ಅನ್‌ಎಜುಕೇಟೆಡ್ ಪೆಂಗ ಮುಂಡೇವು ಇದ್ರಲ್ಲೂ ಎಗರಾಡ್ತಾರೆ, ನಿಗರಾಡ್ತಾರೆ!; ದರ್ಶನ್ ಫ್ಯಾನ್ಸ್‌ಗೆ ‘ಸಾರಥಿ’ ಮೂಲಕ ತಿವಿದ ಒಳ್ಳೆ ಹುಡ್ಗ ಪ್ರಥಮ್
ಒಳ್ಳೆ ಹುಡುಗ ಪ್ರಥಮ್ ಸದ್ಯ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಈ ನಡುವೆ, ದರ್ಶನ್ ನಟನೆಯ ಸಾರಥಿ ಸಿನಿಮಾದ ಹಾಡಿಗೆ ಪ್ರಥಮ್ ಹೆಜ್ಜೆ ಹಾಕಿದ್ದಾರೆ. ದರ್ಶನ್ ಅಭಿಮಾನಿಗಳಿಗೂ ಈ ಹಾಡಿನ ಮೂಲಕ ಕೌಂಟರ್ ಕೊಟ್ಟಿದ್ದಾರೆ.
Olle Hudga Pratham on Darshan Fans: ಬಿಗ್‌ಬಾಸ್ ವಿಜೇತ ಒಳ್ಳೆ ಹುಡ್ಗ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಸಮಯ ಸಿಕ್ಕಾಗಲೆಲ್ಲ, ತಮ್ಮದೇ ಶೈಲಿಯಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ಅದರಲ್ಲೂ ನಟ ದರ್ಶನ್ ಬಗ್ಗೆ ಈ ಹಿಂದೆ ಮಾತನಾಡಿ, ಅವರ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೆ ಟ್ವಿಟರ್‌ನಲ್ಲಿ ನಟ ದರ್ಶನ್ ಅವರ ಹಾಡಿಗೆ ಡಾನ್ಸ್ ಮಾಡುವ ಮೂಲಕ ನೇರವಾಗಿ ದರ್ಶನ್ ಅಭಿಮಾನಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಹಾಗಾದರೆ, ಅಷ್ಟಕ್ಕೂ ಆಗಿದ್ದೇನು? ಆ ವಿಡಿಯೋದಲ್ಲಿ ಏನಿದೆ? ಇಲ್ಲಿದೆ ನೋಡಿ ಮಾಹಿತಿ.
ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿಯ ಜೈಲಿನ ಮುಖ ನೋಡಿದ್ದಾರೆ. ಈ ನಡುವೆ ಇದೇ ದರ್ಶನ್ ಅನ್ನಪೂರ್ಣೆಶ್ವರಿ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿರುವಾಗ, ಸಾಕಷ್ಟು ಫ್ಯಾನ್ಸ್ ಠಾಣೆ ಮುಂದೆ ಜಮಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಥಮ್ ದರ್ಶನ್ ಅಭಿಮಾನಿಗಳ ವರ್ತನೆಗೆ ಕೊಂಚ ಗರಂ ಆಗಿಯೇ ಮಾತನಾಡಿದ್ದರು.
ಈ ಹಿಂದೆಯೂ ದರ್ಶನ್ ಫ್ಯಾನ್ಸ್ ಬಗ್ಗೆ ಪ್ರಥಮ್ ಮಾತು
"ಆ ಅನ್ನಪೂರ್ಣೇಶ್ವರಿ ನಗರದ ಠಾಣೆ ಮುಂದೆ ದರ್ಶನ್ ಅಭಿಮಾನಿಗಳಿಗೆ ಏನು ಕೆಲಸ? ಠಾಣೆ ಮುಂದಿರುವ ಬೇವರ್ಸಿಗಳಿಗೆ ಮನೆಯಲ್ಲಿ ಅವರಮ್ಮನಿಗೆ ಒಂದೊತ್ತು ಹಿಟ್ಟು ಕೊಡಿಸಲು ಯೋಗ್ಯತೆ ಇಲ್ಲ. ನನಗೆ ಒಂದು ವಾರ ಪೊಲೀಸ್ ಪೇದೆ ಆಗುವ ಅವಕಾಶ ಕೊಟ್ಟು ನೊಡಿ ಎಲ್ಲರನ್ನು ದೊಣ್ಣೆ ಹಿಡಿದು ಹೊಡೆದು ಓಡಿಸುತ್ತೇನೆ. ಇದೊಂದು ಕಾನೂನಿನ ಕೆಲಸ, ನಾವು ನೀವು ಏನು ಮಾಡಲು ಸಾಧ್ಯ. ಹೀಗಿರುವಾಗ ಈ ಅಂಧಾಭಿಮಾನಿಗಳು ಇಲ್ಲಿ ಬಂದು ನಿಂತರೆ ಸಮಸ್ಯೆ ಬಗೆಹರಿಯುತ್ತಾ? ಇಲ್ವಲ್ಲ" ಎಂದಿದ್ದರು.
