Darshan: ಕಾವೇರಿ ನೀರಿಗೆ ಕತ್ತರಿ ಹಾಕಿದ್ದು ಸಾಕು! ನ್ಯಾಯದ ಹೋರಾಟಕ್ಕೆ ಧುಮುಕಿದ ನಟ ದರ್ಶನ್
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಾವೇರಿ ನೀರಿಗೆ ಕತ್ತರಿ ಹಾಕಿದ್ದು ಸಾಕು ಎಂದಿದ್ದಾರೆ.
Darshan: ಕರ್ನಾಟಕ- ತಮಿಳುನಾಡು ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಬರದ ಸ್ಥಿತಿ ನಿರ್ಮಾಣವಾಗಿದ್ದರೂ, ಹೆಚ್ಚುವರಿ ನೀರಿನ ಬೇಡಿಕೆ ಇಟ್ಟಿದೆ ತಮಿಳುನಾಡು. ಈ ವಿಚಾರ ರಾಜಕೀಯ ಅಂಗಳದಲ್ಲಿಯೂ ಚರ್ಚೆಗೆ ಕಾರಣವಾಗಿದ್ದು, ಸದ್ಯ ರಾಜ್ಯದ ಸರ್ವಪಕ್ಷ ನಿಯೋಗ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನಡೆಸಲಾಗುತ್ತಿದೆ. ಈಗ ಇದೇ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮಾತನಾಡಿದ್ದಾರೆ.
ನಾಡು, ನುಡಿ, ನೀರಿನ ವಿಚಾರದಲ್ಲಿ ನಟ ದರ್ಶನ್ ಯಾವಾಗಲೂ ಮುಂದು. ಈ ಹಿಂದೆಯೂ ಹಲವು ಬಾರಿ ಗಡಿ ವಿವಾದ ಸೇರಿ ಕರ್ನಾಟಕದ ಬಗ್ಗೆ ದರ್ಶನ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ಇದೀಗ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬರದ ಸ್ಥಿತಿಯ ನಡುವೆಯೂ ತಮಿಳುನಾಡಿಗೆ ನೀರು ಹರಿಸುವ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸುವುದರ ಜತೆಗೆ, ಆದಷ್ಟು ಬೇಗ ಕರ್ನಾಟಕಕ್ಕೆ ನ್ಯಾಯ ಸಿಗಲಿ ಎಂದೂ ಹೇಳಿಕೊಂಡಿದ್ದಾರೆ.
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಮೋಸ ಆಗುತ್ತಲೇ ಬಂದಿದೆ. ಕಡಿಮೆ ನೀರಿದ್ದರೂ ತಮಿಳುನಾಡಿಗೆ ಹರಿಸುವ, ನಮ್ಮ ಕಾವೇರಿ ನೀರಿಗೆ ಕತ್ತರಿ ಹಾಕುವ ಪ್ರಯತ್ನಗಳು ನಡೆಯುತ್ತಲೇ ಬಂದಿದೆ ಎಂದಿರುವ ದರ್ಶನ್, ಕರ್ನಾಟಕದಲ್ಲಿನ ಸದ್ಯದ ಸ್ಥಿತಿ ವಿಚಾರಿಸಿಕೊಂಡು, ನೀರು ಹಂಚಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದರ್ಶನ್ ಸೋಷಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ದರ್ಶನ್ ಹಾಕಿದ ಪೋಸ್ಟ್ ಹೀಗಿದೆ
"ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ" ಎಂದಿದ್ದಾರೆ.
ನಟ ಜಗ್ಗೇಶ್ ಧ್ವನಿ
ಇದೇ ಕಾವೇರಿ ನೀರಿನ ವಿಚಾರವಾಗಿ ನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಸಹ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ನಾನು ಕನ್ನಡ ಚಿತ್ರರಂಗದಲ್ಲಿ 42 ವರ್ಷಕಾಲ ಸೇವೆಸಲ್ಲಿಸಿ ಕನ್ನಡಿಗರ ಪ್ರೀತಿ ಅಭಿಮಾನಕ್ಕೆ ಪಾತ್ರನಾಗಿದ್ದೇನೆ. ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಹಾಜರಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿಕೆಶಿ ರವರ ಮುಂದೆ ಕಾವೇರಿ ನದಿಯ ನೀರಿನ ವಿಚಾರವಾಗಿ ನಮ್ಮ ಬೆಂಬಲ ಸದಾ ಕನ್ನಡಿಗರ ಪರವಾಗಿಯೇ ಇದೆ ಎಂದು ತಿಳಿಸಿ ಬಂದಿದ್ದೆ.! ನಾಳೆ ದೆಹಲಿಯಲ್ಲಿ ಕರ್ನಾಟಕ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ ಅದರಲ್ಲೂ ಭಾಗಿಯಾಗಿ ಕಾವೇರಿ ನದಿಯ ಪರವಾಗಿ ಹಾಗೂ ಕನ್ನಡದ ರೈತರ ಪರವಾಗಿ ನನ್ನ ಧ್ವನಿಯನ್ನು ಪ್ರಸ್ತಾಪಿಸುತ್ತೇನೆ. ಇಂತಿ ಕನ್ನಡಿಗ ಜಗ್ಗೇಶ್" ಎಂದಿದ್ದಾರೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