ನನ್ನಪ್ಪ ಕರ್ನಾಟಕ ಎಲ್ಲಾ ಹುಡುಕಿ ಮಂಗಳೂರು ಹುಡುಗೀನ ಇಷ್ಟಪಟ್ರು; ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ಕಿಚ್ಚ ಸುದೀಪ್ ಬಿಚ್ಚುಮಾತು
ಮಂಗಳೂರಿನಲ್ಲಿ ನಡೆದ ಯಕ್ಷಧ್ರುವ ಪಟ್ಲ ಸಂಭ್ರಮ 2024ರಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಭಾಗವಹಿಸಿ ಮಾತನಾಡಿದ್ದಾರೆ. ಸುದೀಪ್ ತಾಯಿ ಮಂಗಳೂರಿನವರು. "ನನ್ನ ತಂದೆ ಕರ್ನಾಟಕ ಎಲ್ಲಾ ಹುಡುಕಿ ಮಂಗಳೂರು ಹುಡುಗಿಯನ್ನು ಮದುವೆಯಾದ್ರು" ಎಂದು ಸುದೀಪ್ ಹೇಳಿದ್ದಾರೆ.
ಬೆಂಗಳೂರು: ಯಕ್ಷಧ್ರುವ ಪಟ್ಲ ಸಂಭ್ರಮ 2024ರಲ್ಲಿ ಅಭಿನಯ ಚಕ್ರವರ್ತಿ ಕಿಚ್ಚು ಸುದೀಪ್ ಭಾಗಿಯಾಗಿದ್ದಾರೆ. ಗೆಳೆಯನ ರೆಸ್ಟೂರೆಂಟ್ ಉದ್ಘಾಟನೆಗೆ ಆಗಮಿಸಿದ ಇವರು ಬಳಿಕ ಯಕ್ಷಧ್ರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ತಮ್ಮ ತಂದೆ ಮಂಗಳೂರಿನ ಹುಡುಗಿಯನ್ನು ಮದುವೆಯಾದ ಕುರಿತು ಮಾತನಾಡಿದ್ದಾರೆ. ತಮ್ಮ ತಾಯಿಯ ತುಳು ಪ್ರೀತಿ ಕುರಿತೂ ಮಾತನಾಡಿದ್ದಾರೆ. ಯಕ್ಷಧ್ರುವ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಸುದೀಪ್ ಅನೇಕ ವಿಚಾರಗಳ ಕುರಿತು ಮಾತನಾಡಿದ್ದಾರೆ.
ನನ್ನ ತಂದೆಗೆ ಮಂಗಳೂರು ಯುವತಿ ಇಷ್ಟವಾದ್ರು
"ನಿರೂಪಕರು ನಮ್ಮ ತುಳುನಾಡಿಗೆ ಸುದೀಪ್ ಆಗಮಿಸಿದ್ದಾರೆ ಎಂದಿದ್ದಾರೆ. ನಮ್ಮ ತುಳುನಾಡಿಗೆ ಎಂದು ಹೇಳುವ ಮೂಲಕ ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ನಾವು ಅರ್ಧ ಈ ಕಡೆಯವರು ಎಂದು ಹೇಳಿದ್ರು. ತುಳುನಾಡು ಕರ್ನಾಟಕದಲ್ಲಿದೆ. ಇದು ಬೇರೆ ಅಲ್ಲ. ನಮ್ಮ ಅಪ್ಪ ಕರ್ನಾಟಕದಲ್ಲಿ ಎಲ್ಲಾ ಹುಡುಕಿ ಕೊನೆಗೆ ಇಲ್ಲಿನ ಹುಡುಗಿಯನ್ನು ಇಷ್ಟಪಟ್ಟು ಮದುವೆಯಾಗಿದ್ದರು" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ನನ್ನ ತಾಯಿ ಚೆನ್ನಾಗಿ ತುಳು ಮಾತನಾಡ್ತಾರೆ
"ನನಗೆ ಈ ಊರಿನ ಬಗ್ಗೆ, ತುಳುನಾಡಿನ ಜನರ ಬಗ್ಗೆ ಗೊತ್ತಿರುವುದು ಏನೆಂದರೆ ಸಿಕ್ಕಾಪಟ್ಟೆ ಸ್ವಾಭಿಮಾನಿಗಳು. ನೀವು ನಿಮ್ಮ ಹೃದಯದಲ್ಲಿ ನನಗೆ ಸ್ವಲ್ಪ ಜಾಗ ನೀಡಿದ್ದೀರಿ ಎಂದಾದರೆ ಖುಷಿಯಾಗುತ್ತದೆ. ಇಲ್ಲಿ ನನಗೆ ಕುಳಿತುಕೊಳ್ಳಲು ದೊಡ್ಡ ಪೀಠ ನೀಡಿದ್ದೀರಿ. ನಾನು ಅದನ್ನು ನಿರಾಕರಿಸಿದೆ. ನಾನು ಅದಕ್ಕಾಗಿ ಬಂದದ್ದು ಅನಿಸಬಾರದು. ನಾನು ಬಂದಿರುವುದು ನನ್ನ ಸ್ನೇಹಿತರಿಗೋಸ್ಕರ" ಎಂದರು.