ಪ್ರಥಮ್‌ಗೆ ಬಂದಿತ್ತು ಜೀವ ಬೆದರಿಕೆ
ಪ್ರಥಮ್ ಅವರ ಈ ಮಾತಿನಿಂದ ರೊಚ್ಚಿಗೆದ್ದಿದ್ದ ದರ್ಶನ್ ಫ್ಯಾನ್ಸ್, ಪ್ರಥಮ್‌ಗೆ ಕೊಲೆ ಬೆದರಿಕೆ ಹಾಕಿದ್ದರು. ಇದಕ್ಕೆ ಬಗ್ಗದ ಪ್ರಥಮ್, ಕಾನೂನಿನ ಮೊರೆ ಹೋಗಿದ್ದರು. ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. "ಅಂಧಾಭಿಮಾನಿಗಳೇ; ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ! ಮನೆಗೆ ಪೊಲೀಸ್ ನೋಟೀಸ್ ಬಂದಮೇಲೆ ಸ್ಟೇಷನ್‌ಗೆ ಬಂದಾಗ ನಾವು ಪ್ರಥಮ್ ಫ್ಯಾನ್, ಯಾರೋ ಫೇಕ್ ಫ್ರೊಫೈಲ್ ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ; ಸೋಷಿಯಲ್ ಮೀಡಿಯಾದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ? ನೀವು ಬುದ್ಧಿ ಕಲಿಯಲ್ಲ; ಇನ್ಮೇಲೆ ಲೀಗಲ್ ಆಗಿಹೋಗ್ತೀನಿ; ಅನುಭವಿಸಿ" ಎಂದಿದ್ದರು.
ಇದೀಗ ಸಾರಥಿ ಹಾಡಿನ ಮೂಲಕ ಟಾಂಗ್
ಸದ್ಯ ಜೀ ಕನ್ನಡದಲ್ಲಿ ಡಾನ್ಸಿಂಗ್ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿ ಸ್ಪರ್ಧಿಯಾಗಿರುವ ಪ್ರಥಮ್, ಸಖತ್ ಡಾನ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಶೋನಲ್ಲಿ ಈ ವಾರ ದರ್ಶನ್ ಅವರ ಸಾರಥಿ ಸಿನಿಮಾದ ಹಾಡಿಗೆ ಡಾನ್ಸ್ ಮಾಡಿರುವ ಪ್ರಥಮ್, "ಬಹಳಷ್ಟು ಜನ ಅಂದುಕೊಳ್ತಾರೆ ನನಗೂ ದರ್ಶನ್ ಸರ್‌ಗೂ ಆಗೋದಿಲ್ಲ ಅಂತ; ಹಾಗಿದ್ದಿದ್ರೆ ಇವತ್ತು ನಾನು ಈ ಸಾಂಗ್ ಫರ್ಫಾರ್ಮ್ ಮಾಡ್ತಿರ್ಲಿಲ್ಲ; ಕಲೆಯನ್ನ ಗೌರವಿಸೋದು ಕಲೀಬೇಕು; ಎಜುಕೇಟೆಡ್ ಫ್ಯಾನ್ಸ್ ಅರ್ಥ ಮಾಡ್ಕೊಳ್ತಾರೆ. ಅನ್‌ಎಜುಕೇಟೆಡ್ ಪೆಂಗ ಮುಂಡೇವು ಇದ್ರಲ್ಲೂ ಎಗರಾಡ್ತಾರೆ, ನಿಗರಾಡ್ತಾರೆ. ಹೋಗ್ಲಿ ಬಿಡಿ.." ಎಂದಿದ್ದಾರೆ ಪ್ರಥಮ್.