ರೇಣುಕಾ ಸ್ವಾಮಿ ಕುಟುಂಬಕ್ಕೆ ಸಂತಾಪಗಳು, ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ, ದಯೆ ಇರಲಿ ಎಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ
Darshan Thoogudeepa: ಕನ್ನಡ ನಟ ದರ್ಶನ್ ತೂಗುದೀಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಪತ್ನಿ ವಿಜಯಲಕ್ಷ್ಮೀ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದೇ ಸಮಯದಲ್ಲಿ ರೇಣುಕಾ ಸ್ವಾಮಿ ಕುಟುಂಬಕ್ಕೆ ಸಂತಾಪಗಳನ್ನು ತಿಳಿಸಿದ್ದಾರೆ.
ಬೆಂಗಳೂರು: ಕನ್ನಡ ನಟ ದರ್ಶನ್ (Darshan Thoogudeepa) ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ವಿಚಾರಣೆ ಮತ್ತು ಕಾನೂನು ಪ್ರಕ್ರಿಯೆಗಳು ಮುಂದುವರೆದಿವೆ. ಇದೇ ಸಂದರ್ಭದಲ್ಲಿ ಹತ್ಯೆಗೀಡಾದ ರೇಣುಕಾ ಸ್ವಾಮಿ ಕುಟುಂಬಕ್ಕೆ ಸಂತಾಪಗಳನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿಳಿಸಿದ್ದಾರೆ. ಈ ಪ್ರಕರಣದ ಎ2 ಆರೋಪಿ ದರ್ಶನ್ ಮತ್ತು ಅವರ ಕುಟುಂಬದ ಸಂಬಂಧಪಟ್ಟಂತೆ ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ನ್ಯಾಯಾಲಯದಿಂದ ವಿಜಯಲಕ್ಷ್ಮಿ ತಡೆಯಾಜ್ಞೆ ತಂದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕುಟುಂಬಕ್ಕೆ ಸಂತಾಪ ಸೂಚಿಸಿದ ವಿಜಯಲಕ್ಷ್ಮಿ
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸೋಷಿಯಲ್ ಮೀಡಿಯಾದಲ್ಲಿ ಇಂದು ಹೊಸ ಅಪ್‌ಡೇಟ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. "ಮೊದಲಿಗೆ ಮೃತಪಟ್ಟ ಶ್ರೀ ರೇಣುಕಾ ಸ್ವಾಮಿ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಾಂತ್ವಾನಗಳು" ಎಂದು ಬರೆದಿದ್ದಾರೆ. ಇದಾದ ಬಳಿಕ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ವಿಚಾರವನ್ನು ತಿಳಿಸಿದ್ದಾರೆ.
"ಮೊದಲಿಗೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಂತಾಪಗಳು. ಇದರ ಜತೆಗೆ ನಾನು ಈ ಮುಂದಿನ ವಿಚಾರವನ್ನು ತಿಳಿಸುವೆ. ಕಳೆದ ಕೆಲವು ದಿನಗಳಿಂದ ದರ್ಶನ್, ನಾನು, ನನ್ನ ಹದಿಹರೆಯದ ಮಗ, ದರ್ಶನ್ ಅವರ ಎಲ್ಲಾ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖವಾಗಿದೆ. ಗೌರವಾನ್ವಿತ ನ್ಯಾಯಾಲಯವು ಹೊರಡಿಸಿದ ಈ ಆದೇಶ ಪತ್ರವನ್ನು ಇಲ್ಲಿ ನೀಡಿದ್ದಾನೆ. ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿದ್ದ ಕೆಲವು ಸುಳ್ಳು ಮಾಹಿತಿ ಹರಡುವುದನ್ನು ನಿಲ್ಲಿಸುವಿರಿ ಎಂದು ಭಾವಿಸುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸಿ ದಯೆ ತೋರಬೇಕೆಂದು ನಾನು ಪ್ರತಿಯೊಬ್ಬರನ್ನೂ ಕೋರುತ್ತೇನೆ. ತಾಯಿ ಚಾಮುಂಡೇಶ್ವರಿ ಮೇಲೆ ನನಗೆ ಪೂರ್ಣ ನಂಬಿಕೆ ಇದೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯವು ಮೇಲುಗೈ ಸಾಧಿಸಲಿ. ಸತ್ಯಮೇವ ಜಯತೇ" ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ತಡೆಯಾಜ್ಞೆ ಆದೇಶಪತ್ರದಲ್ಲಿ ಏನಿದೆ?
ತಡೆಯಾಜ್ಞೆ ಆದೇಶದ ಯಥಾವತ್ ಅನುವಾದ ಈ ಮುಂದಿನಂತೆ ಇದೆ. "ಪ್ರತಿವಾದಿಗಳು, ಅವರ ವರದಿಗಾರರು, ಅಂಕರ್‌ಗಳು ಅಥವಾ ಅವರ ಪರವಾಗಿ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಗಳು ಫಿರ್ಯಾದಿ, ಅವರ ಪತಿ ದರ್ಶನ್ ಶ್ರೀನಿವಾಸ್ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಜೀವನವನ್ನು ಸ್ಪರ್ಶಿಸುವ ಸುದ್ದಿ ಅಥವಾ ಯಾವುದೇ ಇತರ ಮಾಹಿತಿಯನ್ನು ಮುದ್ರಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಯಾವುದೇ ಅನಧಿಕೃತ ವಿವರ ಬಹಿರಂಗಪಡಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅಪರಾಧ ಸಂಖ್ಯೆ.259/2924 ರಲ್ಲಿ ತನಿಖೆಗೆ ಸಂಬಂಧಿಸಿದಂತೆ ಮಾಹಿತಿ/ಅಭಿಪ್ರಾಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ವತಿಯಿಂದ ನಡೆಸಲಾಯಿತು. (ನನ್ನಿಂದ ರೆಕಾರ್ಡ್ ಮಾಡಿದ ಡಿಕ್ವಾಫೋನ್ ಮೂಲಕ ಹಿರಿಯ ಶೆರಿಸ್ಟೆದಾರ್ ಅವರಿಗೆ ನಿರ್ದೇಶಿಸಲಾಗಿದೆ, ಅವರು ಕಂಪ್ಯೂಟರ್‌ನಲ್ಲಿ ಲಿಪ್ಯಂತರ ಮಾಡಿ, ತಿದ್ದುಪಡಿಗಳನ್ನು ಕೈಗೊಂಡರು, ಪ್ರಿಂಟ್ ಔಟ್ ತೆಗೆದುಕೊಂಡು ನಂತರ ಈ ಜೂನ್ 19, 2924 ರಂದು ಓಪನ್ ಕೋರ್ಟ್‌ನಲ್ಲಿ ಉಚ್ಚರಿಸಲಾಗುತ್ತದೆ).
ಅಂದರೆ, ವಿಜಯಲಕ್ಷ್ಮೀ ಅವರು ದರ್ಶನ್ ಮತ್ತು ಕುಟುಂಬದ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದರ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
ವಿಭಾಗ