ನಟ ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ಕಾನೂನು ಕುಣಿಕೆ ಇನ್ನಷ್ಟು ಬಿಗಿ
Actor Darshan Case: ರೇಣುಕಾಸ್ವಾಮಿ ಹತ್ಯೆ ನಡೆದ ದಿನ ನಟ ದರ್ಶನ್ ಧರಿಸಿದ್ದ ಬಟ್ಟೆಯಲ್ಲಿ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ಈ ರಕ್ತದ ಕಲೆಗಳು ಮೃತಪಟ್ಟ ರೇಣುಕಾಸ್ವಾಮಿಯದ್ದು ಎಂದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕಣದಲ್ಲಿ ನಟ ದರ್ಶನ್ ಮತ್ತು ಇತರೆ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ದರ್ಶನ್ ಬಿಡುಗಡೆಗೆ ವಕೀಲರ ನೆರವು ಪಡೆಯುತ್ತಿದ್ದಾರೆ. ಆದರೆ, ವರದಿಗಳ ಪ್ರಕಾರ ದರ್ಶನ್ ವಿರುದ್ಧ ದೊರಕಿರುವ ಸಾಕ್ಷಿಗಳಲ್ಲಿ ಸಾಕಷ್ಟು ಪ್ರಬಲ ಅಂಶಗಳು ಇವೆ. ವಿಶೇಷವಾಗಿ ದರ್ಶನ್ ಅಪರಾಧ ಸಾಬೀತಾಗುವಂತಹ ಅನೇಕ ಅಂಶಗಳಿವೆ. ರೇಣುಕಾಸ್ವಾಮಿ ಹತ್ಯೆ ನಡೆದ ದಿನ ನಟ ದರ್ಶನ್ ಧರಿಸಿದ್ದ ಬಟ್ಟೆಯಲ್ಲಿ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ಈ ರಕ್ತದ ಕಲೆಗಳು ಮೃತಪಟ್ಟ ರೇಣುಕಾಸ್ವಾಮಿಯದ್ದು ಎಂದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ದರ್ಶನ್‌ಗೆ ಕಾನೂನಿನ ಸಂಕೋಲೆ ಇನ್ನಷ್ಟು ಬಿಗಿಯಾಗುವ ಸಾಧ್ಯತೆಯಿದೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದರು. ಘಟನೆಗೆ ಸಂಬಂಧಪಟ್ಟಂತೆ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲು ಹೆಚ್ಚಿನ ಒತ್ತು ನೀಡಿದ್ದರು. ದರ್ಶನ್ ಮನೆಯಿಂದ ವಶಪಡಿಸಿಕೊಂಡಿರುವ ದರ್ಶನ್ ಪ್ಯಾಂಟ್ ಮತ್ತು ಟೀಶರ್ಟ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ರೌಂಡ್ ನೆಕ್ ಶರ್ಟ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇದೀಗ ಎಫ್‌ಎಸೆಲ್ ವರದಿ ಬಂದಿದ್ದು, ದರ್ಶನ್ ಉಡುಗೆಯಲ್ಲಿದ್ದ ರಕ್ತದ ಕಲೆಗಳು ರೇಣುಕಾಸ್ವಾಮಿಯದ್ದು ಎಂದು ದೃಢಪಟ್ಟಿದೆ. ಇನ್ನೂ ಹಲವು ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಲಾಯದ ಸಿಬ್ಬಂದಿ ಜಫ್ತಿ ಮಾಡಿದ್ದಾರೆ. ಇನ್ನಷ್ಟು ವಸ್ತುಗಳ ರಿಪೋರ್ಟ್ ಬರಬೇಕಿದೆ.
