ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ, ಅದಕ್ಕೆ ಉಪೇಂದ್ರ ಹೂಂ ಎನ್ನಬೇಕಷ್ಟೇ; A ಮರು ಬಿಡುಗಡೆ ಬೆನ್ನಲ್ಲೇ ಚಾಂದಿನಿ ಮಾತು
A ಸಿನಿಮಾ ಕಳೆದ ವಾರವಷ್ಟೇ ಮರು ಬಿಡುಗಡೆ ಆಗಿದೆ. ರಾಜ್ಯಾದ್ಯಂತ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ, ಸಿನಿಮಾ ಬಗ್ಗೆ ಮತ್ತೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಒಂದೆಡೆ ಸೇರಿತ್ತು. ಸಿನಿಮ ನಾಯಕಿ ಚಾಂದಿನಿ, ಸುದೀರ್ಘವಾಗಿಯೇ ಮಾತನಾಡಿದರು.

A movie Re- Release: ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರಗಳಲ್ಲಿ ಉಪೇಂದ್ರ ನಾಯಕರಾಗಿ ನಟಿಸಿ, ನಿರ್ದೇಶಿಸಿದ್ದ A ಸಿನಿಮಾ ಸಹ ಒಂದು. ಈ ಚಿತ್ರ ತೆರೆಕಂಡು 26 ವರ್ಷಗಳಾಗಿವೆ. ಆಗಿನ ಕಾಲದಲ್ಲಿಯೇ ದೊಡ್ಡ ಮಟ್ಟದ ಯಶಸ್ಸು ಪಡೆದುಕೊಂಡಿದ್ದ ಈ ಸಿನಿಮಾ ಗಳಿಕೆ ವಿಚಾರದಲ್ಲೂ ಹೊಸ ದಾಖಲೆ ಬರೆದಿತ್ತು. 20 ಕೋಟಿ ಹಣವನ್ನು ಬಾಚಿಕೊಂಡಿತ್ತು. ಈಗ ಕಳೆದ ವಾರ ಇದೇ ಚಿತ್ರ ಕರ್ನಾಟಕದಾದ್ಯಂತ ರೀ ರಿಲೀಸ್ ಆಗಿ ಜನರ ಮನ ಗೆಲ್ಲುತ್ತಿದೆ. ಈ ಸಂತಸವನ್ನು ನಾಯಕಿ ಚಾಂದಿನಿ ಸೇರಿದಂತೆ A ಚಿತ್ರತಂಡದ ಸದಸ್ಯರು ಹಂಚಿಕೊಂಡರು.
26 ವರ್ಷಗಳ ಹಿಂದೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಉಪೇಂದ್ರ ನಿರ್ದೇಶನದ A ಸಿನಿಮಾ ಎಂದು ನಾಯಕಿ ಚಾಂದಿನಿ ಮಾತು ಆರಂಭಿಸಿದರು. "ಈ ಚಿತ್ರ ಇತ್ತೀಚೆಗೆ ರೀ ರಿಲೀಸ್ ಆಗಿ ಯಶಸ್ಚಿ ಪ್ರದರ್ಶನ ಕಾಣುತ್ತಿದೆ. ಅದೇ ದೊಡ್ಡ ಖುಷಿ. ಈ ಚಿತ್ರಕ್ಕೆ ನಾನು ನಾಯಕಿಯಾಗಿ ಆಯ್ಕೆಯಾಗಿದ್ದು ನಿಜಕ್ಕೂ ಆಶ್ಚರ್ಯ. ಆಗ ನಾನು ನ್ಯೂಯಾರ್ಕ್ ಓದುತ್ತಿದೆ. ನನ್ನ ಫೋಟೋ ನೋಡಿದ ಉಪೇಂದ್ರ, ನಾಯಕಿಯಾಗಿ ಆಯ್ಕೆ ಮಾಡಿದರು. ನಿಜವಾಗಲೂ ಉಪೇಂದ್ರ ಅವರು ಬರೀ ಕರ್ನಾಟಕ ಅಷ್ಟೇ ಅಲ್ಲ. ಇಡೀ ದೇಶ ಕಂಡ ಅತ್ಯಂತ ಪ್ರತಿಭಾವಂತ ನಿರ್ದೇಶಕ" ಎಂದರು ಚಾಂದಿನಿ.
ನನ್ನನ್ನು ಇಂದಿಗೂ A ಚಿತ್ರದಿಂದ್ಲೇ ಗುರುತಿಸುತ್ತಾರೆ..
