Chetan Ahimsa: ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಮುಂದೆ ಹಲವು ಬೇಡಿಕೆಗಳನ್ನಿಟ್ಟ ನಟ ಚೇತನ್ ಅಹಿಂಸಾ
ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ನಟ ಚೇತನ್ ಅಹಿಂಸಾ ಇದೀಗ ನೂತನ ಸರ್ಕಾರದ ಮುಂದೆ ಒಂದಷ್ಟು ಬೇಡಿಕೆಗಳನ್ನಿಟ್ಟಿದ್ದಾರೆ.
Chetan Ahimsa: ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಈ ನಟ, ನಿತ್ಯದ ಬೆಳವಣಿಗೆಗಳ ಬಗ್ಗೆ ಒಂದಿಲ್ಲೊಂದು ಕಮೆಂಟ್ ಮಾಡುತ್ತಲೇ ಇರುತ್ತಾರೆ. ಆ ಹೇಳಿಕೆಗಳ ಮೂಲಕವೇ ಪರ ವಿರೋಧ ಚರ್ಚೆಗೂ ಒಗ್ಗರಣೆ ಹಾಕುತ್ತಿರುತ್ತಾರೆ. ಈಗ ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಈ ಸಂಬಂಧ ಪೋಸ್ಟ್ ಹಂಚಿಕೊಂಡಿರುವ ಚೇತನ್, ಗೋಹತ್ಯೆ ಮಸೂದೆ, ಜಾತಿ ಗಣತಿ, ಎಸ್ಟಿ ಮೀಸಲಾತಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಪ್ರನಾಳಿಕೆಯಲ್ಲಿ ಹೇಳಿಕೊಂಡಿದ್ದ ಎಲ್ಲ 5 ಚುನಾವಣಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಚೇತನ್ ಪೋಸ್ಟ್ ಹೀಗಿದೆ
ಸಿದ್ದರಾಮಯ್ಯ ಅವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ
ಅವರು ತಕ್ಷಣ ಮಾಡಬೇಕಾದ ಕೆಲವು ಕಾರ್ಯಗಳು ಇಲ್ಲಿವೆ:
- 1. ಎಲ್ಲಾ 5 ಚುನಾವಣಾ ಯೋಜನೆಗಳನ್ನು ಜಾರಿಗೊಳಿಸಬೇಕು
- 2. ಗೋಹತ್ಯೆ ವಿರೋಧಿ ಮಸೂದೆ & ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕಬೇಕು; 4% ಮುಸ್ಲಿಂ OBC ಮೀಸಲಾತಿಯನ್ನು ಮರುಸ್ಥಾಪಿಸಬೇಕು
- 3. ಜಾತಿ ಗಣತಿಯನ್ನು ಬಹಿರಂಗಪಡಿಸಬೇಕು/ಹೊರಗೆ ತರಬೇಕು
- 4. ಎಸ್ಟಿ (ST) ಒಳ ಮೀಸಲಾತಿ ಮತ್ತು ಖಾಸಗಿ ವಲಯದ ಮೀಸಲಾತಿಯನ್ನು (ಜಾತಿ/ಪ್ರದೇಶ/ಇತ್ಯಾದಿ) ಜಾರಿಗೊಳಿಸಬೇಕು
ಹೀಗೆ ಈ ನಾಲ್ಕು ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ದಿ ಕೇರಳ ಸ್ಟೋರಿ ಬಗ್ಗೆ ಮಾತನಾಡಿದ್ದ ಚೇತನ್
ದಿ ಕೇರಳ ಸ್ಟೋರಿ ಈ ಸಿನಿಮಾದ ಟ್ರೇಲರ್ ನೋಡಿರುವ ಚೇತನ್ ಅಹಿಂಸಾ, ಅದಕ್ಕೆ ತಮ್ಮದೆ ಆದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಿತ್ರವನ್ನು ನಿಷೇಧಿಸಬೇಕು ಎಂಬ ಮಾತನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
"ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಮೇ 5 ರಂದು ತೆರೆಗೆ ಬರಲಿದೆ ನಾನು ಈ ಹಿಂದೆ ಸಮುದಾಯದ/ ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ" ಎಂದಿದ್ದಾರೆ.