"ನನ್ನ ತಾಯಿ ತುಂಬಾ ಚೆನ್ನಾಗಿ ತುಳು ಮಾತನಾಡುತ್ತಾರೆ. ಒಂದಿನ ನಾನೇ ಅವರನ್ನು ಕಳುಹಿಸಿಕೊಡುವೆ, ನೀವೇ ಕೇಳಿ. ನನಗೆ "ಎಂಚಿನ ಮಾರೆ, ವನಸ್ ಆಂಡ" ಇಷ್ಟೇ ಹೇಳಿಕೊಟ್ಟಿರೋದು. ನನಗೆ ಪ್ರವೀಣ್ ಶೆಟ್ರು 20 ವರ್ಷದ ಸ್ನೇಹಿತರು. ನನಗೆ ದುಬಾಯಿಯಲ್ಲಿ ಸಿಕ್ರೂ ಅವರು ತುಳು ಹೇಳಿಕೊಟ್ಟಿಲ್ಲ" ಎಂದು ಸುದೀಪ್ ಹೇಳಿದ್ದಾರೆ.́
"ಈಗ ಕನ್ನಡ ಚಿತ್ರರಂಗಕ್ಕೆ ನಿಮ್ಮ ತುಳುವಿನವರು ತುಂಬಾ ಜನ ಬಂದುಬಿಟ್ಟು ಕನ್ನಡ ಯಾವುದು ತುಳು ಯಾವುದು ಗೊತ್ತಾಗ್ತಾ ಇಲ್ಲ. ಮೊದಲೆಲ್ಲ ಇಲ್ಲಿಗೆ ಬಂದಾಗ ತುಳು ಚಿತ್ರರಂಗ ಎನ್ನಲಾಗುತ್ತಿತ್ತು. ಈಗ ತುಳು ಚಿತ್ರರಂಗ, ಇಲ್ಲಿನ ಕಲೆ ಅಲ್ಲಿಗೂ ಬಂದಿದೆ. ನನ್ನನ್ನು ಸ್ವಾಗತಿಸಲು ಯಕ್ಷಗಾನ ಕಲಾವಿದರು ಬಂದರು. ಕೊನೆಗೆ ಇಬ್ಬರು ತಿರುಗಿದ್ರೂ ತಿರುಗಿದ್ರೂ, ನಾವು ಈ ರೀತಿ ಎರಡು ರೌಂಡ್ ತಿರುಗಿದ್ರೆ ಆಮೇಲೆ ನಿಲ್ಲೋದು ಕಷ್ಟ. ಅಂತಹ ಕಲೆ ನಿಮ್ಮಲ್ಲಿ ಮಾತ್ರ ಇರೋದು, ಅದನ್ನು ಓಪನ್ ಆಗಿ ಹೇಳ್ತಿನಿ. ನನ್ನನ್ನು ಅಭಿನಯ ಚಕ್ರವರ್ತಿ ಅನ್ತೀರಿ, ಬಾದ್‌ಶಾ ಅನ್ತೀರಿ, ನಾವು ಸ್ವಲ್ಪ ಹೊರಗಡೆ ಹೋಗಿ ನೋಡಿದಾಗಲೇ ಗೊತ್ತಾಗೋದು ನಾವು ಎಷ್ಟು ಚಿಕ್ಕವರು ಅಂತ. ಈ ಕಲಾವಿದರ ಮುಂದೆ ನಾವು ಚಿಕ್ಕವರು. ಅದೃಷ್ಟ ಇದ್ದ ಕಾರಣ ನಮಗೆ ಅವಕಾಶ ಸಿಕ್ಕಿತ್ತು. ಕರೆದಿರುವುದಕ್ಕೆ ಥ್ಯಾಂಕ್ಸ್ ಎಂದು ಕಿಚ್ಚ ಸುದೀಪ್ ಮಾತು ಮುಗಿಸಿದರು.