ರಂಗನಾಯಕ ಸೋಲು ತನ್ನದಲ್ಲ ಎಂದ ಜಗ್ಗೇಶ್‌; ನನ್ನ ಮೇಲೆ ಕೋಪ ಬೇಡ, ಕ್ಷಮಿಸಿ ಅಂದ್ರು ನವರಸ ನಾಯಕ
ಕನ್ನಡ ಸುದ್ದಿ  /  ಮನರಂಜನೆ  /  ರಂಗನಾಯಕ ಸೋಲು ತನ್ನದಲ್ಲ ಎಂದ ಜಗ್ಗೇಶ್‌; ನನ್ನ ಮೇಲೆ ಕೋಪ ಬೇಡ, ಕ್ಷಮಿಸಿ ಅಂದ್ರು ನವರಸ ನಾಯಕ

ರಂಗನಾಯಕ ಸೋಲು ತನ್ನದಲ್ಲ ಎಂದ ಜಗ್ಗೇಶ್‌; ನನ್ನ ಮೇಲೆ ಕೋಪ ಬೇಡ, ಕ್ಷಮಿಸಿ ಅಂದ್ರು ನವರಸ ನಾಯಕ

ಕನ್ನಡದ ನವರಸ ನಾಯಕ ಜಗ್ಗೇಶ್‌ ನಟನೆಯ ರಂಗನಾಯಕ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಸೋಲು ಕಂಡಿದೆ. ಮಾರ್ಚ್‌ 17ರಂದು ತನ್ನ ಹುಟ್ಟುಹಬ್ಬದ ದಿನ ಜಗ್ಗೇಶ್‌ ಈ ಸಿನಿಮಾದ ಸೋಲಿನ ಕುರಿತು ಮಾತನಾಡಿದ್ದಾರೆ.

ರಂಗನಾಯಕ ಸೋಲು ತನ್ನದಲ್ಲ ಎಂದ ಜಗ್ಗೇಶ್‌
ರಂಗನಾಯಕ ಸೋಲು ತನ್ನದಲ್ಲ ಎಂದ ಜಗ್ಗೇಶ್‌

ಬೆಂಗಳೂರು: ನಿರ್ದೇಶಕ ಗುರುಪ್ರಸಾದ್‌ ಮತ್ತು ನಟ ಜಗ್ಗೇಶ್‌ ಕಾಂಬಿನೇಷನ್‌ನ ರಂಗನಾಯಕ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರವನ್ನು ನೋಡುವುದೇ ಕಷ್ಟ ಎಂಬ ಅಭಿಪ್ರಾಯವನ್ನು ಪ್ರೇಕ್ಷಕರು ವ್ಯಕ್ತಪಡಿಸಿದ್ದರು. ಮಠ, ಎದ್ದೇಳು ಮಂಜುನಾಥ ಬಳಿಕ ಇವರಿಬ್ಬರ ಕಾಂಬಿನೇಷನ್‌ನ ಈ ಚಿತ್ರದ ಸೋಲಿನ ಕುರಿತು ಇದೀಗ ಜಗ್ಗೇಶ್‌ ಮಾತನಾಡಿದ್ದಾರೆ.

ಭಾನುವಾರ ಮಾರ್ಚ್‌ 17ರಂದು ಜಗ್ಗೇಶ್‌ ಹುಟ್ಟುಹಬ್ಬ. ಈ ಸಮಯದಲ್ಲಿ ಮಂತ್ರಾಲಯದಲ್ಲಿದ್ದ ಜಗ್ಗೇಶ್‌ ಅಲ್ಲಿಂದಲೇ ಲೈವ್‌ಗೆ ಬಂದಿದ್ದರು. ಈ ಸಮಯದಲ್ಲಿ ರಂಗನಾಯಕ ಸಿನಿಮಾದ ಸೋಲಿನ ಕುರಿತು ಮಾತನಾಡಿದ್ದಾರೆ. ರಂಗನಾಯಕ ಸಿನಿಮಾದ ಹೆಸರನ್ನು ಉಲ್ಲೇಖಿಸಿ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನದೇನೂ ತಪ್ಪಿಲ್ಲ ಎಂದಿದ್ದಾರೆ.

