K Shivaram Death: ಸಚಿವ ಪ್ರಿಯಾಂಕ್ ಖರ್ಗೆಗೆ ಅಂತಿಮ ದರ್ಶನ ಪಡೆಯೋ ನೈತಿಕತೆ ಇಲ್ಲ; ನಟ ಕೆ. ಶಿವರಾಮ್ ಪತ್ನಿಯ ಆಕ್ರೋಶ
ಅಂತಿಮ ದರ್ಶನ ಪಡೆಯಲು ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನನ್ನ ಪತಿಯ ಅಂತಿಮ ದರ್ಶನ ಪಡೆಯೋಕೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಸ್ಥಳದಲ್ಲೇ ಶಿವರಾಮ್ ಪತ್ನಿ ಆಕ್ರೋಶಗೊಂಡರು.

K Shivaram Death: ಸ್ಯಾಂಡಲ್‌ವುಡ್ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಮ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಮ್, ಗುರುವಾರ ಮಧ್ಯಾಹ್ನದ ವೇಳೆ ಅಸುನೀಗಿದರು. ಅವರ ನಿಧನದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನ ಕಲಾವಿದರು, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದರು. ಇದೀಗ ನಟನ ಪಾರ್ಥೀವ ಶವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಆ ಸ್ಥಳದಲ್ಲಿಯೇ ಹೈಡ್ರಾಮಾವೊಂದು ನಡೆದಿದೆ.
ಗುರುವಾರ ನಿಧನರಾದ ಬಾ ನಲ್ಲೆ ಮಧುಚಂದ್ರಕ್ಕೆ ಚಿತ್ರದ ನಟ, ಮೊದಲ ಬಾರಿ ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದು ಹುದ್ದೆ ಗಿಟ್ಟಿಸಿಕೊಂಡ ಸಾಧಕ, ದಲಿತ ಹೋರಾಟದ ಮುಂಚೂಣಿ ನಾಯಕ ಕೆ. ಶಿವರಾಮ್ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿ ಈಗ ಸಂಘರ್ಷ ಭುಗಿಲೆದ್ದಿದೆ. ಕೆ. ಶಿವರಾಮ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಅವರ ಅಂತಿಮ ದರ್ಶನಕ್ಕೆ ಬಂದ ಸಚಿವ ಪ್ರಿಯಾಂಕ್ ಖರ್ಗೆಗೆ ಮುತ್ತಿಗೆ ಹಾಕಲಾಗಿದೆ.
ಅಂತಿಮ ದರ್ಶನ ಪಡೆಯಲು ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ನನ್ನ ಪತಿಯ ಅಂತಿಮ ದರ್ಶನ ಪಡೆಯೋಕೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಸ್ಥಳದಲ್ಲೇ ಶಿವರಾಮ್ ಪತ್ನಿ ಆಕ್ರೋಶಗೊಂಡರು. ಬಳಿಕ ಕುಟುಂಬದ ಸದಸ್ಯರು ಅವರನ್ನು ಸಮಾಧಾನ ಪಡಿಸಿದರು. ಅಷ್ಟಕ್ಕೂ ಶಿವರಾಮ್ ಪತ್ನಿಯ ರೋಷಾವೇಶಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.
ಪ್ರಿಯಾಂಕ್ ಖರ್ಗೆ ವಿರುದ್ಧ ಧ್ವನಿ
ಶಿವರಾಮ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಛಲವಾದಿ ಮಹಾಸಭಾಕ್ಕೆ ಸೇರಿದ ಜಾಗದಲ್ಲೇ ನಡೆಸಲು ಅವಕಾಶ ನೀಡಬೇಕು ಎಂದು ಕುಟುಂಬಸ್ಥರು ಮತ್ತು ಅಭಿಮಾನಿಗಳು ಸರ್ಕಾರದ ಬಳಿ ಮನವಿ ಮಾಡಿದ್ದರು. ಆದರೆ, ಸರ್ಕಾರ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ಕಾರಣಕ್ಕೆ ಶಿವರಾಮ್ ಅವರ ಪತ್ನಿ ವಾಣಿ ಶಿವರಾಮ್ ಮತ್ತು ಛಲವಾದಿ ಮಹಾಸಭಾದ ಪದಾಧಿಕಾರಿಗಳು ಸರ್ಕಾರದ ನಡೆಗೆ ಕಿಡಿಕಾರಿದ್ದಾರೆ. ಇದರಿಂದ ಅಂತಿಮ ದರ್ಶನದ ವೇಳೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು.
ಅಧಿಕಾರಿಗಳಿಗೂ ಘೇರಾವ್ ಬಿಸಿ
ಇನ್ನೂ ಅಂತಿಮ ದರ್ಶನದ ವೇಳೆ ಅಧಿಕಾರಿಗಳ ಮೇಲೂ ಛಲವಾದಿ ಮಹಾಸಭಾ ಸದಸ್ಯರು ಕೋಪಗೊಂಡಿದ್ದಾರೆ. ಅಂತಿಮ ದರ್ಶನ ಪಡೆಯಲು ಬಂದ ಬಿಬಿಎಂಪಿ ಅಧಿಕಾರಿಗಳು ಹಾಗೂ ಐಪಿಎಸ್ ಅಧಿಕಾರಿಗಳಿಗೆ ಛಲವಾದಿ ಮಹಾಸಭಾ ಸದಸ್ಯರು ಘೇರಾವ್ ಹಾಕಿದ ಘಟನೆಯೂ ನಡೆದಿದೆ.
ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಛಲವಾದಿ ಮಹಾಸಭಾದ ಆವರಣದಲ್ಲೇ ಅಂತ್ಯಕ್ರಿಯೆಗೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಹೇಳಿದ ಶಿವರಾಮ್ ಅಭಿಮಾನಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಜತೆಗೆ ಜೈ ಭೀಮ್ ಘೋಷಣೆ ಮೊಳಗಿಸಿದರು. ಇಷ್ಟೇಲ್ಲಾ ಆದರೂ ಇನ್ನೂ ಸರ್ಕಾರ ಕುಟುಂಬದ ಸದಸ್ಯರ ಹಾಗೂ ಅಭಿಮಾನಿಗಳ ಮನವಿಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ.
ವರದಿ: ಮನೋಜ್ ವಿಜಯೀಂದ್ರ, ಬೆಂಗಳೂರು
