ಸಿ.ಎನ್ ಮಂಜುನಾಥ್ ಗೆಲುವಿಗೆ ಇನ್ಫೋಸಿಸ್ ಸುಧಾಮೂರ್ತಿ ವಾಮಮಾರ್ಗ! ಚೇತನ್ ಅಹಿಂಸಾ ಮಾತಿನ ಮರ್ಮವೇನು?
ಡಾ. ಸಿ.ಎನ್ ಮಂಜುನಾಥ್ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಇನ್ಫೋಸಿಸ್‌ನ ಸುಧಾ ಮೂರ್ತಿ ಮಂತ್ರಾಲಯದ ರಾಯರ ಬಳಿ ಹರಕೆ ಹೊತ್ತಿದ್ದಾರೆ. ಹೀಗೆ ಹರಕೆ ಹೊತ್ತ ವಿಚಾರದ ಬಗ್ಗೆ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
Chetan Ahimsa on Sudha Murthy: ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa). ರಾಜಕೀಯ ವಿಚಾರಗಳ ಜತೆಗೆ ಪ್ರಸ್ತುತ ಆಗುಹೋಗುಗಳ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಸುದ್ದಿಯಲ್ಲಿರುತ್ತಾರೆ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ (C M Siddaramaiah) ಅವರನ್ನೂ ತರಾಟೆಗೆ ತೆಗೆದುಕೊಂಡ ಸಾಕಷ್ಟು ಉದಾಹರಣೆಗಳಿವೆ. ಈ ನಡುವೆ ಮಗದೊಮ್ಮೆ ಇನ್ಫೋಸಿಸ್‌ನ ಸುಧಾಮೂರ್ತಿ (infosys sudha murthy) ಬಗ್ಗೆಯೂ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ. ರಾಜ್ಯ ರಾಜಕೀಯದ ಜತೆಗೆ ಕೇಂದ್ರದಲ್ಲಿಯೂ ಈ ಸಲದ ಲೋಕಸಭೆ ಚುನಾವಣೆ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಮೋದಿ ವರ್ಸಸ್ ರಾಹುಲ್ ಗಾಂಧಿ ಎಂದೇ ಬಿಂಬಿತವಾಗುತ್ತಿದೆ. ಈ ನಡುವೆ ಕರ್ನಾಟಕದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ರಾಜ್ಯದ ಬಹುಪಾಲು ಕ್ಷೇತ್ರಗಳನ್ನು ನಾವೇ ಗೆಲ್ಲಲಿದ್ದೇವೆ ಎಂದು ಭರವಸೆಯ ಮಾತುಗಳನ್ನಾಡುತ್ತಿದೆ.
ಕದನ ಕುತೂಹಲದ ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಡಾ.ಸಿ.ಎನ್.ಮಂಜುನಾಥ್ ಕಣದಲ್ಲಿದ್ದಾರೆ. ಇತ್ತ ಕಾಂಗ್ರೆಸ್ಸಿನಿಂದ ಹಾಲಿ ಸಂಸದ ಡಿ.ಕೆ. ಸುರೇಶ್ ಕಣದಲ್ಲಿದ್ದಾರೆ. ಇವರಿಬ್ಬರ ನಡುವಿನ ಈ ಕದನ ಕುತೂಹಲ ಬರೀ ಕರ್ನಾಟಕ ಮಾತ್ರವಲ್ಲ, ದೇಶದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಸಿಎನ್ ಮಂಜುನಾಥ್ ಅವರು ಗೆಲ್ಲಲಿ ಎಂದು ಇನ್ಫೋಸಿಸ್‌ನ ಸುಧಾಮೂರ್ತಿ, ಮಂತ್ರಾಲಯದ ಗುರು ರಾಘವೇಂದ್ರದ ಸನ್ನಿಧಾನದಲ್ಲಿ ಹರಕೆ ಹೊತ್ತಿದ್ದರು.
