Sandalwood News: ಬಿಡುಗಡೆ ಹೊಸ್ತಿಲಲ್ಲಿರುವ ಹಾಸ್ಟೆಲ್ ಹುಡುಗರು ಸಿನಿಮಾಗೆ ಸಂಕಷ್ಟ; ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳಿಸಿದ ನಟಿ ರಮ್ಯಾ
ಸಿನಿಮಾ ಪ್ರಮೋಷನ್‌ಗಾಗಿ ಪ್ರೋಮೋಶೂಟ್‌ನಲ್ಲಿ ನಾನು ಭಾಗಿಯಾಗಿದ್ದೆ. ಅನುಮತಿ ಇಲ್ಲದೆ ನನ್ನ ಶೂಟಿಂಗ್ ದೃಶ್ಯಗಳನ್ನು ಬಳಸಬಾರದು ಎಂದು ಕಂಡಿಷನ್ ಹಾಕಿದ್ದೆ. ಆದರೆ ಚಿತ್ರತಂಡ ಅದನ್ನು ಪರಿಗಣಿಸಿಲ್ಲ. ಅನುಮತಿ ಇಲ್ಲದೆ ಟ್ರೇಲರ್‌ನಲ್ಲಿ ಬಳಸಿಕೊಂಡಿದೆ. ಪರಿಹಾರವಾಗಿ 1 ಕೋಟಿ ರೂಪಾಯಿ ನೀಡಬೇಕು ಎಂದು ರಮ್ಯಾ ನೋಟಿಸ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಸಿನಿಮಾ ಆರಂಭವಾದಾಗಿನಿಂದ ಇಲ್ಲಿವರೆಗೂ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಾ ಬರುತ್ತಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಾಳೆ (ಶುಕ್ರವಾರ) ತೆರೆ ಕಾಣುತ್ತಿದೆ. ರಿಲೀಸ್ ಖುಷಿಯಲ್ಲಿರುವ ಚಿತ್ರತಂಡಕ್ಕೆ ಇದೀಗ ಒಂದು ತಲೆ ನೋವು ಎದುರಾಗಿದೆ. ಮೋಹಕ ತಾರೆ ರಮ್ಯಾ ಚಿತ್ರತಂಡಕ್ಕೆ ನೋಟಿಸ್ ಕಳಿಸಿದ್ದು 1 ಕೋಟಿ ರೂಪಾಯಿ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.
ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಸಿನಿಮಾ
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ. ಸಿನಿಮಾ ತಂಡ ಬಹಳ ವಿಭಿನ್ನವಾಗಿ ಟೈಟಲ್ ರಿಲೀಸ್ ಮಾಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ. ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲಿಂದ ಈಚೆಗೆ ಚಿತ್ರತಂಡ ಪ್ರತಿ ಬಾರಿ ಗಮನ ಸೆಳೆಯುತ್ತಲೇ ಬಂತು. ಸಿನಿಮಾದಲ್ಲಿ ರಮ್ಯಾ ಕೂಡಾ ನಟಿಸುತ್ತಿದ್ಧಾರೆ ಎನ್ನಲಾಗಿತ್ತು. ಅದರಂತೆ ರಮ್ಯಾ, ಚಿತ್ರದ ಪ್ರೋಮೋಶೂಟ್‌ನಲ್ಲಿ ಭಾಗಿಯಾಗಿದ್ದರು. ಈ ಚಿತ್ರದ ಮೂಲಕ ರಮ್ಯಾ ಕಮ್ ಬ್ಯಾಕ್ ಆಗಿದ್ದನ್ನು ನೋಡಿ ಅಭಿಮಾನಿಗಳು ಕೂಡಾ ಖುಷಿಯಾಗಿದ್ದರು. ಆದರೆ ಇದೀಗ ರಮ್ಯಾ ಚಿತ್ರತಂಡಕ್ಕೆ ನೋಟಿಸ್ ಕಳಿಸಿದ್ದು ಚಿತ್ರತಂಡಕ್ಕೆ ದಿಕ್ಕು ತೋಚದಂತೆ ಆಗಿದೆ.
