ಟ್ರೋಲಿಗರಿಂದ ನನಗೆ ಕೊಳಕು ಸಂದೇಶ ಬಂದಾಗ ಏನ್ ಮಾಡ್ತಾ ಇದ್ದೆ ಗೊತ್ತೆ? ದರ್ಶನ್ ಪ್ರಕರಣದ ಕುರಿತು ಮೋಹಕತಾರೆ ರಮ್ಯಾ ಸುದೀರ್ಘ ಬರಹ
ಸೋಷಿಯಲ್ ಮೀಡಿಯಾದಲ್ಲಿ ಪ್ರೇಯಸಿಗೆ ಕೆಟ್ಟ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ, ರಾಜಕಾರಣಿ ದಿವ್ಯ ಸ್ಪಂದನ ಸೋಷಿಯಲ್ ಮೀಡಿಯದಲ್ಲಿ ಸುದೀರ್ಘ ಬರಹ ಬರೆದಿದ್ದಾರೆ. ನನಗೂ ಕೊಳಕು ಭಾಷೆಯ ಟ್ರೋಲ್‌ಗಳು ಸಾಕಷ್ಟು ಬಂದಿದ್ದವು ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ನಟ ದರ್ಶನ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ಟ್ರೋಲ್‌ಗಳ ಕುರಿತು ನಟಿ, ರಾಜಕಾರಣಿ ದಿವ್ಯ ಸ್ಪಂದನ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹ ಬರೆದಿದ್ದಾರೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲು ಹೋಗಬಾರದು. ಕಾನೂನನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ನಟಿ ದಿವ್ಯ ಸ್ಪಂದನ ಹೇಳಿದ್ದೇನು?
ನಟಿ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಈ ರೀತಿ ಅಭಿಪ್ರಾಯ ದಾಖಲಿಸಿದ್ದಾರೆ. "ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಆಯ್ಕೆಯನ್ನು ನೀಡಲಾಗಿದೆ. ಬ್ಲಾಕ್ ಮಾಡಿದರೂ ಟ್ರೋಲಿಂಗ್ ಮುಂದುವರೆದರೆ ನೀವು ದೂರು ದಾಖಲಿಸಬೇಕು. ನನ್ನನ್ನು ಟ್ರೋಲಿಗರು ನಿರಂತರವಾಗಿ ಕೊಳಕು ಭಾಷೆ ಬಳಸಿ ಟ್ರೋಲ್ ಮಾಡಿದ್ದಾರೆ. ನನಗೆ ಮಾತ್ರವಲ್ಲ. ಇತರೆ ನಟಿನಟರನ್ನೂ ಟ್ರೋಲ್ ಮಾಡಿದ್ದಾರೆ. ಹೆಂಡತಿ, ಮಕ್ಕಳನ್ನು ಬಿಡದೆ ಟ್ರೋಲ್ ಮಾಡಿದ್ದಾರೆ. ಎಂತಹ ಶೋಚನೀಯ ಸಮಜಾದಲ್ಲಿ ನಾವು ಬದುಕುತ್ತಿದ್ದೇವೆ?" ಎಂದು ನಟಿ ರಮ್ಯಾ ಖೇದ ವ್ಯಕ್ತಪಡಿಸಿದ್ದಾರೆ.
"ಈ ರೀತಿ ಕೆಟ್ಟ ಟ್ರೋಲ್‌ಗಳಿಗೆ ಕೆಲವೊಮ್ಮೆ ಉತ್ತರಿಸಬೇಕಾಗುತ್ತದೆ. ಯಾವುದೇ ಕಾನೂನು ಪಾಲಿಸುವ ನಾಗರಿಕರು ಮಾಡಬೇಕಾದ ರೀತಿ ನಾನೂ ಮಾಡಿದ್ದೇನೆ. ಅನೇಕ ಪ್ರಕರಣಗಳನ್ನು ದಾಖಲಿಸಿದ್ದೇನೆ. ಕೆಲವೊಮ್ಮೆ ಟ್ರೋಲ್ ಮಾಡಿದವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಹಾನುಭೂತಿಯ ಆಧಾರದ ಮೇಲೆ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದೇನೆ." ಎಂದು ರಮ್ಯಾ ಹೇಳಿದ್ದಾರೆ.
