ನನ್ನ ಗರ್ಭ, ನನ್ನ ನಿರ್ಧಾರ; ಗುಡ್ ನ್ಯೂಸ್ ಯಾವಾಗ ಅಂತ ಕೇಳಿದ್ರೆ ಉರಿದು ಬಿಳ್ತಾರೆ ನಟಿ ಅನು ಪ್ರಭಾಕರ್! ಯಾಕಿರಬಹುದು?
ಮದುವೆ ಆದ ಕೆಲ ತಿಂಗಳು ಕಳೆಯುತ್ತಿದ್ದಂತೆ, ಮಹಿಳೆಯರಿಗೆ ನಮ್ಮ ಸುತ್ತಲಿನ ಆಪ್ತರು, ಸ್ನೇಹಿತರು, ಕುಟುಂಬದವರು ಗುಡ್ ನ್ಯೂಸ್ ಯಾವಾಗ? ಎಂದು ಪ್ರಶ್ನೆ ಮಾಡುವುದು ಸಹಜ. ಈ ಬಗ್ಗೆ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ ನಟಿ ಅನು ಪ್ರಭಾಕರ್. ಅದು ಅವಳ ಗರ್ಭ, ಅವಳ ನಿರ್ಧಾರ ಅದನ್ಯಾಕೆ ಪ್ರಶ್ನಿಸಬೇಕು? ಎಂದಿದ್ದಾರೆ.
Actress Anu Prabhakar: ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಸಿನಿಮಾ ಜತೆ ಜತೆಗೆ ಕಿರುತೆರೆಯಲ್ಲೂ ಹೆಚ್ಚು ಬಿಜಿಯಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದರ ನಡುವೆಯೇ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನನ್ನಮ್ಮ ಸೂಪರ್‌ಸ್ಟಾರ್ ಸೀಸನ್ 3ರಲ್ಲಿ ತೀರ್ಪುಗಾರರಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಿರುವಾಗಲೇ ಇದೇ ಅನು ಪ್ರಭಾಕರ್‌ಗೆ ಒಂದು ವಿಚಾರದ ಬಗ್ಗೆ ಬೇಸರವಿದೆ.
ಸಾಮಾನ್ಯವಾಗಿ ಮದುವೆ ಆದ ಕೆಲ ತಿಂಗಳು ಕಳೆಯುತ್ತಿದ್ದಂತೆ, ನಮ್ಮ ಸುತ್ತಲಿನ ಆಪ್ತರು, ಸ್ನೇಹಿತರು, ಕುಟುಂಬದವರು ಗುಡ್ ನ್ಯೂಸ್ ಯಾವಾಗ? ಎಂದು ಪ್ರಶ್ನೆ ಮಾಡುವುದು ಸಹಜ. ಈ ಸಹಜ ಪ್ರಕ್ರಿಯೆ ಬಗ್ಗೆಯೂ ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ ಅನು ಪ್ರಭಾಕರ್. ಅದು ಅವಳ ಗರ್ಭ, ಅವಳ ನಿರ್ಧಾರ ಅದನ್ಯಾಕೆ ಪ್ರಶ್ನಿಸಬೇಕು? ಎಂಬುದು ಅನು ಅವರ ವಾದ. ಆ ಬೇಸರದ ವಿಷಯದ ಬಗ್ಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುದೀರ್ಘವಾಗಿ ಹೇಳಿಕೊಂಡಿದ್ದಾರೆ ಅನು.
ಅನು ಪ್ರಭಾಕರ್ ಹೇಳಿದ್ದೇನು?
"8 ವರ್ಷ ಆಯ್ತು ಮದುವೆ ಆಗಿಲ್ಲ. ಆಕೆಗೆ ಕಿರುಕುಳ ಕೊಡ್ತಿದ್ದಾರೆ. ಬಂಜೆ ಅದೂ ಇದೂ ಎಂದೆಲ್ಲ ಕರೆಸಿಕೊಳ್ಳುವ ಪರಿಸ್ಥಿತಿ ಅವಳದ್ದು. ಇದೆಲ್ಲದರ ಮೇಲೆ ಅವಳಿಗೆ ಮಗು ಆಗುತ್ತದೆ. ಆದರೆ, ಆ ಮಗು ವಿಕಲಚೇತನ ಆಗಿರುತ್ತೆ. ಡಾಕ್ಟರ್ ಬೇಡ ಅಂತ ಹೇಳಿದ್ರೂ, ಆಕೆ ಆ ಮಗುವನ್ನು ಪಡೆದುಕೊಳ್ತಾಳೆ. ಇಷ್ಟು ದಿನ ಕಾದರೂ ನನಗೆ ಸಿಕ್ಕಿರಲಿಲ್ಲ. ಇದೀಗ ಇದು ದೇವರ ಮಗು ನನಗೆ. ನಾನು ಇದನ್ನ ಸಾಕ್ತಿನಿ. ಆ ಮಗು ಭೂಮಿಗೆ ಬಂದ ಮೇಲೆ ಅದನ್ನು ದೊಡ್ಡದನ್ನಾಗಿ ಮಾಡುವುದಿದೆಯಲ್ಲ ಅದೂ ಒಂದು ಹೋರಾಟವೇ. ನನ್ನಮ್ಮ ಸೂಪರ್‌ಸ್ಟಾರ್‌ನಲ್ಲಿ ಈ ಸ್ಕಿಟ್ ನೋಡಿ ನಾನು ತುಂಬ ಅತ್ತಿದ್ದೆ"
ಗುಡ್ ನ್ಯೂಸ್ ಅಂತ ಯಾವತ್ತೂ ಕೇಳಬೇಡಿ..
