Chaithra J Achar: ಸೈಲೆಂಟಾಗಿ ಲೆಸ್ಬಿಯನ್ ಸಿನಿಮಾದಲ್ಲಿ ನಟಿಸಿದ ಚೈತ್ರಾ ಜೆ ಆಚಾರ್; ಇಲ್ಲೇ ಇದೆ ನೋಡಿ ಆ ಚಿತ್ರ
Chaithra J Achar Movies: ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಪ್ರೇಕ್ಷಕರ ಮನ ಗೆದ್ದ ಚೈತ್ರಾ ಜೆ ಆಚಾರ್ ನಟಿಸಿದ ಲವ್ ಆಂಡ್ ಲೆಟ್ ಲವ್ ಎಂಬ ಕಿರುಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಧವೆ ತಾಯಿಯ ಪ್ರೀತಿ ಮತ್ತು ಮಗಳ ಲೆಸ್ಬಿಯನ್ ಪ್ರೀತಿಯ ಕಥೆಯನ್ನು ಹೊಂದಿರುವ 7 ನಿಮಿಷದ ಈ ಕಿರುಚಿತ್ರದಲ್ಲಿ ಸಂಭಾಷಣೆಗಳಿಲ್ಲ.
ಚೈತ್ರಾ ಜೆ ಆಚಾರ್ ಕನ್ನಡದ ಪ್ರತಿಭಾನ್ವಿತ ನಟಿ. ಕಣ್ಣಲ್ಲಿಯೇ ಮಾತನಾಡುವ, ಮಲ್ಲಿಗೆ ಬಿರಿದ್ದಾಗೆ ನಗುವ, ಯಾವುದೇ ರೀತಿಯ ಪಾತ್ರವನ್ನೂ ಹಿಂಜರಿಯದೆ ಮಾಡುವ ಛಾತಿ ಉಳ್ಳವರು. ಪ್ರೇಮಿಗಳ ದಿನದಂದು ಚೈತ್ರಾ ಜೆ ಆಚಾರ್ ನಟಿಸಿದ ಕಿರುಚಿತ್ರವೊಂದು ಬಿಡುಗಡೆಯಾಗಿತ್ತು. ನಾನು ಲೇಡಿಸ್ ನಿರ್ದೇಶಕಿ ಶೈಲಜಾ ಪಡಿಂದಳ ನಿರ್ದೇಶಿಸಿರುವ "ಲವ್ ಆಂಡ್ ಲೆಟ್ ಲವ್" ಎಂಬ ಕಿರುಚಿತ್ರದಲ್ಲಿ ಚೈತ್ರಾ ಜೆ ಆಚಾರ್ ನಟಿಸಿದ್ದಾರೆ. ಈ ಏಳು ನಿಮಿಷದ ಕಿರುಚಿತ್ರದಲ್ಲಿ ಸಂಭಾಷಣೆಗಳು ಇಲ್ಲ. ಆದರೆ, ಈ ಚಿತ್ರದ ನಾಲ್ಕು ಪಾತ್ರಗಳು ಭಾವನಾತ್ಮಕವಾಗಿ ಮಾತನಾಡುತ್ತವೆ. ಸಂಗಾತಿ ಹೊಂದಲು ವಯಸ್ಸು, ಲಿಂಗ ಅಡ್ಡಿಯಲ್ಲ ಎಂಬ ವಿಷಯವನ್ನು ಹೇಳುತ್ತದೆ.
ಲವ್ ಆಂಡ್ ಲೆಟ್ ಲವ್ ಕಿರುಚಿತ್ರದ ಕಥೆ
ಇದು ತಾಯಿ ಮತ್ತು ಮಗಳ ಕಥೆ. ವಿಧವೆ ತಾಯಿ ಮತ್ತು ಆಕೆಯ ಪ್ರೀತಿಯ ಮಗಳು. ಚೈತ್ರಾ ಆಚಾರ್ ಇಲ್ಲಿ ಮಗಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾಯಿಯಾಗಿ ಗೀತಾ ಕೈಲಾಸಂ ನಟಿಸಿದ್ದಾರೆ. ಇಲ್ಲಿ ತಾಯಿ ವಿಧವೆ. ಆಕೆಯ ಬದುಕಿಗೆ ಹೊಸ ವ್ಯಕ್ತಿಯೊಬ್ಬರ ಆಗಮನ. ತನ್ನ ಪ್ರಿಯಕರನ ಜತೆ ಕಾಫಿ ಕೆಫೆಯಲ್ಲಿ ಇರುತ್ತಾರೆ. ಅದೇ ಸಮಯದಲ್ಲಿ ಅದೇ ಕಾಫಿ ಕೆಫೆಯಲ್ಲಿ ಲೈಸ್ಬಿಯನ್ ಜೋಡಿಯೊಂದು ಕಣ್ಣಿಗೆ ಬೀಳುತ್ತದೆ. ಆ ಜೋಡಿಯಲ್ಲಿ ಒಬ್ಬಳು ಇವರ ಮಗಳು. ತಾಯಿಯ ಮಧ್ಯ ವಯಸ್ಕ ಪ್ರೀತಿ ಮತ್ತು ಮಗಳ ಲೆಸ್ಬಿಯನ್ ಪ್ರೀತಿ ಒಂದೇ ಸ್ಥಳದಲ್ಲಿ ಸಂಧಿಸಿದ ಸಮಯದಲ್ಲಿ ಒಬ್ಬರಿಗೊಬ್ಬರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದೇ ಈ ಕಿರುಚಿತ್ರದ ತಿರುಳು. ಈ ಕಿರುಚಿತ್ರದಲ್ಲಿ ಸಂಭಾಷಣೆಗಳು ಇಲ್ಲ. ಮಾತುಗಳು ಇಲ್ಲದೆ ಇದ್ದರೂ ಚಿತ್ರ ಸಿಂಪಲ್ ಆಗಿ ಕಾಡುತ್ತದೆ.
