ನಿವೇದಿತಾ ಗೌಡ ಚಂದನ್ ಶೆಟ್ಟಿ ಜಂಟಿ ಪತ್ರಿಕಾಗೋಷ್ಠಿ; ವಿವಾಹ ವಿಚ್ಛೇದನಕ್ಕೆ ಕಾರಣ ಹೇಳ್ತಿವಿ ಕೇಳಿ ಅಂದ್ರು ಬಿಗ್‌ಬಾಸ್ ಜೋಡಿ
Niveditha Gowda Chandan Shetty News: ಇತ್ತೀಚೆಗೆ ಡಿವೋರ್ಸ್ ಪಡೆದ ಸ್ಯಾಂಡಲ್‌ವುಡ್ ಜೋಡಿ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ಆಯೋಜಿಸಿದ್ದಾರೆ. ವಿವಾಹ ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಲಿದ್ದಾರೆ.
ಬೆಂಗಳೂರು: ಸ್ಯಾಂಡಲ್‌ವುಡ್ ಯುವ ನಟಿ ನಟರಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ವಿಚಾರದ ಬಳಿಕ ಸುದ್ದಿಯಲ್ಲಿದ್ದಾರೆ. ಇಂದು ಇವರಿಬ್ಬರು ಜತೆಯಾಗಿ ಪತ್ರಿಕಾಗೋಷ್ಠಿ ಆಯೋಜಿಸಿದ್ದಾರೆ. ತಾವು ಏಕೆ ದೂರವಾಗುವ ನಿರ್ಧಾರ ತೆಗೆದುಕೊಂಡೆವು ಎಂಬ ವಿಚಾರವನ್ನು ಅವರಿಬ್ಬರು ಮಾಧ್ಯಮಗಳ ಮುಂದೆ ಹೇಳಲಿದ್ದಾರೆ. ಡಿವೋರ್ಸ್ ಬಳಿಕ ಬಹುತೇಕ ದಂಪತಿ ಹಾವು ಮುಂಗುಸಿ ರೀತಿ ಇದ್ದರೆ ಈ ಜೋಡಿ ಡಿವೋರ್ಸ್ ಬಳಿಕವೂ ಜತೆಯಾಗಿಯೇ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಕೋರ್ಟ್‌ನಲ್ಲೂ ಇವರಿಬ್ಬರೂ ಕೈಕೈ ಹಿಡಿದುಕೊಂಡು ಹೊರಕ್ಕೆ ಹೋಗಿದ್ದರು.
ಕಳೆದ ಒಂದು ವರ್ಷದ ಹಿಂದೆಯೇ ಇವರಿಬ್ಬರು ಡಿವೋರ್ಸ್‌ಗೆ ಮುಂದಾಗಿದ್ದು, ಇತ್ತೀಚೆಗೆ ಕೋರ್ಟ್ ಇವರಿಗೆ ಡಿವೋರ್ಸ್ ನೀಡಿತ್ತು. ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಯೆಂದೇ ಖ್ಯಾತರಾಗಿದ್ದ ಇವರಿಬ್ಬರು ದೂರವಾಗುವ ಕುರಿತು ಎಲ್ಲಿಯೂ ಸುಳಿವು ನೀಡಿರಲಿಲ್ಲ. ಕೋರ್ಟ್‌ನಲ್ಲಿ ಇವರಿಬ್ಬರಿಗೆ ಡಿವೋರ್ಸ್ ಮಂಜೂರಾದ ಸಮಯದಲ್ಲಿಯೇ ಈ ವಿಷಯ ಹೊರಕ್ಕೆ ಬಂದಿತ್ತು. ಇದಾದ ಬಳಿಕ ಇವರಿಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಾವಿಬ್ಬರು ದೂರವಾಗಿರುವ ಕುರಿತು ಮಾಹಿತಿ ನೀಡಿದ್ದರು.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರವಾಗಿರುವುದು ಏಕೆ? ಇವರಿಬ್ಬರು ಡಿವೋರ್ಸ್ ನೀಡಲು ಕಾರಣವೇನು? ಇತ್ಯಾದಿ ವಿಚಾರಗಳ ಕುರಿತು ಪ್ರತಿನಿತ್ಯ ಹಲವು ಸುದ್ದಿಗಳು, ವದಂತಿಗಳು ಕೇಳಿಬರುತ್ತಿವೆ. ಚಂದನ್ ಶೆಟ್ಟಿ ಮಗು ಬಯಸಿದ್ದರು, ಆದರೆ ಇದಕ್ಕೆ ನಿವೇದಿತಾ ಗೌಡ ಒಪ್ಪಿಲ್ಲ ಇತ್ಯಾದಿ ವದಂತಿ ಕೇಳಿಬಂದಿತ್ತು. ಇಂದು ಇವರಿಬ್ಬರು ಜತೆಯಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಮಧ್ಯಾಹ್ನ 3:30 ಗಂಟೆಗೆ ಬೆಂಗಳೂರಿನ ಜಿಟಿ ಮಾಲ್‌ನ ಎಂಬಿ ಲೆಗೆಸಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದಾರೆ.
