೆ ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದೇ ಮಾಹಿತಿ ಆಧಾರದ ಮೇಲೆ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ವೇಳೆ ದರ್ಶನ್ ಪ್ರಕರಣದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದು ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಕಾನೂನಿನ ಯಾವ ಕಾಯ್ದೆಯಡಿ ಶಿಕ್ಷೆ ನೀಡಲಾಗುತ್ತೆ ಅನ್ನೋದರ ವಿವರ ಇಲ್ಲಿದೆ.

ಹತ್ಯೆ ಕಾನೂನಿನಲ್ಲಿ ಯಾವ ಕಾಯ್ದೆ ಬಳಸಲಾಗುತ್ತೆ, ಎಷ್ಟು ವರ್ಷ ಶಿಕ್ಷೆ?

ಕೊಲೆಯ ಅಪರಾಧ ಮತ್ತು ಕೊಲೆಯ ಶಿಕ್ಷೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಅನ್ನು ಬಳಸಲಾಗುತ್ತದೆ. ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶ ಇಲ್ಲದಿದ್ದರೂ ಆ ಕ್ಷಣದಲ್ಲೇ ವ್ಯಕ್ತಿಯ ಸಾವಿಗೆ ಕಾರಣರಾದವರಿಗೆ ಐಪಿಸಿ ಸೆಕ್ಷನ್ 302 ಕಾಯ್ದೆಯನ್ನು ಬಳಸಿ ಕೊಲೆ ಆರೋಪವನ್ನು ಹೊರಿಸಲಾಗುತ್ತದೆ.

ಆರೋಪ ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆ?

ಐಪಿಸಿ ಸೆಕ್ಷನ್ 302 ಕಾಯ್ದೆಯಡಿಯಲ್ಲಿ ಕೊಲೆ ಆರೋಪ ಸಾಬೀತಾದರೆ ಮರಣ ದಂಡನೆ ಅಥವಾ ಜೀವಾವಧಿಗೆ ಅವಕಾಶ ಇರುತ್ತದೆ. ಆದರೆ ಪ್ರಕರಣದ ಸಾಕ್ಷಿಗಳು, ಕೃತ್ಯದ ಕ್ರೌರ್ಯದ ಆಧಾರದ ಮೇಲೆ ಎಷ್ಟು ಶಿಕ್ಷೆಯನ್ನು ವಿಧಿಸಬೇಕು ಎಂಬುದನ್ನು ಕೋರ್ಟ್‌ನಲ್ಲಿ ನ್ಯಾಯಾಧೀಶರು ನಿರ್ಧಾರ ಮಾಡುತ್ತಾರೆ. ಐಪಿಸಿ ಸೆಕ್ಷನ್ 302 ಕೊಲೆಯಂತಹ ಗಂಭೀರ ಪ್ರಕರಣಗಳಿಗೆ ಬಳಸುವುದರಿಂದ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟ.

ಬಲವಾದ ಕಾರಣಗಳಿದ್ದಾಗ ಮಾತ್ರ ಜಾಮೀನು ನೀಡುವ ಸಾಧ್ಯತೆ ಇರುತ್ತದೆ. ಅದರೆ ಆರೋಪಿಗಳು ಸಾಕ್ಷ್ಯಗಳನ್ನು ನಾಶ ಮಾಡುವುದಿಲ್ಲ, ತಲೆಮರೆಸಿಕೊಳ್ಳುವುದಿಲ್ಲ, ದೇಶ ತೊರೆಯುವುದಿಲ್ಲ ಎಂದು ಕೋರ್ಟ್‌ಗೆ ಮನವರಿಕೆಯಾದಾಗ ಜಾಮೀನು ಸಿಗುವ ಸಾಧ್ಯತೆಗಳು ಇರುತ್ತವೆ. ಅಂತಿಮವಾಗಿ ಆರೋಪಿಗಳು ಹಾಗೂ ಸಂತ್ರಸ್ತರ ಪರ ವಾದ, ಪ್ರತಿವಾದಗಳನ್ನು ಆಲಿಸಿದ ಬಳಿಕ ಜಾಮೀನಿನ ನಿರ್ಧಾರವನ್ನು ನ್ಯಾಯಾಧೀಶರು ಕೈಗೊಳ್ಳುತ್ತಾರೆ. ನ್ಯಾಯಾಧೀಶಕರ ವಿವೇಚನೆಗೆ ಬಿಡಲಾಗುತ್ತದೆ. ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ದರ್ಶನ್ ಹಲವು ದಿನಗಳಲ್ಲಿ ಒಂದಿಲ್ಲೊಂದು ವಿವಾದಗಳಿಗೆ ಸಿಲುಕುತ್ತಲೇ ಇದ್ದಾರೆ. ಇದೀಗ ಅಭಿಮಾನಿಯ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024