ಸಂಗಾತಿ ಪಡೆಯಲು ವಯಸ್ಸು, ಲಿಂಗ ಅಡ್ಡಿಯಲ್ಲ
ಈ ಶಾರ್ಟ್ ಫಿಲ್ಮ್ ಕುರಿತು ಚೈತ್ರಾ ಜೆ ಆಚಾರ್ ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ಬಳಗದ ಒಟಿಟಿ ಪ್ಲೇಗೆ ಈ ರೀತಿ ಹೇಳಿದ್ದಾರೆ. "ಶೈಲಜಾ ಅವರು ನಿರ್ಮಿಸಲಿರುವ ಈ ಕಿರುಚಿತ್ರ ಯೋಜನೆ ಕುರಿತು ಶೈಲಜಾ ಅವರನ್ನು ತಿಳಿದಿರುವ ಸ್ನೇಹಿತರೊಬ್ಬರು ನನಗೆ ತಿಳಿಸಿದರು. ಜತೆಗೆ ಇದು ಪುಟ್ಟ ಚಿತ್ರವಾಗಿದ್ದು, ಎಲ್ಲೂ ಮಾತನಾಡಲು ಇಲ್ಲ ಎಂದು ಹೇಳಿದ್ದರು. ಲವ್ ಆಂಡ್ ಲೆಟ್ ಲವ್‌ನಲ್ಲಿ ಭಾವನೆಗಳೇ ಮಾತನಾಡುತ್ತವೆ, ನಾವು ಮಾತನಾಡಲು ಇಲ್ಲವೆಂದು ತಿಳಿಯಿತು" ಎಂದು ಅವರು ಹೇಳಿದ್ದಾರೆ.
ಈ ಕಿರುಚಿತ್ರದಲ್ಲಿ ಚೈತ್ರಾ ಜೆ ಆಚಾರ್ ಅವರಿಗೆ ಮತ್ತೊಬ್ಬಳು ಹುಡುಗಿಯ ಮೇಲೆ ಪ್ರೀತಿ ಇರುವಂತಹ ಕ್ಯಾರೆಕ್ಟರ್. ವಿಧವೆಯಾಗಿ ಹಲವು ವರ್ಷ ಕಳೆದ ಈಕೆಯ ತಾಯಿಗೆ ಬೇರೊಬ್ಬ ಪ್ರಿಯಕರ ದೊರಕಿದ ಸಂದರ್ಭವೂ ಅದಾಗಿದೆ. "ಈ ಚಿತ್ರದ ವಿಷಯ ನನ್ನನ್ನು ಸೆಳೆಯಿತು. ಸಾಮಾನ್ಯವಾಗಿ ಸಮಾಜ ಏನು ಹೇಳುತ್ತದೆ ಎಂದು ಇಂತಹ ವಿಷಯಗಳಿಂದ ಜನರು ದೂರ ಇರುತ್ತಾರೆ. ಆದರೆ, ನನಗೆ ಈ ಚಿತ್ರದ ವಿಷಯ ಇಷ್ಟ ಆಯ್ತು. ಇಲ್ಲಿಯ ತಾಯಿಯ ವಿಷಯವೂ ಇಷ್ಟ ಆಯ್ತು. ಮತ್ತೊಮ್ಮೆ ಪ್ರೀತಿಯನ್ನು ಹುಡುಕುವುದು ಆಕೆಯ ಹಕ್ಕು ಕೂಡ ಹೌದು. ಇದರಿಂದ ಆಕೆಗೆ ಸಂತೋಷ ದೊರಕುತ್ತದೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಈ ಪುಟ್ಟ ಸಿನಿಮಾದಲ್ಲಿ ಈ ವಿಷಯವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ. ಪ್ರತಿಯೊಬ್ಬರಿಗೂ ಪಾಟ್ನರ್ ಹೊಂದುವ ಹಕ್ಕು ಇದೆ. ಇದಕ್ಕೆ ಲಿಂಗ, ವಯಸ್ಸು ಇತ್ಯಾದಿಗಳು ಯಾವುದೂ ಅಡ್ಡಿಯಿಲ್ಲ. ಸಮಾಜ ಇದನ್ನು ಒಪ್ಪಿಕೊಳ್ಳಬೇಕು" ಎಂದು ಚೈತ್ರಾ ಜೆ ಆಚಾರ್ ಒಟಿಟಿಪ್ಲೇಗೆ ತಿಳಿಸಿದ್ದಾರೆ.