ಮುಂದುವರಿದು ಮಾತನಾಡಿ, "ಅವರಿಂದ ಮೊದಲ ಚಿತ್ರದಲ್ಲೇ ನಾನು ಸಾಕಷ್ಟು ಕಲಿತಿದ್ದೇನೆ. ಮೊದಲ ಚಿತ್ರದ ಚಿತ್ರೀಕರಣದ ಅನುಭವ ಈಗಲೂ ಕಣ್ಣ ಮುಂದೆ ಇದೆ. ನಾನು A ಚಿತ್ರದ ನಂತರ ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನನ್ನನ್ನು ಎಲ್ಲರೂ ಗುರುತಿಸುವುದು A ಚಿತ್ರದ ನಾಯಕಿ ಅಂತ. ಅಷ್ಟು ಹೆಸರು ತಂದುಕೊಟ್ಟಿದೆ ನನಗೆ ಈ ಚಿತ್ರ. ಈ ಸಂದರ್ಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ" ಎಂದೂ ಹೇಳಿದರು ಚಾಂದಿನಿ.
A ಚಿತ್ರದ ಎರಡನೇ ಭಾಗ ಶೀಘ್ರದಲ್ಲಿ ಶುರು..
"ಮತ್ತೊಂದು ಮುಖ್ಯವಾದ ವಿಷಯವೆಂದರೆ ಈ ಚಿತ್ರವನ್ನು ಮುಂದುವರೆಸುವುದು ನನ್ನ ಹಂಬಲ. ಹಾಗಾಗಿ A ಚಿತ್ರದ ಮುಂದುವರೆದ ಭಾಗ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ. ಕಥೆ ಮತ್ತು ಚಿತ್ರಕಥೆಯನ್ನು ನಾನೇ ಬರದಿದ್ದೇನೆ. ನಿರ್ಮಾಪಕ ಮಂಜುನಾಥ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ನನ್ನ ಜೊತೆಗಿದ್ದಾರೆ. ಇನ್ನೇನಿದ್ದರೂ ಉಪೇಂದ್ರ ಅವರು ಹೂಂ ಎನ್ನಬೇಕು" ಎಂದರು.
ಉಪೇಂದ್ರ ಅವರೇ ಹೀರೋ ಆಗಬೇಕು..
"ಇನ್ನೊಂದು ವಿಷಯ ಬಾಕಿ ಇದೆ. ನಾವೆಲ್ಲರೂ ಹೋಗಿ ಉಪೇಂದ್ರ ಅವರ ಬಳಿ ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಹಾಗೂ ನಾಯಕರಾಗಿಯೂ ನಟಿಸಬೇಕು ಎಂದು ಮನವಿ ಮಾಡುವುದು. ಸದ್ಯದಲ್ಲೇ ಅವರನ್ನು ಭೇಟಿ ಮಾಡುತ್ತೇವೆ. ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರ ಪ್ರಾರಂಭವಾಗಲಿದೆ. ಆ ಚಿತ್ರದಲ್ಲಿದ್ದ ಬಹುತೇಕ ಚಿತ್ರತಂಡದ ಸದಸ್ಯರು ಈ ಚಿತ್ರದಲ್ಲೂ ಇರುತ್ತಾರೆ" ಎಂದರು.
ಚಿತ್ರ ಆರಂಭವಾದಗಿನಿಂದ ಹಿಡಿದು ಬಿಡುಗಡೆಯಾಗುವವರೆಗಿನ ಮಾಹಿತಿಯನ್ನು ನಿರ್ಮಾಪಕ ಮಂಜುನಾಥ್ ನೀಡಿದರು. ಹಾಡುಗಳ ಕುರಿತು ಗುರುಕಿರಣ್ ಮಾತನಾಡಿದರು. ವಿ.ಮನೋಹರ್, ಗುರುದತ್ತ್, ಲೋಕಿ, ರಾಜಾರಾಮ್, ಜೋಶಿ ಮುಂತಾದ ಚಿತ್ರತಂಡದ ಸದಸ್ಯರು ಹಾಗೂ ವಿತರಕ ಶಂಕರ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಉಪೇಂದ್ರ ಅವರು ವಿದೇಶದಲ್ಲಿರುವುದರಿಂದ ವಿಡಿಯೋ ಮೂಲಕ ಖುಷಿ ಹಂಚಿಕೊಂಡರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
