ನಿವೇದಿತಾ ಗೌಡ ಚಂದನ್ ಶೆಟ್ಟಿಗೆ ಒಂದೇ ದಿನದಲ್ಲಿ ಡಿವೋರ್ಸ್ ಮಂಜೂರು; ಕೌಟುಂಬಿಕ ಕೋರ್ಟ್ ಕಾಯಿದೆಯಲ್ಲಿ ಏನಿದು 13ಬಿ ಸೆಕ್ಷನ್?
Niveditha Gowda Chandan Shetty Divorce: ಕನ್ನಡ ನಟ, ಸಂಗೀತ ನಿರ್ದೇಶಕ, ರಾಪರ್ ಚಂದನ್ ಶೆಟ್ಟಿ ಮತ್ತು ಕನ್ನಡ ನಟಿ, ಕಿರುತೆರೆ ಸೆಲೆಬ್ರಿಟಿ ನಿವೇದಿತಾ ಗೌಡರಿಗೆ ಬೆಂಗಳೂರು ಕೌಟುಂಬಿಕ ಕೋರ್ಟ್ ಒಂದೇ ದಿನದಲ್ಲಿ ವಿವಾಹ ವಿಚ್ಛೇದನ ನೀಡಿದೆ. ಭಾರತೀಯ ಹಿಂದೂ ವಿವಾಹ ಕಾಯಿದೆಯ ಕೌಟುಂಬಿಕ ಕೋರ್ಟ್ ಕಾಯಿದೆಯ 13ಬಿ ಸೆಕ್ಷನ್ ಕುರಿತೂ ಇಲ್ಲಿ ವಿವರ ನೀಡಲಾಗಿದೆ.
ಬೆಂಗಳೂರು: ಜನಪ್ರಿಯ ರಾಪರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರಿಗೆ ಒಂದೇ ದಿನದಲ್ಲಿ ಬೆಂಗಳೂರು ಕೌಟುಂಬಿಕ ಕೋರ್ಟ್ ವಿವಾಹ ವಿಚ್ಛೇದನ ನೀಡಿದೆ ಎಂದು ವರದಿಗಳು ತಿಳಿಸಿವೆ. 13b of family court act ಅಡಿಯಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡಗೆ ಡಿವೋರ್ಸ್ ಮಂಜೂರು ಮಾಡಲು ಕೋರ್ಟ್ ಸಮ್ಮತಿ ನೀಡಿದೆ ಎನ್ನಲಾಗಿದೆ. ಒಪ್ಪಿಗೆ ಮೇರೆಗೆ ಸಂಧಾನಕಾರರು ಇವರಿಬ್ಬರ ಬಗ್ಗೆ ಅಗ್ರಿಮೆಂಟ್ ಮಾಡಿದ್ದರು. ಇದೇ ಅಗ್ರಿಮೆಂಟ್ ಜತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಅಗ್ರಿಮೆಂಟ್ ಆಧಾರದಲ್ಲಿ ಇವರಿಬ್ಬರನ್ನು ವಿಚಾರಣೆ ಮಾಡಲಾಗಿತ್ತು. ಇದೇ ಅಗ್ರಿಮೆಂಟ್ ಆಧಾರದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ವಿವಾಹ ವಿಚ್ಛೇದನಕ್ಕೆ ಮಂಜೂರು ದೊರಕಿದೆ ಎನ್ನಲಾಗಿದೆ.
ಅಧಿಕೃತವಾಗಿ ಪ್ರಕಟಿಸಿದ ನಿವೇದಿತಾ ಗೌಡ
ಕೋರ್ಟ್‌ಗೆ ಹಾಜರಾದ ಜೋಡಿಗೆ ನ್ಯಾಯಾಧೀಶರು ಯಾವ ಕಾರಣಕ್ಕೆ ಬೇರೆಯಾಗಲು ನಿರ್ಧರಿಸಿದ್ದೀರಿ ಎಂದು ಕೇಳಿತ್ತು. ಕೊಂಚ ಭಿನ್ನಾಭಿಪ್ರಾಯವಿದೆ. ಕರಿಯರ್ ಬಗ್ಗೆ ಕನಸುಗಳು ಇವೆ. ಹೀಗಾಗಿ ನಾವಿಬ್ಬರು ಒಪ್ಪಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಕೆಲವು ಸಮಯದ ಬಳಿಕ ಇವರಿಬ್ಬರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಕೈಕೈ ಹಿಡಿದುಕೊಂಡೇ ಕೋರ್ಟ್‌ನ ಹಿಂಬಾಗಿಲ ಗೇಟ್‌ನಿಂದ ಹೊರಕ್ಕೆ ಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇವರಿಬ್ಬರ ವಿವಾಹ ವಿಚ್ಛೇದನಕ್ಕೆ ಕಾರಣಗಳೇನು ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ. ಈ ಕುರಿತು ನಾನಾ ವದಂತಿಗಳು ಹರಿದಾಡುತ್ತಿವೆ. ನಿವೇದಿತಾ ಗೌಡ ಅವರು ಕರಿಯರ್ ಬಗ್ಗೆ ಗಮನ ನೀಡುತ್ತಿದ್ದು, ಮಗುವನ್ನು ಹೊಂದಲು ಬಯಸದೆ ಇರುವುದು ಕೂಡ ಈ ವಿವಾಹ ವಿಚ್ಛೇದನಕ್ಕೆ ಕಾರಣವಾಗಿರಬಹುದು ಎಂದು ಕೆಲವು ವರದಿಗಳಲ್ಲಿ ತಿಳಿಸಲಾಗಿದೆ. ನಿವೇದಿತಾ ಗೌಡರಿಗೆ ಹಲವು ಸಿನಿಮಾ ಆಫರ್‌ಗಳು ಇತ್ತೀಚೆಗೆ ದೊರಕುತ್ತಿದ್ದು, ಈ ಕಾರಣದಿಂದ ಕರಿಯರ್ ಕುರಿತು ಹೆಚ್ಚಿನ ಗಮನ ನೀಡುತ್ತಿದ್ದಾರೆ ಎನ್ನಲಾಗಿದೆ.