"ಈ ರೀತಿ ಟ್ರೋಲ್ ಮಾಡುವವರು ಯುವ ಜನತೆ ಎಂಬ ಅಂಶವನ್ನು ನಾನು ಪರಿಗಣಿಸಿದ್ದೇನೆ. ಈ ವಯಸ್ಸಲ್ಲಿ ಅನಾಮಧೇಯ ಅಕೌಂಟ್‌ಗಳ ಮೂಲಕ ಟ್ರೋಲ್ ಮಾಡುತ್ತ ತಮ್ಮ ಜೀವನವನ್ನು ಹಾಳುಮಾಡುತ್ತಿದ್ದಾರೆ/ ವ್ಯರ್ಥ ಮಾಡುತ್ತಿದ್ದಾರೆ. ಯಾರೂ ಕಾನೂನಿಗಿಂತ ಮೇಲಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಜನರನ್ನು ಹೊಡೆಯಲು, ಕೊಲ್ಲಲು ಹೋಗಬಾರದು. ನ್ಯಾಯದ ಮೇಲೆ ನಂಬಿಕೆ ಇದ್ದರೆ ಪೊಲೀಸರಿಗೆ ದೂರು ನೀಡಿದರೆ ಸಾಕು" ಎಂದು ದಿವ್ಯ ಸ್ಪಂದನ ತನ್ನ ಅಭಿಪ್ರಾಯ ಹೇಳಿದ್ದಾರೆ.
ಇದೇ ಸಮಯದಲ್ಲಿ ಕರ್ನಾಟಕ ಪೊಲೀಸರನ್ನು ನಟಿ ಶ್ಲಾಘಿಸಿದ್ದಾರೆ. "ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಮೆಚ್ಚುಗೆ ಮತ್ತು ಗೌರವ ಸೂಚಿಸುವೆ. ಇದು ಥ್ಯಾಂಕ್‌ಲೆಸ್ ಜಾಬ್. ಅವರು ತಮಗೆ ಸಾಧ್ಯವಿರುವಷ್ಟು ಮಾಡುತ್ತಿದ್ದಾರೆ. ಅವರು ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯುವುದಿಲ್ಲ ಮತ್ತು ಕಾನೂನು ಮತ್ತು ನ್ಯಾಯದಲ್ಲಿ ಜನರ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ. ಜಸ್ಟಿಸ್ ಫಾರ್ ರೇಣುಕಾಸ್ವಾಮಿ" ಎಂದು ಇನ್‌ಸ್ಟಾಗ್ರಾಂನಲ್ಲಿ ರಮ್ಯಾ ಪೋಸ್ಟ್ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಪವಿತ್ರಾ ಗೌಡರನ್ನು ಎ1 ಆರೋಪಿಯನ್ನಾಗಿ ಮಾಡಿದ್ದಾರೆ. ದರ್ಶನ್ ಎ2 ಆರೋಪಿಯಾಗಿದ್ದಾನೆ. ಉಳಿದಂತೆ, ಎಫ್‌ಐಆರ್‌ನಲ್ಲಿ ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಅಲಿಯಾಸ್ ಜಗ್ಗ ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜ್ ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್ ಎ14, ಕಾರ್ತಿಕ್ ಎ15, ಕೇಶವ ಮೂರ್ತಿ ಎ16, ನಿಖಿಲ್ ನಾಯಕ್ ಎ17 ಆರೋಪಿಗಳನ್ನಾಗಿ ಮಾಡಲಾಗಿದೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳಿದ್ದು, ತನಿಖೆ ಮುಂದುವರೆದಿದೆ.
ವಿಭಾಗ