Bheema Twitter Review: ದುನಿಯಾ ವಿಜಯ್ ‘ಭೀಮ’ ಸಿನಿಮಾ ಹೇಗಿದೆ, ಚಿತ್ರಮಂದಿರದಿಂದ ಹೊರ ಬಂದ ಪ್ರೇಕ್ಷಕ ಏನಂದ?
ರಾಜ್ಯಾದ್ಯಂತ ಭೀಮ ಸಿನಿಮಾ ಬಿಡುಗಡೆ ಆಗಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಸಿಕ್ಕಿದೆ. ಪಾಸಿಟಿವ್ ರೆಸ್ಪಾನ್ಸ್ ಸಹ ಸಿಗುತ್ತಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿಯೂ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳೇ ಸಂದಾಯವಾಗುತ್ತಿವೆ.
Bheema Twitter Review: ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅದರಲ್ಲೂ ಮುಚ್ಚುವ ಹಂತದಲ್ಲಿದ್ದ 18ಕ್ಕೂ ಅಧಿಕ ಚಿತ್ರಮಂದಿರಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿಯೂ ಭೀಮನನ್ನು ಅಖಾಡಕ್ಕಿಳಿಸಿದೆ ಚಿತ್ರತಂಡ. ರೌಡಿಸಂ, ಹೊಡೆದಾಟ ಬಡಿದಾಟಗಳ ಜತೆಗೆ ಈ ಬಾರಿ ಸಾಮಾಜಿಕ ಸಂದೇಶ ಮತ್ತು ಯುವಪೀಳಿಗೆಯನ್ನೇ ಗಮನದಲ್ಲಿಟ್ಟುಕೊಂಡು ಕಥೆ ಮಾಡಿದ್ದಾರೆ ದುನಿಯಾ ವಿಜಯ್.
ಇದು ಯುವ ಜನಾಂಗದ ಹಿನ್ನೆಲೆಯಲ್ಲಿಯೇ ಮಾಡಿದ ಸಿನಿಮಾ ಎಂದು ಈ ಹಿಂದೆ ವಿಜಯ್ ಹೇಳಿಕೊಂಡಿದ್ದರು. ಟ್ರೇಲರ್‌ನಲ್ಲಿಯೂ ಆ ವಿಚಾರವೇ ಹೈಲೈಟ್ ಆಗಿತ್ತು. ಡ್ರಗ್ ವ್ಯಸನವನ್ನೇ ಪ್ರಧಾನ ಕಥೆಯನ್ನಾಗಿ ಮಾಡಿಕೊಂಡು, ರೌಡಿಸಂ ಮೂಲಕ ರಕ್ತದೋಕುಳಿ ಹರಿಸುವ ಕೆಲಸವೂ ಈ ಚಿತ್ರದಲ್ಲಿ ಕಾಣಿಸುತ್ತದೆ. ಎಂದಿನಂತೆ, ನಟ ದುನಿಯಾ ವಿಜಯ್ ಆಕ್ಷನ್ ಮೂಲಕವೇ ಭೀಮ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಡ್ರಗ್ಸ್ ಮಾತ್ರವಲ್ಲದೆ, ವ್ಹೀಲಿಂಗ್ ಕ್ರೇಜ್ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ.
2021ರಲ್ಲಿ ತೆರೆಗೆ ಬಂದಿದ್ದ ಸಲಗ ಸಿನಿಮಾ ಹಿಟ್ ಆಗಿತ್ತು. ಚೊಚ್ಚಲ ನಿರ್ದೇಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬಂದಿತ್ತು. ಇದೀಗ ಭೀಮ ಚಿತ್ರವನ್ನೂ ನಿರ್ದೇಶನ ಮಾಡಿರುವ ದುನಿಯಾ ವಿಜಯ್, ಚಿತ್ರದಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಾಜ್ಯಾದ್ಯಂತ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕ ಬಹುಪರಾಕ್ ಹೇಳುತ್ತಿದ್ದಾನೆ. ಚಿತ್ರಮಂದಿರಗಳ ಮುಂದೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾನೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿಯೂ ಮೊದಲಾರ್ಧ ನೋಡಿದವರು ತಮಗನಿಸಿದಂತೆ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಒಳ್ಳೆಯ ರೆಸ್ಪಾನ್ಸ್
ದುನಿಯಾ ವಿಜಯ್ ಭೀಮ ಸಿನಿಮಾಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿಯೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈಗಾಗಲೇ ಮೊದಲ ಶೋ ಮುಗಿದಿದ್ದು, ಸಿನಿಮಾ ನೋಡಿ ಬಂದ ಪ್ರೇಕ್ಷಕ ವಿಜಯ್ ಅವರ ನಟನೆ, ಸಿನಿಮಾ ಕಥೆ ಮತ್ತು ಫೈಟ್ ಸೀನ್‌ಗಳಿಗೆ ಫಿದಾ ಆಗಿದ್ದಾನೆ.
ಹೊಸಪೇಟೆಯಲ್ಲಿ ಶೋ ಕ್ಯಾನ್ಸಲ್, ಫ್ಯಾನ್ಸ್ ಆಕ್ರೋಶ
ಇನ್ನು ಹೊಸಪೇಟೆಯಲ್ಲಿ ಭೀಮ ಸಿನಿಮಾದ ಬೆಳಗಿನ 6 ಗಂಟೆಯ ಮಾರ್ನಿಂಗ್ ಶೋ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮುಂಭಾಗದಲ್ಲಿ ಸೇರಿದ ಫ್ಯಾನ್ಸ್, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿದರು. ಸಿನಿಮಾ ಹಾಕಿ ಎಂದು ಗೇಟ್ ಹೊರಭಾಗದಲ್ಲಿ ನಿಂತು ಘೋಷಣೆಗಳನ್ನು ಕೂಗಿದರು.
ಭೀಮನನ್ನು ನೋಡಿ ಯಾರು, ಏನಂದ್ರು?
-"ಯಾವುದೇ ನಿರೀಕ್ಷೆ ಇರಿಸಿಕೊಳ್ಳದೇ ಭೀಮ ಸಿನಿಮಾ ನೋಡಲು ಬಂದೆ. ಆದರೆ, ಇದೀಗ ಸಂಪೂರ್ಣ ಅನಿರೀಕ್ಷಿತ ತಿರುವುಗಳಿಂದ ಕೂಡಿದೆ ವಿಜಿ ಅವರ ಸಿನಿಮಾ. ಭೀಮ ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಕಿಂಗ್. ಮಾಸ್ತಿ ಅವರ ಸಂಭಾಷಣೆ ಚಿತ್ರದುದ್ದಕ್ಕೂ ವಿಜೃಂಭಿಸುತ್ತವೆ. ಇಂಟರ್‌ವಲ್‌ಗೂ ಮುನ್ನ ಮಾಸ್ ದೃಶ್ಯಗಳು ನೋಡುಗರಿಗೆ ಕ್ರೇಜಿ ಎನಿಸುತ್ತವೆ" ಎಂದು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.