ಸದ್ಯ ನಟ ದರ್ಶನ್ ಮಾತ್ರವಲ್ಲದೆ ಪವಿತ್ರಾ ಗೌಡ ಕೂಡ ಜೈಲಿನಲ್ಲಿದ್ದಾರೆ. ಒಟ್ಟು 17 ಜನರು ನ್ಯಾಯಾಂಗ ಬಂಧನಲ್ಲಿದ್ದಾರೆ. ಪೊಲೀಸರು ಚಾರ್ಜ್ ಶೀಟ್ ಇನ್ನೂ ಸಲ್ಲಿಸದೆ ಇರುವುದರಿಂದ ಆರೋಪಿಗಳ ವಿಚಾರಣೆ ತಡವಾಗುತ್ತಿದೆ. ಎಫ್‌ಎಸ್‌ಎಲ್ ವರದಿಗಳು ಸೇರಿದಂತೆ ಪ್ರಬಲ ಸಾಕ್ಷ್ಯಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಚಾರ್ಜ್ ಶೀಟ್ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದೀಗ ರಕ್ತದ ಕಲೆ ಸಾಬೀತಾಗಿರುವುದರಿಂದ ದರ್ಶನ್ ಬೇಗ ಜೈಲಿನಿಂದ ಹೊರಬರುತ್ತಾರೆ ಎಂದು ಕಾಯುತ್ತಿದ್ದವರಿಗೆ ನಿರಾಶೆಯಾಗಿದೆ.
ವಿಚಾರಣೆಗೆ ಪ್ರತ್ಯೇಕ ಕೋರ್ಟ್‌ಗೆ ಬೇಡಿಕೆ
ಕೆಲವು ವರದಿಗಳ ಪ್ರಕಾರ ನಟ ದರ್ಶನ್ ಮತ್ತು ಇತರೆ ಆರೋಪಿಗಳ ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ಪೊಲೀಸರು ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಪ್ರತ್ಯೇಕ ಕೋರ್ಟ್‌ಗೆ ಪೊಲೀಸರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಪೊಲೀಸರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಪ್ರತ್ಯೇಕ ಕೋರ್ಟ್ ವಿಚಾರದ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಸಾಮಾನ್ಯವಾಗಿ ಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಸುವಾಗ ದಿನ ನಿಗದಿಪಡಿಸಬೇಕಾಗುತ್ತದೆ. ವಿವಿಧ ವಿಚಾರಗಳ ಕುರಿತು ವಿಚಾರಣೆ ನಡೆಸುವಾಗ ಪ್ರಕರಣದ ವಿಚಾರಣೆಯನ್ನು ಆಗಾಗ ಮುಂದೂಡುತ್ತ ಇರಬೇಕಾಗುತ್ತದೆ. ಇಂದು ವಿಚಾರಣೆ ನಡೆದರೆ ಮುಂದಿನ ವಿಚಾರಣೆಗೆ ಇನ್ನೊಂದು ದಿನ ನಿಗದಿಪಡಿಸಬೇಕಾಗುತ್ತದೆ. ಇದರ ಬದಲು ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸಿದರೆ ಈ ಪ್ರಕರಣವೊಂದನ್ನೇ ತ್ವರಿತಗತಿಯಲ್ಲಿ ಮುಗಿಸಲು ಸಾಧ್ಯವಾಗುತ್ತದೆ. ಇಂತಹ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳಲ್ಲಿ ನಿಗದಿಪಡಿಸಿದ ಪ್ರಕರಣ ಹೊರತುಪಡಿಸಿ ಬೇರೆ ಪ್ರಕರಣಗಳನ್ನು ವಿಚಾರಣೆ ನಡೆಸಲಾಗುವುದಿಲ್ಲ. ಕೆಲವು ಮೂಲಗಳ ಪ್ರಕಾರ ಇಂತಹ ಕೋರ್ಟ್‌ಗಳಲ್ಲಿ ಸುಮಾರು ಒಂದು ವರ್ಷದಲ್ಲಿ ತೀರ್ಪು ಪ್ರಕಟಿಸಲಾಗುತ್ತದೆ. ಪೊಲೀಸರ ಈ ಮನವಿಗೆ ಸಮ್ಮತಿ ದೊರಕುವುದೇ ಕಾದು ನೋಡಬೇಕಿದೆ.