ಏನಿದು ಫ್ಯಾಮಿಲಿ ಕೋರ್ಟ್ 13ಬಿ ?
ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13ಬಿಯು ಫ್ಯಾಮಿಲಿ ಕೋರ್ಟ್‌ನಲ್ಲಿ ಇಬ್ಬರೂ ಸಮ್ಮತಿಯಿಂದ ಒಪ್ಪಿಗೆ ನೀಡಿ ಡಿವೋರ್ಸ್ ಪಡೆಯಲು ಅವಕಾಶ ನೀಡುತ್ತದೆ. ಮ್ಯೂಚುಯಲ್ ಕನ್ಸೆಂಟ್ ಎಂದರೆ ಎರಡೂ ಪಾರ್ಟಿಯೂ ಶಾಂತಿಯುತ ಪ್ರತ್ಯೇಕತೆಗೆ ಒಪ್ಪಬೇಕು. ಈ ಕಾಯಿದೆಯನ್ನು ಹಿಂದೂ ವಿವಾಹ ಕಾಯಿದೆಗೆ ಮೇ 27, 1976ರಲ್ಲಿ ಸೇರಿಸಲಾಯಿತು. ಮ್ಯೂಚುಯಲ್ ಕನ್ಸೆಂಟ್ ಡಿವೋರ್ಸ್ ಅರ್ಜಿ ಸಲ್ಲಿಸಬೇಕಾದರೆ ಎರಡೂ ಪಾರ್ಟಿಯು ಕೆಲವೊಂದು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಅವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತ ಇರಬೇಕು. ಮದುವೆ ವಿಸರ್ಜಿಸಲು ಇಬ್ಬರೂ ಸಮ್ಮತಿ ನೀಡಬೇಕು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಈ ರೀತಿ ಒಂದು ವರ್ಷ ಪ್ರತ್ಯೇಕವಾಗಿ ವಾಸಿಸುವ ಅಗತ್ಯವನ್ನು ಕೋರ್ಟ್ ಮನ್ನಾ ಮಾಡಬಹುದು. ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿಷಯದಲ್ಲಿ ಕಾಯಿದೆಯ ಯಾವ ಅಂಶಗಳಡಿ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ.
ಇಂದು ಅಪರಾಹ್ನದ ವೇಳೆಗೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿವಾಹ ವಿಚ್ಛೇದನ ನೀಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಕೆಲವೇ ಸಮಯದಲ್ಲಿ ಇದು ವದಂತಿಯಲ್ಲ, ಸತ್ಯ ವಿಷಯ ಎಂದು ಸಾಬೀತಾಗಿತ್ತು. ಈಗ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರೂ ಮುಂದಿನ ದಿನಗಳಲ್ಲಿ ಇವರಿಬ್ಬರು ಅರ್ಥಮಾಡಿಕೊಂಡು ದೂರ ಸರಿಯುವ ನಿರ್ಧಾರದಿಂದ ಹಿಂದೆ ಸರಿಯಬಹುದು ಎಂದು ಅಭಿಮಾನಿಗಳು ಯೋಚಿಸಿದ್ದರು. ಆದರೆ, ಒಂದೇ ದಿನದಲ್ಲಿ ಡಿವೋರ್ಸ್ ಅರ್ಜಿ ಮಂಜೂರಾಗಿರುವ ಸಂಗತಿ ಕೇಳಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5ರಲ್ಲಿ ಜನರಿಗೆ ಪರಿಚಯವಾಗಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ, ಲವ್ ಆಗಿತ್ತು. ನಿವೇದಿತಾ ಗೌಡರ ಮೇಳೆ ಬೊಂಬೆ ಬೊಂಬೆ ಎಂಬ ಹಾಡು ಬರೆದು ಎಲ್ಲರನ್ನೂ ರಂಜಿಸಿದ್ದರು. ಇವರಿಬ್ಬರ ಮುದ್ದಾದ ಜೋಡಿಗೆ ಎಲ್ಲರೂ ವಾಹ್ ಎಂದಿದ್ದರು. ಮೈಸೂರಿನ ಯುವ ದಸರಾ ವೇದಿಕೆಯಲ್ಲಿಯೇ ನಿವೇದಿತಾ ಗೌಡರಿಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಈ ರೀತಿ ಪ್ರಪೋಸ್ ಮಾಡಿದ್ದು ವಿವಾದಕ್ಕೂ ಕಾರಣವಾಗಿತ್ತು. ಇದಾದ ಬಳಿಕ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು. ವಿವಾಹವಾದ ನಾಲ್ಕೇ ವರ್ಷಗಳಲ್ಲಿ ಇಬ್ಬರು ದೂರವಾಗುವ ನಿರ್ಧಾರ ಪ್ರಕಟಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ವಿಭಾಗ