ರೈತ ದೇಶದ ಬೆನ್ನೆಲುಬು, ರೈತನ ಬೆನ್ನೆಲುಬು ಕಾವೇರಿ ಎಂದ ನಟ ಶಿವರಾಜ್‌ಕುಮಾರ್; ವಿಡಿಯೋ
ರೈತ ದೇಶದ ಬೆನ್ನೆಲುಬು, ರೈತನ ಬೆನ್ನೆಲುಬು ಕಾವೇರಿ, ಈ ವರ್ಷ ರಾಜ್ಯದಲ್ಲಿ ಮಳೆ ಕಡಿಮೆ ಇರುವುದರಿಂದ ನಮ್ಮ ರಾಜ್ಯದ ರೈತರು ಬಹಳ ಕಷ್ಟದಲ್ಲಿದ್ಧಾರೆ. 2 ರಾಜ್ಯದ ನಾಯಕರು ಹಾಗೂ ನ್ಯಾಯಾಲಯ ಇದನ್ನು ಮನಸಿನಲ್ಲಿಟ್ಟುಕೊಂಡು ಒಂದು ಒಳ್ಳೆ ತೀರ್ಮಾನ ಕೊಡಬೇಕು.
ಕಾವೇರಿ ಕಾವು ಮತ್ತೆ ಹೆಚ್ಚಾಗಿದೆ. ರಾಜ್ಯದ ಹಲವೆಡೆ ಬರದ ಸಮಸ್ಯೆ ಇದೆ. ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ತಮಿಳುನಾಡಿಗೆ ಹರಿಸುವಷ್ಟು ನೀರು ಇಲ್ಲದಿದ್ದರೂ ತಮಿಳುನಾಡು ಮಾತ್ರ ಪದೇ ಪದೆ ನೀರಿಗೆ ಬೇಡಿಕೆ ಇಡುತ್ತಿದೆ. ಈ ನಡುವೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಕೂಡಾ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ.
ರೈತ ದೇಶದ ಬೆನ್ನೆಲುಬು ಎಂದ ಶಿವಣ್ಣ
ಸಿನಿಮಾ ನಟರು ಕಾವೇರಿ ಸಮಸ್ಯೆ ಬಗ್ಗೆ ದನಿ ಎತ್ತುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾದ ಬೆನ್ನಲ್ಲೇ ಒಬ್ಬೊಬ್ಬರಂತೆ ನಟರು ಕಾವೇರಿ ವಿವಾದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ನಟ ಶಿವರಾಜ್‌ಕುಮಾರ್ ಕೂಡಾ ವಿಡಿಯೋ ಮಾಡಿ ಕಾವೇರಿ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ''ರೈತ ದೇಶದ ಬೆನ್ನೆಲುಬು, ರೈತನ ಬೆನ್ನೆಲುಬು ಕಾವೇರಿ, ಈ ವರ್ಷ ರಾಜ್ಯದಲ್ಲಿ ಮಳೆ ಕಡಿಮೆ ಇರುವುದರಿಂದ ನಮ್ಮ ರಾಜ್ಯದ ರೈತರು ಬಹಳ ಕಷ್ಟದಲ್ಲಿದ್ಧಾರೆ. 2 ರಾಜ್ಯದ ನಾಯಕರು ಹಾಗೂ ನ್ಯಾಯಾಲಯ ಇದನ್ನು ಮನಸಿನಲ್ಲಿಟ್ಟುಕೊಂಡು ಒಂದು ಒಳ್ಳೆ ತೀರ್ಮಾನ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ, ಜೈಹಿಂದ್ ಜೈಕರ್ನಾಟಕ ಮಾತೆ ಎಂದು ಶಿವರಾಜ್‌ಕುಮಾರ್ ಮಾತನಾಡಿದ್ದಾರೆ.
ಕಾವೇರಿ ನೀರಿಗೆ ಕತ್ತರಿ ಹಾಕುತ್ತಿದ್ದಾರೆ ಎಂದ ದರ್ಶನ್
ದರ್ಶನ್ ಟ್ವೀಟ್ ಮಾಡಿ, ''ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ'' ಎಂದು ಟ್ವೀಟ್ ಮಾಡಿದ್ದಾರೆ.
ನಮ್ಮ ಕಾವೇರಿ ನಮ್ಮ ಹಕ್ಕು ಎಂದು ಟ್ವೀಟ್ ಮಾಡಿದ ಕಿಚ್ಚ
''ಸ್ನೇಹಿತರೇ ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ. ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ. ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ'' ಎಂದು ಸುದೀಪ್ ಟ್ವೀಟ್ ಮಾಡಿದ್ದರು.
ಜಗ್ಗೇಶ್ ಟ್ವೀಟ್
''ಕನ್ನಡ ನೆಲದ ಹಾಗೂ ಕಾವೇರಿ ಪರ ಹೋರಾಡುತ್ತಿರುವ ಕನ್ನಡ ಕಟ್ಟಾಳುಗಳ ಗಮನಕ್ಕೆ, ನಾನು ಕನ್ನಡ ಚಿತ್ರರಂಗದಲ್ಲಿ 42 ವರ್ಷಕಾಲ ಸೇವೆ ಸಲ್ಲಿಸಿ ಕನ್ನಡಿಗರ ಪ್ರೀತಿ ಅಭಿಮಾನಕ್ಕೆ ಪಾತ್ರನಾಗಿದ್ದೇನೆ. ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಹಾಜರಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿಕೆಶಿ ರವರ ಮುಂದೆ ಕಾವೇರಿ ನದಿಯ ನೀರಿನ ವಿಚಾರವಾಗಿ ನಮ್ಮ ಬೆಂಬಲ ಸದಾ ಕನ್ನಡಿಗರ ಪರವಾಗಿಯೇ ಇದೆ ಎಂದು ತಿಳಿಸಿ ಬಂದಿದ್ದೆ. ನಾಳೆ ದೆಹಲಿಯಲ್ಲಿ ಕರ್ನಾಟಕ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ ಅದರಲ್ಲೂ ಭಾಗಿಯಾಗಿ ಕಾವೇರಿ ನದಿಯ ಪರವಾಗಿ ಹಾಗೂ ಕನ್ನಡದ ರೈತರ ಪರವಾಗಿ ನನ್ನ ಧ್ವನಿಯನ್ನು ಪ್ರಸ್ತಾಪಿಸುತ್ತೇನೆ'' ಇಂತಿ ಕನ್ನಡಿಗ ಜಗ್ಗೇಶ್ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.