"ಈ ಹಿಂದೆ ನಾನು ಒಬ್ಬ ಮಹಿಳಾ ಲೇಖಕಿ ಬರೆದ my womb my decision ಪುಸ್ತಕ ನಾನು ಓದಿದ್ದೆ. ಅದರಲ್ಲಿ ನನಗೆ ಯಾವುದೇ ಪ್ರಶ್ನೆ ಮಾಡಬೇಡಿ. ಯಾಕಂದರೆ ಪ್ರಶ್ನೆ ಮಾಡುವವರು ಎಲ್ಲದರ ಬಗ್ಗೆ ಪ್ರಶ್ನೆ ಮಾಡ್ತಾರೆ. ಅದರಲ್ಲೂ ನಮ್ಮ ಇಂಡಿಯಾದಲ್ಲಿ ಯಾವಾಗ ಗುಡ್‌ನ್ಯೂಸ್, ಯಾವಾಗ ಗುಡ್ ನ್ಯೂಸ್ ಅಂತ ಕೇಳುವ ಮನಸ್ಥಿತಿ ಜಾಸ್ತಿ. ನಡು ರಸ್ತೆಯಲ್ಲಿ ಹೊರಟಿರುವಾಗಲೂ ತಡೆದು ನಿಲ್ಲಿಸಿ, ಯಾವಾಗ ಗುಡ್‌ನ್ಯೂಸ್ ಅಂತ ಕೇಳ್ತಾರೆ. ನಮ್ಮ ದೇಶದಲ್ಲಿ ಎರಡನೇ ಮಕ್ಕಳು ಅನ್ನೋ ಕಾನೂನು ಇದೆ. ವಿದೇಶದಲ್ಲಿ ಒಬ್ಬ ತಾಯಿಗೆ ಆರು ಜನ, ಎಂಟು ಜನ ಮಕ್ಕಳಿರ್ತಾರೆ. ಅದೂ ಅವರ ನಿರ್ಧಾರವೇ"
"ಅದರ ಬಗ್ಗೆಯೂ ಕಾಮೆಂಟ್ ಮಾಡ್ತಾರೆ. ಮಕ್ಕಳು ಆಗಿಲ್ವಾ ಅದರ ಬಗ್ಗೆಯೂ ಕಾಮೆಂಟ್, ಒಂದೇ ಮಗು ಆಗಿದ್ರೆ ಅದಕ್ಕೂ ಕಾಮೆಂಟ್, ಅಯ್ಯೋ ಅವಳಿಗೆ ಮೂರು ಮಕ್ಕಳಂತೆ ಎಂದೂ ಮಾತನಾಡ್ತಾರೆ. ಅಯ್ಯೋ ನೋಡು ಮಾನ ಮರ್ಯಾದೆ ಇಲ್ಲ.. ವರ್ಷಕ್ಕೊಂದು ಮಗು ಹೆರ್ತಿದ್ದಾರೆ ಅಂತಲೂ ಅಂತಾರೆ. ಅದು ಅವರ ಗರ್ಭ ಅವರ ಇಷ್ಟ ಅಲ್ವಾ? ಈ ಥರದ ಟಾಪಿಕ್ ಟಚ್ ಮಾಡಿದ್ದಕ್ಕೆ ನನ್ನಮ್ಮ ಸೂಪರ್‌ಸ್ಟಾರ್ ಟೀಮ್‌ಗೆ ಧನ್ಯವಾದ ಹೇಳಿದೆ. ಇದನ್ನ ನೋಡಿ ಹತ್ತೇ ಹತ್ತು ಜನ ಗುಡ್‌ನ್ಯೂಸ್ ಯಾವಾಗ ಅಂತ ಕೇಳೋದನ್ನ ನಿಲ್ಲಿಸಿದ್ರು ಅಂದ್ರೆ ಸಾರ್ಥಕ ಆಯ್ತು ಅಂತಲೇ ಅರ್ಥ"
ಆಕೆಗೂ ನುಂಗಲಾರದ ನೋವುಗಳಿರುತ್ತವೆ..
"ಪದೇಪದೆ ಮಿಸ್‌ಕ್ಯಾರೇಜ್ ಆಗಿ, ಆ ಹುಡುಗಿಯ ದೈಹಿಕ ನೋವು, ಮಾನಸಿಕ ನೋವು, ತಾಯಿ ಆಗಲು ಆಗ್ತಿಲ್ಲ ಅನ್ನೋ ನೋವು, ಇದೆಲ್ಲದರ ಮಧ್ಯೆ, ಗುಡ್‌ನ್ಯೂಸ್ ಯಾವಾಗ ಅಂತ ನೀವು ಕೇಳುವುದು, ಎಷ್ಟು ನೋವು ಕೊಡಬಹುದು? ಆಗಿನ ಪರಿಸ್ಥಿತಿ ಹೇಗಿರುತ್ತದೆ ಅಂತ ಆಕೆಗಷ್ಟೇ ಗೊತ್ತಿರುತ್ತದೆ. ದಯವಿಟ್ಟು ಆ ಪ್ರಶ್ನೆಯನ್ನೇ ಕೇಳಬೇಡಿ. ಯಾಕೆಂದ್ರೆ ಹಿಂದೆ ಏನಾಗ್ತಿದೆ ಅಂತ ಗೊತ್ತಿಲ್ಲ. ಒಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಟೇಕನ್ ಫಾರ್ ಗ್ರ್ಯಾಂಟೆಡ್ ಅನ್ನೋ ರೀತಿಯಲ್ಲಿ ಪ್ರಶ್ನೆ ಕೇಳಬಾರದು" ಎಂದಿದ್ದಾರೆ ಅನು ಪ್ರಭಾಕರ್.