"ಮೊನ್ನೆ ಒಂದು ಚಿತ್ರ ಮಾಡಿದೆ. ಎಲ್ಲರಿಗೂ ನೋವಾಗಿದೆ. ಅದರಲ್ಲಿ ನನ್ನ ತಪ್ಪಿಲ್ಲ" ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ಜಗ್ಗೇಶ್‌ ಹೇಳಿದ್ದಾರೆ. "ನಂಗೆ ನಂಬಿಕೆ ಜಾಸ್ತಿ, ಶರಣಾಗತರಾಗಿ ಸಹಕಾರ ನೀಡಿ ಎಂದು ಯಾರಾದರೂ ನನ್ನಲ್ಲಿ ಕೇಳಿದರೆ ನಾನು ನಂಬಿಬಿಡುತ್ತೇನೆ. ಆ ಚಿತ್ರ ನನ್ನದಲ್ಲ. ನಿರ್ದೇಶಕನನ್ನು ನಂಬಿ ನಾನು ಕೆಲಸ ಕೊಟ್ಟಾಗ ಆತನ ಆಸೆಯಂತೆ ನನ್ನ ಕರ್ತವ್ಯ ಮಾಡಿರುವೆ" ಎಂದು ಅವರು ಹೇಳಿದ್ದಾರೆ.

"ಯಾರದ್ದೋ ಅಪರಾಧಕ್ಕಾಗಿ ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ. ಸಣ್ಣಪುಟ್ಟ ಲೋಪದೋಷಗಳಿದ್ದಾಗ ಕ್ಷಮೆ ಇರಲಿ. ಪ್ರೀಮಿಯರ್‌ ಪದ್ಮಿನಿಯಂತಹ ಒಳ್ಳೊಳ್ಳೆಯ ಸಿನಿಮಾ ಕೊಟ್ಟಿದ್ದೇನೆ. ಕಾಳಿದಾಸ ಕನ್ನಡ ಮೇಸ್ಟ್ರು ಮಾಡಿದ್ದೀನಿ. ನಿರ್ದೇಶಕ ಹೇಳಿದಂತೆ ನಟಿಸಿದ್ದೇನೆ. ನನಗೂ ಅದಕ್ಕೂ ಸಂಬಂಧವಿಲ್ಲ" ಎಂದು ಜಗ್ಗೇಶ್‌ ಹೇಳಿದ್ದಾರೆ.

"ಕನ್ನಡ ಚಿತ್ರರಂಗದಲ್ಲಿ ಅನ್ನವನ್ನು ಹುಡುಕಿಕೊಂಡು ಬಂದವನು ನಾನು. ತಾಯಿಯವರ ಆಶೀರ್ವಾದ, ರಾಯರ ಕೃಪೆ ಈಗ ಇಲ್ಲಿದ್ದೇನೆ. ನಿಮಗೆ ವಿಶ್ವದಲ್ಲಿ ತಂದೆತಾಯಿಗಿಂತ ಬೇರೆ ದೇವರು ಇರಲು ಸಾಧ್ಯವಿಲ್ಲ. ದೇವರು ತಾನು ಬರೋಕ್ಕೆ ಆಗೋಲ್ಲ ಎಂದು ತಂದೆತಾಯಿಯನ್ನು ಭೂಮಿಗೆ ಕಳುಹಿಸಿದ್ದಾನೆ. ತಂದೆತಾಯಿಯ ಮೇಲೆ ಪ್ರೀತಿ ಹೆಚ್ಚಿಸಿಕೊಳ್ಳಿ" ಎಂದು ಹುಟ್ಟುಹಬ್ಬದಂದು ಲೈವ್‌ನಲ್ಲಿ ಜಗ್ಗೇಶ್‌ ಹೇಳಿದ್ದಾರೆ.

"ನಾನು ಕಷ್ಟಪಟ್ಟು ಆಟೋರಿಕ್ಷಾ ತೆಗೆದುಕೊಳ್ಳಬೇಕೆಂದುಕೊಂಡೆ. ಈ ಮೂಲಕ ಜೀವನ ಮುನ್ನಡೆಸಲು ಬಯಸಿದ್ದೆ. ಆಗ ಮಂತ್ರಾಲಯಕ್ಕೆ ಬಂದಿದ್ದೆ. ರಾಯರ ಕೃಪೆಗೆ ಪಾತ್ರನಾದೆ. ಅಂಬೆಗಾಲಿಡುತ್ತ ಸಣ್ಣಸಣ್ಣ ಪಾತ್ರಗಳಿಂದ ಇಲ್ಲಿಯವರೆಗೆ ತಲುಪಿದ್ದೇನೆ. ಈ ಎಲ್ಲಾ ಬೆಳವಣಿಗೆ ನನ್ನ ರಾಯರ ಕೃಪೆ" ಎಂದು ಜಗ್ಗೇಶ್‌ ಹೇಳಿದ್ದಾರೆ.

Whats_app_banner