ಸುಧಮ್ಮನ ಮಾತು ನೆನೆದ ಸಿ. ಎನ್. ಮಂಜುನಾಥ್
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, "ಮಂತ್ರಾಲಯದ ಒಂದು ಜಾಗದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಗುರು ರಾಘವೇಂದ್ರರ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ಬಂದು, ರಾಯರ ಪಾದಪೂಜೆಯನ್ನು ಮಾಡುತ್ತೇನೆ ಎಂದು ನಿಮ್ಮ ಗೆಲುವಿಗಾಗಿ ಹರಕೆ ಹೊತ್ತಿದ್ದೇನೆ" ಎಂದು ಸುಧಾಮೂರ್ತಿ ಅವರು ಹೇಳಿಕೊಂಡಿದ್ದನ್ನು ಮಂಜುನಾಥ್ ನೆನಪಿಸಿಕೊಂಡಿದ್ದರು. ಇದೀಗ ಸುಧಾಮೂರ್ತಿ ಹರಕೆ ಹೊತ್ತ ವಿಚಾರದ ಬಗ್ಗೆಯೇ ನಟ ಚೇತನ್ ಅಹಿಂಸಾ ಮಾತನಾಡಿದ್ದಾರೆ.
ಚೇತನ್ ಅಹಿಂಸಾ ಹೇಳಿದ್ದೇನು?
"ಲೋಕಸಭಾ ಚುನಾವಣೆಯಲ್ಲಿ ಸಿ. ಎನ್. ಮಂಜುನಾಥ ಅವರ ಗೆಲುವಿಗೆ ಹರಿಕೆ ಹೊತ್ತಿದ್ದಾರೆ ಇನ್ಫೋಸಿಸ್ನ ಸುಧಾ ಮೂರ್ತಿ. ಶ್ರೀಮಂತರು ಮತ್ತು ಗಣ್ಯರು ಯಾವಾಗಲೂ ವ್ಯವಸ್ಥೆಯಿಂದ ರಕ್ತ/ ಬೆವರು/ ಕಣ್ಣೀರಿನ ಮೂಲಕವಲ್ಲ, ಕುಶಲತೆಯಿಂದ ಪ್ರಯೋಜನ ಪಡೆದಿದ್ದಾರೆ. ಅಂತೆಯೇ, ಸುಧಾ ಮೂರ್ತಿ ಅವರು ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಬೆಂಗಳೂರು ಗ್ರಾಮಾಂತರದ ಬಿಸಿ ಬಿಸಿಲಿನಲ್ಲಿ ಪ್ರಚಾರ ಮಾಡಲಿಲ್ಲ, ಬದಲಿಗೆ ವಿವೇಚನಾರಹಿತ ವಾಮಮಾರ್ಗ ತೆಗೆದುಕೊಂಡರು. ಇದು ಎಷ್ಟು ಹಾಸ್ಯಾಸ್ಪದ" ಎಂದು ಚೇತನ್ ಅಹಿಂಸಾ ಲೇವಡಿ ಮಾಡಿದ್ದಾರೆ.
ಸಿಎಂ ಸಿದ್ದುಗೆ ಸೋಮಾರಿ ಎಂದಿದ್ದ ಚೇತನ್
"ಹಿಂದೂ ವ್ಯವಸ್ಥೆ ಮತ್ತು ಮನುವಾದಿಗಳು (ಕಾಂಗ್ರೆಸ್, ಎಎಪಿ, ಇತ್ಯಾದಿ) ಪ್ರಧಾನಿ ಮೋದಿಯವರನ್ನು 'ಹಿಟ್ಲರ್' ಎಂದು ಕರೆಯುವುದು ಸಹಜ. (1930-40ರ ದಶಕದಲ್ಲಿ ಹಿಟ್ಲರ್ ಮತ್ತು ನಾಜಿಗಳು 3 ಕೋಟಿಗೂ ಹೆಚ್ಚು ಜನರನ್ನು ಕೊಂದಿದ್ದರು; (2002ರ ಆಸ್ಟರಿಸ್ಕೊಂದಿಗೆ) ಮೋದಿ ನೇರವಾಗಿ 0 ಜನರನ್ನು ಕೊಂದಿದ್ದಾರೆ) ಆದರೆ 6 ವರ್ಷಗಳಲ್ಲಿ ಯಾವುದೇ ಪರಿವರ್ತನೆ ಮಾಡದ ಸಿಎಂ ಸಿದ್ದರಾಮಯ್ಯ ಅವರನ್ನು ನಾನು 'ಸೋಮಾರಿ' ಎಂದು ಕರೆದರೆ, ಅದು ಸೂಕ್ತವಲ್ಲ. ಬೂಟಾಟಿಕೆ" ಎಂದಿದ್ದರು.