ಅನುಮತಿ ಇಲ್ಲದೆ ದೃಶ್ಯಗಳ ಬಳಕೆ
ಸಿನಿಮಾ ಪ್ರಮೋಷನ್‌ಗಾಗಿ ಪ್ರೋಮೋಶೂಟ್‌ನಲ್ಲಿ ನಾನು ಭಾಗಿಯಾಗಿದ್ದೆ. ಅನುಮತಿ ಇಲ್ಲದೆ ನನ್ನ ಶೂಟಿಂಗ್ ದೃಶ್ಯಗಳನ್ನು ಬಳಸಬಾರದು ಎಂದು ಕಂಡಿಷನ್ ಹಾಕಿದ್ದೆ. ಆದರೆ ಚಿತ್ರತಂಡ ಅದನ್ನು ಪರಿಗಣಿಸಿಲ್ಲ. ಅನುಮತಿ ಇಲ್ಲದೆ ಟ್ರೇಲರ್‌ನಲ್ಲಿ ಬಳಸಿಕೊಂಡಿದೆ. ಪರಿಹಾರವಾಗಿ 1 ಕೋಟಿ ರೂಪಾಯಿ ನೀಡಬೇಕು ಎಂದು ರಮ್ಯಾ ನೋಟಿಸ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಜುಲೈ 21 ರಂದು ಸಿನಿಮಾ ರಿಲೀಸ್ ಆಗುತ್ತಿದ್ದು ಕೊನೆ ಕ್ಷಣದಲ್ಲಿ ಈಗ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಸಮಯದಲ್ಲಿ ಚಿತ್ರತಂಡ ರಮ್ಯಾ ಅಭಿನಯದ ಕಂಟೆಂಟ್‌ಗಳನ್ನು ತೆಗೆಯಬೇಕು , ಯೂಟ್ಯೂಬ್‌ನಿಂದ ಕೂಡಾ ಟ್ರೇಲರ್ ಡಿಲೀಟ್ ಮಾಡುವಂತೆ ಹೇಳಿರುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ಪರಿಸ್ಥಿತಿಯನ್ನು ಚಿತ್ರತಂಡ ಹೇಗೆ ನಿಭಾಯಿಸಲಿದೆ ಕಾದು ನೋಡಬೇಕು.
ಟ್ರೇಲರ್ ಬಿಡುಗಡೆಗೊಳಿಸಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಇತ್ತೀಚೆಗೆ ಚಿತ್ರತಂಡ ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿ ಟ್ರೇಲರ್ ಬಿಡುಗಡೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಇನ್ನಿತರರು ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರೂ ಸಿನಿಮಾಗೆ ಹಾರೈಸಿದ್ದರು. ಟ್ರೇಲರ್‌ನಲ್ಲಿ ಕೂಡಾ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ನಿರ್ದೇಶಕ ಪವನ್ ಕುಮಾರ್, ದಿಗಂತ್, ರಮ್ಯಾ ಗಮನ ಸೆಳೆದಿದ್ದರು.
ಜುಲೈ 21ಕ್ಕೆ ಸಿನಿಮಾ ರಿಲೀಸ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ಅರುಣ್ ಕುಮಾರ್ ಗೌಡ, ಪ್ರಜ್ವಲ್ ಬಿಪಿ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕಶ್ಯಪ್ ಹಾಗೂ ಇನ್ನಿತರರು ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ. ಯಾವಾಗಲೂ ಏನಾದರೂ ಕಿರಿಕ್ ಮಾಡುವ ವಾರ್ಡನ್ ಕಾಟದಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಹುಡುಗರು ಏನೆಲ್ಲಾ ಐಡಿಯಾ ಮಾಡುತ್ತಾರೆ, ಮುಂದೆ ಅದರಿಂದ ಹೇಗೆ ಸಮಸ್ಯೆ ಅನುಭವಿಸುತ್ತಾರೆ ಎಂಬುದನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ತೋರಿಸಲಾಗಿದೆ. ಮೊದಲಿನಿಂದಲೂ ವಿಭಿನ್ನ ಪ್ರಚಾರ ಮಾಡುತ್ತಿರುವ ಚಿತ್ರತಂಡಕ್ಕೆ ರಮ್ಯಾ ನಿಜಕ್ಕೂ ನೋಟಿಸ್ ನೀಡಿದ್ದಾರಾ ಅಥವಾ ಇದೂ ಕೂಡಾ ಪಬ್ಲಿಸಿಟಿ ಗಿಮಿಕ್ ಇರಬಹುದಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.