ಒಂದು ವರ್ಷ ಪರಸ್ಪರ ದೂರ ಇದ್ದು, ಬಳಿಕ 13b of family court act ಅಡಿಯಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 13ಬಿಯು ಫ್ಯಾಮಿಲಿ ಕೋರ್ಟ್‌ನಲ್ಲಿ ಇಬ್ಬರೂ ಸಮ್ಮತಿಯಿಂದ ಒಪ್ಪಿಗೆ ನೀಡಿ ಡಿವೋರ್ಸ್ ಪಡೆಯಲು ಅವಕಾಶ ನೀಡುತ್ತದೆ. ಮ್ಯೂಚುಯಲ್ ಕನ್ಸೆಂಟ್ ಎಂದರೆ ಎರಡೂ ಪಾರ್ಟಿಯೂ ಶಾಂತಿಯುತ ಪ್ರತ್ಯೇಕತೆಗೆ ಒಪ್ಪಬೇಕು. ಈ ಕಾಯಿದೆಯನ್ನು ಹಿಂದೂ ವಿವಾಹ ಕಾಯಿದೆಗೆ ಮೇ 27, 1976ರಲ್ಲಿ ಸೇರಿಸಲಾಯಿತು. ಮ್ಯೂಚುಯಲ್ ಕನ್ಸೆಂಟ್ ಡಿವೋರ್ಸ್ ಅರ್ಜಿ ಸಲ್ಲಿಸಬೇಕಾದರೆ ಎರಡೂ ಪಾರ್ಟಿಯು ಕೆಲವೊಂದು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಕಳೆದ ಒಂದು ವರ್ಷದಿಂದ ಅವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತ ಇರಬೇಕು. ಮದುವೆ ವಿಸರ್ಜಿಸಲು ಇಬ್ಬರೂ ಸಮ್ಮತಿ ನೀಡಬೇಕು. ಇದೇ ಕಾನೂನಿನಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಂದು ವರ್ಷ ಪ್ರತ್ಯೇಕವಾಗಿದ್ದುಕೊಂಡು ಡಿವೋರ್ಸ್ ಪಡೆದಿದ್ದಾರೆ.
ರಾಪರ್ ಚಂದನ್ ಶೆಟ್ಟಿ ಮತ್ತು ಟಿಕ್‌ಟಾಕ್ ಸ್ಟಾರ್ ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5ರಲ್ಲಿ ಜನರಿಗೆ ಪರಿಚಯವಾಗಿದ್ದರು. ಇದೇ ಸಮಯದಲ್ಲಿ ದೊಡ್ಮನೆಯಲ್ಲಿ ಇಬ್ಬರ ನಡುವೆ ಸ್ನೇಹ, ಲವ್ ಆಗಿತ್ತು. ನಿವೇದಿತಾ ಗೌಡರ ಕುರಿತಾಗಿ ಚಂದನ್ ಶೆಟ್ಟಿ ಬೊಂಬೆ ಬೊಂಬೆ ಎಂಬ ಹಾಡು ಬರೆದು ಎಲ್ಲರನ್ನೂ ರಂಜಿಸಿದ್ದರು. ಮೈಸೂರಿನ ಯುವ ದಸರಾ ವೇದಿಕೆಯಲ್ಲಿಯೇ ನಿವೇದಿತಾ ಗೌಡರಿಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಈ ರೀತಿ ಪ್ರಪೋಸ್ ಮಾಡಿದ್ದರು. ಈ ರೀತಿ ವೇದಿಕೆಯನ್ನು ಬಳಸಿದ್ದು ವಿವಾದಕ್ಕೂ ಕಾರಣವಾಗಿತ್ತು. ಇದೀಗ ನಾಲ್ಕು ವರ್ಷದ ಬಳಿಕ ಇವರಿಬ್ಬರು ಡಿವೋರ್ಸ್ ಪಡೆದಿದ್ದಾರೆ.